ನವದೆಹಲಿ, ಏ. 26:
ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ವಿಚಾರಕ್ಕೆ ಸ್ಪಷ್ಟನೆ ನೀಡುತ್ತಾ, “ನಾನು ಕೆಪಿಸಿಸಿ ಅಧ್ಯಕ್ಷನಾಗಿರುವುದರಿಂದ ನನ್ನ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡುವುದು ಸಹಜ” ಎಂದು ಹೇಳಿದರು. ಪಕ್ಷದ ವತಿಯಿಂದ ಕೇರಳ, ಅಸ್ಸಾಂ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ಜವಾಬ್ದಾರಿ ವಹಿಸಲಾಗಿದ್ದು, ಪ್ರಣಾಳಿಕೆ ಬಿಡುಗಡೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಎಂದರು.ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ ರಕ್ಷಣಾ ಇಲಾಖೆಯ ಜಾಗಗಳ ಬಳಕೆ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು. ಸ್ಕೈಡೆಕ್ ಯೋಜನೆಗೆ ಹೆಚ್ಎಎಲ್‌ನಿಂದ ಉಂಟಾಗಿದ್ದ ಅಡ್ಡಿ, ಕಟ್ಟಡ ಎತ್ತರ ನಿರ್ಬಂಧ, ಟಿಡಿಆರ್ ಹಾಗೂ ಪ್ರೀಮಿಯಂ ಎಫ್ಎಆರ್ ವಿಚಾರಗಳನ್ನೂ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ, ರಾಜ್ಯದ ನಗರಾಭಿವೃದ್ಧಿ ಯೋಜನೆಗಳ ಕುರಿತು ವಿವರಿಸುತ್ತಾ, ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ ಅಡಿಯಲ್ಲಿ ಕರ್ನಾಟಕದಿಂದ ಒಟ್ಟು 1,082 ಯೋಜನೆಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ಸುಮಾರು ₹1.25 ಲಕ್ಷ ಕೋಟಿ ಮೊತ್ತದ ಈ ಯೋಜನೆಗಳಿಗೆ ಕೇಂದ್ರದಿಂದ ₹32-35 ಸಾವಿರ ಕೋಟಿ ನೆರವು ಕೋರಿ ಮನವಿ ಮಾಡಲಾಗಿದೆ. ಈಗಾಗಲೇ ₹5 ಸಾವಿರ ಕೋಟಿ ಮೀಸಲು ಇದ್ದರೂ, ಇನ್ನಷ್ಟು ಅನುದಾನ ನೀಡುವಂತೆ ಕೇಳಿದ್ದೇವೆ ಎಂದರು.

ಈ ಯೋಜನೆಗಳಲ್ಲಿ ಹುಡ್ಕೋ ವತಿಯಿಂದ 50% ಸಾಲ, ಕೇಂದ್ರ ಸರ್ಕಾರದಿಂದ 25% ಮತ್ತು ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳಿಂದ ಉಳಿದ 25% ವೆಚ್ಚ ಭರಿಸುವ ಮಾದರಿಯನ್ನು ಅನುಸರಿಸಲಾಗುತ್ತದೆ ಎಂದು ತಿಳಿಸಿದರು. ರಾಜ್ಯದ ಅಭಿವೃದ್ಧಿಗಾಗಿ ಲಭ್ಯವಿರುವ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.






