• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೃಷಿ-ಕೃಷಿಕರ ಸವಾಲುಗಳನ್ನು ಶೋಧಿಸುವ ಕೃತಿ

ನಾ ದಿವಾಕರ by ನಾ ದಿವಾಕರ
February 6, 2025
in Top Story, ಕರ್ನಾಟಕ, ಜೀವನದ ಶೈಲಿ, ದೇಶ, ವಾಣಿಜ್ಯ
0
ಕೃಷಿ-ಕೃಷಿಕರ ಸವಾಲುಗಳನ್ನು ಶೋಧಿಸುವ ಕೃತಿ
Share on WhatsAppShare on FacebookShare on Telegram

ADVERTISEMENT

—-ನಾ ದಿವಾಕರ—-

ನಿರಂತರವಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತಾಪಿಯ ಕಣ್ತೆರೆಸುವ ಒಂದು ಪ್ರಯತ್ನ

“ ಭೂ ಸ್ವಾಧೀನ ಒಳಸುಳಿಗಳು”

ಭಾರತದಂತಹ ಕೃಷಿ ಪ್ರಧಾನ ಹಾಗೂ ಸಾಮಾಜಿಕವಾಗಿ ಹಿಂದುಳಿದ, ಆರ್ಥಿಕವಾಗಿ ಬೆಳವಣಿಗೆಯ ಹಾದಿಯಲ್ಲಿರುವ ದೇಶದಲ್ಲಿ, ಬಹುಸಂಖ್ಯಾತ ಮನುಷ್ಯ ಸಮಾಜದ ಬದುಕು ಮತ್ತು ಜೀವನೋಪಾಯಕ್ಕೆ ಅಡಿಪಾಯವಾಗಿ ಪರಿಣಮಿಸುವ ʼಭೂಮಿʼ ಸದಾ ಚರ್ಚೆಯಲ್ಲಿರುವ ಪ್ರಶ್ನೆಯಾಗಿರುತ್ತದೆ. ಯಾವ ದೇಶದಲ್ಲೇ ಆದರೂ ಮನುಷ್ಯ ಸಮಾಜ ಭೂಮಿಯೊಡನೆ ಹೊಂದಿರುವ ಭಾವನಾತ್ಮಕ ಸೂಕ್ಷ್ಮ ಸಂಬಂಧಗಳೇ ಅಲ್ಲಿನ ಉತ್ಪಾದನಾ ವಿಧಾನಗಳನ್ನೂ, ಮಾದರಿಗಳನ್ನೂ, ವಿವಿಧ ಮಾರ್ಗಗಳನ್ನೂ, ಸಮಾಜ-ಸಂಸ್ಕೃತಿಯನ್ನೂ ನಿರ್ದೇಶಿಸುವುದು ಇತಿಹಾಸ ಕಂಡಿರುವ ಸತ್ಯ. ಭಾರತದ ಮಟ್ಟಿಗೆ ಇದು ಸಮಕಾಲೀನ ವಾಸ್ತವವೂ ಹೌದು. ಹಾಗಾಗಿಯೇ ವಸಾಹತು ಕಾಲದಿಂದ ಈ ಹೊತ್ತಿನ ವಿಕಸಿತ ಭಾರತದವರೆಗಿನ ನಡಿಗೆಯಲ್ಲಿ ಭೂಮಿ ಮತ್ತು ಅದರ ಒಡೆತನ, ಬಳಕೆ ಸದಾ ನಾಗರಿಕ ಸಮಾಜವನ್ನು ಕಾಡುತ್ತಲೇ ಇದೆ. 19ನೇ ಶತಮಾನದ ಅಮರಸುಳ್ಯದಿಂದ 21ನೇ ಶತಮಾನದ ದೆಹಲಿ ರೈತ ಮುಷ್ಕರದವರೆಗೂ ಈ ಚರಿತ್ರೆ ವ್ಯಾಪಿಸುತ್ತದೆ.

ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಡಿಜಿಟಲ್‌ ಯುಗದಲ್ಲೂ ಭಾರತದ ಶೇಕಡಾ 65ಕ್ಕೂ ಹೆಚ್ಚು ಜನರು ತಮ್ಮ ಜೀವನ-ಜೀವನೋಪಾಯಕ್ಕಾಗಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭೂಮಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಎಂದರೆ ಕೇವಲ ಉತ್ತುಬಿತ್ತು ಬೇಸಾಯ ಮಾಡುವುದಷ್ಟೇ ಅಲ್ಲ, ಈ ಚಟುವಟಿಕೆಯ ಸುತ್ತಲಿನ ಬದುಕಿನಲ್ಲಿ ಭೂಮಿಯ ಸಂಪನ್ಮೂಲಗಳನ್ನೇ ಅವಲಂಬಿಸಿ ತಮ್ಮ ಕಸುಬು, ವೃತ್ತಿ ಮತ್ತು ಕಾಯಕವನ್ನು ನಡೆಸುವ ಅಸಂಖ್ಯಾತ ಜನರು ಭಾರತದಲ್ಲಿ ಬಹುಸಂಖ್ಯೆಯಲ್ಲೇ ಇದ್ದಾರೆ. ಹಾಗಾಗಿಯೇ ಭೂಮಿ ಮತ್ತು ಕೃಷಿ ತಳಸಮಾಜದ ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಅಭ್ಯುದಯದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇರುವ ಭೂಮಿಯನ್ನು ಕಳೆದುಕೊಳ್ಳುವವರು, ಭೂಮಿಯನ್ನು ಹೊಂದಿದ್ದರೂ ಅದರಿಂದ ಉತ್ಪಾದನೆಯನ್ನು ಪಡೆಯಲಾಗದವರು, ವ್ಯವಸಾಯವನ್ನೇ ಬದುಕಿನ ಆಕರವನ್ನಾಗಿಸಿಕೊಂಡಿದ್ದರೂ ಅದರಿಂದ ಜೀವನ ನಿರ್ವಹಣೆಗೆ ಪರದಾಡುತ್ತಿರುವವರು, ಹೀಗೆ ಭೂಮಿಯ ಪ್ರಶ್ನೆ ಎದುರಾದಾಗ ಈ ವರ್ಗಗಳು ನಮ್ಮೆದುರು ನಿಲ್ಲುತ್ತವೆ.

Renukacharya | Yatnal | ಯತ್ನಾಳ್​..ನೀನ್​ ಯಾವ ಲೆಕ್ಕ, ನಾನ್ ರೆಡಿ..ಬಾ ಅಖಾಡಕ್ಕೆ! #pratidhvani

ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಭೂ ಹೋರಾಟಗಳ ಚರಿತ್ರೆಯನ್ನು ಗಮನಿಸಿದಾಗ, ಸಾವಿರಾರು ಜನರು ತುಂಡು ಭೂಮಿಗಾಗಿ ಜೀವ ತೆತ್ತ ಕರಾಳ ಚಿತ್ರಣ ನಮ್ಮೆದುರು ಅನಾವರಣಗೊಳ್ಳುತ್ತದೆ. 1940ರ ತೆಲಂಗಾಣದಿಂದ 2020ರ ದೆಹಲಿಯವರೆಗೆ ಹರಡುವ ಈ ತ್ಯಾಗ, ಬಲಿದಾನ, ಸಂಘರ್ಷ ಮತ್ತು ಅಳಿವು ಉಳಿವಿನ ಹೋರಾಟಗಳು ನಿದರ್ಶನಪ್ರಾಯವಾಗಿವೆ. ಈ ಚರಿತ್ರೆಯ ಏಳು ಬೀಳುಗಳನ್ನು ಹಾಗೂ ಸಾಫಲ್ಯ ವೈಫಲ್ಯಗಳನ್ನು ಸಮಗ್ರವಾಗಿ ಚಿತ್ರಿಸುವಂತಹ ಒಂದು ಸಂಶೋಧನಾತ್ಮಕ ಸಾಹಿತ್ಯವಾಗಲೀ, ಪ್ರಬಂಧವಾಗಲೀ ಅಥವಾ ಗ್ರಂಥವಾಗಲೀ ನಮ್ಮ ನಡುವೆ ಕಾಣುವುದು ಅಪರೂಪ. ಇದ್ದರೂ ಸಹ ಅದು ವಿದ್ವತ್‌ ವಲಯದ ಬೌದ್ಧಿಕ ನೆಲೆಗಳನ್ನು ದಾಟಿ, ಈ ಹೋರಾಟದ ಅಂತರಾತ್ಮ ಎನ್ನಬಹುದಾದ ರೈತಾಪಿಯನ್ನು, ವಿಶೇಷವಾಗಿ ಕನ್ನಡದ ಜನರನ್ನು, ತಲುಪಲು ಸಾಧ್ಯವಾಗಿಲ್ಲ. ಇದು 21ನೇ ಶತಮಾನದಲ್ಲಿ ಆಗಲೇಬೇಕಾದ ತುರ್ತು ಕೆಲಸ.

ನವ ಉದಾರವಾದದ ಜಗತ್ತಿನಲ್ಲಿ

ಈ ನಡುವೆಯೇ ಡಿಜಿಟಲ್‌ ಯುಗದ ಬಂಡವಾಳಶಾಹಿ-ನವ ಉದಾರವಾದಿ ಆರ್ಥಿಕತೆಯ ಪರಿಣಾಮವಾಗಿ ಭಾರತದ ಕೃಷಿ ವಲಯ ಹಲವು ಆಯಾಮಗಳ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಭೂಮಿಯನ್ನು ನಂಬಿ ಬದುಕುವ ರೈತರು ಮತ್ತು ಅರಣ್ಯ-ಭೂಮಿಯನ್ನೇ ಮೂಲ ನೆಲೆಯನ್ನಾಗಿಸಿಕೊಂಡು ಬದುಕುವ ಆದಿವಾಸಿಗಳು, ಈ ಆರ್ಥಿಕ ಪಥದಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗುತ್ತಿದ್ದಾರೆ. ಶೇಕಡಾ 86ರಷ್ಟು ಸಣ್ಣ-ಅತಿಸಣ್ಣ ರೈತರನ್ನೊಳಗೊಂಡ ಭಾರತದ ಕೃಷಿ ವಲಯ ಉತ್ಪಾದನೆಯಲ್ಲಿ ಏರುಗತಿಯಲ್ಲಿದ್ದರೂ, ಉತ್ಪಾದಕ ಶಕ್ತಿಗಳು, ಅಂದರೆ ರೈತಾಪಿ ವರ್ಗದ ಜೀವನ ದಿನದಿಂದ ದಿನಕ್ಕೆ ಅಧೋಗತಿಯತ್ತ ಸಾಗುತ್ತಿದೆ. ಇದಕ್ಕೆ ಸರ್ಕಾರಗಳ ಕೃಷಿ ನೀತಿಗಳು ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯ ದಬ್ಬಾಳಿಕೆ ಒಂದು ಕಾರಣವಾದರೆ ಮತ್ತೊಂದು ಕಾರಣ ರೈತ ಬೆಳೆದ ಫಸಲಿಗೆ ಸೂಕ್ತ ಬೆಲೆ ದೊರೆಯದೆ ಇರುವುದು. ಇದರ ಒಂದು ದುರಂತ ಆಯಾಮವನ್ನು ಕಳೆದ ಮೂರು ದಶಕಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಲಕ್ಷಾಂತರ ರೈತರಲ್ಲಿ ಕಾಣಬಹುದು.

ಭೂಮಿಯನ್ನೇ ನಂಬಿ ಬದುಕುವ ಮತ್ತೊಂದು ವರ್ಗ, ಆದಿವಾಸಿ ಬುಡಕಟ್ಟು ಸಮುದಾಯಗಳು, ಇದೇ ಆರ್ಥಿಕ ನೀತಿಗಳ ಪರಿಣಾಮವಾಗಿ ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಶತಮಾನಗಳಿಂದ ತಾವು ನಂಬಿ ಬದುಕಿದ ಭೂಮಿ ಇಂದು ಆದಿವಾಸಿಗಳ ಪಾಲಿಗೆ ಮರೀಚಿಕೆಯಾಗುತ್ತಿದೆ. ಹೀಗೆ ಮೂಲೋತ್ಪಾಟನೆಯಾಗುತ್ತಿರುವ ಬುಡಕಟ್ಟು ಸಮುದಾಯಗಳು, ನಗರ ಜೀವನದಲ್ಲಿ ಕೂಲಿಯಾಳುಗಳಾಗಿ, ವಲಸೆ ಕಾರ್ಮಿಕರಾಗಿ ದುರ್ಭರ ಬದುಕು ಸಾಗಿಸುವುದು ಸಾಮಾನ್ಯವಾಗಿದೆ. ಈ ಜನಸಮುದಾಯಗಳ ಹೋರಾಟ ನಿರಂತರವಾಗಿ ಸಾಗುತ್ತಿದ್ದರೂ, ಆಳುವ ವರ್ಗಗಳ ಶಕ್ತಿಯ ಮುಂದೆ ಶಿಥಿಲವಾದಂತೆ ಕಾಣುತ್ತಿದೆ. ರಾಜಕೀಯವಾಗಿಯೂ ಬಹುಪಾಲು ಮುಖ್ಯವಾಹಿನಿ ಬೂರ್ಷ್ವಾ ಪಕ್ಷಗಳು ಇದೇ ನೀತಿಯನ್ನು ಅನುಸರಿಸುತ್ತಿರುವುದರಿಂದ, ಆದಿವಾಸಿಗಳ ಹೋರಾಟ ರಾಜಕೀಯವಾಗಿ ಧ್ವನಿಸಲು ಸಾಧ್ಯವಾಗುತ್ತಿಲ್ಲ.

ಈ ಎರಡೂ ಮಜಲುಗಳಲ್ಲಿ ನೋಡಿದಾಗ ಭಾರತದಲ್ಲಿ ಭೂಮಿ ಪ್ರಶ್ನೆಯ ಮೂಲ ಧಾತು ಯಾವುದು ಎಂದು ಯೋಚಿಸುವ ಅವಶ್ಯಕತೆ ಎದ್ದುಕಾಣುತ್ತದೆ. ಇಂದು ಅನ್ನ ಬೆಳೆಯುವ ರೈತನಿಗಿಂತಲೂ, ಅರಣ್ಯೋತ್ಪನ್ನಗಳನ್ನು ಬೆಳೆದು ಹಸಿರು ಮತ್ತು ಜೀವ ವೈವಿಧ್ಯಗಳನ್ನು ಸಂರಕ್ಷಿಸುವ ಬುಡಕಟ್ಟು ಸಮುದಾಯಗಳಿಗಿಂತಲೂ ಹೆಚ್ಚಾಗಿ, ಕಾರ್ಪೋರೇಟ್‌ ಮಾರುಕಟ್ಟೆಯ ಬಂಡವಾಳಶಾಹಿ ಪ್ರತಿನಿಧಿಗಳು ಭೂಮಿಯ ಪ್ರಶ್ನೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಒಂದು ನೇರ ಪರಿಣಾಮವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭೂ ಸ್ವಾಧೀನ ಕಾಯ್ದೆಗಳಲ್ಲಿ ಕಾಣಬಹುದು. ನಗರೀಕರಣಕ್ಕೊಳಗಾದ ಭಾರತದ ಸುಶಿಕ್ಷಿತ, ಹಿತವಲಯದ ಮಧ್ಯಮ ವರ್ಗಗಳು,                           ʼ ಭೂಮಿ ಪ್ರಶ್ನೆಗೂ ನಮಗೂ ಸಂಬಂಧವೇ ಇಲ್ಲ ʼ ಎಂಬ ಧೋರಣೆಯಲ್ಲಿ ನವ ಉದಾರವಾದದ ಫಲಾನುಭವಿಗಳಾಗುತ್ತಿದ್ದಾರೆ. ದಲಿತ-ತಳಸಮುದಾಯಗಳ ಹೋರಾಟಗಳೂ ಸಹ ಭೂ ಹೋರಾಟಗಳಿಂದ ವಿಮುಖವಾಗಿರುವುದು ಈ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಸರ್ಕಾರಗಳು, ಸಮಾಜವಾದ ಎಂಬ ಉದಾತ್ತ ಧ್ಯೇಯದೊಂದಿಗೆ ಇಂದಿಗೂ ಆಳ್ವಿಕೆ ನಡೆಸುತ್ತಿದ್ದರೂ, ಹೇಗೆ ಭೂಮಿಸುತರಿಂದ ಅವರ ಮೂಲ ನೆಲೆಯನ್ನು ಕಸಿದುಕೊಳ್ಳುತ್ತಿವೆ ಎಂದು ಪರಾಮರ್ಶಿಸುವ ಅವಶ್ಯಕತೆ ಇದೆ. ಮಾನವ ಸಮಾಜವನ್ನು ಭೂಮಿಯೊಡನೆ ಕಸಿ ಮಾಡಬೇಕಾದ ಸಮಾಜವೊಂದು ಈಗ ಅದೇ ಸಮಾಜದಿಂದ ಭೂಮಿಯನ್ನು ಕಸಿದುಕೊಂಡು ಲಾಭಕೋರ ಮಾರುಕಟ್ಟೆಯ ವಾರಸುದಾರರಿಗೆ ಪರಭಾರೆ ಮಾಡುತ್ತಿದೆ. ಇದನ್ನು ತಾಂತ್ರಿಕವಾಗಿ ʼ ಭೂ ಸ್ವಾಧೀನ ʼ ಎಂದು ಕರೆಯಲಾಗುವುದಾದರೂ ವಾಸ್ತವದಲ್ಲಿ ಇದು ಮಾರುಕಟ್ಟೆ ಪರಿಭಾಷೆಯಲ್ಲಿ ʼ ಭೂ ಕಬಳಿಕೆ ʼ ಆಗಿಯೇ ಪರಿಣಮಿಸುತ್ತಿದೆ. ಈ ವಿದ್ಯಮಾನದ ಸುತ್ತಲಿನ ಚರಿತ್ರೆ ಮತ್ತು ವರ್ತಮಾನದ ಸ್ಥಿತಿಗತಿಗಳನ್ನು ವಿಶಾಲ ಸಮಾಜದ ಮುಂದಿಡುವ ಬಹುದೊಡ್ಡ ಜವಾಬ್ದಾರಿಯನ್ನು “ ಭೂ ಸ್ವಾಧೀನ ಒಳಸುಳಿಗಳು ” ಎಂಬ ಅಮೂಲ್ಯ ಹೊತ್ತಿಗೆ ನೆರವೇರಿಸುತ್ತಿದೆ.

ಭೂ ಸ್ವಾಧೀನ ಪ್ರಕ್ರಿಯೆಯ ಒಳಹೊರಗು

“ ನಮ್ಮ ಭೂಮಿ ನಮಗಿರಲಿ ಅನ್ಯರಿಗಲ್ಲ ” ಎಂಬ ಘೋಷ ವಾಕ್ಯದಲ್ಲಿ ನಮ್ಮ ಎಂದರೆ ಕೇವಲ ರೈತರು ಅಥವಾ ಕೃಷಿಯನ್ನು ನಂಬಿದವರು ಮಾತ್ರವೇ ಅಲ್ಲ, ಈ ಉತ್ಪಾದಕೀಯ ಶಕ್ತಿಗಳ ಬೆವರಿನ ದುಡಿಮೆಯ ಫಲಾನುಭವಿ ನಗರೀಕೃತ ಸಮಾಜವೂ ಸೇರುತ್ತದೆ ಎಂಬ ಪರಿವೆ ನಮ್ಮೊಳಗಿರಬೇಕು. ಹಾಗೆಯೇ ರಾಜಕೀಯವಾಗಿ ಬಳಸಲಾಗುವ ʼ ಅನ್ಯ ʼ ಪದದ ವಿಕೃತಾರ್ಥಕ್ಕೆ ವಿರುದ್ಧವಾಗಿ ಇಲ್ಲಿ ʼ ಅನ್ಯ ʼ ಎಂದರೆ ಭೂಮಿಯನ್ನು ಶೋಷಣೆಗೊಳಪಡಿಸಿ ಅದರ ಅಂತಃಸತ್ವವನ್ನು ಹೀರಿ ತಮ್ಮ ಬಂಡವಾಳದ ಸಾಮ್ರಾಜ್ಯವನ್ನು ವಿಸ್ತರಿಸಲು ಬಳಸುವ ಮಾರುಕಟ್ಟೆ ಶಕ್ತಿಗಳು ಎಂದು ಅರ್ಥೈಸಬೇಕಾಗುತ್ತದೆ. ಇದೇ ಘೋಷ ವಾಕ್ಯದಡಿಯಲ್ಲೇ ಹೊರತಂದಿರುವ “ ಭೂ ಸ್ವಾಧೀನ ಒಳಸುಳಿಗಳು ” ಈ ದೃಷ್ಟಿಯಿಂದ ಸಮಾಜದ ಕಣ್ತೆರೆಸುವ ಮಹತ್ತರ ಗ್ರಂಥವಾಗಿ ಕಾಣುತ್ತದೆ. “ ಭರವಸೆಯ ಬೆಳಕಿನ ಜಾಡು ಹಿಡಿದು ” ಎಂಬ ಉಪಶೀರ್ಷಿಕೆಯೊಡನೆ ಸಮಾಜದ ಮುಂದಿರುವ ಈ ಗ್ರಂಥವನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ, ರಾಜಕೀಯ ಚೌಕಟ್ಟುಗಳೊಳಗೆ, ಆರ್ಥಿಕ ಆವರಣದಲ್ಲಿಟ್ಟು ಓದಿದಾಗ, ನಮಗೆ ಭೂಮಿ ಮತ್ತು ಮನುಷ್ಯ ಸಮಾಜದ ನಡುವಿನ ಸೂಕ್ಷ್ಮ ಸಂಬಂಧಗಳು ಅರ್ಥವಾಗಲು ಸಾಧ್ಯ.

ಒಂದು ಸಂಶೋಧಕ-ಸಾಹಿತ್ಯಕ ಬೌದ್ಧಿಕ ಪರಿಶ್ರಮವನ್ನು ಸಾಮೂಹಿಕವಾಗಿ ಸಮಾಜದ ಮುಂದಿಡುವ ವಿಧಾನವೇ ಬಹುಶಃ ಹೊಸತು ಎನಿಸುತ್ತದೆ. “ ಭೂ ಸ್ವಾಧೀನದ,,,,, ” ಪುಸ್ತಕವು ಇದನ್ನು ಆಗುಮಾಡಿದೆ. ವಿವಿಧ ಕಾರ್ಯಕರ್ತರ, ಕೃಷಿ ತಜ್ಞರ, ಅರ್ಥಶಾಸ್ತ್ರಜ್ಞರ, ಸಮಾಜ ಶಾಸ್ತ್ರಜ್ಞರ ಅಧ್ಯಯನ, ಅರಿವು ಮತ್ತು ಅಭಿವ್ಯಕ್ತಿಗಳನ್ನು ಒಂದುಗೂಡಿಸಿ ಹೊರತಂದಿರುವ ಈ ಕೃತಿಯ ಎಂಟು ಅಧ್ಯಾಯಗಳು ಮತ್ತು ಎಂಟು ಅನುಬಂಧಗಳು ಕೇವಲ ಸರ್ಕಾರಗಳು ಜಾರಿಗೊಳಿಸಿರುವ ರೈತ-ಜನವಿರೋಧಿ ಕಾಯ್ದೆಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅದರ ಹಿಂದಿನ ಉದ್ದೇಶಗಳನ್ನೂ ಓದುಗರ ಮುಂದಿಡುತ್ತದೆ. ʼಭೂಮಿ ನಮ್ಮ ಹಕ್ಕುʼ ಎಂದು ಹೇಳುವುದೇ ಅಪರಾಧವಾಗಿರುವ ಒಂದು ಸನ್ನಿವೇಶವನ್ನು ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸಿರುವ ಹೊತ್ತಿನಲ್ಲಿ, ಸರ್ಕಾರಗಳು ಸಂವಿಧಾನದ ಚೌಕಟ್ಟಿನೊಳಗೇ ಜಾರಿಗೊಳಿಸುತ್ತಿರುವ, ಜಾರಿ ಮಾಡಿರುವ ಭೂ ಸ್ವಾಧೀನ ಕಾಯ್ದೆಗಳು ಹೇಗೆ ಭೂಮಿ ಪುತ್ರರನ್ನು ತಾಯ್ಮಡಿಲಿನಿಂದ ಪ್ರತ್ಯೇಕಿಸುತ್ತಿವೆ ಎನ್ನುವುದನ್ನು ಈ ಅಧ್ಯಾಯಗಳು ಬಿಂಬಿಸುತ್ತವೆ.

ಬಾಹ್ಯ ಸಮಾಜದಲ್ಲಿ ಎರಡು ಪ್ರಭಾವಿ ವಲಯಗಳನ್ನು ಗುರುತಿಸಬಹುದು. ಮೊದಲನೆಯದು ಸಂವಿಧಾನ ಮತ್ತು ಆರ್ಥಿಕತೆಯ ಫಲಾನುಭವಿಗಳು, ಎರಡನೆಯದು ಈ ಸಮಾಜದ ಮೇಲೆ ರಾಜಕೀಯ-ಸಾಂಸ್ಕೃತಿಕ-ಸಾಮಾಜಿಕ ಪಾರಮ್ಯ ಸಾಧಿಸಿ ವ್ಯವಸ್ಥೆಯನ್ನು ನಿರ್ದೇಶಿಸುವ ವರ್ಗಗಳು. ಈ ಎರಡೂ ವರ್ಗಗಳು ಮನುಷ್ಯ ಸಮಾಜದ ಪ್ರಗತಿಯನ್ನು ನೋಡುವ ದೃಷ್ಟಿಕೋನವೇ ದೋಷಪೂರಿತವಾಗಿದ್ದು, ಅಭಿವೃದ್ಧಿ ಪಥದಲ್ಲಿ ವಿನಾಶದತ್ತ ಸಾಗುತ್ತಿರುವ ನೈಸರ್ಗಿಕ ಸಂಪತ್ತು, ಸಂಪನ್ಮೂಲ ಮತ್ತು ಭೂಮಿಯನ್ನು ಮಾರುಕಟ್ಟೆಯ ಅಭಿವೃದ್ಧಿಗಾಗಿ ಬಳಸಿ ತ್ಯಜಿಸಬಹುದಾದ ಸರಕುಗಳಂತೆಯೇ ಭಾವಿಸುತ್ತದೆ. ಇಲ್ಲಿ ಮೊದಲನೇ ವರ್ಗದ ನಿಷ್ಕ್ರಿಯತೆ ಅಥವಾ ಸ್ವಾರ್ಥಪರ ನಿರ್ಲಿಪ್ತತೆ ಈ ಅಭಿವೃದ್ಧಿ ಮಾದರಿಗಳನ್ನು ಅನಿವಾರ್ಯ ಎನ್ನುವಂತೆ ಮಾಡಿಬಿಟ್ಟಿದೆ. ಹಾಗಾಗಿಯೇ ದಶಪಥದಂತಹ ಹೆದ್ದಾರಿಗಳಾಗಲೀ, ಗಣಿಗಾರಿಕೆಯಂತಹ ಉದ್ಯಮಗಳಾಗಲೀ ಉಂಟುಮಾಡುವ ನಿಸರ್ಗ ನಾಶದ ಬಗ್ಗೆ ಈ ವರ್ಗ ಮೌನ ವಹಿಸುತ್ತದೆ.

ಕೃತಿಯ ಮಹತ್ವ ಮತ್ತು ಉಪಯುಕ್ತತೆ

“ ಭೂ ಸ್ವಾಧೀನ,,,,, ” ಕೃತಿಯು ಬಹುಮುಖ್ಯವಾಗಿ ಈ ವರ್ಗವನ್ನು ತಲುಪಬೇಕಿದೆ. ಸ್ವತಂತ್ರ ಭಾರತದ ಸರ್ಕಾರಗಳ ಭೂ ಸ್ವಾಧೀನ ಕಾಯ್ದೆಗಳು ರೈತಾಪಿಯ ಬದುಕನ್ನು ಹೇಗೆ ದುಸ್ತರಗೊಳಿಸಿವೆ ಎನ್ನುವುದನ್ನು ಕಾನೂನಾತ್ಮಕ ನೆಲೆಯಲ್ಲಿ ವಿವರಿಸುವುದರೊಂದಿಗೇ (ಅಧ್ಯಾಯ 1) ರೈತರ ಭೂಮಿಯನ್ನು ಕಸಿದುಕೊಳ್ಳಲು ರೂಪಿಸಲಾಗಿರುವ ಸಾಂಸ್ಥಿಕ ಚೌಕಟ್ಟುಗಳ ಪರಿಚಯವನ್ನೂ ನೀಡಲಾಗಿದೆ (ಅಧ್ಯಾಯ 2). ಈ ಭೂ ಸ್ವಾಧೀನವನ್ನು ತಡೆಗಟ್ಟಲು ಸಾಧ್ಯವೇ ಇಲ್ಲವೇ ? ಎಂಬ ಪ್ರಶ್ನೆಗೆ ಸಾಧ್ಯವಿದೆ ಎಂಬ ಭರವಸೆ ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅಧ್ಯಾಯ 3 ಮತ್ತು 4ರಲ್ಲಿ ಒದಗಿಸಲಾಗಿದೆ. ಆದರೆ ನಮ್ಮ ದೇಶದ ರಾಜಕೀಯ ಪ್ರೇರಿತ, ಅಧಿಕಾರಶಾಹಿ ಆಡಳಿತ ವ್ಯವಸ್ಥೆಯಲ್ಲಿ ಇದರ ಕಾರ್ಯಸಾಧ್ಯತೆಗಳು ಎಷ್ಟರ ಮಟ್ಟಿಗೆ ಸಕಾರಾತ್ಮಕವಾಗಿರಬಹುದು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇದೆ.

ಹೆದ್ದಾರಿ, ಮೆಲ್ಸೇತುವೆ, ಅಣೆಕಟ್ಟು, ವಿದ್ಯುತ್‌ ಉತ್ಪಾದನೆ, ಪರಮಾಣು ಘಟಕಗಳು, ಗಣಿಗಾರಿಕೆ ಹೀಗೆ ಔದ್ಯೋಗಿಕ-ಔದ್ಯಮಿಕ ಜಗತ್ತಿನ ವಿಸ್ತರಣೆಗಾಗಿ ತಮ್ಮ ಭೂಮಿಯನ್ನು ನಿರಂತರವಾಗಿ ಕಳೆದುಕೊಳ್ಳುತ್ತಲೇ ಇರುವ ಲಕ್ಷಾಂತರ ಸಂತ್ರಸ್ತರು ಇಂದು ಭಾರತದ ಅತ್ಯಂತ ನಿರ್ಲಕ್ಷಿತ ಸಮಾಜವಾಗಿ ಕಾಣುತ್ತಾರೆ. ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದ ಸ್ಟಾನ್‌ ಸ್ವಾಮಿ ಅವರಂತಹ ಅನೇಕಾನೇಕ ಹೋರಾಟಗಾರರು ನಮ್ಮ ನಡುವೆ ಇದ್ದರೂ, ಕಾಯ್ದೆ ಕಾನೂನುಗಳ ಭಾರಕ್ಕೆ ನಲುಗಿಹೋಗುತ್ತಿರುವುದು ವಾಸ್ತವ.  ಸ್ಟಾನ್‌ ಸ್ವಾಮಿ ಅವರ ಧ್ಯೇಯವಾಕ್ಯ ʼ ಜಲ್‌ ಜಂಗಲ್‌ ಜಮೀನ್‌ ʼ ( ನೀರು ಅರಣ್ಯ ಮತ್ತು ಭೂಮಿ) ಅಪ್ರಸ್ತುತವಾಗುತ್ತಿರುವುದನ್ನು ದೇಶದ ಉದ್ದಗಲಕ್ಕೂ ನೋಡುತ್ತಲೇ ಇದ್ದೇವೆ. ಈ ಹಾದಿಯಲ್ಲಿ ಬದಿಗೆಸೆಯಲ್ಪಟ್ಟ ಅಪಾರ ಜನಸ್ತೋಮದ ಹಕ್ಕುಗಳನ್ನು ಪರಿಚಯಿಸುವುದೇ ಅಲ್ಲದೆ ಈ ಸಮಾಜಗಳ ದುಸ್ತರ ಬದುಕು ಬವಣೆಯನ್ನು ಪುಸ್ತಕದ ಅಧ್ಯಾಯ 5 ಮತ್ತು 6ರಲ್ಲಿ ಸವಿಸ್ತಾರವಾಗಿ ನೀಡಲಾಗಿದೆ. (ಏನು ಹೇಳಲಾಗಿದೆ ಎಂಬುದನ್ನು ಪುಸ್ತಕ ಕೊಂಡು ಓದಿಯೇ ತಿಳಿಯಲಿ ಎಂಬ ಸದುದ್ದೇಶದಿಂದ ನಾನು ವಿವರಗಳನ್ನು ನೀಡುತ್ತಿಲ್ಲ )

ಆದರೆ ಈ ಬದುಕು ಬವಣೆಯನ್ನು ಹತ್ತಿರದಿಂದ ನೋಡಿದವರಾಗಲೀ, ಓದಿ ತಿಳಿದುಕೊಂಡವರಾಗಲೀ ಯೋಚಿಸಬೇಕಿರುವುದು ಕೇವಲ ಈ ಸಮಾಜದ ಬಗ್ಗೆ ಮಾತ್ರವಲ್ಲ. ಬದಲಿಗೆ ಸತತವಾಗಿ ಕ್ಷೀಣಿಸುತ್ತಿರುವ ಕೃಷಿ ಯೋಗ್ಯ ಭೂಮಿ ಮತ್ತು ಅದನ್ನು ಕಬಳಿಸುತ್ತಿರುವ ಆಧುನಿಕ ಮೂಲ ಸೌಕರ್ಯಗಳು , ಈಗಾಗಲೇ ಹೆಚ್ಚಾಗುತ್ತಿರುವ ಸಾಮಾಜಿಕಾರ್ಥಿಕ ಅಸಮಾನತೆಗಳನ್ನು ಹೇಗೆ ಹಿಗ್ಗಿಸುತ್ತವೆ ಎಂಬುದರ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ 2016ರ ವರದಿಯಲ್ಲಿ ನೀಡಿರುವ ಎಚ್ಚರಿಕೆಯನ್ನೂ ಪುಸ್ತಕದ ಪ್ರವೇಶಿಕೆಯಲ್ಲಿ (ಪುಟ vii) ನೀಡಲಾಗಿದೆ.  ತಳಸಮುದಾಯಗಳ ಸಾಂಘಿಕ ನೆಲೆಯಲ್ಲಿ-ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಲ್ಲಿ ಭೂ ಹೋರಾಟಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿರುವ ಈ ಹೊತ್ತಿನಲ್ಲಿ , ಭೂ ಸ್ವಾಧೀನವನ್ನು ವಿರೋಧಿಸಿ ರೂಪಿಸುವ ಹೋರಾಟಗಳು ಹೆಚ್ಚಿನದಾಗಿ ಕೋಶೀಕರಣಕ್ಕೊಳಗಾಗಿದ್ದು, ಸಂಬಂಧಪಟ್ಟ ಸಮಾಜಗಳ ನಡುವೆ ಮಾತ್ರ ಸಂಚಲನ ಮೂಡಿಸುತ್ತಿದೆ.

ಈ ನಿಟ್ಟಿನಲ್ಲಿ ಅಧ್ಯಾಯ 7ರಲ್ಲಿ ಪರಾಮರ್ಶಿಸಿರುವ ಸಮಸ್ಯೆಗಳು, ಮಿತಿಗಳು ಮತ್ತು ಅವಕಾಶಗಳನ್ನು ಕುರಿತ ಬರಹ ಉಪಯುಕ್ತವಾಗಿ ಕಾಣುತ್ತದೆ. “ ಕಳೆದುಕೊಂಡವರು ಮರಳಿ ಪಡೆಯಲು ಹೋರಾಡಲೇಬೇಕು ” ಎನ್ನುವುದು ಸ್ವಾಭಾವಿಕ ನಿಯಮ. ಇದು ಭೂಮಿಯ ವಿಷಯದಲ್ಲೂ ಅಷ್ಟೇ ಪ್ರಸ್ತುತ. ಆದರೆ ಈ ಹೋರಾಟದ ರೂಪು ರೇಷೆಗಳು, ತಾತ್ವಿಕ ನೆಲೆಗಳು, ಸೈದ್ಧಾಂತಿಕ ಸ್ಪರ್ಶ ಹಾಗೂ ಸಾಮಾಜಿಕ ಆಯಾಮಗಳು ಹೆಚ್ಚು ಪ್ರಾದೇಶಿಕ ಅಥವಾ ಪ್ರಾಂತೀಯವಾದಷ್ಟೂ, ಭೂಸ್ವಾಧೀನ ವಿರೋಧಿ ಹೋರಾಟಗಳೂ ಸಹ ವಿಘಟಿತವಾಗಿಯೇ ಇರಲು ಸಾಧ್ಯ. ದೆಹಲಿ ಆಗ್ರಾ ಕಾರಿಡಾರ್-ಮೈಸೂರು ಬೆಂಗಳೂರು ದಶಪಥ ಎರಡೂ ಪ್ರಸಂಗಗಳಲ್ಲಿ ಭೂಮಿ ಕಳೆದುಕೊಳ್ಳುವ ಸಮಾಜ ರೈತಾಪಿಯೇ ಅಲ್ಲವೇ ? ಹಾಗೆಯೇ ನರ್ಮದಾ ಕಣಿವೆ ಮತ್ತು ಕರ್ನಾಟಕದ ಪಶ್ಚಿಮ ಘಟ್ಟಗಳು. ಈ ಸಮಷ್ಟಿ ದೃಷ್ಟಿಕೋನದ ಒಂದು ಜನಾಂದೋಲನದ ಅವಶ್ಯಕತೆಯನ್ನು ಈ ಪುಸ್ತಕದ ಓದು ಮನಗಾಣಿಸುತ್ತದೆ.

ಪುಸ್ತಕದ ಎರಡನೆ ಭಾಗದಲ್ಲಿ ಒದಗಿಸಲಾಗಿರುವ ಅನುಬಂಧಗಳು ನಿರಂತರ ಹೋರಾಟದಲ್ಲಿ ತೊಡಗಿರುವ ಸಂಘಟನೆಗಳಿಗೆ ಒಂದು ಕೈಪಿಡಿಯಂತೆ ರೂಪುಗೊಂಡಿದೆ. ಅಧ್ಯಾಯ 8ರಲ್ಲಿ ಹೇಳಿರುವಂತೆ ʼ ಹೋರಾಟವೊಂದೇ ದಾರಿ ʼ. ಭೂಮಿ ಎನ್ನುವ ನಿಸರ್ಗದ ಅಮೂಲ್ಯ ಕೊಡುಗೆಯನ್ನು ನಮ್ಮದಾಗಿಸಿಕೊಳ್ಳುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಅಂದರೆ ಈ ಸಂಪತ್ತು ಮಾರುಕಟ್ಟೆಯ ಲಾಭದ ಕಚ್ಚಾವಸ್ತುವಾಗದೆ, ಭವಿಷ್ಯದ ತಲೆಮಾರಿನ ಸುಸ್ಥಿರ ಬದುಕಿಗೆ ಮೂಲ ನೆಲೆಯಾಗಿ ಉಳಿಯಬೇಕಾದ ಅವಶ್ಯಕತೆ ಇದೆ. ಇದನ್ನು ಆಗುಮಾಡುವ ನಿಟ್ಟಿನಲ್ಲಿ ಅಧ್ಯಾಯ 8ರಲ್ಲಿ ಒದಗಿಸುವ ಮಾರ್ಗದರ್ಶಿ ಸೂತ್ರಗಳು ಸರ್ವವೇದ್ಯವಷ್ಟೇ ಅಲ್ಲ, ಅಗತ್ಯವಾಗಿ ಪಾಲಿಸಲೇಬೇಕಾದ ಸಾಮಾಜಿಕ ಅನುಶಾಸನವಾಗಿ ಕಾಣಬೇಕಿದೆ. ಸಾಮೂಹಿಕ ಪ್ರಯತ್ನದ ಒಂದು ಫಲಶ್ರುತಿಯಾಗಿ ಅಕ್ಷರ ರೂಪ ತಳೆದಿರುವ “ ಭೂ ಸ್ವಾಧೀನ ಒಳಸುಳಿಗಳು ” ಕೃತಿಯ ಸಾರ್ಥಕತೆಯೂ ಇದರಲ್ಲೇ ಅಡಗಿದೆ.

ಸಕಾರಾತ್ಮಕ ಸಾಮೂಹಿಕ ಕ್ರಿಯೆ

ಈ ಪುಸ್ತಕವನ್ನು ಹೊರತಂದಿರುವ “ ನಮ್ಮ ಭೂಮಿ ನಮಗಿರಲಿ ಅನ್ಯರಿಗಲ್ಲ ” ಅಭಿಯಾನ ಮತ್ತು ಅದನ್ನು ಮುನ್ನಡೆಸುತ್ತಿರುವ ಕ್ರಿಯಾಶೀಲ ಮನಸ್ಸುಗಳೊಂದಿಗೆ ಇಡೀ ಸಮಾಜವೇ ಕೈಜೋಡಿಸಿ, ಹೆಗಲು ನೀಡಬೇಕಿದೆ. ಔಪಚಾರಿಕವಾಗಿ ಈ ಎಲ್ಲ ಮನಸ್ಸುಗಳಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕಿದೆ. ಏಕೆಂದರೆ ಪುಸ್ತಕದೊಳಗಿನ ಅಪೂರ್ವ ಮಾಹಿತಿ ಮತ್ತು ಮಾರ್ಗದರ್ಶಕ ಸೂತ್ರಗಳ ಕರ್ತೃಗಳು ವ್ಯಕ್ತಿಗತವಾಗಿ ಕಾಣದಿದ್ದರೂ ಸಾಮೂಹಿಕವಾಗಿ ಕಾಣುತ್ತಾರೆ. ಈ ಸಾಮೂಹಿಕ ಬೌದ್ಧಿಕ ಪ್ರಯತ್ನದ ಫಲ ವಿಶಾಲ ಸಮಾಜದಲ್ಲಿ ತಮ್ಮ ಬದುಕಿನ ಅಡಿಪಾಯವನ್ನೇ ಕಳೆದುಕೊಳ್ಳುತ್ತಿರುವ ಕೋಟ್ಯಂತರ ಜನರ ಭವಿಷ್ಯತ್ತಿಗೆ ತಲುಪಬೇಕಿದೆ. ತಲುಪಿಸುವುದು ನಾಗರಿಕರ ಜವಾಬ್ದಾರಿಯೂ ಆಗಿದೆ. ಈ ಜವಾಬ್ದಾರಿಯನ್ನು ಎಡಪಂಥೀಯ, ಪ್ರಜಾಸತ್ತಾತ್ಮಕ, ಪ್ರಗತಿಪರ ಹೋರಾಟಗಳು, ಮಹಿಳಾ ಆಂದೋಲನಗಳು ತಮ್ಮದಾಗಿಸಿಕೊಳ್ಳಬೇಕಿದೆ.

ಇದು ನಮ್ಮ ಸಾಮಾಜಿಕ ಬಾಧ್ಯತೆಯೂ, ಆದ್ಯತೆಯೂ, ಕರ್ತವ್ಯವೂ ಆಗಬೇಕಿದೆ.

-೦-೦-೦-೦-

Tags: 5 major agricultural challengesagribusiness how it worksagribusiness in the usagricultural challengesAgricultural economistagricultural lenderagricultural technologyagriculture crisischallengesfood and agriculture organization of the united nationsfuture of farmingintelligent agricultureloss of trustnational conference of state legislaturessustenir agriculture singaporewhat is the state of the us farmers
Previous Post

ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌

Next Post

ತಿರುಪತಿ ದೇವಸ್ಥಾನದಲ್ಲಿ ಅನ್ಯ ಧರ್ಮೀಯ ಉದ್ಯೋಗಿಗಳಿಗೆ ಕೋಕ್ – 18 ಉದ್ಯೋಗಿಗಳಿಗೆ TTD ನೋಟಿಸ್ ! 

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ತಿರುಪತಿ ದೇವಸ್ಥಾನದಲ್ಲಿ ಅನ್ಯ ಧರ್ಮೀಯ ಉದ್ಯೋಗಿಗಳಿಗೆ ಕೋಕ್ – 18 ಉದ್ಯೋಗಿಗಳಿಗೆ TTD ನೋಟಿಸ್ ! 

ತಿರುಪತಿ ದೇವಸ್ಥಾನದಲ್ಲಿ ಅನ್ಯ ಧರ್ಮೀಯ ಉದ್ಯೋಗಿಗಳಿಗೆ ಕೋಕ್ - 18 ಉದ್ಯೋಗಿಗಳಿಗೆ TTD ನೋಟಿಸ್ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada