ಮೈಸೂರಿನ ಮೇಯರ್‌ ಸದಸ್ಯತ್ವ ರದ್ದತಿ ಹಿನ್ನೆಲೆಯಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಆತಂಕದ ಬೆನ್ನಲ್ಲೇ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ತೆರೆಮರೆಯ ಕಸರತ್ತು ಶುರುವಾಗಿದ್ದು, ಮೂರು ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಶುರುವಾಗಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಮೂರು ಪಕ್ಷಗಳ ಭಾರೀ ಪೈಪೋಟಿ ನಡುವೆ ನಡೆದಿದ್ದ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿಯೊಂದಿಗೆ ಜೆಡಿಎಸ್ ಪಾಲಿಕೆ ಸದಸ್ಯೆ ರುಕ್ಮಿಣಿ ಮಾದೇಗೌಡ ಅವರಿಗೆ ಮೇಯರ್ ಗದ್ದುಗೆ ಏರುವ ಅವಕಾಶ ಒಲಿದು ಬಂದಿತ್ತು. 

ಇದೀಗ ರಾಜ್ಯ ಹೈ ಕೋರ್ಟ್ ಮೇಯರ್‌ ಅವರ ಸದಸ್ಯತ್ವವನ್ನೇ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳ ನಾಯಕರಲ್ಲಿ ತಳಮಳ ಸೃಷ್ಟಿಯಾಗಿದೆ. ಚುನಾವಣೆಗೆ ಸಜ್ಜಾಗಬೇಕೋ? ಬೇಡವೋ ಎಂಬುದು ಜಿಜ್ಞಾಸೆಯಾಗಿ ಕಾಡಲಾರಂಭಿಸಿದೆ. ಮೈಸೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಎಂದಿಗೂ ಮೇಯರ್‌ ಅವರ  ಸದಸ್ಯತ್ವ ರದ್ದಾಗಿರಲಿಲ್ಲ. ಈ ರದ್ದತಿ ಜೆಡಿಎಸ್‌ ಪಕ್ಷಕ್ಕೂ ಹಿನ್ನಡೆ ಆದಂತೆ ಆಗಿದೆ.

‘ಹೊಸ ಮೇಯರ್ ಆಯ್ಕೆಯಾದಾಗಿನಿಂದಲೂ ಏನೊಂದೂ ಕೆಲಸವೇ ಆಗಿಲ್ಲ. ಮೇಯರ್ ಆಯ್ಕೆಯ ಸಂದರ್ಭವೇ ರುಕ್ಮಿಣಿ ಅವರ ಸದಸ್ಯತ್ವ ಅನರ್ಹತೆಯ ಕುರಿತಂತೆ ಹೈಕೋರ್ಟ್ನಲ್ಲಿ ಪ್ರಕರಣವಿದೆ ಎಂಬುದನ್ನು ವರಿಷ್ಠರ ಗಮನಕ್ಕೂ ತಂದಿದ್ದೆವು. ಆಗ ಸುಪ್ರೀಂಕೋರ್ಟ್ಗೆ ಹೋದರಾಯಿತು. ಅಷ್ಟರೊಳಗೆ ಅವಧಿಯೇ ಮುಗಿಯಲಿದೆ ಎಂದಿದ್ದರು. ಈಗ ಮೈಸೂರಿನ ಗೌರವಕ್ಕೆ ಧಕ್ಕೆ ಬಂದಿತು’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಪಾಲಿಕೆಯ ಜೆಡಿಎಸ್ ಕಾರ್ಪೊರೇಟರ್ ಒಬ್ಬರು ‘ ಹೇಳಿದರು.

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ ಮೇಯರ್ ಚುನಾವಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದರು. ಇದರಲ್ಲಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದ್ದರೆ, ಸಿದ್ದರಾಮಯ್ಯಗೆ ತವರಿನಲ್ಲೇ ಭಾರಿ ಮುಖಭಂಗವಾಗಿತ್ತು. ಈ ಸೋಲನ್ನು ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪಾಳೆಯದ ನಾಯಕರು ನಡೆಸಿದ ಎಲ್ಲ ಕಸರತ್ತು ವಿಫಲವಾಗಿ ಮುಖಭಂಗಕ್ಕೀಡಾಗಿದ್ದರು. ಈಗಿನ ಬೆಳವಣಿಗೆ ಜೆಡಿಎಸ್ಗೆ ಹಿನ್ನಡೆಯಾದಂತಾಗಿದೆ.  ರುಕ್ಮಿಣಿ ಮಾದೇ ಗೌಡ ಅವರಿಗೆ ಇದು ಮಾಡು ಅಥವಾ ಮಡಿ ಹೋರಾಟ ಆಗಿದೆ. ಏಕೆಂದರೆ ಹೈ ಕೋರ್ಟ್‌ ತೀರ್ಪಿನ ವಿರುದ್ದ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರೆ ಈ ಆದೇಶಕ್ಕೆ ತಡೆಯಾಜ್ಞೆ ಸಿಗುವ ಸಾದ್ಯತೆ ಇದೆ. ಒಂದು ವೇಳೆ ತಡೆಯಾಜ್ಞೆ ಸಿಕ್ಕಿದರೆ  ಅವರ ಸದಸ್ಯತ್ವವೂ ಉಳಿದುಕೊಳ್ಳುತ್ತದೆ ಜತೆಗೇ ಮೇಯರ್‌ ಅಗಿಯೂ ಮುಂದುವರೆಯಲು ಅಡ್ಡಿ ಇಲ್ಲ. ಮುಖಭಂಗವನ್ನೂ ತಪ್ಪಿಸಿಕೊಳ್ಳಬಹುದಾಗಿದೆ. ಇವರು ಒಂದು ವೇಳೆ ನ್ಯಾಯಾಲಯಕ್ಕೆ ತೆರಳದಿದ್ದರೆ ಮರು ಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲ್ಲಬೇಕಿದೆ. ಒಂದು ವೇಳೆ ಗೆದ್ದರೂ ಕೂಡ ಮೇಯರ್‌ ಪಟ್ಟ ಸಿಗುವ ಸಾಧ್ಯತೆಗಳೇನೂ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ತಾವೇ ಸೋಲಿಸಿದ್ದ ಪ್ರತಿಸ್ಪರ್ದಿ ರಜನಿ ಅಣ್ಣಯ್ಯ ಅವರಿಗೆ ನಿರಾಯಾಸವಾಗಿ ಪಾಲಿಕೆ ಸದಸ್ಯತ್ವ ಸಿಗುತ್ತದೆ. 

ಪಾಲಿಕೆ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಚುನಾವಣೆ ನಡೆಯುವ ಕೊನೆ ಕ್ಷಣದವರೆಗೂ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ತರಲು ಅವಕಾಶವಿದೆ. ಸುಪ್ರೀಂಕೋರ್ಟ್ನ ಸೂಚನೆ, ಆದೇಶ, ತೀರ್ಪನ್ನು ಪಾಲಿಸಲೇಬೇಕು. ಒಂದು ವೇಳೆ ಹೊಸ ಮೇಯರ್ ಆಯ್ಕೆಯ ಘೋಷಣೆಗೂ ಮುನ್ನವೇ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ತಂದರೆ, ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವವೂ ಉಳಿಯಲಿದೆ. ಮೇಯರ್ ಸ್ಥಾನವೂ ಮುಂದುವರೆಯಲಿದೆ’  ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರುಕ್ಮಿಣಿ ಅವರ ಪತಿ ಮಾದೇ ಗೌಡ ಅವರು  ‘ಹೈಕೋರ್ಟ್ ತೀರ್ಪಿನ ಅಧಿಕೃತ ಪ್ರತಿ ಇನ್ನೂ ನನಗೆ ಸಿಕ್ಕಿಲ್ಲ. ತರಾತುರಿಯಲ್ಲಿ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಈ ಸಂದರ್ಭ ಏನಾದರೂ ಮಾತನಾಡಿದರೆ, ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ಹರಿಹಾಯ್ದಂತಾಗುತ್ತದೆ’ ಎಂದು ತಿಳಿಸಿದರು. ‘ತೀರ್ಪು ಪ್ರಕಟಗೊಂಡ ದಿನದಿಂದಲೂ ನಮ್ಮ ವಕೀಲರ ಜೊತೆ ಸಂಪರ್ಕದಲ್ಲಿರುವೆ. ಸುಪ್ರೀಂಕೋರ್ಟ್ನ ಮೊರೆಹೋಗಲು ನಿರ್ಧರಿಸಿರುವೆ. ನೋಡೋಣ. ಯಾರನ್ನೂ ದೂರಲ್ಲ. ದೇವರು ಬರೆದ ರೀತಿ ಆಗುತ್ತೆ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಈ ಸದಸ್ಯತ್ವ ಅನರ್ಹತೆಯ ಹಿನ್ನೆಲೆ ನೋಡುವುದಾದರೆ ಪಾಲಿಕೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ರುಕ್ಮಿಣಿ ಮಾದೇಗೌಡ ನಗರದ ಯರಗನಹಳ್ಳಿ (36ನೇ) ವಾರ್ಡ್ನಿಂದ ಬಿಸಿಎಂ ‘ಎ’ ಮಹಿಳಾ ಮೀಸಲಾತಿಯಡಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ದಾಖಲಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಜಿನಿ ಅಣ್ಣಯ್ಯ ಫಲಿತಾಂಶ ಘೋಷಣೆ ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದರು. ರುಕ್ಮಿಣಿ ನಾಮಪತ್ರ ಸಲ್ಲಿಸುವಾಗ ಆದಾಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿ, ಚುನಾವಣಾ ತಕರಾರಿನ ಅರ್ಜಿ ಸಲ್ಲಿಸಿದ್ದರು. ಈ ತಕರಾರು  ಅರ್ಜಿ ಪುರಸ್ಕರಿಸಿದ್ದ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ರುಕ್ಮಿಣಿ ಅವರ ಸದಸ್ಯತ್ವ ರದ್ದುಪಡಿಸಿ 2020ರ ಡಿ.14ರಂದು ಆದೇಶಿಸಿತ್ತು. ಆದೇಶ ಪ್ರಶ್ನಿಸಿ ರುಕ್ಮಿಣಿ ಮಾದೇಗೌಡ ಡಿ.23ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ತಡೆಯಾಜ್ಞೆ ಸಿಕ್ಕಿತ್ತು. ಕಳೆದ ಫೆಬ್ರುವರಿ .24ರಂದು ರುಕ್ಮಿಣಿ ಮೇಯರ್ ಆಗಿ ಆಯ್ಕೆಯಾಗಿದ್ದರು. ಇದೇ ದಿನ ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರಿದ್ದ ಪೀಠ, ಮೇ 26ರಂದು ಸದಸ್ಯತ್ವ ಅನರ್ಹಗೊಳಿಸುವ ಜೊತೆಗೆ, ವಾರ್ಡ್ನಲ್ಲಿ ಹೊಸದಾಗಿ ಚುನಾವಣೆ ನಡೆಸಲೂ ಆದೇಶಿಸಿ ತೀರ್ಪು ನೀಡಿತ್ತು.  

ಕಳೆದ ಬಾರಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಜೊತೆಗೆ ದೋಸ್ತಿ ಮಾಡಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ನಲ್ಲಿ ಮೇಯರ್ ಸ್ಥಾನದ ಆಕಾಂಕ್ಷಿಗಳಲ್ಲಿ ಮೇಯರ್ ಗದ್ದುಗೆ ಏರುವ ಆಸೆ ಚಿಗುರಿದೆ. ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಬೆನ್ನಲ್ಲೇ ಮೂರು ಪಕ್ಷದಲ್ಲೂ ಮೇಯರ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮೇಯರ್ ಸ್ಥಾನಕ್ಕೆ ಪೈಪೋಟಿ ಜೋರಾಗಿದ್ದು, ಕಳೆದ ಬಾರಿ ಮೇಯರ್ ಆಗುವ ಕನಸು ಕಂಡಿದ್ದ ಅಭ್ಯರ್ಥಿಗಳು ಇದೀಗ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆ ನಡೆಸಲು ಸಜ್ಜಾಗಿದ್ದಾರೆ. ಅದೃಷ್ಟ ಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೋ ಕಾದು ನೋಡಬೇಕಷ್ಟೆ. 

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...