ಬೆಂಗಳೂರು:
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆ, ಈ ಹಿಂದೆ ಘೋಷಿಸಲಾಗಿದ್ದ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ಈ ಬಾರಿ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿ ಉತ್ತಮ ಸಾಧನೆ ಮಾಡಿದ್ದಾರೆ. ಹೀಗಾಗಿ ಮೂರನೇ ಪರೀಕ್ಷೆಯ ಅಗತ್ಯವಿಲ್ಲವೆಂದು ತೀರ್ಮಾನಿಸಲಾಗಿದೆ. ಪರೀಕ್ಷೆ-2 ಮಾತ್ರ ಅವಕಾಶ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ಇದರೊಂದಿಗೆ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದವರು ಅಥವಾ ಅಂಕ ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆ-2 ಕೊನೆಯ ಅವಕಾಶವಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಅವಕಾಶವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಶಿಕ್ಷಣ ಇಲಾಖೆ ಸಲಹೆ ನೀಡಿದೆ.ಪರೀಕ್ಷೆ-2 ವೇಳಾಪಟ್ಟಿಯ ಪ್ರಕಾರ ಮೇ 18ರಿಂದ ಪರೀಕ್ಷೆಗಳು ಆರಂಭವಾಗಲಿವೆ.
ಆರು ದಿನಗಳ ಕಾಲ ನಡೆಯುವ ಈ ಪರೀಕ್ಷೆಗಳು
ಈ ಕೆಳಗಿನಂತಿವೆ:
ಮೇ 18: ಪ್ರಥಮ ಭಾಷೆ
ಮೇ 19: ವಿಜ್ಞಾನ
ಮೇ 20: ದ್ವಿತೀಯ ಭಾಷೆ
ಮೇ 21: ಗಣಿತ
ಮೇ 22: ತೃತೀಯ ಭಾಷೆ
ಮೇ 23: ಸಮಾಜ ವಿಜ್ಞಾನ
ಸರ್ಕಾರದ ಈ ನಿರ್ಧಾರದಿಂದ ಮೂರನೇ ಪರೀಕ್ಷೆಯ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಎರಡನೇ ಪರೀಕ್ಷೆಯಲ್ಲೇ ಉತ್ತೀರ್ಣರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಶಿಕ್ಷಣ ತಜ್ಞರು ಹೇಳುವಂತೆ, ಪರೀಕ್ಷೆಯಲ್ಲಿ ಸೋಲು ಅಂತಿಮವಲ್ಲ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪುನರಾವರ್ತನೆ ಮತ್ತು ತಯಾರಿ ಮೂಲಕ ಉತ್ತಮ ಫಲಿತಾಂಶ ಸಾಧಿಸಬಹುದು. ಪೋಷಕರು ಕೂಡ ಮಕ್ಕಳಿಗೆ ಮಾನಸಿಕ ಬೆಂಬಲ ನೀಡಬೇಕು ಎಂದು ಸಲಹೆ ನೀಡಲಾಗಿದೆ.






