45ನೇ GST ಮಂಡಳಿಯ ಸಭೆ ಸೆಪ್ಟೆಂಬರ್ 17ರಂದು ಜರುಗಿತು. ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ದೇಶದ ಜನರಿಗೆ ಏನಾದರೂ ಸಿಹಿ ಸುದ್ದಿ ಸಿಗಬಹುದೆಂದು ಮೂಡಿದ್ದ ಭರವಸೆ ಹುಸಿಯಾಗಿ ಹೋಯಿತು. ಹಿಂದಿನಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆಯಡಿ ತರಲು ಬೇಡಿಕೆ ಕೇಳಿ ಬರುತ್ತಲೇ ಇದೆ. ಆದರೆ, ಪ್ರತಿ ಬಾರಿಯಂತೆ ಈ ಬಾರಿಯೂ ಅದು ಕೇವಲ ಚರ್ಚೆಗಷ್ಟೇ ಸೀಮಿತವಾಗಿದೆ. ಜುಲೈ 2017ರಲ್ಲಿ ಜಿಎಸ್‌ಟಿ ಜಾರಿಯಾದಾಗಿನಿಂದಲು ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಹಾಗೂ ವಿಮಾನಗಳ ಟರ್ಬೈನ್ ಇಂಧನವನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ತೆರಿಗೆಯನ್ನು ವಿಧಿಸುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಜೇಬಿಗೆ ಹೆಚ್ಚಿನ ಹೊರೆ ಬೀಳುತ್ತಲೇ ಇದೆ. ಈ ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಎಲ್ಲಾ ದಾಖಲೆಗಲನ್ನು ಮೀರಿ ನಿಂತ ಪರಿಣಾಮವಾಗಿ, ದೇಶದ ಬಡ ಮತ್ತು ಮಧ್ಯಮ ವರ್ಗದ ಜನರು ಇನ್ನಿಲ್ಲದ ಸಂಕಷ್ಟಕ್ಕೆ ತಲುಪಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ, ಪ್ರಪಂಚದಲ್ಲಿಯೇ ಪೆಟ್ರೋಲ್ ಮೇಲೆ ಅತಿ ಹೆಚ್ಚು ತೆರಿಗೆ ಪಾವತಿಸುವ ದೇಶವೆಂದರೆ ಅದು ಭಾರತ. ಜನರ ಮೇಲಿನ ಹೊರೆಯನ್ನು ಕಡಿಮೆಗೊಳಿಸುವ ಸಲುವಾಗಿ, ಪೆಟ್ರೋಲ್ ಡೀಸೆಲ್ ಅನ್ನು ಜಿಎಸ್‌ಟಿಯಡಿ ತರುವ ಕುರಿತು ಚರ್ಚೆ ನಡೆಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ 45ನೇ GST ಮಂಡಳಿಯ ಸಭೆಯಲ್ಲಿ ಇದನ್ನು ಚರ್ಚಿಸಲಾಗಿತ್ತು ಕೂಡಾ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿಯಡಿ ತರುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಚರ್ಚೆಯ ಫಲಿತಾಂಶವಾಗಿ ಇದು ಸರಿಯಾದ ಸಂದರ್ಭವಲ್ಲ ಎಂದು ನಿರ್ಧಾರವಾಗಿದೆ. ಈ ವಿಚಾರವನ್ನು ನಾವು ಕೇರಳ ಹೈಕೋರ್ಟ್’ಗೆ ತಿಳಿಸುತ್ತೇವೆ, ಎಂದು ಹೇಳಿದ್ದಾರೆ. “ಕೇರಳ ಹೈಕೋರ್ಟ್ ನಿರ್ದೇಶನ ನೀಡಿದ ಕಾರಣಕ್ಕಾಗಿ ಮಾತ್ರ ಈ ವಿಚಾರವನ್ನು ಚರ್ಚೆಗೆ ಪರಿಗಣಿಸಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಧನವನ್ನುಜಿಎಸ್‌ಟಿಯಡಿತರಲುಇರುವತೊಡಕುಗಳೇನು? ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟು ಐದು ಲಕ್ಷ ಕೋಟಿ ಆದಾಯವನ್ನು ಕೇವಲ ಪೆಟ್ರೋಲಿಯಂ ಉತ್ಪನ್ನಗಳಿಂದ ಪಡೆಯುತ್ತಿದೆ. ಕೇಂದ್ರ ಸಚಿವರಾದ ಸುಶೀಲ್ ಕುಮಾರ್ ಮೋದಿ ಅವರು ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸಿ ನೀಡಿದ ಮಾಹಿತಿಯಂತೆ ಮುಂದಿನ ಎಂಟರಿಂದ ಹತ್ತು ವರ್ಷಗಳವರೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿ ತರಲು ಸಾಧ್ಯವಿಲ್ಲ. ಇದಕ್ಕೆ ಮುಖ್ಯ ಕಾರಣ, ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಅತಿ ದೊಡ್ಡ ಆದಾಯವನ್ನು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿ ತಂದಲ್ಲಿ, ವಾರ್ಷಿಕ ಎರಡರಿಂದ ಎರಡೂವರೆ ಲಕ್ಷ ಕೋಟಿ ನಷ್ಟವಾಗುವ ಸಾಧ್ಯತೆಯಿದೆ. ಈ ನಷ್ಟವನ್ನು ಭರಿಸಲು, ರಾಜ್ಯ ಸರ್ಕಾರಗಳಿಗೆ ಯಾವುದೇ ಅಬಕಾರಿ ಮತ್ತು ಸ್ಟ್ಯಾಂಪ್ ಸುಂಕ ಬಿಟ್ಟರೆ ಬೇರೆ ಯಾವುದೇ ದಾರಿಯಿಲ್ಲ. ಜಿಎಸ್‌ಟಿಯಲ್ಲಿರುವ ಅತಿ ದೊಡ್ಡ ತೆರಿಗೆ ದರವೆಂದರೆ 28%. ಒಂದು ವೇಳೆ ಈ ದರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಜಾರಿಯಾದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ರೂ.14 ಮಾತ್ರ ಪಡೆಯಲಿವೆ. ಆದರೆ, ಈಗ ಎರಡೂ ಸರ್ಕಾರಗಳು ಒಟ್ಟು 60 ರೂ. ತೆರಿಗೆಯನ್ನು ಸಂಗ್ರಹಿಸುತ್ತಿವೆ. ಈ ಇಡಿಗಂಟನ್ನು ಕಳೆದುಕೊಳ್ಳಲು ರಾಜ್ಯ ಹಾಗೂ ಕೇಂದ್ರ ಎರಡೂ ಸರ್ಕಾರಗಳಿಗೂ ಇಷ್ಟವಿಲ್ಲ. ಮುಖ್ಯವಾಗಿ ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿ ತರಲು ಒಪ್ಪುತ್ತಿಲ್ಲ. ರಾಜ್ಯಗಳಿಗೆ ಅರ್ಹವಾಗಿ ತಲುಪಬೇಕಾದ ಜಿಎಸ್‌ಟಿ ಪಾಲನ್ನು ಕೇಂದ್ರ ಸರ್ಕಾರ ನೀಡದೇ ಇರುವುದು ಇದಕ್ಕೆ ಕಾರಣ. ಪ್ರತಿ ಬಾರಿಯೂ ಹಕ್ಕಿನಿಂದ ಪಡೆಯಬೇಕಾದ ಆದಾಯಕ್ಕಾಗಿ ಕೇಂದ್ರ ಸರ್ಕಾರದ ಬಳಿ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೇ VAT ವ್ಯವಸ್ಥೆ ಇರುವಾಗ ರಾಜ್ಯಗಳು ಪಡೆಯುತ್ತಿದ್ದ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿರುವುದರಿಂದ ಚಿನ್ನದ ಮೊಟ್ಟೆಯಿಡುವ ಕೋಳಿಯಾದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಸುಲಭದಲ್ಲಿ ಕೈಯಿಮದ ಬಿಟ್ಟುಕೊಡಲು ತಯಾರಿಲ್ಲ. ಕೇರಳದ ವಿತ್ತ ಸಚಿವರಾಗಿರುವ ಕೆ ಎನ್ ಬಾಲಗೋಪಾಲ್ ಅವರು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿ ತರುವ ವಿಚಾರಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ವಾರ್ಷಿಕ ರೂ. 8000 ಕೋಟಿಯಷ್ಟು ನಷ್ಟ ಉಂಟಾಗುತ್ತದೆ. ಈಗ ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ 2020ರಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದೇ ಕಾರಣ ಎಂದು ಆರೋಪಿಸಿದ್ದಾರೆ. ಇನ್ನು ಬಿಜೆಪಿಯ ಆಡಳಿತವಿರುವ ಕರ್ನಾಟಕವೂ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ವಿತ್ತ ಸಚಿವ ಅಜಿತ್ ಪವಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಪರಿಧಿಯಲ್ಲಿ ಬರುವಂತಹ ವಿಚಾರಗಳಲ್ಲಿ ತಲೆಯಿಡಬಾರದು ಎಂದು ಹೇಳಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಡಿ ತಂದಲ್ಲಿ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂ. ನಷ್ಟಕ್ಕೆ ಸಿಲುಕುತ್ತವೆ. ಅತಿ ದೊಡ್ಡ ಆದಾಯದ ಮೂಲವನ್ನು ಕಳೆದುಕೊಳ್ಳುತ್ತವೆ ಎಂದಿದ್ದಾರೆ. ಹೀಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಹಗ್ಗ ಜಗ್ಗಾಟದಿಂದಾಗಿ ಜನರ ಜೇಬಿಗೆ ಕತ್ತರಿ ಬೀಳುವುದು ಮುಂದಿವರೆದಿದೆ. ರಾಜ್ಯಗಳು ಕೂಡಾ ಇತರೆ ಆದಾಯದ ಮೂಲಗಳಿಲ್ಲದೇ, ಅನಿವಾರ್ಯವಾಗಿ ಪೆಟ್ರೋಲ್ ಡೀಸೆಲ್ ಮೇಲೆ ಸುಂಕವನ್ನು ವಿಧಿಸುತ್ತಿವೆ. ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಗೂಬೆ ಕೂರಿಸಿ ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುವ ಮೊಂಡುತನ ತೋರಿಸುತ್ತಿದೆ. ಕೊನೆಗೆ ಗ್ರಾಹಕ ಮಾತ್ರ ವಿಧಿಯಿಲ್ಲದೇ ಹೆಚ್ಚಾಗುತ್ತಿರುವ ಆರ್ಥಿಕ ಹೊರೆಯನ್ನು ಹೊರುತ್ತ ಅಸಹಾಯಕನಾಗಿ ನಿಂತಿದ್ದಾನೆ.
Read moreDetails