ಸಂಸದ ಸಿಂಹ ಆರೋಪಕ್ಕೆ ಲೆಕ್ಕಪತ್ರ ನೀಡಿ ತಿರುಗೇಟು ನೀಡಿದ ಮೈಸೂರು ಡಿಸಿ

ಕಳೆದ ಮೇ 2ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ  ಅಕ್ಸಿಜನ್ ಕೊರತೆಯ ದುರಂತದ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ದ ಆಡಳಿತ ಪಕ್ಷದ ಶಾಸಕರೇ ಒಂದಲ್ಲ ಒಂದು ಆರೋಪಗಳನ್ನು ಮಾಡುತಿದ್ದಾರೆ. ಮಂಡ್ಯ, ಕೊಡಗು, ಚಾಮರಾಜನಗರದ ಆಸ್ಪತ್ರೆಗಳಿಗೆ ಮೈಸೂರಿನಿಂದಲೇ ಅಕ್ಸಿಜನ್ ಸರಬರಾಜು ಆಗಬೇಕಿದೆ. ಆದರೆ ಆಕ್ಸಿಜನ್ ಸರಬರಾಜು ಮಾಡುವ ಕಂಪೆನಿಗಳಿಗೆ ಡಿಸಿ ಸಿಂಧೂರಿ ಅವರು ಮೌಕಿಕ ಸೂಚನೆ ನೀಡಿ ತಾವು ಹೇಳಿದರೆ ಮಾತ್ರ ಸರಬರಾಜು ಮಾಡಬೇಕು ಎಂದು ಹೇಳಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪವನ್ನು ಸ್ವತಃ ಚಾಮರಾಜನಗರ ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ಕುಮಾರ್ ಅವರೇ ಮಾಡಿದ್ದರು. ಆದರೆ ರಾಜ್ಯ  ಹೈ ಕೋರ್ಟ್ ನೇಮಿಸಿದ್ದ ಕಾನೂನು ಸೇವಾ ಪ್ರಾಧಿಕಾರದ ಸಮಿತಿಯು ತನಿಖೆ ನಡೆಸಿ ರೋಹಿಣಿ ಸಿಂಧೂರಿ ಅವರ ಮೇಲೆ ಇರುವ  ಆರೋಪಗಳಲ್ಲಿ ಹುರುಳಿಲ್ಲ ಎಂದು ತಳ್ಳಿ ಹಾಕಿ ರಾಜ್ಯ ಹೈ ಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಿದೆ.

ಈ ಹಿಂದೆ ಜಿಲ್ಲಾಧಿಕಾರಿ ರೋಹಿಣಿ ಅವರ ವಿರುದ್ದ ಜೆಡಿಎಸ್ ಶಾಸಕ  ಸಾ ರಾ ಮಹೇಶ್ ಮತ್ತು ಮೈಸೂರು ಮಹಾನಗರಪಾಲಿಕೆಯ ಮಾಜಿ ಕಾರ್ಪೊರೇಟರ್ ಕೆ ವಿ ಮಲ್ಲೇಶ್ ಆರೋಪವೊಂದನ್ನು ಮಾಡಿ ಡಿಸಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ 28 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈಜುಕೊಳ ಮತ್ತು ಜಿಮ್ ನಿರ್ಮಿಸುತಿದ್ದಾರೆಂದು ಆರೋಪಿಸಿದ್ದರು. ಆದರೆ ಇದಕ್ಕೆ ಹೆಚ್ಚೇನೂ ತಲೆಕೆಡಿಸಿಕೊಳ್ಳದ ಡಿಸಿ ಅವರು ಇದಕ್ಕೆಲ್ಲ ಸ್ಪಷ್ಟನೆ ನೀಡುತ್ತಾ ಇರಲು ಸಾದ್ಯವಿಲ್ಲ ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಎಂದಿದ್ದರು.

ಕಳೆದ 20 ದಿನಗಳಿಂದಲೂ  ಮೈಸೂರು –ಕೊಡಗು ಸಂಸದ ಪ್ರತಾಪ ಸಿಂಹ ಅವರು ಡಿಸಿ ಅವರ ವಿರುದ್ದ ಕೋವಿಡ್ ನಿಯಂತ್ರಣದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳನ್ನು ಮಾಡುತ್ತಲೇ ಬಂದರು. ಶುಕ್ರವಾರವಷ್ಟೆ  ಜೆಡಿಎಸ್ ಶಾಸಕ ಜಿ ಟಿ ದೇವೇ ಗೌ ಡ ಅವರು ನಿನಗೆ ತಾಖತ್ತಿದ್ದರೆ  ಡಿಸಿ ಅವರನ್ನು ವರ್ಗಾವಣೆ ಮಾಡಿ ತೋರಿಸು ಎಂದೂ ಹರಿ ಹಾಯ್ದಿದ್ದರು. ಆಗ ತಾವು ಹಿರಿಯರು  ಎಂದು ಹೇಳಿಕೊಂಡಿದ್ದ  ಪ್ರತಾಪ ಸಿಂಹ ಭಾನುವಾರ  ಮತ್ತೆ ಜಿಲ್ಲಾಧಿಕಾರಿಗಳ ಮೇಲೆ ಗಂಭೀರ ಆರೋಪಗಳನ್ನೇ ಮಾಡಿದರು. ಸಿಂಹ ಪ್ರಕಾರ ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದ್ದರೂ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಗೆ 41 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನೇ ಬಿಡುಗಡೆ ಮಾಡಿದೆ. ಆದರೆ ನಿಗದಿತ ಕೆಲಸಗಳು ನಡೆಯುತ್ತಿಲ್ಲ , ಕೊರೋನ ಸೋಂಕು ಕಡಿಮೆ ಆಗುತ್ತಿಲ್ಲ, ಡಿಸಿ ಬರೀ ಸಭೆಗಳಲ್ಲೇ ಕಾಲ ಕಳೆಯುತಿದ್ದಾರೆ ಎಂದೆಲ್ಲ ಆರೋಪಗಳ ಸುರಿಮಳೆಯನ್ನೇ ಮಾಡಿದರು. ಡಿಸಿ ಅವರು ಕೋವಿಡ್ ಔಷಧಿ ಖರೀದಿಸಲು  ರೂಲ್ಸ್ ಫಾಲೋ ಮಾಡಬೇಕು , ಟೆಂಡರ್ ಕರೆಯಬೇಕು ಎನ್ನುತ್ತಾರೆ ಅದರೆ ಇವರ ಮನೆಯ ಈಜುಕೊಳ ನಿರ್ಮಿಸಲು ಟೆಂಡರ್ ಕರೆಯಲಾಗಿದೆಯೇ ? ಕೋವಿಡ್ ನಿಂದ ಜನರು ಸಾಯುತ್ತಿರುವಾಗ ಈಜುಗೊಳ ಅಗತ್ಯವಿದೆಯೇ ಎಂದು  ತೀವ್ರ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲ 41 ಕೋಟಿ ಅನುದಾನದ ಲೆಕ್ಕವನ್ನೂ ಕೇಳಿದ್ದರು. ಅಲ್ಲದೆ ಪಿಎಂ ಕೇರ್ಸ್ ಫಂಡ್ ನಿಂದ ನೀಡಲಾದ 45 ವೆಂಟಿಲೇಟರ್ ಗಳನ್ನು ಇನ್ನೂ ಅಳವಡಿಸಲಾಗಿಲ್ಲ ಎಂದೂ ಅರೋಪಿಸಿದ್ದರು.

ಇದಕ್ಕೆ ಭಾನುವಾರ ರಾತ್ರಿಯೇ ಜಿಲ್ಲಾ ವಾರ್ತಾಧಿಕಾರಿಗಳ ಮೂಲಕ ಮಾಧ್ಯಮಗಳಿಗೆ ಲೆಕ್ಕ ಬಿಡುಗಡೆ ಮಾಡುವ ಮೂಲಕ ಡಿಸಿ ಸಿಂಧೂರಿ ತಿರುಗೇಟನ್ನೂ ನೀಡಿದ್ದರು. ಈ ಹಿಂದೆ ಪ್ರತಾಪ್ ಸಿಂಹ ಅವರನ್ನು ಸಮರ್ಥಿಸಿಕೊಳ್ಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು  ಅಧಿಕಾರಿಗಳು ಎಲ್ಲರ ಮಾತನ್ನೂ ಕೇಳಬೇಕು ಎಂದು ಹೇಳಿದ್ದರು. ಇಲ್ಲಿ ಪ್ರಶ್ನೆ ಏನೆಂದರೆ ಡಿಸಿ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನವಿದ್ದರೆ ಇದನ್ನು ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ವರ್ಗಾವಣೆ ಮಾಡಿಸಬಹುದಿತ್ತು. ಆದರೆ ಸುಮ್ಮನೇ ಆರೋಪಗಳನ್ನು ಮಾಡುವ ಮೂಲಕ ಇವರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ ಅಥವಾ ಏನು ಸಾಧಿಸಲು ಹೊರಟಿದ್ದಾರೆ ಎಂಬುದು ಜನತೆಗೆ ಅರ್ಥವಾಗುತ್ತಿಲ್ಲ.

ಮತ್ತೊಂದೆಡೆ ಇಂದು  ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಎಸ್ ಏ ರಾಮದಾಸ್ ಅವರು  ಪಿಎಂ ಕೇರ್ಸ್ ಅಡಿಯಲ್ಲಿ ನೀಡಲಾದ ವೆಂಟಿಲೇಟರ್ ಗಳನ್ನು ತುಳಸೀದಾಸ್ ಆಸ್ಪತ್ರೆಯಲ್ಲಿ ಅಳವಡಿಸಿರುವ ಚಿತ್ರವನ್ನೂ ಹಂಚಿಕೊಂಡಿದ್ದರು. ಸೋಮವಾರ ಪುನಃ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಕೆ ಆರ್ ಶಾಸಕ ಸಾರಾ ಮಹೇಶ್ ಅವರು   ಕೊರೊನಾ ಆತಂಕಕ್ಕೆ ಸಿಲುಕಿರುವ ಮೈಸೂರಿನಲ್ಲಿ ಸೋಂಕಿನಿಂದ ಬಲಿಯಾದವರ ಸಂಖ್ಯೆ ಮುಚ್ಚಿಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ನೋಡಿ ನನಗೆ ಆಘಾತವಾಗುತ್ತಿದೆ. ಮೈಸೂರು ನಗರ ವ್ಯಾಪ್ತಿಯಲ್ಲಿ ಮೇ 1 ರಿಂದ ಮೇ 29 ರವರೆಗೆ 969 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕ ಕೊಟ್ಟಿದ್ದು, 731 ಸಾವುಗಳ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಆರೋಪಿಸಿದ ಸಾ.ರಾ ಮಹೇಶ್, ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು. ಅಲ್ಲದೇ, ಕೊರೊನಾ ಸೋಂಕಿನಿಂದ ಬಲಿಯಾದವರ ಕುರಿತು ಅಂತ್ಯಕ್ರಿಯೆ ಸ್ಥಳದಿಂದ ಪ್ರತಿದಿನ ದಾಖಲಾತಿ ತರಲಾಗಿದೆ. ನಗರದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಗೆ ಸಂಬಂಧಿಸಿದಂತೆ ಸರ್ಕಾರಕ್ಕೂ ವಂಚನೆ ಮಾಡಲಾಗಿದೆ. ಪ್ರತಾಪ್ ಸಿಂಹ ಸಹ ಸಾವಿನ ಲೆಕ್ಕದ ಬಗ್ಗೆ ಹೇಳಿದ್ದರು. ಆದರೆ ನಾನು ಹೇಳುತ್ತಿಲ್ಲ, ದಾಖಲೆ ಸಹ ನೀಡಿದ್ದೇನೆ. ಹೀಗಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿಲ್ಲ, ಬದಲಿಗೆ ಇದು ಮೋಸದ ಲೆಕ್ಕ ಎಂದು ಕಿಡಿಕಾರಿದರು. ಅವರು ಸಾವಿನ ಲೆಕ್ಕದ ತನಿಖೆಗಾಗಿಯೂ ಒತ್ತಾಯಿಸಿದರು.

ಒಟ್ಟಿನಲ್ಲಿ ಡಿಸಿ ಸಿಂಧೂರಿ ಅವರ ವಿರುದ್ದ ಮತ್ತು ಪರ ನಿಂತಿರುವವರಲ್ಲಿ ಆಳುವ ಮತ್ತು ವಿರೋಧ ಪಕ್ಷಗಳ ನಾಯಕರೂ ಇದ್ದಾರೆ. ಡಿಸಿ ಅವರು ಮಾತ್ರ ನಾನು ಕೋವಿಡ್ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡುತಿದ್ದೇನೆ. ಮುಂದಿನ ಜುಲೈ ಒಂದರನ್ನು ಮೈಸೂರನ್ನು ಕೋವಿಡ್ ಮುಕ್ತ ಮಾಡುವುದೇ ನನ್ನ ಗುರಿ ಎಂದು ಹೇಳಿದ್ದಾರೆ.

-ಇಂದ್ರೇಶ್

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...