ಮಂಡ್ಯ ಜಿಲ್ಲೆ ಪಾಂಡವಪುರ ಪೊಲೀಸ್ ಠಾಣೆ ಸೇರಿದಂತೆ ಮೇ 6ರಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ ದೂರು ನೀಡಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಗ್ರೂಪ್-ಡಿ ಸಿಬ್ಬಂದಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಶ್ವಿನಿ ಎಂಬುವರಿಗೆ ಸೇರಿದ ವಸತಿ ಗೃಹದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 19 ಜನ ಆರೋಪಿಗಳಿದ್ದು, ಅದರಲ್ಲಿ 12 ಜನರನ್ನು ಅರೆಸ್ಟ್ ಮಾಡಲಾಗಿತ್ತು. ಇನ್ನುಳಿದ 7 ಜನ ತಲೆ ಮರೆಸಿಕೊಂಡಿದ್ದರು.
ಮೇಲುಕೋಟೆ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ನಲ್ಲಿ ಒಟ್ಟು 7 ಜನ ಆರೋಪಿಗಳಿದ್ದು, ಅದರಲ್ಲಿ ಮೂವರ ಬಂಧನ ಆಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಉಳಿದ ನಾಲ್ವರು ತಲೆಮರೆಸಿಕೊಂಡಿದ್ದರು. ಇನ್ನು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಹೆಣ್ಣು ಭ್ರೂಣ ತಪಾಸಣೆ ಮಾಡಲು ತೆರಳುತ್ತಿದ್ದಾಗ ದಾಳಿ ಮಾಡಿದಾಗ ನಾಲ್ವರು ಆರೋಪಿಗಳಿದ್ದು, ಮೂವರ ಬಂಧನ ಮಾಡಲಾಗಿತ್ತು. ಓರ್ವ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದನು. ಮೈಸೂರಿನ ಉದಯಗಿರಿ ಠಾಣೆಯಲ್ಲಿ ಪ್ರಕರಣ ಹಾಗೂ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.
ಹೆಣ್ಣು ಭ್ರೂಣವನ್ನು ಆಕ್ರಮವಾಗಿ ಸ್ಕ್ಯಾನ್ ಮಾಡಿ ಪತ್ತೆ ಮಾಡಲಾಗ್ತಿತ್ತು. ಏಜೆಂಟ್ಗಳಾದ ಆಶಾ ಕಾರ್ಯಕರ್ತರು, ಖಾಸಗಿ ಲ್ಯಾಬ್ ಟೆಕ್ನಿಷಿಯನ್ಸ್ಗಳ ಮೂಲಕ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಮಾಡುತ್ತಿದ್ದವರ ಮೇಲೆ ಹಾಗೂ ಈ ದುಷ್ಕೃತ್ಯಕ್ಕೆ ಸಹಕರಿಸುತ್ತಿದ್ದವರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಆ ಆರೋಪಿಗಳ ಪತ್ತೆ ಮಾಡುವುದಕ್ಕಾಗಿ ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.
ಆರೋಪಿಗಳಾದ ಅಭಿಷೇಕ್ ಮತ್ತು ವಿರೇಶ್ ಅವರನ್ನು ದಿನಾಂಕ: 3-09-2024 ರಂದು ಅರೆಸ್ಟ್ ಮಾಡಿ, ಕೂಲಂಕಷವಾಗಿ ವಿಚಾರಣೆ ಮಾಡಿ, ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಅವರು ಕೊಟ್ಟ ಮಾಹಿತಿ ಮೇರೆಗೆ 10 ಜನ ಆರೋಪಿಗಳಾದ ಪುಟ್ಟರಾಜು, ಕುಮಾರ್, ಶಾರದಮ್ಮ, ದಾಸೇಗೌಡ, ಲ್ಯಾಬ್ ಸತ್ಯ, ಮೀನಾ, ಮಲ್ಲಿಕಾರ್ಜುನ್, ಸೋಮಶೇಖರ್, ರತ್ನಮ್ಮ, ಪ್ರೇಮ ಅಲಿಯಾಸ್ ಪಾರ್ವತಿ ಅವರನ್ನು ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗಿದೆ. ಒಟ್ಟು 12 ಜನ ಆರೋಪಿಗಳಿಂದ ಅಕ್ರಮವಾಗಿ ಕೃತ್ಯಕ್ಕೆ ಉಪಯೋಗಿಸಿದ ಎರಡು ಸ್ಕ್ಯಾನಿಂಗ್ ಉಪಕರಣಗಳು ಹಾಗೂ ಮೂರು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಮೂರು ಮೊಬೈಲ್ ಸೇರಿದಂತೆ 23 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಅಪರ ಪೊಲೀಸ್ ಅಧೀಕ್ಷಕರಾದ ತಿಮ್ಮಯ್ಯ.ಸಿ.ಇ ಮತ್ತು ಶ್ರೀ.ಗಂಗಾಧರಸ್ವಾಮಿ, ಡಿಎಸ್ಪಿ ಎಲ್.ಕೆ.ರಮೇಶ್, ಶ್ರೀ.ಮುರುಳಿ, ಡಾ.ಸುಮೀತ್ ಮಾರ್ಗದರ್ಶನದಲ್ಲಿ ಪಾಂಡವಪುರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಆರ್ ವಿವೇಕಾನಂದ, ಕೆರಗೋಡು ವೃತ್ತ ನಿರೀಕ್ಷಕ ಎನ್.ವಿ ಮಹೇಶ್, ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಮತ್ತು ಪಿಎಸ್ಐಗಳಾದ ಉಮೇಶ್, ವೈ.ಎನ್ ರವಿಕುಮಾರ್, ಶೇಷಾದ್ರಿ, ರಾಘವೇಂದ್ರ ಕಠಾರಿ, ರಸೂಲ್ ಸಾಬ್ ಗೌಂಡಿ, ಮಂಜುನಾಥ್, ರವಿಕುಮಾರ್.ಡಿ ಮತ್ತು ಅಪರಾಧ ಪತ್ತೆ ದಳ ತಂಡದ ಸಿಬ್ಬಂದಿ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ವಿಶೇಷ ತನಿಖಾ ತಂಡದಲ್ಲಿ ಲಿಂಗರಾಜು, ಚಿಕ್ಕಯ್ಯ, ಅನಿಲ್, ಪ್ರಸನ್ನ, ಮಹೇಶ್, ಮಂಜುನಾಥ್, ಲೋಕೇಶ್, ಚಿರಂಜೀವಿ, ಪ್ರಭುಸ್ವಾಮಿ, ಗುರುಪ್ರಸಾದ್, ರಿಯಾಜ್, ಪ್ರಶಾಂತ್, ಇಂದ್ರ ಕುಮಾರ್, ಕಿರಣ್, ಆನಂದ, ರಾಜೀವ್, ಪ್ರಶಾಂತ್ ಕುಮಾರ್, ಪ್ರವೀಣ, ನಾಗೇಂದ್ರ, ತಾಂತ್ರಿಕ ವಿಭಾಗದ ಲೋಕೇಶ್ ಮತ್ತು ರವಿಕಿರಣ್ ಕಾರ್ಯವನ್ನು ಗೃಹ ಇಲಾಖಡೆ ಶ್ಲಾಘಿಸಿದ್ದು ತಂಡಕ್ಕೆ ಗೃಹ ಇಲಾಖೆಯಿಂದ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ಘೋಷಣೆ ಮಾಡಲಾಗಿದೆ.