• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ವಿಶೇಷ

ಶೈಕ್ಷಣಿಕ ಸವಾಲುಗಳ ನಡುವೆ ಶಿಕ್ಷಕ ದಿನಾಚರಣೆ

ನಾ ದಿವಾಕರ by ನಾ ದಿವಾಕರ
September 5, 2024
in ವಿಶೇಷ, ಸ್ಟೂಡೆಂಟ್‌ ಕಾರ್ನರ್
0
ಶೈಕ್ಷಣಿಕ ಸವಾಲುಗಳ ನಡುವೆ ಶಿಕ್ಷಕ ದಿನಾಚರಣೆ
Share on WhatsAppShare on FacebookShare on Telegram

—-ನಾ ದಿವಾಕರ —–

ADVERTISEMENT

ಸಮಾಜದ ಅಭ್ಯುದಯಕ್ಕೆ ಅಡಿಪಾಯವಾಗಬೇಕಾದ ಶೈಕ್ಷಣಿಕ ವಲಯ ಸದಾ ನಿರ್ಲಕ್ಷಿತವೇ ಆಗಿದೆ

ಭಾರತ ಮತ್ತೊಂದು ಶಿಕ್ಷಕರ ದಿನವನ್ನು ಆಚರಿಸುವ ಹೊತ್ತಿನಲ್ಲೇ ದೇಶದ ಶೈಕ್ಷಣಿಕ ವಲಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಕಂಡೂಕಾಣದಂತೆ ನಿರ್ಲಕ್ಷಿಸುತ್ತಿರುವ ಆಳ್ವಿಕೆಯ ನೀತಿಗಳು ಇಂದು ಗಂಭೀರ ಪರಾಮರ್ಶೆಗೊಳಗಾಗಬೇಕಿದೆ. ಶಿಕ್ಷಕರ ದಿನಾಚರಣೆಯನ್ನು ಎರಡು ವಿಶಾಲ ನೆಲೆಗಳಲ್ಲಿ ನಿಷ್ಕರ್ಷೆಗೊಳಪಡಿಸಬಹುದು. ಮೊದಲನೆಯದು ದೇಶದ ಶೈಕ್ಷಣಿಕ ವಲಯ ಸಾಗುತ್ತಿರುವ ಹಾದಿ, ಅದರಿಂದ ಹೊರಬರುತ್ತಿರುವ ಬೌದ್ಧಿಕ ಮಾನವ ಸಂಪನ್ಮೂಲಗಳ ಭವಿಷ್ಯ ಮತ್ತು ವಿಶಾಲ ಸಮಾಜದ ಸಂವೇದನಾಶೀಲ ಮುನ್ನಡೆಗೆ ಈ ಕ್ಷೇತ್ರದ ಕೊಡುಗೆ. ಎರಡನೆಯದು ತಳಮಟ್ಟದಿಂದಲೇ ಸಮಾಜವನ್ನು ಔನ್ನತ್ಯದೆಡೆಗೆ ಕೊಂಡೊಯ್ಯುವ ಏಕೈಕ ಜ್ಞಾನ ಕ್ಷೇತ್ರ ಎನಿಸಿಕೊಂಡ ಶೈಕ್ಷಣಿಕ ವಲಯವು ಬದಲಾಗುತ್ತಿರುವ ಭಾರತಕ್ಕೆ, ಇನ್ನೂ ಬದಲಾಗಲಿರುವ ಭವಿಷ್ಯದ ಭಾರತಕ್ಕೆ  ನೀಡಬಹುದಾದ ಉದಾತ್ತ ಮಾರ್ಗದರ್ಶನ.

ಭಾರತದ ಶಿಕ್ಷಣ ವ್ಯವಸ್ಥೆ ಎಂತಹ ಬೌಧ್ಧಿಕತೆಯನ್ನು ಉತ್ಪಾದಿಸುತ್ತಿವೆ ? ಈ ಗಹನವಾದ ಪ್ರಶ್ನೆಯನ್ನು ಶೋಧಿಸುತ್ತಾ ಹೋದಂತೆಲ್ಲಾ ನಮ್ಮ ಪಯಣ ಗ್ರಾಮಗಳ ಪ್ರಾಥಮಿಕ ಶಾಲೆಗಳಿಂದ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳವರೆಗೂ ವಿಸ್ತರಿಸುತ್ತದೆ. ಭಾರತ ಬದಲಾಗುತ್ತಿದೆ, ಬದಲಾವಣೆ ಅನಿವಾರ್ಯ. ಆದರೆ ಯಾವ ದಿಕ್ಕಿನಲ್ಲಿ ಬದಲಾಗುತ್ತಿದೆ ? ಇದರ ಸೂಕ್ಷ್ಮಗಳನ್ನು ಶೈಕ್ಷಣಿಕ ವಲಯದಲ್ಲೇ ಕಾಣಬಹುದಾದಷ್ಟು ಜಟಿಲ ಸಮಸ್ಯೆಗಳು ನಮಗೆ ಎದುರಾಗುತ್ತವೆ. ತಳಮಟ್ಟದ ಸಮಾಜದಲ್ಲಿ ಸಹಜವಾಗಿಯೇ ಉಂಟಾಗಬಹುದಾದ ಪಲ್ಲಟಗಳನ್ನು, ಅದರಿಂದ ಉಗಮಿಸುವಂತಹ ಸಿಕ್ಕುಗಳನ್ನು ಪರಿಹರಿಸುವ ಜವಾಬ್ದಾರಿ ನಾಗರಿಕ ವಲಯದ ಸಂಘ ಸಂಸ್ಥೆಗಳ ಮೇಲಿರುತ್ತದೆ. ಆದರೆ ಈ ಒಳಬಿರುಕುಗಳನ್ನು ಗುರುತಿಸಿ ಹೊಸ ಪ್ರಪಂಚವನ್ನು ಪ್ರವೇಶಿಸುವ ಎಳೆಯ-ಯುವ ವಿದ್ಯಾರ್ಥಿ ಸಂಕುಲಕ್ಕೆ ಸೂಕ್ತ ದಾರಿ ತೋರುವ ಜವಾಬ್ದಾರಿ ಶೈಕ್ಷಣಿಕ ಪರಿಚಾರಕರ ಮೇಲಿರುತ್ತದೆ.

ಶಿಕ್ಷಣ ವಲಯದ ಸಾಮಾಜಿಕ ಹೊಣೆ

ಶಾಲಾ ಕಾಲೇಜುಗಳ ಬೋಧಕ ವರ್ಗದಿಂದ ಹಿಡಿದು ಅತ್ಯುನ್ನತ ವಿಶ್ವವಿದ್ಯಾಲಯಗಳ ಸೆನೇಟ್-ಸಿಂಡಿಕೇಟ್‌ಗಳವರೆಗೂ ವಿಸ್ತರಿಸುವ ಈ ಜವಾಬ್ದಾರಿಯ ಹರಹುಗಳನ್ನು ನಮ್ಮ ಸಮಾಜವಾಗಲೀ, ಆಳ್ವಿಕೆಯ ಕೇಂದ್ರಗಳಾಗಲೀ ಅರಿತಿವೆಯೇ ? ಅಥವಾ ತಮ್ಮ ಸ್ವಂತ ಜೀವನ-ಜೀವನೋಪಾಯಕ್ಕಾಗಿ ಬೋಧಕ ವೃತ್ತಿಯನ್ನು ಅನುಸರಿಸುವ ಒಂದು ಸಮುದಾಯ ನೈತಿಕತೆ-ಸಾಮಾಜಿಕ ಸೂಕ್ಷ್ಮತೆಯ ನೆಲೆಯಲ್ಲಿ ಈ ಜವಾಬ್ದಾರಿಯ ಬಗ್ಗೆ ಪರಾಮರ್ಶೆ ಮಾಡಲು ಸಾಧ್ಯವಾಗಿದೆಯೇ ? ಜೀವನ್ಮುಕ್ತಿಗಾಗಿ ಗುರುವಿನ ಗುಲಾಮನಾಗುವ ಪ್ರಾಚೀನ ಮನಸ್ಥಿತಿಯಿಂದ ಬಹುದೂರ ಸಾಗಿ ಬಂದಿರುವ ಭಾರತೀಯ ಸಮಾಜ ಇಂದು ವೈಚಾರಿಕ ನೆಲೆಯಲ್ಲಿ, ವೈಜ್ಞಾನಿಕ ಚಿಂತನೆಗಳೊಂದಿಗೆ ಹೊಸ ಸಮಾಜವನ್ನು ಕಟ್ಟಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಈ ಸನ್ನಿವೇಶದಲ್ಲಿ ಪ್ರಶ್ನಾತೀತತೆಯ ಯಜಮಾನಿಕೆ ಸಂಸ್ಕೃತಿಯನ್ನು ಧಿಕ್ಕರಿಸಿ ಜ್ಞಾನವಾಹಿನಿಗಳನ್ನು ವಿಸ್ತರಿಸಿಕೊಳ್ಳುವುದು ಅತ್ಯವಶ್ಯವಾಗಿದೆ.

ಇದು ಸಾಧ್ಯವಾಗಬೇಕಾದರೆ ಭಾರತದ ಶಿಕ್ಷಣ ಹೊರ ಸಮಾಜವನ್ನು ಕಾಡುತ್ತಿರುವ ಜಾತಿ, ಮತ, ಧರ್ಮ ಮತ್ತಿತರ ಅಸ್ಮಿತೆಗಳ ಚೌಕಟ್ಟುಗಳಿಂದ ಹೊರಬಂದು ತನ್ನ ಸಾಮಾಜಿಕ ಅಸ್ತಿತ್ವವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಪ್ರಾಚೀನ ಭಾರತದ ಜಾತಿಗ್ರಸ್ಥ ಮನಸ್ಥಿತಿ ಮತ್ತು ಆಧುನಿಕ ಜಗತ್ತಿನ ದ್ವೇಷಾಸೂಯೆಗಳು ಸಮಾಜದ ಎಲ್ಲ ಸ್ತರಗಳನ್ನೂ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವ ಹೊತ್ತಿನಲ್ಲಿ, ಈ ನೆಲೆಗಳಿಂದಲೇ ಶಿಕ್ಷಣ ವಲಯವನ್ನು ಪ್ರವೇಶಿಸುವ ಎಳೆಯ-ಯುವ ಮನಸ್ಸುಗಳನ್ನು ಸಂವೇದನಾಶೀಲಗೊಳಿಸುವ ಅವಶ್ಯಕತೆ ಇದೆ. ಭಾರತದ ಅಧಿಕಾರ ರಾಜಕಾರಣದ ಕೇಂದ್ರಗಳು ಈ ಜವಾಬ್ದಾರಿಯನ್ನು ಮರೆತಿರುವುದರಿಂದ, ಸಮಾಜವನ್ನು ತಿದ್ದಿತೀಡುವ ಶಿಕ್ಷಣ ವಲಯ ಇದನ್ನು ಪ್ರಾಮಾಣಿಕವಾಗಿ ವಹಿಸಿಕೊಳ್ಳಬೇಕಿದೆ. ಸಹಜವಾಗಿಯೇ ಬೋಧಕ ವೃತ್ತಿ ಈ ಜವಾಬ್ದಾರಿಗೆ ಹೆಗಲು ನೀಡಬೇಕಿದೆ.

ತಳಸಮುದಾಯಗಳನ್ನು, ಶೋಷಿತ ಜನರನ್ನು ಹಾಗೂ ಇತ್ತೀಚಿನ ದಿನಗಳಲ್ಲಿ ಮಹಿಳಾ ಸಂಕುಲವನ್ನು ಕಾಡುತ್ತಿರುವ ದೌರ್ಜನ್ಯ, ತಾರತಮ್ಯ, ಅತ್ಯಾಚಾರ ಮೊದಲಾದ ಸಮಾಜ ಘಾತುಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡಿದಾಗ, ಸಮಾಜದಲ್ಲಿ ಲಿಂಗತ್ವ ಸೂಕ್ಷ್ಮತೆ ಮಾತ್ರವೇ ಅಲ್ಲದೆ, ಮನುಜ ಸೂಕ್ಷ್ಮತೆಯನ್ನೂ ಬೆಳೆಸಬೇಕಾದ ಅನಿವಾರ್ಯತೆ ಎದ್ದುಕಾಣುತ್ತಿದೆ. ಇದು ಸಾಧ್ಯವಾಗಬೇಕಾದರೆ ಶೈಕ್ಷಣಿಕ ಪರಿಚಾರಕರಲ್ಲಿ ಜಾತ್ಯತೀತ ಮನೋಭಾವ, ವೈಚಾರಿಕತೆ, ವೈಜ್ಞಾನಿಕ ಚಿಂತನೆ ಮತ್ತು ಇಡೀ ಸಮಾಜವನ್ನು ಒಳಗೊಳ್ಳುವಂತಹ ವಿಶಾಲ ಮನಸ್ಥಿತಿ ಇರುವುದು ಅತ್ಯವಶ್ಯ ಎನಿಸುತ್ತದೆ. ಇದು ಸಾಧ್ಯವಾಗಬೇಕಾದರೆ ಅಧಿಕಾರ ರಾಜಕಾರಣ ಸೃಷ್ಟಿಸುವ ಅವಕಾಶಗಳಿಂದ ಆಕರ್ಷಿತವಾಗುವ ಮನಸ್ಥಿತಿಯಿಂದ ಬೋಧಕ ವಲಯ ಹೊರಬರಬೇಕಿದೆ. ಮಕ್ಕಳ ನಡುವೆ ಕುಳಿತು ಜ್ಞಾನವಾಹಿನಿಯನ್ನು ವಿಸ್ತರಿಸುವುದರೊಂದಿಗೇ ಒಂದು ತಲೆಮಾರನ್ನು ಭವಿಷ್ಯದ ಸಮಾಜಕ್ಕೆ ಒಪ್ಪಿಸುವ ನೈತಿಕ ಜವಾಬ್ದಾರಿಯನ್ನು ಅರಿತು, ಶಿಕ್ಷಕ ವೃತ್ತಿಯನ್ನು ಮತ್ತಷ್ಟು ಸಂವೇದನಾಶೀಲಗೊಳಿಸಬೇಕಿದೆ.

ವರ್ತಮಾನದ ಸಂದರ್ಭದಲ್ಲಿ ಢಾಳಾಗಿ ಕಾಣಬಹುದಾದ ಕೊರತೆ ಇದೇ ಆಗಿದೆ. ಜಾತಿ-ಧರ್ಮದ ಅಸ್ಮಿತೆಗಳೇ ನಮ್ಮ ಸಾಮಾಜಿಕ ಧೋರಣೆಯನ್ನೂ ನಿರ್ದೇಶಿಸುತ್ತಿರುವ ಹೊತ್ತಿನಲ್ಲಿ, ಸೀಮಾತೀತವಾಗಿರಬೇಕಾದ ಜ್ಞಾನವಾಹಿನಿಗಳು ಪ್ರಶ್ನಾತೀತವಾಗುತ್ತಾ ತಮ್ಮ ಸೂಕ್ಷ್ಮ ಸಂವೇದನೆಯ ಕೊಂಡಿಗಳನ್ನು ಕಳೆದುಕೊಳ್ಳುತ್ತಿದೆ.  ಹಾಗಾಗಿಯೇ ಎಳೆಬಾಲೆಯರ ಮೇಲೆ ಲೈಂಗಿಕ ದೌರ್ಜನ್ಯ-ಅತ್ಯಾಚಾರ ಎಸಗುವ ಶಿಕ್ಷಕರನ್ನು, ಮತೀಯ ದ್ವೇಷವನ್ನು ವ್ಯವಸ್ಥಿತವಾಗಿ ಹರಡುವ ಶಾಲಾ ಕಾಲೇಜುಗಳನ್ನು, ಹೊರ ಸಮಾಜದ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಶಿಕ್ಷಣ ಸಂಸ್ಥೆಗಳನ್ನು, ಕೋಮು-ಮತದ್ವೇಷವನ್ನು ಬಿತ್ತುವ ಬೋಧಕರನ್ನು, ಬಿಸಿಯೂಟದಲ್ಲಿ ಜಾತಿಭೇದ ತೋರುವವರನ್ನು ತಳದಿಂದ ಶಿಖರದವರೆಗೂ  ಕಾಣಬಹುದಾಗಿದೆ. ಕರ್ನಾಟಕದ ಕರಾವಳಿಯಲ್ಲಿ ಸೃಷ್ಟಿಸಲಾದ ಹಿಜಾಬ್‌ ವಿವಾದ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಮಾರುಕಟ್ಟೆ ಮತ್ತು ಶಿಕ್ಷಣದ ಘರ್ಷಣೆ

ಈ ಸಾಂಸ್ಕೃತಿಕ ಪಲ್ಲಟಗಳ ನಡುವೆಯೇ ಭಾರತದ ಶೈಕ್ಷಣಿಕ ವಲಯ ಹಂತಹಂತವಾಗಿ ಕಾರ್ಪೋರೇಟೀಕರಣದತ್ತ ಸಾಗುತ್ತಿರುವುದು ಆತಂಕಕಾರಿಯಷ್ಟೇ ಅಲ್ಲದೆ ಭಾರತದ ಜನತೆಯ ದೃಷ್ಟಿಯಲ್ಲಿ  ಅಪಾಯಕಾರಿಯಾಗಿಯೂ ಕಾಣುತ್ತದೆ. ಶಿಕ್ಷಣ ಎನ್ನುವುದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ಸ್ಥಾವರದಿಂದ ಹೊರಬರುವ ಜ್ಞಾನ ಸರಕು ಮಾತ್ರ ಅಲ್ಲ ಎನ್ನುವುದನ್ನು ನವ ಭಾರತ ಅರಿಯಬೇಕಿದೆ. ಈ ಗೋಡೆಗಳ ನಡುವೆ ನಡೆಯುವ ಬೋಧನೆಗಳು ಮತ್ತು ಹರಡುವ ಜ್ಞಾನ ಶಾಖೆಗಳು ಯುವ ಪೀಳಿಗೆಯಲ್ಲಿ ಭರವಸೆಯನ್ನು ಮೂಡಿಸುವ ಬೌದ್ಧಿಕ ವಾಹಕಗಳು ಮಾತ್ರ. ಇದನ್ನು ಪೂರೈಸಲು ನೇಮಿಸಲಾಗುವ ಶಿಕ್ಷಕ ವೃಂದದ ಸಾಮಾಜಿಕ ಜೀವನ ಮತ್ತು ಸಾಂಸ್ಕೃತಿಕ ಅರಿವು ಎರಡೂ ಸಹ ಸಮಧಾನಕರವಾಗಿದ್ದಲ್ಲಿ ಮಾತ್ರ ಯುವ ಸಮಾಜವು ತನ್ನ ಔನ್ನತ್ಯದತ್ತ ಸಾಗಲು ನೆರವಾಗುತ್ತದೆ.

ಇದು ಸಾಧ್ಯವಾಗಬೇಕಾದರೆ ಶೈಕ್ಷಣಿಕ ವಲಯವನ್ನು ಕಾರ್ಪೋರೇಟ್‌ ಮಾರುಕಟ್ಟೆಯಿಂದ ಮುಕ್ತಗೊಳಿಸಬೇಕಿದೆ. ಹಾಗೆಯೇ ಶಿಕ್ಷಣದ ನೊಗ ಹೊರುವ ಶಿಕ್ಷಕ ವೃಂದ ಹೊರ ಸಮಾಜದ ಜಾತಿ-ಧರ್ಮ-ಸಾಮುದಾಯಿಕ ಅಸ್ಮಿತೆಗಳಿಂದ ಮುಕ್ತವಾಗಬೇಕಿದೆ. ದುರದೃಷ್ಟವಶಾತ್‌ ಈ ಎರಡೂ ಸಾಧ್ಯವಾಗುತ್ತಿಲ್ಲ. ಬಂಡವಾಳಶಾಹಿ ಕಾರ್ಪೋರೇಟ್‌ ಮಾರುಕಟ್ಟೆಯು ಅಧಿಕಾರ ರಾಜಕಾರಣದೊಡನೆ ಹೊಂದಿರುವ ಆಪ್ತ ಒಡನಾಟದ ಪರಿಣಾಮ, ಬಂಡವಾಳ ಕೇಂದ್ರಗಳು ನೇರವಾಗಿಯೇ ಶಿಕ್ಷಣದ ಅಂಗಳವನ್ನು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮವನ್ನು ಪ್ರಾಥಮಿಕದಿಂದ ಉನ್ನತ ವ್ಯಾಸಂಗದವರೆಗೆ ವ್ಯಾಪಿಸಿರುವ ವಾಣಿಜ್ಯೀಕರಣ ಪ್ರಕ್ರಿಯೆಯಲ್ಲಿ ಗುರುತಿಸಬಹುದು. ದಿನನಿತ್ಯ ಸಂವಿಧಾನ ಪಠಣ ಮಾಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವೂ ಸರ್ಕಾರಿ ಶಾಲೆಗಳನ್ನು ಕಾರ್ಪೋರೇಟ್‌ ಉದ್ಯಮಿಗಳಿಗೆ ದತ್ತು ನೀಡುತ್ತಿರುವುದು ಇದರ ವಿಸ್ತರಣೆಯಷ್ಟೆ.

ಈ ಹಾದಿಯಲ್ಲಿ ಬಹುದೊಡ್ಡ ತೊಡಕಾಗಿ ಕಾಣುವುದು ನವ ಉದಾರವಾದಿ ಆರ್ಥಿಕ ನೀತಿಯ ಸುಧಾರಣಾ ಕ್ರಮಗಳು. ಮತ್ತು ಶಿಕ್ಷಣ ನೀತಿಗಳು. ಶಿಕ್ಷಣ ನೀತಿಯನ್ನು ಬೋಧನೆ ಹಂತಕ್ಕೆ ಮಾತ್ರ ಸೀಮಿತಗೊಳಿಸುವ ಮೂಲಕ ಸರ್ಕಾರಗಳು ಅದರಿಂದಾಚೆಗೆ ಶಿಕ್ಷಕ ವೃಂದ ಹಾಗೂ ಶೈಕ್ಷಣಿಕ ವಲಯ ವಹಿಸಬೇಕಾದ ನೈತಿಕ ಜವಾಬ್ದಾರಿಯನ್ನು ಮರೆಯುತ್ತಿವೆ. ಪಠ್ಯಕ್ರಮಗಳಿಗಿಂತಲೂ ಹೆಚ್ಚಾಗಿ ಎಳೆಯ ಮಕ್ಕಳು, ಯುವ ಸಮೂಹ ಶಾಲಾ ಕಾಲೇಜುಗಳಲ್ಲಿ ಕಲಿಯುವುದು ನಮ್ಮ ನೆಲ ಸಂಸ್ಕೃತಿಯ ಸೂಕ್ಷ್ಮತೆಗಳನ್ನು ಮತ್ತು ಅದರ ಒಳಸುಳಿಗಳನ್ನು ಎಂಬ ವಾಸ್ತವವನ್ನು ಮಾರುಕಟ್ಟೆ ನಿರ್ದೇಶಿತ ಆಳ್ವಿಕೆಗಳು ನಿರ್ಲಕ್ಷಿಸುತ್ತಿವೆ. ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯೂ ಸಹ ಇದೇ ಮಾರುಕಟ್ಟೆಯ ಅವಶ್ಯಕತೆಗಳನ್ನೇ ಪೂರೈಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಇದರ ಸಂಕೇತ.

ವಿಸ್ತರಿಸುತ್ತಿರುವ ಬಂಡವಾಳಶಾಹಿ ಡಿಜಿಟಲ್‌ ಮಾರುಕಟ್ಟೆಗೆ ಅವಶ್ಯವಾದ ಮಾನವ ಸರಕುಗಳನ್ನು ಪೂರೈಸುವ ಬೌದ್ಧಿಕ ಕಾರ್ಖಾನೆಗಳಂತೆ ಶೈಕ್ಷಣಿಕ ವಲಯದ ಎಲ್ಲ ಹಂತಗಳಲ್ಲೂ ಜ್ಞಾನ ಕೇಂದ್ರಗಳನ್ನು ಖಾಸಗೀಕರಣ, ಕಾರ್ಪೊರೇಟೀಕರಣ, ವಾಣಿಜ್ಯೀಕರಣಕ್ಕೊಳಪಡಿಸಲಾಗುತ್ತಿದೆ. ಇಲ್ಲಿ ಉತ್ಪಾದಿತವಾಗುವ ಜ್ಞಾನ ಸರಕುಗಳು ಭವಿಷ್ಯದ ಮಾರುಕಟ್ಟೆಗೆ ಬೌದ್ಧಿಕ ಕಚ್ಚಾವಸ್ತುಗಳಾಗುತ್ತವೆ. ಆದರೆ ಇದರ ಮತ್ತೊಂದು ಬದಿಯಲ್ಲಿ ಇಂದಿಗೂ ತನ್ನ ಸಾಂಪ್ರದಾಯಿಕ ಮೌಲ್ಯಗಳಿಂದ ಕಳಚಿಕೊಳ್ಳಲು ಸಾಧ್ಯವಾಗದೆ ಅವೈಚಾರಿಕತೆ, ಅವೈಜ್ಞಾನಿಕ ನಂಬಿಕೆಗಳು, ಮೌಢ್ಯಾಚರಣೆಗಳಿಂದ ಕೂಡಿರುವ ವಿಶಾಲ ಭಾರತದ ಸಾಮಾಜಿಕ ಒಳಸುಳಿಗಳನ್ನು ಒಳಹೊಕ್ಕು ನೋಡುವ ಒಂದು ಬೌದ್ಧಿಕ ಕ್ರಿಯೆಗೆ ಶಿಕ್ಷಣ ವ್ಯವಸ್ಥೆ ತೆರೆದುಕೊಳ್ಳಲಾಗುತ್ತಿಲ್ಲ. ಕಾರ್ಪೋರೇಟೀಕರಣಕ್ಕೊಳಗಾದ ಶಿಕ್ಷಣ ಕೇಂದ್ರಗಳು ಮತ್ತು ಅಲ್ಲಿ ಸೃಷ್ಟಿಯಾಗುವ ಜ್ಞಾನ ಕೇಂದ್ರಗಳು ಮಾರುಕಟ್ಟೆಗೆ ಅಗತ್ಯವಾದ ಸರಕೀಕರಣಕ್ಕೊಳಗಾದ ಸಾಂಸ್ಕೃತಿಕ ರೂಪಗಳನ್ನು (Commodified Cultural forms) ಮಕ್ಕಳ-ಯುವಕರ ನಡುವೆ ಪಸರಿಸುತ್ತವೆ.

ನೆಲದ ವಾಸ್ತವಗಳೊಂದಿಗೆ ಮುಖಾಮುಖಿ

ಹಾಗಾಗಿ ಭಾರತೀಯ ಸಮಾಜದ ನೆಲದ ವಾಸ್ತವಗಳಿಂದ ದೂರವಾದ, ತಳಮಟ್ಟದ ಸಾಮಾಜಿಕ ಸ್ಥಿತ್ಯಂತರಗಳನ್ನಾಗಲೀ, ಸಿಕ್ಕುಗಳನ್ನಾಗಲೀ ಭೇದಿಸಲು ಅಶಕ್ಯವಾದ ಒಂದು ಜ್ಞಾನ ಪರಂಪರೆಯನ್ನು ಹುಟ್ಟುಹಾಕಲಾಗುತ್ತದೆ. ಈ ಕಾರ್ಯವನ್ನು ನಿಭಾಯಿಸಲು ನೇಮಿಸಲಾಗುವ ಶಿಕ್ಷಕ ಸಮೂಹವನ್ನೂ ಕಡಿಮೆ ವೇತನದ ಮೂಲಕ, ಗುತ್ಗಿಗೆ  ನೌಕರಿಯ ಮೂಲಕ, ʼಅತಿಥಿʼ ಎಂಬ ಹುದ್ದೆಯ ಮೂಲಕ ದುರ್ಬಲಗೊಳಿಸಲಾಗುತ್ತಿದೆ. ಕರ್ನಾಟಕದಲ್ಲೇ ಬೋಧಕ ವೃತ್ತಿಗೆ ಅರ್ಹತೆ ಪಡೆದಿರುವ 12 ಲಕ್ಷ ಬಿಇಡಿ ಪದವೀಧರರು ಇದ್ದಾರೆ. ಆದರೆ ಇಡೀ ರಾಜ್ಯದಲ್ಲಿ ಮಂಜೂರಾಗಿರುವ ಶಿಕ್ಷಕ  ಹುದ್ದೆಗಳು ಕೇವಲ 2 ಲಕ್ಷ 81 ಸಾವಿರ. ಅದರಲ್ಲೂ 53 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಹಾಗಾಗಿ ರಾಜ್ಯದ ಬಹುಪಾಲು ಶಿಕ್ಷಣ ಕೇಂದ್ರಗಳು ಬೋಧಕರ ಕೊರತೆಯಿಂದ ಸಮಾಜಕ್ಕೆ  ಉತ್ತಮ ಗುಣಮಟ್ಟದ ಶಿಕ್ಷಣವನ್ನು ದಾಟಿಸಲು ಸಾಧ್ಯವಾಗುತ್ತಿಲ್ಲ.

ಡಿಜಿಟಲ್‌ ಯುಗದಲ್ಲಿ ಮಾರುಕಟ್ಟೆಯ ಬೆಳವಣಿಗೆಗೆ ನೆರವಾಗುವ ಶ್ರಮವನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸುವ ಮಾರುಕಟ್ಟೆ ಆರ್ಥಿಕತೆಯಲ್ಲಿ, ಸಮಾಜದ ಬೆಳವಣಿಗೆ ಮತ್ತು ಉನ್ನತ ಏಳಿಗೆಗೆಗಾಗಿ ದುಡಿಯಬೇಕಾದ ಬೋಧಕ ವಲಯದ ಶ್ರಮವನ್ನು ನಿಕೃಷ್ಟವಾಗಿಯೇ ಕಾಣುತ್ತದೆ. ಹಾಗಾಗಿಯೇ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ, ನೂರಾರು ವಿಶ್ವವಿದ್ಯಾಲಯಗಳಲ್ಲಿ ನೇಮಕವಾಗುವ ಬೋಧಕ ವರ್ಗಕ್ಕೆ ಶಾಶ್ವತ ನೌಕರಿಯನ್ನು ನಿರಾಕರಿಸಲಾಗುತ್ತಿದೆ. ʼ ಅತಿಥಿ ʼ ಎಂಬ ಉದಾತ್ತ ಪದದಿಂದ ಗುರುತಿಸಲ್ಪಡುವ ಬೋಧಕರ ವೇತನ ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ಕೂಲಿಗಿಂತಲೂ ಕಡಿಮೆ ಇರುವುದು ವಿಷಾದಕರ. ಕರ್ನಾಟಕ ಸರ್ಕಾರವೂ ಈ ಹಾದಿಯಲ್ಲೇ ಸಾಗುತ್ತಿದ್ದು ಅತಿಥಿ ಶಿಕ್ಷಕ/ಬೋಧಕರ ವೇತನ ಪ್ರಾಥಮಿಕದಲ್ಲಿ 10,000/- , ಪ್ರೌಢಶಾಲಾ ಮಟ್ಟದಲ್ಲಿ 10,500/-, ಪಿಯು ಹಂತದಲ್ಲಿ 12,000/-, ವಸತಿ ಶಾಲೆಗಳಲ್ಲಿ 16,500/ ಮತ್ತು ವಸತಿಶಾಲೆಯ ಹೊರಗುತ್ತಿಗೆ ಶಿಕ್ಷಕರಿಗೆ 8,600/- ರೂಗಳ ವೇತನ ನಿಗದಿಪಡಿಸಿದೆ. ಈ ವೇತನ ವರ್ಷದಲ್ಲಿ ಹತ್ತು ತಿಂಗಳಲ್ಲಿ ಮಾತ್ರ ದೊರೆಯುತ್ತದೆ.

ರಾಜ್ಯದಲ್ಲಿರುವ 43,863 ಅತಿಥಿ ಶಿಕ್ಷಕರ ಪೈಕಿ ಬಹುತೇಕರು ದಶಕಗಳ ಸೇವೆ ಪೂರೈಸಿದ್ದು ನಿವೃತ್ತಿಯಾದವರೂ ಇದ್ದಾರೆ. ಈ ಶಿಕ್ಷಕರಿಗೆ ಸ್ವತಃ ಅವರ ಜೀವನವೇ ಅನಿಶ್ಚಿತತೆಯಲ್ಲಿರುವಾಗ ಯುವ ಸಮೂಹದ ನಡುವೆ ಭರವಸೆಯ ಬದುಕಿನ ಕನಸು ಕಟ್ಟುವುದು ಹೇಗೆ ಸಾಧ್ಯ ? ನಿವೃತ್ತಿಯವರೆಗೂ                     ʼ ಅತಿಥಿ ʼಯಾಗಿಯೇ ದುಡಿಯಬೇಕಾದ ಶೇಕಡಾ 80ರಷ್ಟಿರುವ ಈ ಬೋಧಕ ವೃಂದ ತಮ್ಮ ವೈಯುಕ್ತಿಕ ಬದುಕನ್ನು ರೂಪಿಸಿಕೊಳ್ಳುವುದಾದರೂ ಹೇಗೆ ? ಮಾರುಕಟ್ಟೆಗೆ ಇದು ಗಣನೆಗೆ ಬಾರದ ಅಂಶ. ಆದರೆ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ತೊಡೆದುಹಾಕುವ ಆದರ್ಶದೊಂದಿಗೆ ಜಾರಿಯಲ್ಲಿರುವ ಸಂವಿಧಾನಬದ್ಧ ಆಳ್ವಿಕೆಯಲ್ಲಿರುವವರಿಗೆ ಇದು ಅರ್ಥವಾಗಬೇಕಲ್ಲವೇ ? ಈ ಹುದ್ದೆಗಳನ್ನು ಪಡೆಯುವ ಹಾದಿಯಲ್ಲೂ ಅಭ್ಯರ್ಥಿಗಳು ಆಡಳಿತ ವ್ಯವಸ್ಥೆಯ ಭ್ರಷ್ಟ ಕೂಪಗಳನ್ನು ದಾಟಿಯೇ ಬರಬೇಕಾಗುವುದು ಕಟು ಸತ್ಯ. ಸ್ವಂತ ಬದುಕಿನ ಭದ್ರತೆಗಾಗಿ ಅಹರ್ನಿಶಿ ಹೋರಾಡುತ್ತಲೇ ಇರುವ ಶಿಕ್ಷಕ ವಲಯದ ಕೂಗಿಗೆ ಸ್ಪಂದಿಸದ ಸರ್ಕಾರಗಳು ಯೋಚಿಸಬೇಕಲ್ಲವೇ ?

ಭ್ರಷ್ಟಕೂಪಗಳಿಂದಾಚೆಗಿನ ಮೌಲ್ಯಗಳು

ಉನ್ನತ ವಿಶ್ವವಿದ್ಯಾಯದ ಉಪಕುಲಪತಿ ಹುದ್ದೆಯಿಂದ ಪ್ರಾಥಮಿಕ ಶಿಕ್ಷಕನವರೆಗೂ ವ್ಯಾಪಿಸಿರುವ ಭ್ರಷ್ಟಾಚಾರದ ಬಾಹುಗಳು ಒಂದು ನೆಲೆಯಲ್ಲಿ ಶಿಕ್ಷಕ ವೃತ್ತಿಯನ್ನೇ ಅಪಹಾಸ್ಯಗೊಳಿಸುವಂತಾಗಿದ್ದರೆ ಮತ್ತೊಂದು ನೆಲೆಯಲ್ಲಿ ಭವಿಷ್ಯದ ಸಮಾಜವನ್ನು ಅವನತಿಯತ್ತ ಕೊಂಡೊಯ್ಯುತ್ತಿರುವುದು ವಿಪರ್ಯಾಸ. ಅಧಿಕಾರ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯನ್ನು ಕಾಡುವ ಜಾತಿ ಸಮೀಕರಣಗಳು, ಅಸ್ಮಿತೆಯ ರಾಜಕೀಯ ಮತ್ತು ಸಾಮಾಜಿಕ ಚಹರೆಗಳು ವಿಶ್ವವಿದ್ಯಾಲಯಗಳ ಸೆನೇಟ್‌, ಸಿಂಡಿಕೇಟ್‌ ಮುಂತಾದ ಉನ್ನತ ಬೌದ್ಧಿಕ ಕೇಂದ್ರಗಳನ್ನೂ ವ್ಯಾಪಿಸುತ್ತಿರುವ ಹೊತ್ತಿನಲ್ಲಿ, ಸಾಂವಿಧಾನಿಕ ಔದಾತ್ಯವನ್ನು ಸಾಧಿಸುವ ಕನಸನ್ನು ಸಾಕಾರಗೊಳಿಸುವವರಾದರೂ ಯಾರು ? ಈ ಪ್ರಶ್ನೆಗೆ ಭ್ರಷ್ಟ ವ್ಯವಸ್ಥೆಯ ಭಾಗವಾಗಿರುವ, ಭಾಗಿದಾರರಾಗಿರುವ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಉತ್ತರಿಸಬೇಕಿದೆ.

ವಿದ್ಯಾರ್ಜನೆಯ ಕೆಳಹಂತದ ಬೋಧಕ ವೃಂದವಾಗಲೀ, ಉನ್ನತ ಹಂತದಲ್ಲಿ ಉತ್ತಮ ವೇತನ-ಸೌಲಭ್ಯಗಳನ್ನು ಹೊಂದಿರುವ ಬೋಧಕರಾಗಲೀ ಭಾರತೀಯ ಸಮಾಜವನ್ನು ಸಂವಿಧಾನದ ಚೌಕಟ್ಟಿನಲ್ಲಿ ಸಮ ಸಮಾಜವನ್ನಾಗಿ ಕಟ್ಟುವ ಕನಸನ್ನು ಸಾಕಾರಗೊಳಿಸುವಂತಾಗಬೇಕು. ಸಂವಿಧಾನವನ್ನು ಪಠಿಸಿದರೆ ಅಥವಾ ಎದೆಗವುಚಿಕೊಂಡರೆ ಇದು ಸಾಧ್ಯವಾಗುವುದಿಲ್ಲ. ಭಾರತದ ಸಂವಿಧಾನ ಅಪೇಕ್ಷಿಸುವ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾರ್ವತ್ರಿಕ ಶಿಕ್ಷಣವನ್ನು ತಲುಪಿಸುವ ಜೀವನ ಮೌಲ್ಯಗಳನ್ನು, ಶೈಕ್ಷಣಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಭಾರತೀಯ ಸಮಾಜವನ್ನು ಕಾಡುತ್ತಿರುವ ಜಾತಿ-ಮತ-ಧರ್ಮ ಮತ್ತಿತರ ಅಸ್ಮಿತೆಗಳಿಂದ ಮುಕ್ತವಾದ ಒಂದು ಮೌಲ್ಯಯುತ ಸಾಮಾಜಿಕ ಜ್ಞಾನಶಾಖೆಯಾಗಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸಬೇಕಿದೆ.

ಹೊರ ಸಮಾಜವನ್ನು ಅವನತಿಯತ್ತ ಕರೆದೊಯ್ಯುತ್ತಿರುವ ಮತದ್ವೇಷ, ಜಾತಿದ್ವೇಷ, ಕೋಮು ದ್ವೇಷ ಮತ್ತು ಸ್ತ್ರೀ ದ್ವೇಷದ ನೆಲೆಗಳನ್ನು ಬುಡಮಟ್ಟದಿಂದಲೇ ಕಿತ್ತೊಗೆಯುವ ಕೈಂಕರ್ಯದಲ್ಲಿ ಹಾಗೂ ತಳಸಮಾಜವನ್ನು ಮೌಢ್ಯತೆಯ ಕೂಪಕ್ಕೆ ದೂಡುವ ಮೂಲಕ ಸಮಾಜದಲ್ಲಿ ಸಾಂಪ್ರದಾಯಿಕತೆಯನ್ನು ಮತ್ತೊಮ್ಮೆ ಸ್ಥಾಪಿಸುವ ಪ್ರಯತ್ನಗಳನ್ನು ತಡೆಗಟ್ಟು ನಿಟ್ಟಿನಲ್ಲಿ ಶಿಕ್ಷಣ, ಶೈಕ್ಷಣಿಕ ಕೇಂದ್ರಗಳು ಹಾಗೂ ಇದನ್ನು ಪ್ರತಿನಿಧಿಸುವ ಬೋಧಕ ವೃಂದ ಪರಸ್ಪರ ಹೆಗಲು ಕೊಟ್ಟು ನಿಲ್ಲಬೇಕಿದೆ. ಆಗ ಮಾತ್ರವೇ ಭಾರತದ ಸಂವಿಧಾನ ಅಪೇಕ್ಷಿಸುವ, ಸ್ವಾತಂತ್ರ್ಯದ ಪೂರ್ವಸೂರಿಗಳು ಕನಸಿದ, ದೇಶದ ಮಹಾನ್‌ ಚಿಂತಕರು ಬಯಸಿದ ರಾಗದ್ವೇಷಗಳಿಲ್ಲದ ಸಮ ಸಮಾಜವೊಂದನ್ನು ಕಟ್ಟಲು ಸಾಧ್ಯವಾದೀತು. ಈ ಹಾದಿಯಲ್ಲಿ ಶಿಕ್ಷಣ ವಲಯದ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಈ ನೈತಿಕ ಜವಾಬ್ದಾರಿಯನ್ನು ಅರಿತು ನಡೆಯುವುದರ ಮೂಲಕವೇ ಶಿಕ್ಷಕರ ದಿನಾಚರಣೆಯನ್ನು ಸಾರ್ಥಕಗೊಳಿಸಬಹುದಾಗಿದೆ.

ಸಮಸ್ತ ಬೋಧಕ ಬಂಧುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

-೦-೦-೦-೦-

Tags: #Educationchallengeschallenges of copingchallenges of teachingchicago teachers unioneducation newsflorida teachers unionGovernment Teacherlatest on teachers daymedia productionnationwidepersonal financestories of teachersteacher day celebrationteacher shares challenges with new technology amid pandemicteacher shortageteacher's day celebration newsteacher's day specialteachersteachers day celebrationsteachers strike
Previous Post

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭ್ರೂಣ ಹತ್ಯೆ.. ಖಾಕಿ ಕಮಾಲ್‌

Next Post

ಮೂರು ದಿನದಿಂದ ಸುರಿಯುತ್ತಿರೋ ಮಳೆಗೆ ಕಂಗಾಲಾದ ರೈತ; ಕಟಾವಿಗೆ ಬಂದಿದ್ದ ಉದ್ದು, ಸೋಯಾ ನೀರಲ್ಲಿ ಮುಳುಗಡೆ

Related Posts

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
0

ಶಾಸಕರ ಅಭಿಪ್ರಾಯ ಪಕ್ಷದ ವರಿಷ್ಠರ ತೀರ್ಮಾನವಲ್ಲ, ನಾವಿಬ್ಬರೂ ವರಿಷ್ಠರ ತೀರ್ಮಾನಕ್ಕೆ ಬದ್ಧ ಮುಖ್ಯಮಂತ್ರಿಗಳ ಬದಲಾವಣೆ ಮಾಧ್ಯಮಗಳ ಸೃಷ್ಠಿ - ಊಹಾಪೋಹಗಳಿಗೆ ಆಸ್ಪದವಿಲ್ಲ-ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ,ಜುಲೈ 10 :...

Read moreDetails

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025
Next Post
ಮೂರು ದಿನದಿಂದ ಸುರಿಯುತ್ತಿರೋ ಮಳೆಗೆ ಕಂಗಾಲಾದ ರೈತ; ಕಟಾವಿಗೆ ಬಂದಿದ್ದ ಉದ್ದು, ಸೋಯಾ ನೀರಲ್ಲಿ ಮುಳುಗಡೆ

ಮೂರು ದಿನದಿಂದ ಸುರಿಯುತ್ತಿರೋ ಮಳೆಗೆ ಕಂಗಾಲಾದ ರೈತ; ಕಟಾವಿಗೆ ಬಂದಿದ್ದ ಉದ್ದು, ಸೋಯಾ ನೀರಲ್ಲಿ ಮುಳುಗಡೆ

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 
Top Story

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

by Chetan
July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

ಸಿಎಂ ಸಿದ್ದು ದಾಳಕ್ಕೆ ಡಿಕೆಶಿ ಥಂಡಾ..? – 5 ವರ್ಷ ನಾನೇ ಸಿಎಂ ಹೇಳಿಕೆಗೆ ಡಿಕೆ ಫುಲ್ ಸೈಲೆಂಟ್ ! 

July 11, 2025
ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada