ಒಂದೂರಲ್ಲಿ ಒಂದು ಪುರಾತನ ರಾಜ ವೈಭೋಗದ ಮನೆ ಇತ್ತು. ಆ ಮನೆಗೆ ಸಲಿಗೆಯ ಅಳಿಯನೊಬ್ಬ ಒಕ್ಕರಿಸಿದ. ಮನೆಯಲ್ಲಿ ಎಲ್ಲೂ ಇದ್ದರೂ, ಅದಿಲ್ಲ, ಇದಿಲ್ಲ, ನೀವೇನೂ ಮಾಡೇ ಇಲ್ಲ. ಇಷ್ಟು ವರ್ಷ ಎಂಥ ಮಾಡಿದ್ರಿ ನೀವು ಎಂದು ಮಾವನ ಮನೆಯವರನ್ನೇ ದಬಾಯಿಸುತ್ತಾ, ಉಂಡಾಡಿ ಗುಂಡನಂತೆ ಇದ್ದ. ಮನೆಯ ಆಧಾರ ಸ್ತಂಭಗಳಾಗಿದ್ದ ಹಿರಿಯ ತಲೆಗಳು ಒಬ್ಬೊಬ್ಬರೇ ಮರೆಯಾಗುತ್ತಲೇ, ಇಡೀ ಮನೆ ಸೋಮಾರಿ ಆಳೀಮಯ್ಯನ ಕೈವಶವಾಗುತ್ತದೆ.
ಶ್ರೀಮಂತ ಮನೆಯ ಯಜಮಾನಿಕೆ ಕೈಗೆ ಸಿಗುತ್ತಲೇ ಅಳೀಮಯ್ಯ, ತಾನೇ ಮಹಾನ್ ಚಾಣಾಕ್ಷ ಎಂದು ಊರಿಗೆಲ್ಲಾ ತೋರಿಸಿಕೋಳ್ಳಲು ಇನ್ನಿಲ್ಲದ ವರಸೆಗಳನ್ನು ಶುರುಮಾಡುತ್ತಾನೆ. ಏನೇನೋ ಗಿಲೀಟು ಮಾಡಿ ಮನೆ ಉದ್ಧಾರ ಮಾಡ್ತಿದೀನಿ ಅಂತ ಮನೆಮಂದಿಗೆಲ್ಲಾ ನಂಬಿಸಲು ತಿಪ್ಪರಲಾಗ ಹಾಕಿದರೂ, ಮನೆ ಆಸ್ತಿಯಲ್ಲಾ ಕರಗಿ, ಮನೆಮಂದಿ ಮೂರು ಹೊತ್ತಿನ ಊಟಕ್ಕೂ ಸಂಚಕಾರ ಬರುತ್ತದೆ. ಆದರೂ ಅಳೀಮಯ್ಯ ಮಾತ್ರ, ಮನೆಯ ಹಿಂದಿನವರೆಲ್ಲಾ ಏನು ಮಾಡಿದ್ರು, ನಾನು ಇರೋದಕ್ಕೆ ಸದ್ಯ ನೀವೆಲ್ಲಾ ಗಂಜಿನಾದ್ರೂ ಕುಡೀತಿದೀರಿ ಎಂದು ಬಿಲ್ಡಪ್ ಕೊಡತೊಡಗುತ್ತಾನೆ. ಆದರೆ, ನಿಜವಾಗಿಯೂ ಮನೆಯ ಸಂಪತ್ತೆಲ್ಲಾ ಕರಗಿ ದಿವಾಳಿಯಾಗಿರುತ್ತದೆ. ಆಸ್ತಿ ಪಾಸ್ತಿ ಮಾರಿ, ಕೊನೆಗೆ ಮನೆಯ ಪುರಾತನ ಕಾಲದ ದಾರಾಂದ, ಚಿತ್ತಾರದ ಬಾಗಿಲು, ಕಂಚು-ತಾಮ್ರದ ಕೊಳಾಯಿ, ಹಂಡೆಗಳನ್ನೂ ಅಳೀಮಯ್ಯ ಚೀಲ ತುಂಬಿ ಮನೆಯ ಮುಂದೆ ಇಟ್ಟು ರಸ್ತೆಯಲ್ಲಿ ಹೋಗಿಬರುವವರಿಗೆಲ್ಲಾ ಕೂಗಿ ಕೂಗಿ ಮಾರತೊಡಗುತ್ತಾನೆ. ಆಗಲೂ ಅವನು ಇದು ಅಂಥಹ ಪುರಾತನ ಮನೆ, ಇಂಥ ಮಹಾಮನೆ ಎಂದು ಹೇಳುತ್ತಲೇ, ಮನೆಯ ಹಿರಿಯರು ಏನೇನೂ ಮಾಡಿಲ್ಲ ಎಂದು ಹೀಯಾಳಿಸುತ್ತಿದ್ದ!
ಆದರೆ, ಮನೆಯ ಜನ ಈತ ಹೀಗೆ ಮನೆಯ ಆಸ್ತಿಪಾಸ್ತಿ ಮಾರಿ ಶೋಕಿ ಮಾಡುವುದು, ಮನೆಯ ವಹಿವಾಟು ತಿಳಿಯದೇ ಏನೋ ಮಾಡಲು ಹೋಗಿ ಇನ್ನೇನೋ ಮಾಡಿ ಮನೆಮಂದಿಯನ್ನೆಲ್ಲಾ ಬೀದಿಗೆ ತರುವುದನ್ನು ಮಾಡುತ್ತಿದ್ದರೆ, ಅದನ್ನು ಸಹಿಸಿಕೊಂಡು ಇರುವುದೇ ಮನೆಯ ಮರ್ಯಾದೆ ಉಳಿಸುವ ಘನಕಾರ್ಯ. ಮನೆತನದ ಬಗ್ಗೆ ಗೌರವವಿದ್ದವರು ಅಂತಹ ಎಡವಟ್ಟುಗಳನ್ನೆಲ್ಲಾ ಪ್ರಶ್ನಿಸಲೇಬಾರದು. ಹಾಗೊಂದು ವೇಳೆ ಅಂತಹ ಹುಚ್ಚಾಟಗಳನ್ನು ಪ್ರಶ್ನಿಸಿದರೆ ಅವರು ಮನೆತನಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಮನೆಯ ಬಗ್ಗೆ ಅವರಿಗೆ ಗೌರವವೇ ಇಲ್ಲ. ಮನೆಯ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ನೆರೆಮನೆಯವರ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾರೆ ಇವರೆಲ್ಲಾ ಮನೆದ್ರೋಹಿಗಳು ಎಂದು ಭಾಷಣ ಬಿಗಿದು ಮನೆಯ ಬಹುತೇಕ ಮಂದಿಗೆ ಮಂಕುಬೂದಿ ಎರಚುತ್ತಿದ್ದ.
ದಿಕ್ಕಿಲ್ಲದ ಮನೆಗೆ ತಾನೇ ಈಗ ಚೌಕಿದಾರ ಎಂದು ಹೇಳಿಕೊಳ್ಳುತ್ತಲೇ ಇಡೀ ಮನೆಯನ್ನು ದಿವಾಳಿ ಎಬ್ಬಿಸಿದ ಅಳೀಮಯ್ಯ, ಕೊನೆಗೆ ಮನೆಯ ಪಾತ್ರ ಪಡಗವನ್ನೂ ಹರಾಜಿಗಿಟ್ಟು, ಇದೆಲ್ಲಾ ಸುಮ್ಮನೆ ಮನೆಯಲ್ಲಿ ಬಿದ್ದಿದ್ದವು. ಇವುಗಳಿಂದೆಲ್ಲಾ ಏನು ಪ್ರಯೋಜನ. ಹಾಗಾಗಿ ಇವೆನ್ನೆಲ್ಲಾ ಮಾರಿ ಮನೆಗೆ ಒಂದಿಷ್ಟು ಹಿರೀಕರ ಪ್ರತಿಮೆ, ತನಗೊಂದು ಹೊಸ ಝಗಮಗಿಸುವ ಆಫೀಸು, ಓಡಾಡೋಕೆ ತನಗೊಂದು ಭರ್ಜರಿ ಕಾರು ಕೊಳ್ಳೋಣ ಎಂದು ಲೆಕ್ಕಾ ಹಾಕಿರುವೆ ಎಂದು, ತನ್ನ ಆ ಘನಕಾರ್ಯದ ಬಗ್ಗೆ ಮನೆಯವರಿಗೆಲ್ಲಾ ನಂಬಿಸಿದ್ದ!
ಇದು ಕಥೆಯ ಒಂದು ಅರ್ಥ. ಇದೇ ಕಥೆಯನ್ನು ಈಗ ಮತ್ತೊಮ್ಮೆ ದೇಶದ ಸದ್ಯದ ರಾಷ್ಟ್ರೀಯ ಆಸ್ತಿ ನಗದೀಕರಣದ ಬರೋಬ್ಬರಿ 6 ಲಕ್ಷ ಕೋಟಿ ರೂ. ಯೋಜನೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಓದಿ. ಬಹುಶಃ ಆಗ ಈ ನಗದೀಕರಣ ಯೋಜನೆ ಎಂದರೆ ಏನು? ದೇಶದ ಅರ್ಥ ವ್ಯವಸ್ಥೆಯ ಯಾವ ಹಂತದಲ್ಲಿ ಹೀಗೆ ಪಾತ್ರೆಪಗಡ ಮಾರುವ ಮೂಲಕ ದುಡ್ಡು ಹೊಂದಿಸುವ ಕಾರ್ಯಕ್ಕೆ ಮೋದಿಯವರ ಸರ್ಕಾರ ಮುಂದಾಗಿದೆ ಎಂಬುದು ಅರಿವಿಗೆ ಬರಬಹುದು!
ದೇಶದ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಲು ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ(ಎನ್ ಎಂಪಿ) ಜಾರಿಗೆ ತರಲಾಗುತ್ತಿದೆ. ಅದರಡಿ ಸುಮಾರು 6 ಲಕ್ಷ ಕೋಟಿಯಷ್ಟು ಬೃಹತ್ ಮೌಲ್ಯದ ದೇಶದ ಆಸ್ತಿಯನ್ನು ಖಾಸಗೀಯವರಿಗೆ ನಿರ್ದಿಷ್ಟ ಅವಧಿಗೆ ಗುತ್ತಿಗೆ ನೀಡುವ ಮೂಲಕ ಭಾರೀ ಹಣಕಾಸು ಕ್ರೋಡೀಕರಣದ ಗುರಿ ಹೊಂದಲಾಗಿದೆ. ರೈಲು ನಿಲ್ದಾಣಗಳು, ರಸ್ತೆಗಳು, ತೈಲ ಮತ್ತು ಅನಿಲ ಸಾಗಣೆ ಪೈಪ್ ಲೈನ್, ವಿದ್ಯುತ್, ವಿಮಾನ ನಿಲ್ದಾಣಗಳನ್ನು ಲೀಸ್ ಆಧಾರದ ಮೇಲೆ ಖಾಸಗಿಯವರಿಗೆ ವಹಿಸುವುದು ಯೋಜನೆಯ ಗುರಿ ಎಂದು ಈ ಯೋಜನೆಯನ್ನು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಂದು ಕಡೆ ಮೂಲಸೌಕರ್ಯ ಯೋಜನೆಗೆ ಅನುದಾನ ಹೊಂದಾಣಿಕೆಗಾಗಿ ಇಂತಹ ಸರ್ಕಾರಿ ಆಸ್ತಿ ಅಡಮಾನದ ಯೋಜನೆ ಕೈಗೆತ್ತಿಕೊಂಡಿರುವುದಾಗಿ ಹೇಳುವ ಕೇಂದ್ರದ ಬಿಜೆಪಿ ಸರ್ಕಾರ, ಮತ್ತೊಂದು ಕಡೆ ಅದೇ ಮೂಲಸೌಕರ್ಯಗಳಾಗಿ ಈಗಾಗಲೇ ಇರುವ ರೈಲ್ವೆ, ವಿಮಾನ, ರಸ್ತೆ, ಜಲಸಾರಿಗೆ, ತೈಲ-ಅನಿಲ ಸಾಗಣೆ ಪೈಪ್ ಲೈನ್ ಗಳನ್ನು ಖಾಸಗಿಯವರಿಗೆ ವಹಿಸುತ್ತಿದೆ. ಅಂದರೆ, ಯಾವ ಮೂಲಸೌಕರ್ಯವನ್ನು ನಿರ್ಮಿಸಲು ಹಣ ಹೊಂದಿಸುತ್ತಿರುವುದಾಗಿ ಹೇಳಲಾಗುತ್ತಿದೆಯೋ. ಅದೇ ಮೌಲಸೌಕರ್ಯವಾಗಿ ಈಗಾಗಲೇ ಇರುವ ವ್ಯವಸ್ಥೆಯನ್ನೇ ಆ ಉದ್ದೇಶಕ್ಕಾಗಿ ಅಡಮಾನ ಇಡಲಾಗುತ್ತಿದೆ. ಈ ವೈರುಧ್ಯದ ಅರ್ಥವೇನು?
ಇಂತಹ ನಗೆಪಾಟಲಿನ ಅವಸ್ಥೆಯ ಕುರಿತು ಖ್ಯಾತ ಅರ್ಥಶಾಸ್ತ್ರಜ್ಞ ರತಿನ್ ರಾಯ್ , “ದೇಶದ ಅರ್ಥ ವ್ಯವಸ್ಥೆಗೆ ಮುಗುಮ್ಮಾಗಿ ಅಮರಿಕೊಂಡಿರುವ ಆಪತ್ತಿನ ಪರಿಸ್ಥಿತಿಯನ್ನು ನಿಭಾಯಿಸಲು ಮೋದಿ ಸರ್ಕಾರ ಈ ಸರ್ಕಸ್ ಮಾಡುತ್ತಿದೆ. ನೋಟು ರದ್ದತಿ, ಜಿಎಸ್ ಟಿ ಜಾರಿಯಂತಹ ಆತ್ಮಹತ್ಯಾತ್ಮಕ ಕ್ರಮಗಳ ಮೂಲಕ ದೇಶದ ಸದೃಢ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಮೋದಿಯವರು, ಬಳಿಕ ತಮ್ಮ ದುಃಸ್ಸಾಹಸಗಳನ್ನು ಅಷ್ಟಕ್ಕೇ ನಿಲ್ಲಿಸದೆ ತೀರಾ ಕರೋನಾ ಸಾಂಕ್ರಾಮಿಕದ ಹೊಸ್ತಿಲಲ್ಲಿ 2019ರಲ್ಲಿ ದೇಶದ ಕಾರ್ಪೊರೇಟ್ ವಲಯದ 1.45 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ಅದೂ ಕೂಡ ಜಿಎಸ್ ಟಿ, ನೋಟುರದ್ದತಿ ಬಳಿಕ ದೇಶದ ಆರ್ಥಿಕತೆಗೆ ದೊಡ್ಡ ಮರ್ಮಾಘಾತ ನೀಡಿತು. ಜೊತೆಗೆ ಎರಡು ವರ್ಷಗಳ ಕರೋನಾ ಸಾಂಕ್ರಾಮಿಕದ ದಾಳಿ ಮತ್ತು ಅವೈಜ್ಞಾನಿಕ ಲಾಕ್ ಡೌನ್ ಕ್ರಮಗಳು ಕುಂಟುತಿದ್ದ ಆರ್ಥಿಕತೆಯನ್ನು ಮಲಗಿಸಿದವು. ಅದೇ ಹೊತ್ತಿನಲ್ಲಿ ದೇಶದ ಜನತೆ ದುಡಿಮೆ ಇಲ್ಲದೆ, ಆದಾಯವಿಲ್ಲದೆ ಹೈರಾಣಾಗಿರುವಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿ ಜನರ ಬದುಕನ್ನಷ್ಟೇ ಅಲ್ಲ, ದೇಶದ ಅರ್ಥವ್ಯವಸ್ಥೆಯನ್ನೂ ಕೋಮಾ ಸ್ಥಿತಿಗೆ ತಂದರು. ಇದೀಗ, ಎಲ್ಲವನ್ನೂ ಉಂಡು ತೇಗಿದ ಮೇಲೆ, ಪಾತ್ರೆಯ ತಳದಲ್ಲಿರುವುದನ್ನೂ ಬಿಡದೆ ಕೆರೆಯುವವ ಸ್ಥಿತಿಯಂತೆ ಈ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಘೋಷಿಸಲಾಗಿದೆ” ಎಂದಿದ್ದಾರೆ!
‘ಮೋದಿನಾಮಿಕ್ಸ್(ಮೋದಿ ಆರ್ಥಿಕತೆ)’ನ ಮೂಸೆಯಿಂದ ಬಂದ ಈ ನೋಟು ರದ್ದತಿ, ಜಿಎಸ್ ಟಿ, ಕಾರ್ಪೊರೇಟ್ ತೆರಿಗೆ ಕಡಿತ, ಇಂಧನ ಬೆಲೆ ಏರಿಕೆ ಮೂಲಕ ಆದಾಯ ಗಳಿಕೆ, ಜನಬಳಕೆ ವಸ್ತುಗಳ ಬೆಲೆ ಏರಿಕೆ ಮುಂತಾದವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಯಾವ ಸ್ಥಿತಿಗೆ ತಂದಿವೆ ಎಂದರೆ, ದೇಶದ ಸರ್ಕಾರಿ ಆದಾಯ ಕೊರತೆಯ ಪ್ರಮಾಣ ದೇಶದ ಜಿಡಿಪಿಯ ಶೇ.9.4ರಷ್ಟಾಗಿದೆ. ಇದು ಐತಿಹಾಸಿ ದಾಖಲೆಯ ಆಘಾತಕಾರಿ ಪ್ರಮಾಣ! ಅಂದರೆ, ಒಂದು ಕಡೆ ಆದಾಯ ಕೊರತೆ 2014ರಲ್ಲಿ ಜಿಡಿಪಿಯ ಶೇ.4.1ರಷ್ಟು ಇದ್ದದ್ದು ಇದೀಗ ಶೇ.9.4ಕ್ಕೆ ಏರಿದೆ. ಅಂದರೆ, ದೇಶದ ಆದಾಯ ಕೊರತೆ ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ದುಪ್ಪಟ್ಟಾಗಿದೆ. ಅದೇ ಹೊತ್ತಿಗೆ ದೇಶದ ಸಾಲದ ಪ್ರಮಾಣ ಜಿಡಿಪಿಯ ಶೇ.90ಕ್ಕೆ ಏರಿದೆ! 2014ರಲ್ಲಿ ಸಾಲದ ಪ್ರಮಾಣ ಜಿಡಿಪಿಯ ಶೇ.66.58ರಷ್ಟಿತ್ತು. ಅದೂ ಕೂಡ, ದೇಶದ ಇತಿಹಾಸದಲ್ಲೆ ಕಂಡುಕೇಳರಿಯದ ಪ್ರಮಾಣದಲ್ಲಿ ಸಾರ್ವಜನಿಕ ಸ್ವಾಮ್ಯದ ಕಂಪನಿ(ನವರತ್ನ ಕಂಪನಿಗಳೂ ಸೇರಿ)ಗಳಿಂದ ಹೂಡಿಕೆ ಹಿಂತೆಗೆತ, ಆರ್ ಬಿಐ ನಿಂದ ಡೆವಿಡೆಂಟ್ ಹಿಂತೆಗತದಂತಹ ಕ್ರಮಗಳ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಳಸಿಕೊಂಡ ಬಳಿಕವೂ ಸಾಲದ ಪ್ರಮಾಣ ಕಳೆದ ಏಳು ವರ್ಷಗಳಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ!
ಈ ನಡುವೆ, “ಉದ್ಯಮ-ವಹಿವಾಟು ನಡೆಸಲು ಸರ್ಕಾರಕ್ಕೆ ಯಾವ ಆಸಕ್ತಿಯೂ ಇಲ್ಲ” ಎನ್ನುವ ಮೋದಿಯವರು, ತಮ್ಮ ಏಳು ವರ್ಷಗಳಲ್ಲಿ ದೇಶದ ಬಹುತೇಕ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣಕ್ಕೆ ಚಾಲನೆ ನೀಡಿದ್ದಾರೆ. ಏರ್ ಇಂಡಿಯಾ, ಬಿಪಿಸಿಎಲ್, ಎಚ್ ಎ ಎಲ್, ಎಚ್ ಪಿ, ಐಒಸಿ, ಎಂ ಆರ್ ಪಿಎಲ್ನಂತಹ ಸಾರ್ವಜನಿಕ ಉದ್ದಿಮೆಗಳು ಮಾತ್ರವಲ್ಲದೆ, ರೈಲ್ವೆ, ವಿಮಾನ, ಆರೋಗ್ಯ, ಶಿಕ್ಷಣದಂತಹ ಮೂಲಸೌಕರ್ಯ ವಲಯದಲ್ಲಿಯೂ ಖಾಸಗೀ ಹೂಡಿಕೆಗೆ ಮುಕ್ತ ಅವಕಾಶ ನೀಡಿದ್ದಾರೆ. ಒಂದು ಕಡೆ ಮೂಲಸೌಕರ್ಯ ನಿರ್ಮಾಣದ ಮೂಲಕ ಅಚ್ಛೇದಿನದ ಕನಸು ಬಿತ್ತುವ ಮೋದಿ, ಮತ್ತೊಂದು ಕಡೆ ಅದೇ ಮೌಲಸೌಕರ್ಯಗಳನ್ನು ಖಾಸಗೀಯವರಿಗೆ ಮಾರುತ್ತಿರುವುದು ಮತ್ತು ಹಾಗೆ ಮಾರಾಟವಾಗುತ್ತಿರುವ ಸಂಸ್ಥೆ, ಉದ್ದಿಮೆಗಳನ್ನು ಅವರ ಅತ್ಯಾಪ್ತ ಉದ್ದಿಮೆದಾರರಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯವರೇ ಖರೀದಿಸುತ್ತಿರುವುದು ಕೂಡ ಸಾಕಷ್ಟು ಕುತೂಹಲಕರ.
ಆದರೆ, ಬಹಳ ಗಮನಿಸಬೇಕಾದ ಸಂಗತಿ ಎಂದರೆ, ಹೀಗೆ ದೇಶದ ಹಿಂದಿನ ಸರ್ಕಾರಗಳು, ದೂರದೃಷ್ಟಿಯ ನಾಯಕರ ಏಕಕಾಲಕ್ಕೆ ದುಡಿಯುವ ಜನರ ಕೈಗೆ ಕೆಲಸ ಮತ್ತು ಸರ್ಕಾರದ ಆದಾಯದ ಮೂಲಗಳಾಗಿ ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ದೇಶದ ಒಂದಿಬ್ಬರು ಉದ್ಯಮಿಗಳ ಮಡಿಲಿಗೆ ಹಾಕುತ್ತಿರುವಾಗ ಕೂಡ ಮೋದಿಯವರು ದೇಶಭಕ್ತಿಯ ಉದ್ರೇಕಕಾರಿ ಮಾತುಗಳ ಮೂಲಕ ತಾವು ಮಾಡುತ್ತಿರುವುದು ಮಹಾನ್ ದೇಶೋದ್ಧಾರದ ಸಾಧನೆ ಎಂಬಂತೆ ಎಲ್ಲರನ್ನೂ ಮನವೊಲಿಸಬಲ್ಲರು. ಆದರೆ, ವಿಪರ್ಯಾಸವೆಂದರೆ, ಇಂತಹ ಅಸಲೀ ದೇಶದ ಹಿತಾಸಕ್ತಿಗೆ ಮಾರಕವಾದ ಮೋದಿಯವರ ನಿರ್ಧಾರಗಳ ವಿರುದ್ಧ ದನಿ ಎತ್ತುವ ಪ್ರತಿಪಕ್ಷಗಳೇ ಜನರ ಕಣ್ಣಲ್ಲಿ ಕಟಕಟೆಯಲ್ಲಿ ನಿಲ್ಲಬೇಕಾಗಿರುವುದು!
ಅದು ಮೋದಿಯವರ ಶಕ್ತಿ. ನಿರಂತರ ಏಳು ವರ್ಷಗಳ ಆಡಳಿತದಲ್ಲಿ ಹಂತಹಂತವಾಗಿ ಒಂದರ ಮೇಲೊಂದು ಯಡವಟ್ಟುಗಳನ್ನು ಮಾಡಿ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿ, ದುಡಿಯವ ಜನರ ಕೈ ಮತ್ತು ಜೇಬನ್ನು ಬರಿದು ಮಾಡಿ, ದಿವಾಳಿ ಎಬ್ಬಿಸಿದ ಹೊತ್ತಲ್ಲೂ ದೇಶಭಕ್ತಿಯ ಮಾತು, ಕಾಂಗ್ರೆಸ್ ವಿರೋಧಿ ವಾಗ್ವಾದಗಳ ಮೂಲಕವೇ ಎಲ್ಲನ್ನೂ ಮರೆಮಾಚಿ, ಜನರನ್ನು ಅಂಧಭಕ್ತಿಯ ಅಮಲಿನಲ್ಲಿ ಪ್ರತಿಪಕ್ಷಗಳ ವಿರುದ್ಧವೇ ಎತ್ತಿಕಟ್ಟುವುದು ಸುಲಭದ ತಂತ್ರಗಾರಿಕೆಯಲ್ಲ! ಅಂತಹ ಚಾಣಾಕ್ಷತೆ ಪ್ರಧಾನಮಂತ್ರಿಗಳಿಗೆ ಸಿದ್ಧಿಸಿದೆ ಈ ಹೊತ್ತಿನ ವೈಚಿತ್ರ್ಯ!