ಮೈಸೂರಿನ 16 ಸ್ಟೆಪ್ ಡೌನ್ ಆಸ್ಪತ್ರೆ ತೆರೆದಿರುವ ಹಿಂದೆ ಭ್ರಷ್ಟಾಚಾರ ನಡೆದಿತ್ತೆ ?

ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಮಾತುಗಳು ಕೇಳಿ ಬರಲಾರಂಭಿಸಿದ ಈ ಸಂದರ್ಭದಲ್ಲಿ ನಗರದ 16 ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ಮುಚ್ಚಿಸಿದ ಕ್ರಮದ ಸುತ್ತ ಈಗ ಅನುವಾನದ ಹುತ್ತ ಹುಟ್ಟಿಕೊಂಡಿದೆ.

ಏಪ್ರಿಲ್ ಪ್ರಾರಂಭದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ನಂತರ ಜಿಲ್ಲಾಡಳಿತ ಕೆಲವು ಕ್ರಮಗಳನ್ನು ಕೈಗೊಂಡಿತ್ತು. ಆದರೆ ರಾಜ್ಯ ಸರ್ಕಾರ ಅದಕ್ಕೆ ತಾಂತ್ರಿಕ ನೆಪ ಒಡ್ಡಿ ತಡೆ ನೀಡಿದ ನಂತರ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸಾಕಷ್ಟು ಏರಿಳಿತಗಳಾಗಿವೆ.

ಆದರೆ ಮೇ 19ರಂದು 16 ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ಬಂದ್ ಮಾಡಲು ಆದೇಶಿಸಿದ ನಂತರದ ವಿದ್ಯಮಾನಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ವೈಮನಸ್ಯಕ್ಕೆ ಕಾರಣವಾಗಿದೆ. ಈ ಒಂದು ಕ್ರಮ ಎಷ್ಟರ ಮಟ್ಟಿಗೆ ಕೋವಿಡ್ ನಿರ್ವಹಣೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರೆ ಈ ಬಗ್ಗೆ ತನಿಖೆ ನಡೆಸಿ ಎಂದು ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರೆಗೆ ಆಡಳಿತ ಪಕ್ಷದ ಸಂಸದರಾದ ಪ್ರತಾಪ್ ಸಿಂಹ ದೂರು ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳು, ಸಂಘಸಂಸ್ಥೆಗಳ ನೆರವಿನೊಂದಿಗೆ ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ತೆರೆಯುವಂತೆ ಆದೇಶಿಸಿತ್ತು. ಆದರೆ ಅದರಲ್ಲಿ 16 ಸ್ಟೆಪ್‌ಡೌನ್ ಆಸ್ಪತ್ರೆಗಳಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಹಾಗೂ ಕೊರೊನಾ ಸೋಂಕಿತರ ಕುಟುಂಬದವರಿಂದ ಹೆಚ್ಚಿನ ಹಣ ವಸೂಲಿ ನಡೆಯುತ್ತಿವೆ ಎಂದು ದೂರಿ ಅವುಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿ ಸ್ಥಗಿತಗೊಳಿಸಲು ಸೂಚಿಸಲಾಯಿತು. ಅಂದಿನಿಂದ ಕೋವಿಡ್ ನಿರ್ವಹಣೆ ವಿವಾದದ ಸುಳಿಗೆ ಸಿಲುಕಿದೆ.

16 ಸ್ಟೆಪ್‌ಡೌನ್ ಆಸ್ಪತ್ರೆಗಳಿಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕ್ರಮವನ್ನು ಜಾ.ದಳ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ ಮಹೇಶ್ ಪ್ರಶ್ನಿಸಿದರು.
ಇದಾದ ಎರಡು ದಿನಗಳಲ್ಲಿ ಡಿಸಿ ಗ್ರಾಮಗಳಿಗೆ ತೆರಳಬೇಕೇ ವಿನಾ ವಿಡಿಯೋ ಕಾನ್ಛರೆನ್ಸ್ ಮಾಡಿಕೊಂಡು ಕೋವಿಡ್ ಅಂಕಿ ಅಂಶ ತೆಗೆದುಕೊಂಡರೆ ಕೋವಿಡ್ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ಸಂಸದ ಪ್ರತಾಪ್‌ಸಿಂಹ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದಕ್ಕೆ ವಿಧಾನ ಪರಿಷತ್ ಸದಸ್ಯರಾದ ಎ.ಎಚ್.ವಿಶ್ವನಾಥ್, ಹಳ್ಳಿಗಳಿಗೆ ಹೊರಟಿದ್ದ ಜಿಲ್ಲಾಧಿಕಾರಿಗಳಿಗೆ ಹೋಗಬೇಡಿ ಎನ್ನುವ ಸೂಚನೆ ಕೊಡಿಸಿದ್ದು ಯಾರು? ಎಂದು ತಮ್ಮ ಪಕ್ಷದ ಸಂಸದರನ್ನೇ ಪ್ರಶ್ನಿಸಿದ್ದರು. ಶಾಸಕರಾದ ಜಿ.ಟಿ.ದೇವೇಗೌಡ ಅವರು, ಪ್ರತಿಪಕ್ಷಗಳಾಗಿ ನಾವು ಆಡಬೇಕಾದ ಮಾತುಗಳನ್ನು ಆಡಳಿತ ಪಕ್ಷದವರೇ ಆಡಿ, ಅಧಿಕಾರಿಗಳನ್ನು ದೂಷಿಸುತ್ತಿರುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ನಂತರ ಕೊರೊನಾ ನಿಯಂತ್ರಣ ಸಂಬಂಧ ಜಿಪಂ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯಲ್ಲಿ ೧೬ ಸ್ಟೆಪ್‌ಡೌನ್ ಆಸ್ಪತ್ರೆಗಳನ್ನು ಮುಚ್ಚಿಸಿದ್ದೇ ಜನಪ್ರತಿನಿಧಿಗಳು ತಮ್ಮ ವಿರುದ್ಧ ದಾಳಿ ಮಾಡಲು ಕಾರಣ ಎಂದು ಜಿಲ್ಲಾಧಿಕಾರಿ ನೇರ ಆರೋಪ ವಾಡಿದ್ದು ಮುಸುಕಿನಲ್ಲೇ ನಡೆಯುತ್ತಿದ್ದ ಗುದ್ದಾಟ ಬಯಲಾಗುವಂತೆ ಮಾಡಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಸ್ಟೆಪ್‌ಡೌನ್ ಆಸ್ಪತ್ರೆಗಳ ಪ್ರಕರಣವನ್ನು ತನಿಖೆ ನಡೆಸಿದಲ್ಲಿ ನಿಜಬಣ್ಣ ಬಯಲಾಗುತ್ತದೆಂದು ಒತ್ತಾಯಿಸಿದರು. ಹಾಗೂ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಮಾಡಿರುವ ಖರ್ಚಿನ ವಿವರ ನೀಡಬೇಕೆಂದು ಆಗ್ರಹಿಸಿದರು. ತಕ್ಷಣವೇ ಜಿಲ್ಲಾಧಿಕಾರಿ ಖರ್ಚಿನ ವಿವರವನ್ನು ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಮೂಲಗಳ ಪ್ರಕಾರ ಅಧಿಕಾರಿ ವಲಯದಲ್ಲೂ ಸ್ಟೆಪ್‌ಡೌನ್ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟಗಳ ಬಗ್ಗೆ ಅಸಮಧಾನವಿರುವುದು. ಸೋಂಕಿತರ ಸಂಖ್ಯೆ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಹೆಚ್ಚಾಗಿದ್ದರೂ ನಗರದಲ್ಲಿ ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಏಕೆ ಪ್ರಾರಂಭಿಸಲಿಲ್ಲ? ಕೋವಿಡ್ ನಿರ್ವಹಣೆಯಲ್ಲಿ ಲಾಭದ ದೃಷ್ಟಿಯಿಂದ ಖಾಸಗಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ವಿವಾದ ಪ್ರಾರಂಭವಾಗಿದ್ದು. ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಮೆಡಿಕಲ್ ಮಾಫಿಯಾಗೆ ತಳುಕು ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಇದರಲ್ಲಿ ಭೂ ಮಾಫಿಯಾ ಕೂಡ ತೊಡಗಿಕೊಂಡಿದೆ ಎಂದೂ ಮೂಲಗಳು ತಿಳಿಸಿವೆ. ನಗರದಲ್ಲಿ ಇದುವರೆಗೂ ಕೋವಿಡ್ ಕೇರ್ ಸೆಂಟರ್ ಖಾಸಗಿ ವಲಯದಲ್ಲಿ ಇತ್ತೇ ಹೊರತು ಸರ್ಕಾರಿ ವಲಯದಲ್ಲಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರಿ ಕಟ್ಟಡಗಳಲ್ಲೇ ಮಾಡಿರುವ ಕೋವಿಡ್ ಕೇರ್ ಸೆಂಟರ್‌ಗಳನ್ನು ನಗರಗಳಲ್ಲಿ ಏಕೆ ಮಾಡಲಾಗಿಲ್ಲ ಎಂದು ಮೂಲಗಳು ಪ್ರಶ್ನೆ ಎತ್ತಿವೆ.

ಈ ನಡುವೆ, ಅಧಿಕಾರಿಗಳು ಪ್ರಶ್ನಾತೀತರಲ್ಲ. ಜನಪ್ರತಿನಿಧಿಗಳಿಗೆ ಉತ್ತರ ಕೊಡುವುದು ಅಧಿಕಾರಿಗಳ ಕರ್ತವ್ಯ. ಅವರಿಗೆ ಉತ್ತರ ಕೊಡಬಾರದೆಂಬ ಮನಸ್ಥಿತಿಯಲ್ಲಿ ಅಧಿಕಾರಿಗಳಿರಬಾರದೆಂದು ಜನಪ್ರತಿನಿಧಿಗಳು ಪ್ರಶ್ನೆ ಎತ್ತಿದ್ದರು. ಆದರೆ ಈಗ ಜಿಲ್ಲಾಡಳಿತವು ಕೋವಿಡ್‌ನಿಂದ ಸಾವಿಗೀಡಾಗಿರುವ ಪ್ರಕರಣಗಳ ನೈಜ ವಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸದೆ, ಸತ್ಯವನ್ನು ಮುಚ್ಚಿಡಲಾಗುತ್ತಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಜನಪ್ರತಿನಿಧಿಗಳು ಸರ್ಕಾರಕ್ಕೆ ತನಿಖೆಗೆ ಒತ್ತಾಯಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಮುಖ್ಯಮಂತ್ರಿಗಳಾಗಲೀ ಇನ್ನೂ ತನಿಖೆಗೆ ಆದೇಶಿಸದೆ ಇರುವುದು ಯಾವುದೋ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂಬ ಗುಮಾನಿಗೆ ಎಡೆಮಾಡಿಕೊಟ್ಟಿದೆ. ಈ ಎಲ್ಲದರ ನಡುವೆ ಸರ್ಕಾರ ಮಾತ್ರ ಮೌನ ವಹಿಸಿರುವುದು ಸೋಜಿಗ. ಈ ಎಲ್ಲ ವಿವಾದಗಳಿಗೂ ಸರ್ಕಾರ ಇತಿಶ್ರೀ ಹಾಡಬೇಕಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...