• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಸಡಿಲವಾದ ಬೇರುಗಳೂ ಸರಪಳಿಯ ಗಟ್ಟಿ ಕೊಂಡಿಗಳೂ—-ನಾ ದಿವಾಕರ—-ಜೀವನ ಮೌಲ್ಯದಂತೆ ಪ್ರಜಾಪ್ರಭುತ್ವ ಬೇರುಬಿಡುವವರೆಗೂ ಅಸಮಾನತೆಗಳು ನಿವಾರಣೆಯಾಗುವುದಿಲ್ಲ

ನಾ ದಿವಾಕರ by ನಾ ದಿವಾಕರ
September 15, 2024
in Top Story, ಇದೀಗ, ಜೀವನದ ಶೈಲಿ, ವಾಣಿಜ್ಯ, ವಿದೇಶ
0
ಸಡಿಲವಾದ ಬೇರುಗಳೂ ಸರಪಳಿಯ ಗಟ್ಟಿ ಕೊಂಡಿಗಳೂ—-ನಾ ದಿವಾಕರ—-ಜೀವನ ಮೌಲ್ಯದಂತೆ ಪ್ರಜಾಪ್ರಭುತ್ವ ಬೇರುಬಿಡುವವರೆಗೂ ಅಸಮಾನತೆಗಳು ನಿವಾರಣೆಯಾಗುವುದಿಲ್ಲ
Share on WhatsAppShare on FacebookShare on Telegram

ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿ 2007ರಲ್ಲಿ ಅನುಮೋದಿಸಿದ ನಿರ್ಣಯಕ್ಕೆ ಅನುಗುಣವಾಗಿ ವಿಶ್ವದಾದ್ಯಂತ ಸೆಪ್ಟಂಬರ್‌ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ. ಆಡಳಿತಾರೂಢ ಸರ್ಕಾರಗಳಿಗೆ ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಕ್ರೋಢೀಕರಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಈ ದಿನವನ್ನು ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ಅಂದರೆ ಮೂಲತಃ ಇದು ಜನರು ಆಚರಿಸಬೇಕಾದ ದಿನ. ತನ್ಮೂಲಕ ಯಾವುದೇ ಆಡಳಿತ ಮಾದರಿ ಇದ್ದರೂ ಆಳ್ವಿಕೆಯನ್ನು ನಿರ್ವಹಿಸುವವರಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪುನರ್‌ ಮನನ ಮಾಡುವ ಒಂದು ಘನ ಉದ್ದೇಶ ಈ ಆಚರಣೆಯ ಹಿಂದಿದೆ. ಆದರೂ ಭಾರತದ ಪ್ರಸಕ್ತ ರಾಜಕಾರಣದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಸತತವಾಗಿ ಕುಸಿಯುತ್ತಿರುವುದರಿಂದ, ಸರ್ಕಾರಗಳೇ ಈ ದಿನವನ್ನು ಆಚರಿಸಲು ಮುಂದಾಗುತ್ತಿವೆ.

ADVERTISEMENT

ರಾಜ್ಯದ ಕಾಂಗ್ರೆಸ್‌ ಸರ್ಕಾರವೂ ಈ ಸಂದರ್ಭದಲ್ಲಿ ಬೀದರ್‌ನಿಂದ ಚಾಮರಾಜನಗರದವರೆಗೆ ಮಾನವ ಸರಪಳಿಯನ್ನು ರಚಿಸುವ ಬೃಹತ್‌ ಕಾರ್ಯಕ್ರಮವನ್ನು ಆಯೋಜಿಸಿದ್ದು ನಾಳೆ ರಾಜ್ಯದ ಉದ್ದಗಲಕ್ಕೂ ಜನರ ನಡುವೆ ಸೌಹಾರ್ದಯುತ ಸಂಬಂಧ ಬೆಸೆಯಲು ಸಿದ್ಧತೆ ನಡೆಸಿದೆ. ಕಾಕತಾಳೀಯವಾಗಿ ನೋಡಿದರೆ ಮಾನವ ಸರಪಳಿಯನ್ನು ಒಂದುಗೂಡಿಸುವ ಬೀದರ್‌ ಮತ್ತು ಚಾಮರಾಜನಗರ ಭೌಗೋಳಿಕವಾಗಿ ಎರಡು ಧೃವಗಳಲ್ಲಿದ್ದರೂ , ಪ್ರಜಾಪ್ರಭುತ್ವದ ಮೌಲ್ಯೀಕರಣದ ನೆಲೆಯಲ್ಲಿ ಎರಡೂ ಜಿಲ್ಲೆಗಳು ಆಳ್ವಿಕೆಯನ್ನು ಬಡಿದೆಬ್ಬಿಸುವಂತಹ ಘಟನೆಗಳಿಗೆ ಸಾಕ್ಷಿಯಾಗಿರುವುದು ಕಾಣುತ್ತದೆ. ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಪ್ರಜಾಪ್ರಭುತ್ವ ಎನ್ನುವ ಉನ್ನತ ಆದರ್ಶ ತಲುಪಿದೆಯೇ ಎಂದು ಮೌಲ್ಯಮಾಪನ ಮಾಡಲು ಈ ಎರಡೂ ಜಿಲ್ಲೆಗಳು ನೆರವಾಗುತ್ತವೆ.

ಬೆಸೆಯುವ ಕೈಗಳ ಹಿಂದೆ ಅಮಾನುಷತೆ

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗ್ರಾಮವೊಂದರ ಹೆಣ್ಣುಮಗಳ ಮೃತ ದೇಹ ಊರ ಹೊರವಲಯದ ಪೊದೆಗಳ ನಡುವೆ ದುರವಸ್ಥೆಯಲ್ಲಿ ಸಿಕ್ಕಿದ್ದು, ಆಗಸ್ಟ್‌ 29ರಿಂದಲೇ ಕಾಣೆಯಾಗಿದ್ದ 19 ವರ್ಷದ ದಲಿತ ಹೆಣ್ಣುಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಕನ್ನಡದ ವಿದ್ಯುನ್ಮಾನ ಸುದ್ದಿಮನೆಗಳನ್ನು ಸಂಪೂರ್ಣವಾಗಿ ದರ್ಶನ್‌ ಮತ್ತು ಮುಡಾ ಆಕ್ರಮಿಸಿದ್ದರಿಂದ ಈ ಘಟನೆ ಬೆಳಕಿಗೆ ಬರಲೇ ಇಲ್ಲ. ಕೊಲ್ಕತ್ತಾದ ಆರ್‌ಜಿ ಕಾರ್‌ ಆಸ್ಪತ್ರೆಯ ಘಟನೆಯ ನಡುವೆಸ ಸಹಜವಾಗಿ ಇದು ನಗಣ್ಯವಾಗಿ ಹೋದದ್ದೂ ಸತ್ಯ.

ದಕ್ಷಿಣದ ಚಾಮರಾಜನಗರದ ಸಮೀಪ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಸಮೀಪದ ಗಟ್ಟವಾಡಿ ಗ್ರಾಮದಲ್ಲಿ ಮತ್ತೋರ್ವ ದಲಿತ ಮಹಿಳೆ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದಾಳೆ. ಈಕೆಯ ಶವವನ್ನು ಊರಾಚೆಯ ಬಾಳೆ ತೋಟದಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಗುರುತಿಸಲಾಗಿದೆ. ಈ ಘಟನೆಯೂ ಸಹ ದಲಿತ ಸಂಘಟನೆಗಳ ಪ್ರತಿಭಟನೆಗೆ ಸೀಮಿತವಾಗಿದ್ದು ಸಮಾಜದ ಅಂತರ್‌ ಪ್ರಜ್ಞೆಯನ್ನಾಗಲೀ, ಆಡಳಿತ ವ್ಯವಸ್ಥೆಯನ್ನಾಗಲೀ ಕೊಂಚವೂ ಅಲುಗಾಡಿಸಿಲ್ಲ. ಚಾಮರಾಜನಗರ ಎಂದರೆ ಮತ್ತೆ ಮತ್ತೆ ನೆನಪಾಗುವುದು ನಾಲ್ಕು ವರ್ಷಗಳ ಹಿಂದೆ 35 ಅಮಾಯಕರನ್ನು ಬಲಿತೆಗೆದುಕೊಂಡ ಜಿಲ್ಲಾಸ್ಪತ್ರೆಯ ಆಕ್ಷಿಜನ್‌ ದುರಂತ. ಈ ಮಡಿದವರಿಗೆ ಸಂತಾಪ, ಕುಟುಂಬಗಳಿಗೆ ನಗದು ಪರಿಹಾರ, ಒಂದೆರಡು ಸಾಂತ್ವನದ ಒಣಮಾತುಗಳನ್ನು ಹೊರತುಪಡಿಸಿ ʼ ನ್ಯಾಯ ʼ ಎನ್ನಲಾಗುವ ಯಾವುದೇ ಸೂಕ್ಷ್ಮಸುಳಿವನ್ನೂ ಈವರೆಗೂ ಕಾಣಲಾಗಿಲ್ಲ. ಏಕೆಂದರೆ ನಾಲ್ಕು ವರ್ಷ ಕಳೆದರೂ ಈ ಅಮಾನುಷ ಘಟನೆಯ ಅಪರಾಧಿಗಳನ್ನು ಗುರುತಿಸಲಾಗಿಲ್ಲ.

ರಾಜ್ಯ ಸರ್ಕಾರ ಪ್ರಾಯೋಜಿತ ಮಾನವ ಸರಪಳಿಯ ಎರಡು ತುದಿಗಳನ್ನು ಸಂಪರ್ಕಿಸುವ ಈ ಎರಡು ಜಿಲ್ಲೆಗಳ ನಡುವೆಯೇ ರಾಜ್ಯದ ಜನತೆ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ದಲಿತ ಹೆಣ್ಣುಮಕ್ಕಳ ಮೇಲಿನ ಅಮಾನುಷ ಕ್ರೌರ್ಯಗಳನ್ನು ಪ್ರತ್ಯಕ್ಷವಾಗಿ ಕಂಡಿದೆ. ಮಾನವ ಸರಪಳಿಯು ಹಾದು ಹೋಗುವ ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ದಲಿತ ಮಹಿಳೆಗೆ ಜಾತಿಯ ಕಾರಣಕ್ಕೇ ವಿಷಪ್ರಾಶನ ಮಾಡಿ ಕೊಲ್ಲಲಾಗಿದೆ. ಇತ್ತೀಚಿನ ಮತ್ತೊಂದು ಘಟನೆಯಲ್ಲಿ ಯಾದಗಿರಿ ಜಿಲ್ಲೆಯ ಹಣಸಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ದೂರು ಸಲ್ಲಿಸಿದ ಕಾರಣಕ್ಕಾಗಿಯೇ ಆ ದಲಿತ ಕುಟುಂಬದ ಮೇಲೆ ಗ್ರಾಮದ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹೇರಿರುವುದು ವರದಿಯಾಗಿದೆ. ಸವರ್ಣೀಯ ಯುವಕನೊಬ್ಬ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿರುವ ಈ ಪ್ರಕರಣದಲ್ಲಿ ʼಸಾಮಾಜಿಕ ಬಹಿಷ್ಕಾರ ʼ ಎಂಬ ಅರಣ್ಯ ನ್ಯಾಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಸರಪಳಿಯ ಕೊಂಡಿಗಳ ನಡುವೆ !!!

25 ಲಕ್ಷ ಜನರು ಕೈಜೋಡಿಸುವ 2500 ಕಿಲೋಮೀಟರ್‌ ವ್ಯಾಪ್ತಿಯ ಮಾನವ ಸರಪಳಿ ಪ್ರಜಾಪ್ರಭುತ್ವ ಇನ್ನೂ ಉಸಿರಾಡುತ್ತಿದೆ ಎಂದು ನೆನಪಿಸುವ ಒಂದು ಉತ್ಸವದಂತೆ ನಡೆಯಲಿದೆ. ಆದರೆ ಭಾರತದ ಸಂವಿಧಾನ ರಚಯಿತರು, ಸ್ವಾತಂತ್ರ್ಯದ ಪೂರ್ವಸೂರಿಗಳು, ಕರ್ನಾಟಕದ ದಾರ್ಶನಿಕ ಗಣ್ಯರನೇಕರು ಕನಸಿದ ಪ್ರಜಾಪ್ರಭುತ್ವದ ಮೌಲ್ಯಗಳನ್ನಾಗಲೀ, ಸೌಹಾರ್ದತೆ-ಸಮನ್ವಯತೆ ಮತ್ತು ಭ್ರಾತೃತ್ವವನ್ನು ಸಾರುವ ಸಾಂವಿಧಾನಿಕ ನೈತಿಕತೆಯನ್ನಾಗಲೀ ನಮ್ಮ ಸಮಾಜ ಉಳಿಸಿಕೊಂಡಿದೆಯೇ ? ಈ ಪ್ರಶ್ನೆಗೆ ನಾಗಮಂಗಲದ ಮತಾಂಧ ಶಕ್ತಿಗಳು ಉತ್ತರ ನೀಡಿವೆ. ಪ್ರಜಾಪ್ರಭುತ್ವ ಎನ್ನುವ ಒಂದು ಉದಾತ್ತ ಮೌಲ್ಯವನ್ನು ಆಳ್ವಿಕೆಯ ಕೋಶಗಳೊಳಗೆ ಹುದುಗಿಸಿಟ್ಟು, ಸಂವಿಧಾನದ ಗ್ರಾಂಥಿಕ ಅನುಸರಣೆಯ ಮೂಲಕ ಸಾಧಿಸಲಾಗುವುದಿಲ್ಲ ಎಂಬ ವಾಸ್ತವವನ್ನು ಈ ಘಟನೆಗಳು ಮತ್ತೆಮತ್ತೆ ನೆನಪಿಸುತ್ತಿಲ್ಲವೇ ?

2024ರಲ್ಲಿ ಕರ್ನಾಟಕ ಮೂರು ಮಹತ್ತರ ಬೆಳವಣಿಗೆಗಳನ್ನು ಪುನರ್‌ ಮನನ ಮಾಡಿಕೊಳ್ಳುತ್ತಿದೆ. ಮೊದಲನೆಯದು ಕರ್ನಾಟಕ ಎಂಬ ನಾಮಕರಣ ಮಾಡಿ 50 ವರ್ಷಗಳನ್ನು ಪೂರೈಸುತ್ತಿದೆ. ಎರಡನೆಯದು ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರ ಜನಾಂದೋಲನಗಳಿಗೆ ನಾಂದಿ ಹಾಡಿದ, ಸಂವಿಧಾನದ ಅರಿವು ಮತ್ತು ಪ್ರಜಾಪ್ರಭುತ್ವದ ಪ್ರಜ್ಞೆಯನ್ನು ಉದ್ಧೀಪನಗೊಳಿಸಲು ಉತ್ತೇಜಿಸಿದ ದಲಿತ ಚಳುವಳಿ 50 ವರ್ಷಗಳನ್ನು ಪೂರೈಸಿದೆ. ಮೂರನೆಯ ಬಹುಮುಖ್ಯ ಅಂಶ ಎಂದರೆ ಕರ್ನಾಟಕವನ್ನು “ ಸರ್ವಜನಾಂಗದ ಶಾಂತಿಯ ತೋಟ ” ವನ್ನಾಗಿ ಕಾಣುವ ಕನಸು ಕಟ್ಟಿದ ರಾಷ್ಟ್ರಕವಿ ಕುವೆಂಪು ಯುವ ಸಮೂಹಕ್ಕೆ “ ನಿರಂಕುಶಮತಿಗಳಾಗಿ ” ಎಂದು ಕರೆ ನೀಡಿ ವಿಚಾರಕ್ರಾಂತಿಗೆ ಆಹ್ವಾನ ನೀಡಿ ಐದು ದಶಕಗಳು ಸಂದಿವೆ. ಈ ಮೂರೂ ಚಾರಿತ್ರಿಕ ಪ್ರಸಂಗಗಳನ್ನು ವಸ್ತುನಿಷ್ಠವಾಗಿ ಅವಲೋಕನ ಮಾಡಿದರೆ, ಕರ್ನಾಟಕದ ಸಾಮಾನ್ಯ ಜನತೆ ಪಡೆದಿರುವುದೇನು ಅಥವಾ ರಾಜ್ಯದ ಪ್ರಜ್ಞಾವಂತ-ಪ್ರಬುದ್ಧ ಸಮಾಜ ಸಾಧಿಸಿರುವುದೇನು ಎಂಬ ಪ್ರಶ್ನೆಯೂ ಎದುರಾಗುತ್ತದೆ.

ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವ ಧೀಶಕ್ತಿ ನಮ್ಮಲ್ಲಿದೆಯೇ ಅಥವಾ ನಿಸ್ಪೃಹತೆಯಿಂದ ಮಾನವೀಯ ನೆಲೆಯಲ್ಲಿ ನಿಂತು ಉತ್ತರಿಸುವ ಕ್ಷಮತೆ ನಮ್ಮಲ್ಲಿ ಉಳಿದಿದೆಯೇ ? ಈ ಪ್ರಶ್ನೆಗೆ ನಾಳೆ ಮಾನವ ಸರಪಳಿಯಲ್ಲಿ ಬೆಸೆದುಕೊಳ್ಳುವ ಪ್ರತಿಯೊಂದು ಮನಸ್ಸಿನಲ್ಲೂ ಉತ್ತರ ಶೋಧಿಸಬೇಕಾಗುತ್ತದೆ. ಸಂವಿಧಾನವನ್ನು ಗ್ರಾಂಥಿಕವಾಗಿ ಆರಾಧಿಸಿ, ಪ್ರಜಾಪ್ರಭುತ್ವವನ್ನು ಆಡಳಿತದ ಪುಟಗಳಲ್ಲಿ ಜಾರಿಗೊಳಿಸುವ ಭಾರತದ ರಾಜಕೀಯ ವ್ಯವಸ್ಥೆ, ತಳಮಟ್ಟದ ಸಮಾಜಕ್ಕೆ ಹಾಗೂ ಅಲ್ಲಿ ನಿತ್ಯ ದೌರ್ಜನ್ಯ ಎದುರಿಸುತ್ತಿರುವ ಅಸಂಖ್ಯಾತ ಶೋಷಿತ-ವಂಚಿತ ಜನತೆಗೆ , ಪ್ರಜಾಪ್ರಭುತ್ವದ ಔದಾತ್ಯವನ್ನು ತಲುಪಿಸಿದೆಯೇ ಎಂಬ ಪ್ರಶ್ನೆಗೆ ನಾಳೆ ಬೆಸೆಯಲಿರುವ ಪ್ರತಿಯೊಂದು ಮನಸ್ಸೂ ಸಹ ಉತ್ತರಿಸಬೇಕಿದೆ. ಇದು ಸುಲಭವಲ್ಲ ಎನ್ನುವುದು ಕಟು ವಾಸ್ತವ.

ಏಕೆಂದರೆ 77 ವರ್ಷಗಳ ಸ್ವತಂತ್ರ ಗಣತಂತ್ರ ಮತ್ತು ಪ್ರಜಾಪ್ರಭುತ್ವದ ಆಳ್ವಿಕೆಯ ಹೊರತಾಗಿಯೂ, ಪ್ರಾಚೀನ ಸಮಾಜದ ʼ ಸಾಮಾಜಿಕ ಬಹಿಷ್ಕಾರ ʼ ಎಂಬ ನ್ಯಾಯ ವ್ಯವಸ್ಥೆ ನಮ್ಮಲ್ಲಿ ಜಾರಿಯಲ್ಲಿದೆ. ಸಂವಿಧಾನದ ಅಡಿಯಲ್ಲೇ ಈ ವ್ಯವಸ್ಥೆ ಪರ್ಯಾಯವಾಗಿ ದಲಿತ ಸಮುದಾಯಗಳನ್ನು, ಅದರಲ್ಲೂ ದಲಿತರನ್ನು, ಮತ್ತಷ್ಟು ಅಂಚಿಗೆ ತಳ್ಳುತ್ತಿದೆ. ಕೊಪ್ಪಳ ಜಿಲ್ಲೆಯಲ್ಲೇ ಕೆಲವು ವರ್ಷಗಳ ಹಿಂದೆ ದಲಿತ ಹಸುಳೆ ದೇವಾಲಯ ಪ್ರವೇಶಿಸಿದ್ದಕ್ಕಾಗಿ ಸಾಮಾಜಿಕ ಬಹಿಷ್ಕಾರ ಹೇರಿದ್ದ ಘಟನೆ ಇನ್ನೂ ಹಸಿರಾಗಿದೆ. ಮನುಷ್ಯ ಸಂಬಂಧಗಳನ್ನು ಶಾಶ್ವತವಾಗಿ ಬೆಸೆಯುವ ವಿವಾಹ ಎಂಬ ಪವಿತ್ರಬಂಧನವನ್ನೂ ಸಹ ಲವ್‌ ಜಿಹಾದ್‌ ಎಂದು ವ್ಯಾಖ್ಯಾನಿಸುವ ಮತಾಂಧ ಶಕ್ತಿಗಳು ಒಂದೆಡೆಯಾದರೆ, ಮತ್ತೊಂದು ದಿಕ್ಕಿನಲ್ಲಿ ಅಸ್ಪೃಶ್ಯತೆಯ ಪಿಡುಗು ವಿವಾಹ ಸಂಬಂಧಗಳನ್ನು ಶಾಶ್ವತವಾಗಿ ಕೊನೆಗೊಳಿಸುವ ಅಸ್ತ್ರವಾಗಿ ಪರಿಣಮಿಸಿದೆ.

ಚಾರಿತ್ರಿಕ ಅಪಮಾನಗಳ ಹೊತ್ತು

ಈ ಸಮಸ್ಯೆ ಇಂದು ಉದ್ಭವಿಸಿರುವುದಲ್ಲ ಅಥವಾ ವರ್ತಮಾನದ ರಾಜಕಾರಣದಿಂದ ಹುಟ್ಟಿರುವ ಸಂಕೀರ್ಣ ಸಮಸ್ಯೆಯೂ ಅಲ್ಲ. ಆಡಳಿತಾರೂಢ ಸರ್ಕಾರಗಳ ಆಡಳಿತ ಅಸೂಕ್ಷ್ಮತೆ ಮತ್ತು ನಿಷ್ಕ್ರಿಯತೆ ಇಂತಹ ಘಟನೆಗಳಿಗೆ ಉತ್ತೇಜನಕಾರಿಯಾಗುವುದು ವಾಸ್ತವವಾದರೂ, ಮೂಲತಃ ಇದು ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಶ್ರೇಣೀಕೃತ ಸಮಾಜ ಮತ್ತು ಅದಕ್ಕೆ ಪೂರಕವಾಗಿ ಬೆಳೆದುಬಂದಿರುವ ಪಿತೃಪ್ರಧಾನತೆ, ಊಳಿಗಮಾನ್ಯ ಧೋರಣೆಯ ಫಲ. ಸಂವಿಧಾನದ ಗ್ರಾಂಥಿಕ ಅನುಸರಣೆಯಾಗಲೀ, ಪ್ರಜಾಪ್ರಭುತ್ವದ ನಿತ್ಯ ಪಠಣವಾಗಲೀ ಈ ಚಾರಿತ್ರಿಕ ಬೇರುಗಳನ್ನು ಸುಲಭವಾಗಿ ಅಲುಗಾಡಿಸುವುದಿಲ್ಲ. ಏಕೆಂದರೆ ಈ ಪ್ರಾಚೀನ ಮನಸ್ಥಿತಿ ಮತ್ತು ಮಧ್ಯಕಾಲೀನ ತಾತ್ವಿಕ ಚಿಂತನೆಗಳು ನಮ್ಮ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿದ್ದು, ಪ್ರಜಾಪ್ರಭುತ್ವದ ಬೇರುಗಳನ್ನು ನಿರಂತರವಾಗಿ ಸಡಿಲಗೊಳಿಸುತ್ತಿವೆ.

ಪ್ರಜಾಪ್ರಭುತ್ವ ದಿನವನ್ನು ಆಚರಿಸುವ ನಿಟ್ಟಿನಲ್ಲಿ ಪರಸ್ಪರ ಕೈಜೋಡಿಸುವ ಲಕ್ಷಾಂತರ ಮನಸುಗಳಲ್ಲಿ ಈ ಸಡಿಲವಾದ ಬೇರುಗಳು ಆತಂಕ-ಕಾಳಜಿಯನ್ನೂ ಸೃಷ್ಟಿಸುತ್ತಿದೆ. ಅಧಿಕಾರ ರಾಜಕಾರಣ ತನ್ನೆಲ್ಲಾ ಮೌಲ್ಯಗಳನ್ನೂ ಕಳೆದುಕೊಂಡು ಬೆತ್ತಲಾಗಿ ನಿಂತಿದೆ, ಧಾರ್ಮಿಕ-ಆಧ್ಯಾತ್ಮಿಕ ಸಂಸ್ಥೆಗಳು ತಮ್ಮ ಅಂತಃಸತ್ವವನ್ನು ಕಳೆದುಕೊಂಡು ಮಾರುಕಟ್ಟೆಯ ಜಗುಲಿಗಳಾಗಿವೆ, ತಳಮಟ್ಟದ ಸಮಾಜಕ್ಕೆ ದನಿಗೂಡಿಸಬೇಕಾದ ಅನೇಕ ಜನಪರ ಆಂದೋಲನಗಳು ಅಸ್ಮಿತೆಗಳ ನೆಲೆಯಲ್ಲಿ ಛಿದ್ರವಾಗಿ ಅಧಿಕಾರ ಕೇಂದ್ರಗಳಲ್ಲಿ ಲೀನವಾಗಿವೆ, ಈ ಜಟಿಲ ಸಿಕ್ಕುಗಳನ್ನು ಆರಂಭದಿಂದಲೇ ಬಿಡಿಸುವ ಜವಾಬ್ದಾರಿ ಇರುವ ಶೈಕ್ಷಣಿಕ ವಲಯ ಮೇಲಿನಿಂದ ಕೆಳಗಿನವರೆಗೆ ಭ್ರಷ್ಟಾಚಾರದ ಆಗರವಾಗಿದ್ದು ವಾಣಿಜ್ಯೀಕರಣದ ಮೂಲಕ ಮಾರುಕಟ್ಟೆಯ ಸರಕುಗಳ ಸಂಗ್ರಹಾಗಾರಗಳಾಗಿವೆ. ಈ ಆತಂಕ ಕಳಕಳಿಯ ನಡುವೆಯೇ ಇಂದು ರಾಜ್ಯದ 25 ಲಕ್ಷ ಜನರು “ ಮಾನವ ಸರಪಳಿ ”ಯನ್ನು ರಚಿಸುತ್ತಿದ್ದಾರೆ.

ಈ ಮಾನವ ಸರಪಳಿಯ ಪ್ರತಿಯೊಂದು ಕೊಂಡಿಯೂ, ಪ್ರತಿಯೊಂದು ಹಂತದಲ್ಲೂ, ಸಡಿಲಗೊಂಡ ಪ್ರಜಾಪ್ರಭುತ್ವದ ಬೇರುಗಳನ್ನು ಪುನರುಜ್ಜೀವನಗೊಳಿಸುವ ಸಂಕಲ್ಪದೊಂದಿಗೆ ಈ ದಿನವನ್ನು ಸಾರ್ಥಕಗೊಳಿಸಬೇಕಿದೆ. ಇಲ್ಲವಾದಲ್ಲಿ ಇದೂ ಒಂದು ಉತ್ಸವವಾಗಿ 2025ರ ಸೆಪ್ಟಂಬರ್‌ 15ಕ್ಕೆ ಕಾದು ನೋಡುವಂತಾಗುತ್ತದೆ. ಚುನಾವಣಾ ರಾಜಕೀಯದಿಂದಾಚೆಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕಾದ ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮ ನಡುವೆ ಇರುವುದನ್ನು ಗುರುತಿಸುತ್ತಲೇ ಅದನ್ನು ವ್ಯವಸ್ಥಿತವಾಗಿ ತಲುಪಿಸುವ ನಿಟ್ಟಿನಲ್ಲಿ ಇಡೀ ಸಮಾಜ ಕಾರ್ಯೋನ್ಮುಖವಾಗಬೇಕಿದೆ. “ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ”ಯ ಸಾರ್ಥಕತೆ ಇದರಲ್ಲೇ ಅಡಗಿದೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಗಣೇಶ ವಿಸರ್ಜನೆ ವೇಳೆ ದುರಂತ.. ಮೂವರು ಸಾವು

Next Post

ಮಂಗಳೂರಲ್ಲಿ ಇವತ್ತು ಏನ್‌ ಆಗುತ್ತೆ.. ಹಿಂದೂ – ಮುಸ್ಲಿಂ ಸವಾಲು..!

Related Posts

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
0

ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಗೆ (KS Eshwarappa) ಲೋಕಾಯುಕ್ತ (Lokayukta) ಶಾಕ್ ಎದುರಾಗಿದೆ. ಈ ಹಿಂದೆ ಬಿಜೆಪಿ (Bjp) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಈಶ್ವರಪ್ಪ ಅವರ...

Read moreDetails
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025
Next Post
ಮಂಗಳೂರಲ್ಲಿ ಇವತ್ತು ಏನ್‌ ಆಗುತ್ತೆ.. ಹಿಂದೂ – ಮುಸ್ಲಿಂ ಸವಾಲು..!

ಮಂಗಳೂರಲ್ಲಿ ಇವತ್ತು ಏನ್‌ ಆಗುತ್ತೆ.. ಹಿಂದೂ - ಮುಸ್ಲಿಂ ಸವಾಲು..!

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada