ಭಾರತ ಹವಾಮಾನ ಇಲಾಖೆಯ ಡಾಟಾವು ತೋರಿಸುವಂತೆ ಈ ತಿಂಗಳಲ್ಲಿ ಹೊಸ ದೆಹಲಿಯ ಮಂಗೇಶ್‌ಪುರ್‌ನ ಉಷ್ಣತೆಯು ಸಾಫ್ದಾರ್‌ಜಂಗ್‌ಗಿಂತ 1.4 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿತ್ತು. ಗಾಳಿಯ ಮಾದರಿಗಳು ಸೇರಿದಂತೆ ಅನೇಕ ಅಂಶಗಳು ಅಕ್ಕಪಕ್ಕದ ನಗರಗಳ ನಡುವಿನ ತಾಪಮಾನ ವ್ಯತ್ಯಾಸಕ್ಕೆ ಕಾರಣವಾಗಬಹುದು. ಆದರೆ ಆರೋಗ್ಯಕರ ಸಸ್ಯವರ್ಗದ ಉಪಸ್ಥಿತಿ ಅಥವಾ ಅನುಪಸ್ಥಿತಿಯು ಪ್ರದೇಶವೊಂದರ ತಾಪಮಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಬಗ್ಗೆ ಮಾತಾಡುವ University of Technology Sydney’s Institute for Sustainable Futures ನಿರ್ದೇಶಕರಾದ ಬ್ರೆಂಟ್ ಜಾಕೋಬ್ಸ್ ಜನಸಂಖ್ಯೆಯ ಸಾಂದ್ರತೆ ಮತ್ತು ನೀರಿನ ಲಭ್ಯತೆಯು ಗ್ರೀನರಿ ಮತ್ತು ಆರೋಗ್ಯಕ್ಕೆ ಕೊಡುಗೆ ನೀಡುವ ಕೆಲವು ಅಂಶಗಳಾಗಿವೆ ಎನ್ನುತ್ತಾರೆ . ಸಾಕಷ್ಟು ಜನರಿಗೆ ಆಶ್ರಯ ಕಲ್ಪಿಸುವ ನಗರಗಳು ಸಾಮಾನ್ಯವಾಗಿ ಸೂರ್ಯನ ಶಾಖವನ್ನು ಹೀರಿ ಗಾಳಿಯಲ್ಲಿ ಹರಡುವ ಕಾಂಕ್ರೀಟ್ನಂತಹ ಹೆಚ್ಚು ಹಾರ್ಡ್ ಮೇಲ್ಮೈಗಳುಲ್ಲ ಕಟ್ಟಡಗಳನ್ನು ಅತಿ ಹೆಚ್ವಿನ ಸಂಖ್ಯೆಯಲ್ಲಿ ಹೊಂದಿರುತ್ತವೆ. ಇವು ತಾಪಮಾನವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ಅವರು.
“ಜನರು ಸಾಮಾನ್ಯವಾಗಿ ಅವರಿಗಾಗುತ್ತಿರುವ ತೊಂದರೆಗಾಗಿ ಹವಾಮಾನ ಬದಲಾವಣೆಯ ಪ್ರಭಾವವನ್ನು ದೂರಲು ಬಯಸುತ್ತಾರೆ. ಆದರೆ ಅನನುಕೂಲತೆಗಳು ಹವಾಮಾನ ಬದಲಾವಣೆಗೆ ಮಾತ್ರ ಸಂಬಧಿಸಿದ್ದಲ್ಲ ” ಎಂದು ಹೇಳುವ ಜಾಕೊಬ್ ವ್ಯವಸ್ಥೆ ಮೊದಲೇ ದುರ್ಬಲವಾಗಿದ್ದರೆ ಹವಾಮಾನ ಬದಲಾವಣೆ ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸುತ್ತದೆ ಎನ್ನುತ್ತಾರೆ.
“ಸಫ್ದಾರ್ಜುಂಗ್ ಮತ್ತು ಅದರ ಅಕ್ಕಪಕ್ಕದಲ್ಲಿ ಕಟ್ಟಡಗಳ ಸಾಂದ್ರತೆ ಕಡಿಮೆ ಮತ್ತು ಸಸ್ಯಗಳು ಹಾಗೂ ತೆರೆದ ಪ್ರದೇಶಗಳು ಹೆಚ್ಚಿವೆ. ಹಾಗಾಗಿ ಆ ಪ್ರದೇಶಗಳು ಇತರ ಪ್ರದೇಶಗಳಿಗಿಂತ ತಂಪಾಗಿರುತ್ತವೆ” ಎನ್ನುತ್ತಾರೆ ಭಾರತೀಯ ಹವಾಮಾನ ಇಲಾಖೆಯ ಮಾಜಿ ಮುಖ್ಯಸ್ಥ ಅಜಿತ್ ತ್ಯಾಗಿ. ಭೂ-ಬಳಕೆಯ ಅಂಶಗಳು ಮತ್ತು ಕಟ್ಟಡಗಳ ಹೆಚ್ಚಿನ ಸಾಂದ್ರತೆಯು ತಾಪಮಾನದ ವ್ಯತ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತಾರೆ.
ಕೆಲವು ಪ್ರದೇಶಗಳನ್ನು ವಾರಗಳವರೆಗೆ ಕಾಡುವ ತೀವ್ರವಾದ ಉಷ್ಣತೆಯ ಸಮಸ್ಯೆಯು ಹಸಿರುಮನೆ ಅನಿಲಗಳ ಪ್ರಮಾಣ ಹೆಚ್ಚಾದಂತೆ ಮತ್ತಷ್ಟು ಬಿಗಡಾಯಿಸುತ್ತದೆ. ಭಾರತದ ಹಳ್ಳಿಗಳಲ್ಲಿ ಇರುವ ಉದ್ಯೋಗದ ಕೊರತೆಯು ಜನರಿಗೆ ಮತ್ತೆ ಮತ್ತೆ ನಗರಗಳೆಡೆ ವಲಸೆ ಹೋಗುವಂತೆ ಪ್ರೆರೇಪಿಸುತ್ತದೆ. ಒಂದು ಅಂದಾಜಿನ ಪ್ರಕಾರ ಭಾರತದ ನಗರಗಳ ಜನಸಂಖ್ಯೆಯು 2050 ರೊಳಗೆ ದ್ವಿಗುಣಗೊಳ್ಳಲಿದೆ. ಆದರೆ ವಿಪರೀತ ಶಾಖದಲ್ಲಿ ಕೆಲಸ ಮಾಡಲು ಸಾಧ್ಯವಾಗದೆ ನಗರದ ಜನಸಂಖ್ಯೆ ಮಾತ್ರ ಹೆಚ್ಚಾಗಿ ಉತ್ಪಾದಕತೆಯ ಕಡಿಮೆಯಾಗಲಿದೆ. ಇದರಿಂದಾಗಿ ಬಡವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಈಡಾಗಲಿದೆ. ಈ ವರ್ಷದ ಬಿಸಿಗಾಳಿಯೇ ದೇಶದ ನಗರ ಪ್ರದೇಶದ ಬಡವರ ಜನಜೀವನದ ಮೇಲೆ ವಿಪರೀತ ಪ್ರಭಾವ ಬೀರಿದೆ ಎಂದು ಸರ್ಕಾರಿ ಅಂಕಿ ಅಂಶಗಳೇ ಹೇಳುತ್ತವೆ. ಶ್ರೀಮಂತರು ತಾಪಮಾನದಿಂದ ತಪ್ಪಿಸಿಕೊಳ್ಳಲು ಏರ್ಕಂಡೀಷನರ್‌ಗಳ ಮೊರೆ ಹೋದರೆ ಬಡವರು ಯಾವ ಸೌಲಭ್ಯವೂ ಇಲ್ಲದೆ ಬಯಲಲ್ಲಿ ಬಸವಳಿಯುತ್ತಿದ್ದಾರೆ. ಕೆಲವು ವಿಪರೀತ ತಾಪಮಾನಗಳಿರುವ ದೇಶಗಳಲ್ಲಿರುವಂತೆ ತಾಪಮಾನವು ನಿರ್ದಿಷ್ಟ ಮಟ್ಟವನ್ನು ಮೀರಿದಾಗ ಹೊರಾಂಗಣ ಚಟುವಟಿಕೆಯನ್ನು ನಿಷೇಧಿಸುವ ಕಾನೂನುಗಳನ್ನು ಭಾರತದಲ್ಲಿ ಅವಶ್ಯವಾಗಿ ತರಲೇಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಸರ್ಕಾರಗಳು ಸ್ಥಳೀಯ ಸಂಪನ್ಮೂಲ ಮತ್ತು ಆದ್ಯತೆಗಳನ್ನು ಅರಿತುಕೊಂಡು ಜನರಿಗೆ ತಾವಿರುವ ಕಡೆಯೇ ಉದ್ಯೋಗ ಸೃಷ್ಟಿ ಮಾಡಿಕೊಡುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು.