ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸೃಷ್ಟಿಸಿರುವ ಹರಾಜಕತೆ ಇಡೀ ವಿಶ್ವವನ್ನೇ ಹೌಹಾರಿಸಿದೆ. ಬಂದೂಕುಗಳ ನಳನಳಿಕೆ. ಅಂಧ ಧರ್ಮದ ಕೇಕೆ. ಹೀಗೆ ತಾಲಿಬಾನ್ ಅಫ್ಘಾನ್‌ನ್ನರ ಮೂಲಭೂತ ಸ್ವಾಂತ್ರತ್ಯವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿದ್ದಾರೆ. ಇದರ ನಡುವೆ ಸೃಜನ ಶೀಲ ಸಿನೆಮಾಗಳ ಮೂಲಕ ಹಲವು ನೊಂದ ಹಾಗೂ ಕ್ರಿಯಾಶೀಲ ಕಥೆಗಳನ್ನು ಜಗತ್ತಿನ ಮುಂದೆ ಕಟ್ಟಿಕೊಟ್ಟ ಅಫ್ಘಾನ್ ಸಿನೆಮಾ ರಂಗ ತಾಲಿಬಾನಿಗಳ ಕ್ರೌರ್ಯದ ಮುಂದೆ ತಲೆಬಾಗುವ ಸ್ಥಿತಿಗೆ ಬಂದು ನಿಂತಿದೆ. ತಾಲಿಬಾನ್, ಶರಿಯತ್ ಪ್ರಕಾರ ಇಸ್ಲಾಂನಲ್ಲಿ ಸಿನೆಮಾ ಹಾಗೂ ಸಂಗೀತ ನಿಷಿದ್ಧ ಎಂಬ ನಿಲುವು ವ್ಯಕ್ತ ಪಡಿಸುತ್ತಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಅನೂಹ್ಯವಾದ ಸಿನೆಮಾಗಳನ್ನು ಕಟ್ಟಿದ ಅಫ್ಘಾನ್ನರು ಸಿನೆಮಾ ರಚಿಸುವಲ್ಲಿ ಹತ್ತು ಹಲವು ಮಜಲುಗಳನ್ನು ದಾಟಿ ನಿಂತಿದ್ದಾರೆ. 1990ರ ಕಾಲಘಟದಲ್ಲಿ ತಾಲಿಬಾನಿಗಳು ಚೊಚ್ಚಲವಾಗಿ ಅಫ್ಘಾನ್‌ನನ್ನು ತೆಕ್ಕೆಗೆ ತೆಗೆದುಕೊಂಡಾಗ ಸುಮಾರು ಏಳು ಸಾವಿರ ಸಿನೆಮಾಗಳು ತಾಲಿಬಾನಿಗಳ ಕಪಟ ಧರ್ಮದ ಮರೆಯಲ್ಲಿ ಸುಟ್ಟು ಕರಕಲಾಗಿ ಹೋದವು. ಆದರೆ ಕಳೆದ ಅಮೋಘ 20 ವರ್ಷದ ಅವಧಿಯಲ್ಲಿ ಅಫ್ಘಾನ್ ತನ್ನ ಕತೆಯನ್ನು ಸಿನೆಮಾವನ್ನಾಗಿಸಿ ವಿಶ್ವದ ಮುಂದಿಟ್ಟಿತ್ತು.
2001ರ ಹೊತ್ತಿಗೆಲ್ಲಾ ಅಫ್ಘಾನಿಸ್ತಾನದಲ್ಲಿ ಸಿನೆಮಾ ಕ್ಷೇತ್ರದ ಹೊಸ ಯುಗವೇ ಶುರುವಾಗಿ ಹೋಗಿತ್ತು. ಅತ್ಯತ್ಭುತ ಸಿನೆಮಾಗಳು ನಿರ್ಮಾಣವಾದವು. ಮಹಿಳಾ ನಿರ್ದೇಶಕಿಯರು ಮುನ್ನೆಲೆಗೆ ಬಂದರು. ಅಂತರರಾಷ್ಟ್ರೀಯ ಸಿನೆಮೋತ್ಸವದಲ್ಲಿ ವಿಶೇಷವಾದ ಸ್ಥಾನವನ್ನು ಅಫ್ಘಾನಿಸ್ತಾನ ಗಿಟ್ಟಿಸಿಕೊಂಡಿತು. ಹೀಗೆ ಭಯೋತ್ಪಾದನೆ, ಯುದ್ಧ, ನಾಗರೀಕ ಸಂಘರ್ಷದ ದೃಷ್ಟಿಕೋನದಲ್ಲಿ ಅಫ್ಘಾನಿಸ್ತಾನವನ್ನು ನೋಡಿತ್ತಿದ್ದ ಜಗತ್ತು ಈ ಅವಧಿಯಲ್ಲಿ ತಮ್ಮ ನೋಟ ಬದಲಾಯಿಸಿಕೊಂಡಿತು. ಈ ಸುದೀರ್ಘ ಸಮಯದಲ್ಲಿ ಕಾಂದಹಾರ್ (2001), ಒಸಾಮ (2003), ಗೋಲ್ಡನ್ ಗ್ಲೋಬ್ ವಿನ್ನರ್ (2013), ವಜ್ಮಾ (2013) ದಂಥಾ ಜಗತ್ತಿನ ಗಮನ ಸೆಳೆದ ಎಳೆಗಳ ಸಿನೆಮಾವನ್ನುಅಫ್ಘಾನ್ ನೆಲ ಕಟ್ಟಿತು.
ಆದರೀಗ ಅಫ್ಘಾನ್ ಕಲಾವಿದರ ಬದುಕು ಕರಾಳವಾಗ ತೊಡಗಿವೆ. ಮತ್ತೊಮ್ಮೆ ಬಣ್ಣ ಹಚ್ಚಿ ನಲಿಸುವ, ಅಳಿಸುವ, ಬೆಳ್ಳಿ ಪರದಯ ಮೇಲೆ ಕಾಣಿಸಿಕೊಳ್ಳುವ ನಿಜವಾಸ್ತವವನ್ನು ಕನಸೆಂದುಕೊಳ್ಳಲು ಶುರುವಿಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಅಫ್ಘಾನ್‌ನ ಖ್ಯಾತ ಮಹಿಳಾ ನಿರ್ದೇಶಕಿ ಹಾಗೂ ಅಫ್ಘಾನಿಸ್ತಾನ ಸಿನೆಮಾ ರಂಗದ ಇತಿಹಾಸದಲ್ಲೇ ಚೊಚ್ಚಲವಾಗಿ ಅಫ್ಘಾನ್ ಸಿನೆಮಾ ಸಂಘಟನೆಯ ಮುಖ್ಯಸ್ಥಳಾದ ಸಹಾರ ಕರೀಮಿ ನುಡಿದ ಮಾತುಗಳು ನಿಜಕ್ಕೂ ಕೂಸೊಂದರ ಅಳುವಿನಂತಿತ್ತು. ʻʻಜಗತ್ತಿನಾದ್ಯಂತ ಇರುವ ಸಿನೆಮಾ ಪ್ರೇಮಿಗಳೇ ಬನ್ನಿ ನಮ್ಮ ಜೊತೆಯಾಗಿ, ಬೆಂಬಲ ನೀಡಿʼʼ ಎಂದು ಕೇಳಿಕೊಂಡಿದ್ದರು. ಅಂದಹಾಗೆ, ಸದ್ಯ ಸಹಾರ ಕರೀಮಿ ತಾಲಿಬಾನಿಗಳಿಗೆ ಹೆದರಿ ದೇಶವನ್ನೇ ಬಿಟ್ಟು ಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನ್ ನೆಲ ಕಟ್ಟಿದ ಕೆಲ ಉತ್ತಮ ಸಿನೆಮಾಗಳು !
ಅವ್ವಾ, ಮರಿಯಮ್, ಆಯಿಷಾ (2019) – Hava, Maryam, Ayesha

2019ರಲ್ಲಿ ಮೂವರು ಅಫ್ಘಾನ್ ಮಹಿಳೆಯರ ಕಥೆಯನ್ನು ಹೇಳುವ ಈ ಅವ್ವಾ-ಮರಿಯಮ್-ಆಯಿಷಾ ಎಂಬ ಸಿನೆಮಾ ಇಡೀ ಜಗತ್ತಿನಾದ್ಯಂತ ಇರುವ ಕಣ್ಣುಗಳಿಗೆ ಅಫ್ಘಾನ್ ಮಹಿಳೆಯ ವೇದನೆಯನ್ನು ತಾಜವಾಗಿ ಕಟ್ಟಿಕೊಟ್ಟಿತ್ತು. ಅವ್ವಾ ಎಂಬ ಹೊಸದಾಗಿ ಮದುವೆಯಾಗಿ ಗರ್ಭಿಣಿಯಾಗುವ ಹೆಣ್ಣು ಪುರುಷಪ್ರಧಾನ ಸಮಾಜದಲ್ಲಿ ಯಾವ ರೀತಿಯಾದ ಬದುಕು ಕಟ್ಟಿಕೊಳ್ಳುತ್ತಾಳೆ.? ವಾಸ್ತವದಲ್ಲಿ ಯಾವ ಮಾದರಿಯ ಜೀವನ ಕಟ್ಟಿಕೊಳ್ಳಬೇಕಿತ್ತು.? ಎಂಬುವುದನ್ನು ಮಾತನಾಡುತ್ತದೆ. ಇದೇ ವೇಳೆ ಮರಿಯಂ ಎಂಬ ಪತ್ರಕರ್ತೆ, ಹೆಣ್ಣು ಎಂಬ ಕಾರಣಕ್ಕೆ ಎದುರಿಸುವ ಸವಾಲುಗಳು ಹಾಗೂ ಅಯಿಷಾ ಎಂಬ ಆಗಷ್ಟೇ ಯೌವ್ವನ ತುಂಬಿದ ಹೆಣ್ಣೊಬ್ಬಳು ತನ್ನ ಮುಂದಿನ ಬದುಕಿನ ಬಗ್ಗೆ ಪಟ್ಟುಕೊಳ್ಳುವ ಆತಂಕಗಳು. ಹೀಗೆ ಈ ಸಿನೆಮಾ ಮಹಿಳೆಯರ ಹಲವು ಬಗೆಯ ಸಂಕೀರ್ಣತೆಯತ್ತ ಬೊಟ್ಟುಮಾಡಿ ಚರ್ಚೆಮಾಡುತ್ತವೆ. ಅಂದಹಾಗೆ, ಸಹಾರ ಕರೀಮಿ ನಿರ್ದೇಶಿಸಿದ ಈ ಸಿನೆಮಾ ಅಫ್ಘಾನಿಸ್ತಾನವನ್ನು ಆಸ್ಕರ್ ಬಾಗಿಲಿಗೆ ತಂದು ನಿಲ್ಲಿಸಿದ್ದು ಈಗ ಇತಿಹಾಸ.
ಒಸಾಮ (2003) – Osama

ಸಿದ್ದೀಖ್ ಬರ್ಮಾಕ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾ ತಲಿಬಾನಿಗಳ ಆಡಳಿತದಲ್ಲಿ ಮಹಿಳೆಯರ ಯಾತನೆಗಳ ಬಗ್ಗೆ ಮಾತನಾಡುತ್ತದೆ. ಅಫ್ಘಾನಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದ ಸಂಧರ್ಭದಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ʻಮಹಿಳೆಯರಿಗೆ ಇಸ್ಲಾಮಿ ಚೌಕಟ್ಟಿನಲ್ಲಿ ನೀಡಲಾಗುವ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನೀಡಲಾಗುತ್ತದೆʼ ಎಂಬ ಮಾತನ್ನು ತಾಲಿಬಾನ್ ನಾಯಕನೊಬ್ಬ ಹೇಳಿಕೊಂಡಿದ್ದ. ಇದೇ ಮಾತನ್ನು ಎಳೆಯಾಗಿ ಇಟ್ಟುಕೊಂಡು ಸಿದ್ದೀಖ್ ಬರ್ಮಾಕ್ ಈ ಸಿನೆಮಾವನ್ನು ಕಟ್ಟಿದ್ದಾರೆ.
ಕುಟುಂಬದಲ್ಲಿ ಒಬ್ಬೇ ಒಬ್ಬ ಗಂಡಿಸಲ್ಲಿದೆ, ʻಒಸಾಮʼ ಎಂಬ ಪುಟ್ಟ ಹುಡುಗಿ ಮತ್ತು ಆಕೆಯ ಕುಟುಂಬ ತಲಿಬಾನ್ ಆಡಳಿತಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಪರಿಯೇ ಈ ಸಿನೆಮಾ. ತಾಲಿಬಾನ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಮಹಿಳೆಯರು ಮನೆಯಿಂದ ಹೊರಗಡೆ ಬರುವಂತಿಲ್ಲ, ಹಾಗೂ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವಂತಿಲ್ಲ ಎಂಬ ಕಟ್ಟಪ್ಪಣೆ ಹೊರಡಿಸಿದ್ದರು. ಹೀಗಾಗಿ ತನ್ನ ಬದುಕಿಗಾಗಿ, ಕುಟುಂಬಕ್ಕಾಗಿ ಒಸಾಮ ಎಂಬ ಪುಟ್ಟ ಹುಡುಗ ತನ್ನ ಕೂದಲನ್ನು ಹುಡುರಂತೆ ಕತ್ತರಿಸಿ ತಾನೊಬ್ಬ ಹುಡುಗ ಎಂದು ಬಿಂಬಿಸಿ ಮನೆಯಿಂದ ಹೊರಗಡೆ ಬಂದು ಎದುರಿಸುವ ಸಾಂಸ್ಕೃತಿಕ, ಸಾಮಾಜಿಕ ಸವಾಲುಗಳನ್ನು 2003ರಲ್ಲಿ ತೆರೆಕಂಡ ಈ ಅಫ್ಘಾನಿ ಚಿತ್ರ ಮಾತನಾಡುತ್ತದೆ.
ವೂಲ್ಫ್ ಆಂಡ್ ಶೀಪ್ (2016) & ದಿ ಆರ್ಫನೇಜ್ (2019) – The Orphanage – Wolf and Sheep

ಶಹರ್ಬಾನು ಸಾದತ್ ಎಂಬ ಮಹಿಳೆ ನಿರ್ದೇಶಿಸಿದ ಎರಡು ಸಿನೆಮಾಗಳಿವು. 2016ರಲ್ಲಿ ವೂಲ್ಫ್ ಆಂಡ್ ಶೀಪ್ ಹಾಗೂ 2019ರಲ್ಲಿ ದಿ ಆರ್ಫನೇಜ್ ಎಂಬ ಎರಡು ಸಿನೆಮಾಗಳನ್ನು ನಿರ್ದೇಶಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಫ್ಘಾನ್ ಚಿತ್ರ ರಂಗದ ಮತ್ತೊಂದು ಮುಖವನ್ನು ತೆರೆದಿಟ್ಟರು. ವೂಲ್ಫ್ ಆಂಡ್ ಶೀಪ್ ಎಂಬ ಚಿತ್ರ ಅಫ್ಘಾನಿ ಜನರ ದಿನಚರಿಯನ್ನು ಮತ್ತು ಎದುರಿಸುವ ಸವಾಲುಗಳನ್ನು ಸಾದತ್ ಕಟ್ಟಿಟ್ಟಿದ್ದಾರೆ. ವಿಶೇಷ ಎಂದರೆ ಅದೇ ವರ್ಷದಲ್ಲಿ ವೂಲ್ಫ್ ಆಂಡ್ ಶೀಪ್ ಸಿನೆಮಾ ಕೇನ್ಸ್ ಚಲನಚಿತ್ರೋತ್ಸವ ಪ್ರಶಸ್ತಿ ಪಡೆದುಕೊಂಡಿತು. 2019ರಲ್ಲಿ ತೆರೆಕಂಡ ದಿ ಆರ್ಫನೇಜ್ ಸಿನೆಮಾ ಅಫ್ಘಾನ್‌ನ ಕಾಬೂಲ್ ನಗರದ ಕಥೆಯೊಂದನ್ನು ಆಧರಿಸಿ ಚಿತ್ರಿಸಲಾದ ಸಿನೆಮಾ. ಇದರ ವಿಶೇಷ ಎಂದರೆ ಹಾಲಿವುಡ್ ಫ್ರೇಮ್ಮಿಂಗ್‌ಗಳನ್ನು ಈ ಸಿನೆಮಾದಲ್ಲಿ ನಿರ್ದೇಶಕಿ ಸಾದತ್ ಪ್ರಯೋಗ ಮಾಡಿದ್ದು ಸಿನೆಮಾ ಹಾಗೂ ಅದರ ಕಥಾ ವಸ್ತುವನ್ನು ದೊಡ್ಡ ಮಟ್ಟದ ಚರ್ಚೆಗೆ ಎಳೆಯುವಂತೆ ಮಾಡಿತು.
ದಿ ಫಾರ್‌ಬಿಡನ್ ರೀಲ್ (2019) – The Forbidden Reel

ಇದೋಂದು ಡಾಕ್ಯುಮೆಂಟರಿ. ಏರಿಯಲ್ ನಾಸರ್ ಎಂಬ ನಿರ್ದೇಶಕ ಇಡೀ ಅಫ್ಘಾನ್ ಸಿನೆಮಾ ಕ್ಷೇತ್ರವನ್ನು ಮುಖ್ಯ ಕಥಾವಸ್ತುವಾಗಿಟ್ಟುಕೊಂಡು ಕಟ್ಟಿದ ಸಾಕ್ಷ್ಯ ಚಿತ್ರ. ಅಫ್ಘಾನ್ ಸಿನೆಮಾ ಕ್ಷೇತ್ರವನ್ನು ತಾಲಿಬಾನಿಗಳು ಹೇಗೆ ಕೆಡವಲು ತಂತ್ರ ರೂಪಿಸಿದರು ಮತ್ತು ಇದಕ್ಕೆ ಪ್ರತಿರೋಧ ಒಡ್ಡಿಕೊಂಡು ಹೇಗೆ ಅಫ್ಘಾನ್ ಚಿತ್ರರಂಗ ತನ್ನ ಅಸ್ತಿತ್ವಕ್ಕಾಗಿ ಹೋರಾಡಿತು ಎಂಬುವುದನ್ನು ಈ ಸಾಕ್ಷ್ಯ ಚಿತ್ರ ಒಳಗೊಂಡಿದೆ.
ಹೀಗೆ ಹಲವು ಏಳು ಬೀಳುವುಗಳನ್ನು ಕಂಡು ತಾಲಿಬಾನಿಗಳ ವಿರುದ್ಧ ಸೆಟೆದು ನಿಂತು ಅಫ್ಘಾನ್ ಸಿನೆಮಾ ರಂಗ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಆದರೀಗ ಅದೇ ತಾಲಿಬಾನಿಗಳ ಕ್ರೌರ್ಯದ ತುಳಿತಕ್ಕೆ ಮತ್ತೊಮ್ಮೆ ಸಿಲುಕಿರುವ ಅಫ್ಘಾನ್ ಚಿತ್ರರಂಗ ತನ್ನ ಹಿರಿಮೆ ಮತ್ತು ಮಹಿಮೆಯನ್ನೆಲ್ಲಾ ಅಡ ಇಡುವ ಪರಿಸ್ಥಿತಿಗೆ ಬಂದು ನಿಂತಿದೆ.