Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಆಡಳಿತ ಶಿಸ್ತಿನ ಕೊರತೆಯೂ ; ಯು ಟರ್ನ್‌ ಸರ್ಕಾರದ ಅವಾಂತರಗಳೂ!

ಶಾಸಕಾಂಗ -ಕಾರ್ಯಾಂಗದ ನಡುವೆ ಸಮನ್ವಯ ಇಲ್ಲದಿದ್ದರೆ ಅವ್ಯವಸ್ಥೆಯೇ ರಾರಾಜಿಸುತ್ತದೆ
ನಾ ದಿವಾಕರ

ನಾ ದಿವಾಕರ

July 18, 2022
Share on FacebookShare on Twitter

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಗಸು ಇರುವುದೇ ಮೂರು ಶ್ರೇಣಿಯ ಅಧಿಕಾರ ಕೇಂದ್ರಗಳಲ್ಲಿ. ಪ್ರತಿಯೊಂದು ಅಂಗವೂ ತನ್ನ ಮೇಲಿನ ಹಂತದ ಅಧಿಕಾರ ಕೇಂದ್ರಕ್ಕೆ ಮತ್ತು ಹಾಗೆಯೇ ಸಾರ್ವಭೌಮ ಪ್ರಜೆಗಳಿಗೆ ಉತ್ತರದಾಯಿಯಾಗಿರಬೇಕಾದ ಒಂದು ವ್ಯವಸ್ಥೆಯನ್ನು ಭಾರತ ಒಪ್ಪಿಕೊಂಡಿದ್ದು, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳ ಮೂಲಕ ದೇಶದ ಏಕತೆ, ಅಖಂಡತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುತ್ತಿವೆ. ಕಳೆದ 75 ವರ್ಷಗಳಲ್ಲಿ ಈ ಹಾದಿಯಲ್ಲಿ ಏನೇ ಅಡೆತಡೆಗಳು ಎದುರಾಗಿದ್ದರೂ, ಎಂತಹುದೇ ಅಪವಾದಗಳನ್ನು ಕಾಣಬಹುದಾದರೂ, ಈ ಮೂರೂ ಸಾಂವಿಧಾನಿಕ ಅಂಗಗಳು ನಿರಂಕುಶಾಧಿಕಾರಕ್ಕೆ ಅವಕಾಶ ಕೊಡದಂತೆ ಕಾರ್ಯನಿರ್ವಹಿಸುವ ಎಚ್ಚರಿಕೆ ವಹಿಸಿವೆ. ಶಾಸಕಾಂಗ ಮತ್ತು ಕಾರ್ಯಾಂಗಗಳ ಕೆಲವು ನೀತಿ ನಿರೂಪಣೆಗಳು ಪ್ರಜಾತಂತ್ರ ಮೌಲ್ಯಗಳಿಂದ ವಿಮುಖವಾದಾಗಲೆಲ್ಲಾ ಭಾರತದ ಜನತೆ ತಮ್ಮ ಸಾಂವಿಧಾನಿಕ ಮತದಾನದ ಹಕ್ಕುಗಳ ಮೂಲಕ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ನ್ಯಾಯಾಂಗವೂ ಸಹ ಎಚ್ಚರಗೊಳಿಸುತ್ತಲೇ ಬಂದಿದೆ.  ಆದರೂ ಇತ್ತೀಚಿನ ಬೆಳವಣಿಗೆಗಳು ಪ್ರಜಾತಂತ್ರದ ಬುನಾದಿಯನ್ನು ಕೊಂಚ ಮಟ್ಟಿಗೆ ಅಸ್ಥಿರಗೊಳಿಸುತ್ತಿರುವ ಆತಂಕವೂ ಕಾಡುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ನೆಹರೂ ಇಲ್ಲದ ಆಧುನಿಕ ಭಾರತದ ಕಲ್ಪನೆ ಅಸಾಧ್ಯ

75 ಹೆಜ್ಜೆಗಳ ನಂತರ ನವ ಭಾರತ ಎತ್ತ ಸಾಗಲಿದೆ ?

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೨

ಜನರಿಂದಲೇ ಆಯ್ಕೆಯಾಗಿ, ಜನರಿಗೋಸ್ಕರವೇ ಆಡಳಿತ ನೀತಿಗಳನ್ನು ರೂಪಿಸುವ ಒಂದು ಆಡಳಿತ ವ್ಯವಸ್ಥೆ ಮೂಲತಃ ಈ ಮೂರೂ ಅಂಗಗಳ ನಡುವೆ ಸಮನ್ವಯವನ್ನು ಕಾಪಾಡಿಕೊಂಡು ಬರುವುದು ಅತ್ಯವಶ್ಯ. ಕಾರ್ಯಾಂಗದ ಅಧಿಕಾರಶಾಹಿಯ ಮೇಲೆ ಶಾಸಕಾಂಗದ ನೈತಿಕ ಹಿಡಿತ ಇರಬೇಕು, ಶಾಸಕಾಂಗದ ಮೇಲೆ ನ್ಯಾಯಾಂಗದ ನೈತಿಕ ನಿಯಂತ್ರಣವೂ ಇರಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಎರಡೂ ಸಾಂವಿಧಾನಿಕ ಅಂಗಗಳನ್ನು ನಿರ್ವಹಿಸುವವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ, ಕಳಕಳಿ ಮತ್ತು ಜನತೆಯ ನೈತಿಕ ಭೀತಿಯೂ ಇರಬೇಕು. ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಜನತೆ ಗಮನಿಸುತ್ತಿರುತ್ತದೆ ಎಂಬ ಪರಿವೆ ಆಡಳಿತ ವ್ಯವಸ್ಥೆಯ ಎಲ್ಲ ಹಂತಗಳಲ್ಲೂ ಇದ್ದಾಗ ಮಾತ್ರವೇ, ಜನೋಪಯೋಗಿ ಸರ್ಕಾರವೊಂದು ರೂಪುಗೊಳ್ಳಲು ಸಾಧ್ಯ. ತಾವು ಏನು ಮಾಡಿದರೂ ಜನರು ಸಹಿಸಿಕೊಳ್ಳುತ್ತಾರೆ ಎಂಬ ಮನೋಭಾವ ಆಡಳಿತ ನಿರ್ವಹಣೆಯಲ್ಲಿ ಹೆಚ್ಚಾದಷ್ಟೂ ಜನವಿರೋಧಿ ನೀತಿಗಳೂ ಹೆಚ್ಚಾಗುತ್ತಲೇ ಹೋಗುತ್ತವೆ. ಇಂತಹ ಸನ್ನಿವೇಶಗಳಲ್ಲೇ ಸರ್ಕಾರಗಳು ಕೆಲವೊಮ್ಮೆ ನಗೆಪಾಟಲಿಗೀಡಾದರೆ, ಕೆಲವೊಮ್ಮೆ ಜನಾಕ್ರೋಶಕ್ಕೆ ಎಡೆಮಾಡಿಕೊಡುತ್ತವೆ.

ಕರ್ನಾಟಕ ಸರ್ಕಾರ ಈ ರೀತಿಯಲ್ಲೇ ಹಲವು ಸನ್ನಿವೇಶಗಳಲ್ಲಿ ನಗೆಪಾಟಲಿಗೀಡಾಗಿದೆ  ಜನರ ಆಕ್ರೋಶವನ್ನೂ ಎದುರಿಸಿದೆ. ಇತ್ತೀಚಿನ ಉದಾಹರಣೆ ಎಂದರೆ ಜುಲೈ 15ರಂದು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯು ಆದೇಶವೊಂದರ  (ಸಿಅಸುಇ(ಅಸು);40 ;ಕತವ;2022, ದಿನಾಂಕ 15 ಜುಲೈ 2022) ಮೂಲಕ, ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಪೂರ್ವಾನುಮತಿ ಇಲ್ಲದೆ ಖಾಸಗಿ ವ್ಯಕ್ತಿಗಳು ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿತ್ತು. ಈ ಆದೇಶದ ಬಗ್ಗೆ  ಸಾಮಾಜಿಕ ತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.  ಸಾರ್ವಜನಿಕರಿಂದಲೂ ತೀವ್ರ ಆಕ್ಷೇಪಗಳು ಕೇಳಿಬಂದಿದ್ದವು. ಸರ್ಕಾರಿ ಇಲಾಖೆಗಳಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ಹಲವು ಸಂಘಟನೆಗಳು ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದವು. ಈ ಪ್ರತಿರೋಧಕ್ಕೆ ಮಣಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇ ರಾತ್ರಿಯೇ ಮತ್ತೊಂದು ಆದೇಶ ಹೊರಡಿಸಿ, ಮೂಲ ಆದೇಶವನ್ನು ಹಿಂಪಡೆಯುವಂತೆ ಘೋಷಿಸಿದ್ದರು. ಇದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಬಹುಶಃ ಮುಜುಗರದಿಂದ ತಪ್ಪಿಸಿಕೊಳ್ಳುವ ತಂತ್ರವೂ ಇರಬಹುದು. ಆದರೂ ಈ ಪ್ರಸಂಗದ ಮೂಲಕ ರಾಜ್ಯ ಸರ್ಕಾರ ಮತ್ತೊಮ್ಮೆ ತಾನು ಯು ಟರ್ನ್‌ ಸರ್ಕಾರ ಎಂದು ಸಾಬೀತುಪಡಿಸಿದೆ.

Also read : ಸರ್ಕಾರಿ ಆದೇಶದಲ್ಲಿ ವ್ಯಾಕರಣ ದೋಷ : ಸರ್ಕಾರವೇ ಈ ರೀತಿ ಮಾಡಿದ್ರೆ ಹೇಗೆ? ಎಂದ ಕನ್ನಡಿಗರು

ಶಾಲಾ ಪಠ್ಯಕ್ರಮ ಪರಿಷ್ಕರಣೆಯ ವಿಚಾರದಲ್ಲೂ ರಾಜ್ಯ ಸರ್ಕಾರ ಇದೇ ರೀತಿ ತನ್ನ ಖಚಿತ ನಿರ್ಧಾರಗಳನ್ನು ಹಿಂಪಡೆದಿದೆ. ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿಯ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗುತ್ತದೆ ಎಂದು ಹೇಳುತ್ತಿದ್ದ ಶಿಕ್ಷಣ ಸಚಿವರು, ಪರಿಷ್ಕರಣೆಯಲ್ಲಿ ಯಾವುದೇ ತಪ್ಪುಗಳು ಆಗಿಲ್ಲ ಎಂದು ಪ್ರತಿಪಾದಿಸಿದ್ದೇ ಅಲ್ಲದೆ, ರಾಜ್ಯಾದ್ಯಂತ ನಡೆದ ಪ್ರತಿಭಟನೆಗಳನ್ನೂ ಲೆಕ್ಕಿಸದೆ ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯವನ್ನು ತಿದ್ದುಪಡಿ ಮಾಡುವುದಿಲ್ಲ ಅಥವಾ ಹಿಂಪಡೆಯುವುದಿಲ್ಲ ಎಂದೂ ಘೋಷಿಸಿದ್ದರು. ಆದರೆ ಸಾರ್ವಜನಿಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಭಗತ್‌ ಸಿಂಗ್‌ , ನಾರಾಯಣಗುರು ಕುರಿತ ಪಾಠಗಳನ್ನು ಪುನಃ ಸೇರಿಸಿದ್ದೇ ಅಲ್ಲದೆ, 1 ರಿಂದ 10ನೆ ತರಗತಿಯವರೆಗಿನ ಪಠ್ಯಗಳಲ್ಲಿ ಒಟ್ಟು ಎಂಟು ತಿದ್ದುಪಡಿಗಳನ್ನು ಮಾಡಲು ಒಪ್ಪಿಕೊಂಡಿದೆ. “ ಬಿಜೆಪಿ ಸರ್ಕಾರ ವಿರೋಧ ಪಕ್ಷಗಳ ಆಗ್ರಹಕ್ಕೆ ಮಣಿದು ಕ್ಷಮಾಪಣೆ ಕೋರುವುದಿಲ್ಲ ಅಥವಾ ಪರಿಷ್ಕೃತ ಪಠ್ಯಗಳನ್ನು ಹಿಂಪಡೆಯುವುದೂ ಇಲ್ಲ, ನಾವು ಸರ್ಕಾರ ನಡೆಸುತ್ತಿದ್ದೇವೆ, ಆಡಳಿತವನ್ನು ಹೇಗೆ ನಿರ್ವಹಿಸಬೇಕು ಎಂದು ನಮಗೆ ತಿಳಿದಿದೆ ” (ದ ಹಿಂದೂ 27-06-22) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಖಡಾಖಂಡಿತವಾಗಿ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಎಂಟು ತಿದ್ದುಪಡಿಗಳನ್ನು ಮಾಡಲು ಆದೇಶ ಹೊರಡಿಸಿತ್ತು.

ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಸಹ, ವಿಶೇಷವಾಗಿ ಕೋವಿದ್‌ ನಿರ್ವಹಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಖಚಿತ ನಿಲುವುಗಳನ್ನು ಹಿಂಪಡೆದ ಹಲವು ಪ್ರಸಂಗಗಳನ್ನು ಗುರುತಿಸಬಹುದು. ಜುಲೈ 2019 ರಿಂದ ತಮ್ಮ ಪದಚ್ಯುತಿಯಾಗುವವರೆಗಿನ ಅವಧಿಯಲ್ಲಿ ಯಡಿಯೂರಪ್ಪನವರು 12 ಬಾರಿ ಸರ್ಕಾರದ ನಿರ್ಧಾರಗಳನ್ನು ಹಿಂಪಡೆದಿದ್ದರು. ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೇರ್ಪಡೆ ಮಾಡುವ ವಿಚಾರದಲ್ಲಿ ತಮಗೆ ಆ ಅಧಿಕಾರವೇ ಇಲ್ಲವೆಂದೂ, ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ ಎಂದೂ ಹೇಳಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಕೆಲವೇ ತಿಂಗಳ ನಂತರ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿದ್ದೇ ಅಲ್ಲದೆ ಬೇಷರತ್‌ ಕ್ಷಮಾಪಣೆ ಕೋರಿದ್ದರು. ಶಿವಮೊಗ್ಗದಲ್ಲಿ ಕಲ್ಲುಗಣಿಯಲ್ಲಿ ಸ್ಪೋಟ ಸಂಭವಿಸಿ ಆರು ಜನರು ಮೃತಪಟ್ಟದ ಘಟನೆಯ ನಂತರ ರಾಜ್ಯದಲ್ಲಿ ಎಲ್ಲ ಗಣಿಗಾರಿಕೆ ಮತ್ತು ಕಲ್ಲುಗಣಿಯನ್ನು ನಿಷೇಧಿಸುವುದಾಗಿ ಹೇಳಿದ್ದರೂ, ಯಡಿಯೂರಪ್ಪ ಸರ್ಕಾರ  ಕೆಲವೇ ದಿನಗಳಲ್ಲಿ ತನ್ನ ನಿರ್ಧಾರ ಬದಲಿಸಿ, ಗಣಿಗಾರಿಕೆಯನ್ನು ನಿಯಂತ್ರಣಕ್ಕೊಳಪಡಿಸುವುದಾಗಿ ಹೇಳಿದ್ದರು.

ಕೋವಿದ್‌ 19 ಲಾಕ್‌ಡೌನ್‌ ಸಂದರ್ಭದಲ್ಲಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ಯಡಿಯೂರಪ್ಪ ಸರ್ಕಾರ ಹಿಂಪಡೆದುಕೊಂಡಿತ್ತು. 2020ರ ಏಪ್ರಿಲ್‌ 20ರಿಂದ ಲಾಕ್‌ಡೌನ್‌ ನಡುವೆಯೇ ದ್ವಿಚಕ್ರ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಿ, ಮಾಹಿತಿ ತಂತ್ರಜ್ಞಾನ ವಲಯದ ಕಚೇರಿಗಳನ್ನು, ಮೂರನೆ ಒಂದರಷ್ಟು ಸಿಬ್ಬಂದಿಯೊಡನೆ, ತೆರೆಯಲು ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶ ಜಾರಿಯಾಗಬೇಕಾದ ಮುನ್ನಾ ದಿನವೇ, ಸಚಿವ ಸಂಪುಟದ ಸಲಹೆಯ ಮೇರೆಗೆ ಆದೇಶವನ್ನು ಹಿಂಪಡೆಯುವುದಾಗಿ ಸರ್ಕಾರ ಘೋಷಿಸಿತ್ತು. 2020ರ ಮೇ 1ರಂದು ರಾಜ್ಯದಿಂದ ಹೊರಹೋಗುತ್ತಿರುವ ವಲಸೆ ಕಾರ್ಮಿಕರು ತಮ್ಮ ಸಂಚಾರ ವೆಚ್ಚವನ್ನು ಖುದ್ದು ಭರಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಇದನ್ನೇ ಬಳಸಿಕೊಂಡ ಖಾಸಗಿ ಬಸ್ಸುಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡುವುದು ಕಂಡುಬಂದ ನಂತರ ಸರ್ಕಾರ ಮರು ದಿನವೇ ತನ್ನ ಆದೇಶವನ್ನು ಹಿಂಪಡೆದಿತ್ತು. ಮಾನವೀಯ ದೃಷ್ಟಿಯಿಂದ ಸರ್ಕಾರ ಕೈಗೊಂಡ ಈ ನಿರ್ಧಾರ ಅಪೇಕ್ಷಣೀಯವೂ ಆಗಿತ್ತು. ಇದೇ ಸಂದರ್ಭದಲ್ಲಿ ವಲಸೆ ಕಾರ್ಮಿಕರು ರಾಜ್ಯದಿಂದ ಹೊರಹೋಗಲು ರೈಲು ಪ್ರಯಾಣವನ್ನು ನಿರ್ಬಂಧಿಸಿದ್ದ ರಾಜ್ಯ ಸರ್ಕಾರ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ತನ್ನ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಒತ್ತಡಕ್ಕೆ ಮಣಿದು ಹೇರಿದ್ದ ಅಂತಾರಾಜ್ಯ ಪ್ರಯಾಣದ ನಿಷೇಧವನ್ನು ಸರ್ಕಾರ ಹಿಂಪಡೆಯಬೇಕಾಯಿತು.

ಕೋವಿದ್‌ ಲಾಕ್‌ಡೌನ್‌ ಆರಂಭದಲ್ಲಿ ಸರ್ಕಾರವೇ ನಿರ್ವಹಿಸುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಎಲ್ಲ ದಿನಗೂಲಿ ನೌಕರರಿಗೂ ಉಚಿತ ಆಹಾರ ಒದಗಿಸುವುದಾಗಿ ಯಡಿಯೂರಪ್ಪ ಸರ್ಕಾರ ಘೋಷಿಸಿತ್ತು. ಇದು ಸದುದ್ದೇಶದ ನಿರ್ಧಾರವೇ ಆಗಿದ್ದರೂ, ಕೋವಿದ್‌ ಪ್ರಸರಣ ತೀವ್ರವಾಗಿದ್ದುದರಿಂದ ಸಾರ್ವಜನಿಕರ ವಿರೋಧ ಎದುರಿಸಬೇಕಾಯಿತು. ಮಾರ್ಚ್‌ 23ರಂದು ಹೊರಡಿಸಿದ ತನ್ನ ಆದೇಶವನ್ನು ಸರ್ಕಾರ ಮರುದಿನವೇ ಹಿಂಪಡೆಯಬೇಕಾಯಿತು. ಮಾರ್ಚ್‌ ಕೊನೆಯ ವಾರದಲ್ಲಿ ಕೋವಿದ್‌ ಲಾಕ್‌ಡೌನ್‌ ನಡುವೆಯೇ ಜಿಮ್‌ಗಳಲ್ಲಿ ಶೇ 50ರಷ್ಟು ಗ್ರಾಹಕರನ್ನೊಳಗೊಂಡು ನಡೆಸಬಹುದು ಎಂದು ಆದೇಶ ಹೊರಡಿಸಿದ್ದ ಸರ್ಕಾರ, ಮತ್ತೊಮ್ಮೆ ಸಾರ್ವಜನಿಕರ ಪ್ರತಿರೋಧಕ್ಕೆ ಮಣಿದು ತನ್ನ ಆದೇಶವನ್ನು ಏಪ್ರಿಲ್‌ 2ರಂದು ಹಿಂಪಡೆಯಬೇಕಾಯಿತು. ಜಿಮ್‌ಗಳನ್ನು ತೆರೆಯದಂತೆ ಮರು ಆದೇಶ ಹೊರಡಿಸಲಾಗಿತ್ತು. ಕಳೆದ ವರ್ಷ ರೋಹಿಂಗ್ಯಾಗಳ ಸಮಸ್ಯೆ ಉದ್ಭವಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಕ್ಟೋಬರ್‌ 25 2021ರಂದು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ಬೆಂಗಳೂರಿನಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳನ್ನು ಗಡೀಪಾರು ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ ಕೆಲವೇ ದಿನಗಳ ನಂತರ ತನ್ನ ಆದೇಶವನ್ನು ಹಿಂಪಡೆದ ರಾಜ್ಯ ಸರ್ಕಾರ ಕರ್ನಾಟಕದಲ್ಲಿ 126 ರೋಹಿಂಗ್ಯಾಗಳನ್ನು ಗುರುತಿಸಲಾಗಿದೆ ಎಂದೂ, ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ ನೀಡುವ ಯಾವುದೇ ಆದೇಶಕ್ಕೆ ಸರ್ಕಾರವು ಬದ್ಧವಾಗಿರುವುದಾಗಿಯೂ ಪ್ರಮಾಣ ಪತ್ರ ಸಲ್ಲಿಸಿತ್ತು.

ಒಂದು ಆಡಳಿತ ವ್ಯವಸ್ಥೆಯಲ್ಲಿ ಈ ರೀತಿ ಸರ್ಕಾರಗಳು ತಮ್ಮ ಆದೇಶಗಳನ್ನು ಹಿಂಪಡೆಯುವುದು ಅಥವಾ ಶಾಸನಗಳನ್ನು ರದ್ದುಪಡಿಸುವುದು, ಮಸೂದೆಗಳನ್ನು ತಡೆಹಿಡಿಯುವುದು ಇವೆಲ್ಲವೂ ಸಹಜ ಪ್ರಕ್ರಿಯೆಗಳು. ಕಾರ್ಯಾಂಗವು ಸಲ್ಲಿಸುವ ವರದಿಗಳನ್ನಾಧರಿಸಿ, ಸಚಿವರು ಮತ್ತು ಶಾಸಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಕೆಲವೊಮ್ಮೆ ಸರ್ಕಾರಗಳು ಖಚಿತ ಎನ್ನಬಹುದಾದ ನಿರ್ಧಾರಗಳನ್ನು ಕೈಗೊಳ್ಳುತ್ತವೆ. ಸರ್ಕಾರದ ದೈನಂದಿನ ವ್ಯವಹಾರಗಳಲ್ಲಿ ಇದು ಸ್ವಾಭಾವಿಕವಾಗಿ ನಡೆಯುತ್ತಲೇ ಇರುತ್ತದೆ.  ಎಷ್ಟೋ ಸಂದರ್ಭಗಳಲ್ಲಿ ಜನಸಾಮಾನ್ಯರ ಆಶಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳದೆ, ತಮ್ಮದೇ ಆದ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದ ಪ್ರಸಂಗಗಳನ್ನೂ ನಾವು ನೋಡಿದ್ದೇವೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳು ಒಂದು ಉತ್ತಮ ನಿದರ್ಶನ. ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಯನ್ನು ಹಿಂಪಡೆಯುವುದಿಲ್ಲ ಎಂದು ಹಠ ಹಿಡಿದಿದ್ದ ಕೇಂದ್ರ ಸರ್ಕಾರ ಅಂತಿಮವಾಗಿ ರೈತ ಸಮುದಾಯದ ಒಂದು ವರ್ಷದ ಸುದೀರ್ಘ ಮುಷ್ಕರಕ್ಕೆ ಮನ್ನಣೆ ನೀಡಿ ಕಾಯ್ದೆಗಳನ್ನು ರದ್ದುಪಡಿಸಬೇಕಾಯಿತು.

ಸರ್ಕಾರಗಳ ಯು ಟರ್ನ್‌ಗಳಿಗೆ ಹಲವು ಕಾರಣಗಳಿರುತ್ತವೆ. ಶಾಸಕರು ಮತ್ತು ಸಚಿವರು ತಮ್ಮ ಕ್ಷೇತ್ರದ ಹಿತಾಸಕ್ತಿಯ ದೃಷ್ಟಿಯಿಂದ ಕೈಗೊಳ್ಳುವ ಹಲವು ನಿರ್ಧಾರಗಳು ಏಕಪಕ್ಷೀಯವಾಗಿರುವ ಸಂಭವವೇ ಹೆಚ್ಚು. ಮುಂದಿನ ಚುನಾವಣೆಯ ದೃಷ್ಟಿಯಿಂದಲೇ ಒಂದು ಸಮುದಾಯ ಅಥವಾ ಗುಂಪನ್ನು ತೃಪ್ತಿಪಡಿಸುವ ಹಪಹಪಿ ಎಲ್ಲ ಶಾಸಕರಿಗೂ ಇದ್ದೇ ಇರುತ್ತದೆ. ಈ ಮತಬ್ಯಾಂಕುಗಳನ್ನು ಉಳಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರುವ ಶಾಸಕರಿಗೂ ಕೊರತೆಯೇನೂ ಇರುವುದಿಲ್ಲ. ಸಾಮಾನ್ಯ ಜನರಿಗೆ ಉಪಯುಕ್ತವಾಗುವಂತಹ ಯೋಜನೆಗಳೇ ಇದ್ದರೂ ಜನಸಾಮಾನ್ಯರ ಬದುಕಿಗೆ ಈ ಯೋಜನೆಗಳು ಎಷ್ಟರ ಮಟ್ಟಿಗೆ ಪೂರಕವಾಗುತ್ತದೆ ಎಂದು ತಳಮಟ್ಟದ ಅಧ್ಯಯನ ಮಾಡುವ ಮೂಲಕ ಗುರುತಿಸುವುದು ಕಾರ್ಯಾಂಗದ ಕರ್ತವ್ಯವಾಗಿರುತ್ತದೆ. ಇಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಸಮನ್ವಯ ಇರಬೇಕಾಗುತ್ತದೆ. ತಳಮಟ್ಟದ ವಾಸ್ತವ ಸ್ಥಿತಿಯನ್ನು ಶಾಸಕಾಂಗಕ್ಕೆ ಮನದಟ್ಟು ಮಾಡುವ ನೈತಿಕ ಹೊಣೆ ಕಾರ್ಯಾಂಗದ ಮೇಲಿರುತ್ತದೆ. ಈ ಹಂತದಲ್ಲಿ ನಡೆಯುವ ಭ್ರಷ್ಟಾಚಾರ, ಪಕ್ಷಪಾತ, ಸ್ವಜನಪಕ್ಷಪಾತ ಮತ್ತು ರಾಜಕೀಯ ಹಿತಾಸಕ್ತಿಗಳ ಮೇಲುಗೈ ಸಾಧಿಸುವುದರಿಂದ ಹಲವಾರು ಸಂದರ್ಭಗಳಲ್ಲಿ ಸರ್ಕಾರಗಳೂ ಅವಸರದ ತೀರ್ಮಾನ ಕೈಗೊಳ್ಳುತ್ತವೆ.

ಕಾರ್ಯಾಂಗವು ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ, ಸ್ವಾಯತ್ತತೆಯೊಂದಿಗೆ, ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಕಾರ್ಯನಿರ್ವಹಿಸುವುದೇ ಆದರೆ ಸರ್ಕಾರಗಳಿಗೆ ತಳಮಟ್ಟದ ವಾಸ್ತವ ಪರಿಸ್ಥಿತಿಯನ್ನು ಮನದಟ್ಟಾಗುವಂತೆ ವಿವರಿಸಲು ಸಾಧ್ಯ. ಆದರೆ ಭಾರತದ ಪ್ರಜಾತಂತ್ರ ವ್ಯವಸ್ಥೆ ಈ ನೆಲೆಯಲ್ಲಿ ಆಲೋಚನೆಯನ್ನೂ ಮಾಡಲು ಸಾಧ್ಯವಾಗದ ರೀತಿಯಲ್ಲಿ ಶಾಸಕಾಂಗವು ಕಾರ್ಯಾಂಗದ ಮೇಲೆ ತನ್ನ ಹಿಡಿತ ಸಾಧಿಸಿದೆ. ಹಾಗಾಗಿಯೇ ಸರ್ಕಾರದ ಸುಪರ್ದಿಯಲ್ಲಿರುವ ಸಾಂವಿಧಾನಿಕ ಸಂಸ್ಥೆಗಳೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿಚ್ಚಿಸುವ ಅನೇಕ ಅಧಿಕಾರಿಗಳು ವ್ಯವಸ್ಥೆಯೊಳಗಿನ ಅಶಿಸ್ತು ಮತ್ತು ನಿರಂಕುಶ ಧೋರಣೆಗೆ ಬೇಸತ್ತು ರಾಜೀನಾಮೆ ನೀಡಿರುವುದನ್ನೂ ನಾವು ಕಂಡಿದ್ದೇವೆ. ಜನಪ್ರತಿನಿಧಿಗಳಿಗೆ ಸಮಷ್ಟಿ ಪ್ರಜ್ಞೆಯಿದ್ದು, ತಮ್ಮ ಪ್ರಾತಿನಿಧ್ಯವನ್ನು ಕೇವಲ ಮತಬ್ಯಾಂಕುಗಳಿಗಷ್ಟೇ ಸೀಮಿತಗೊಳಿಸದೆ, ಸಮಸ್ತ ಸಮಾಜಕ್ಕೂ ವಿಸ್ತರಿಸುವಂತಾದರೆ, ಕಾರ್ಯಾಂಗದ ಕಾರ್ಯವೈಖರಿಯಲ್ಲೂ ಬದಲಾವಣೆಯನ್ನು ಕಾಣಲು ಸಾಧ್ಯ. ಅಧಿಕಾರದ ಹಪಹಪಿ ಮತ್ತು ರಾಜಕೀಯ ಅಕಾಂಕ್ಷೆ ಇವೆರಡರ ಸಮ್ಮಿಲನವೇ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತದೆ.

ಬಹುಮತ ಇಲ್ಲದೆಯೇ ವಿರೋಧ ಪಕ್ಷಗಳಲ್ಲಿ ಒಡಕು ಮೂಡಿಸಿ, ಶಾಸಕರನ್ನು ತನ್ನೆಡೆಗೆ ಸೆಳೆಯುವ ಮೂಲಕ ಅಧಿಕಾರಕ್ಕೆ ಬಂದಿರುವ ರಾಜ್ಯ ಬಿಜೆಪಿ ಸರ್ಕಾರ ಸಹಜವಾಗಿಯೇ ಆಶ್ರಯಿಸಿ ಬಂದ ಪಕ್ಷಾಂತರಿ ಶಾಸಕರ ಆಶೋತ್ತರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಸರ್ಕಾರದ ಅಸ್ತಿತ್ವವು ಜನಸಾಮಾನ್ಯರ ಆಶಯಗಳಿಗಿಂತಲೂ ಹೆಚ್ಚಾಗಿ ಶಾಸಕರ ಆಕಾಂಕ್ಷೆಗಳನ್ನೇ ಅವಲಂಬಿಸುವ ಒಂದು ವಿಶಿಷ್ಟ ಸನ್ನಿವೇಶವನ್ನು ಭಾರತದ ಪ್ರಜಾತಂತ್ರ ವ್ಯವಸ್ಥೆ ಎದುರಿಸುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಾಂಗದ ಕಾರ್ಯನಿಷ್ಠೆ, ಶಾಸಕಾಂಗದ ಸಂವಿಧಾನ ನಿಷ್ಠೆ ಮತ್ತು ಸರ್ಕಾರಗಳ ಪ್ರಜಾ ನಿಷ್ಠೆ ಪರಿಪೂರ್ಣವಾಗಿದ್ದರೆ ನ್ಯಾಯಾಂಗವೂ ನೆಮ್ಮದಿಯಿಂದ ತನ್ನ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ನ್ಯಾಯಾಂಗವೇ ಜನದನಿಯ ಮುಖ್ಯವಾಹಿನಿಯಾಗಿಬಿಡುತ್ತದೆ. ಇಂದು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ಜಟಿಲ ಪರಿಸ್ಥಿತಿಯ ಸೂಚಕವಾಗಿ ಯು ಟರ್ನ್‌ ಸರ್ಕಾರಗಳನ್ನೂ ಜನರು ಸಹಿಸಿಕೊಳ್ಳಬೇಕಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಸಣ್ಣ ಬದಲಾವಣೆ, ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ: ಯಶ್
ಕರ್ನಾಟಕ

ಸಣ್ಣ ಬದಲಾವಣೆ, ಆತ್ಮವಿಶ್ವಾಸದಿಂದ ಯಶಸ್ಸು ಸಾಧ್ಯ: ಯಶ್

by ಪ್ರತಿಧ್ವನಿ
August 11, 2022
Uncategorized

Write My Essay Online For Me

by
August 13, 2022
ಕಳಪೆ ಆಹಾರದ ಬಗ್ಗೆ ಮಾತಾಡಿದ ಕಾನ್​​ಸ್ಟೇಬಲ್​​ಗೆ ಹುಚ್ಚನ ಪಟ್ಟ!
ದೇಶ

ಕಳಪೆ ಆಹಾರದ ಬಗ್ಗೆ ಮಾತಾಡಿದ ಕಾನ್​​ಸ್ಟೇಬಲ್​​ಗೆ ಹುಚ್ಚನ ಪಟ್ಟ!

by ಪ್ರತಿಧ್ವನಿ
August 14, 2022
ಜಮ್ಮು ಕಾಶ್ಮೀರ: ಸೈನಿಕರು ಪ್ರಯಾಣಿಸುತ್ತಿದ್ದ ಬಸ್ ನದಿಗೆ ಉರುಳಿ 6 ಸಾವು
ದೇಶ

ಜಮ್ಮು ಕಾಶ್ಮೀರ: ಸೈನಿಕರು ಪ್ರಯಾಣಿಸುತ್ತಿದ್ದ ಬಸ್ ನದಿಗೆ ಉರುಳಿ 6 ಸಾವು

by ಪ್ರತಿಧ್ವನಿ
August 16, 2022
ಶಿವಮೊಗ್ಗ ಉದ್ವಿಗ್ನ; ನಾಲ್ವರನ್ನು ಬಂಧಿಸಿದ ಪೊಲೀಸರು
ಕರ್ನಾಟಕ

ಶಿವಮೊಗ್ಗ ಉದ್ವಿಗ್ನ; ನಾಲ್ವರನ್ನು ಬಂಧಿಸಿದ ಪೊಲೀಸರು

by ಪ್ರತಿಧ್ವನಿ
August 16, 2022
Next Post
ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾದ ಓಮಿನಿ; ಚಿತ್ರತಂಡಕ್ಕೆ ಸಾಥ್‌ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾದ ಓಮಿನಿ; ಚಿತ್ರತಂಡಕ್ಕೆ ಸಾಥ್‌ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಹೋರಾಟದ ಬದುಕು- ಮಾಲ್ಕಮ್ X ಒಂದು ಕಿರು ಪರಿಚಯ

ಹೋರಾಟದ ಬದುಕು- ಮಾಲ್ಕಮ್ X ಒಂದು ಕಿರು ಪರಿಚಯ

ಸಿ.ಟಿ.ರವಿ ಪೋಸ್ಟರ್‌ ಅನ್ನು ಹರಿದು ಬಿಸಾಡಿದ ಯುವತಿ

ಸಿ.ಟಿ.ರವಿ ಪೋಸ್ಟರ್‌ ಅನ್ನು ಹರಿದು ಬಿಸಾಡಿದ ಯುವತಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist