ನಾಗಮಂಗಲ ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಪ್ರತಿಭಟನೆ ಮಾಡಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಈದ್ ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ ಅಂದಿದ್ದರು. ಇದೀಗ ಶರಣ್ ಪಂಪ್‌ವೆಲ್‌ಗೆ ಓಪನ್ ಚಾಲೆಂಜ್ ಹಾಕಿರುವ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್, ಶರಣ್ ಪಂಪ್‌ವೆಲ್ ಧಮ್ ಇದ್ರೆ ಬಿಸಿರೋಡ್ ಮೆರವಣಿಗೆ ತಡಿ ಎಂದು ಸವಾಲು ಹಾಕಿದ್ದಾರೆ.
ವಾಟ್ಸಪ್ ಆಡಿಯೋ ಮೂಲಕ ಧಮ್ ಇದ್ರೆ ಈದ್ ಮಿಲಾದ್ ಮೆರವಣಿಗೆ ತಡಿ ಎಂದು ಸವಾಲ್ ಹಾಕಿದ್ದು, ಮೆರವಣಿಗೆ ಸಾಗುವಾಗ ಧಮ್ ಇದ್ರೆ ಬಂದು ನಿಲ್ಲು, ನೀನು ಯಾವ ಸ್ಥಳಕ್ಕೆ ಬರ್ತಿ ಅಂತಾ ಹೇಳು, ಸೋಮವಾರ ಏಳು ಗಂಟೆಗೆ ಮೆರವಣಿಗೆ ನಡೆಯುತ್ತದೆ. ನೀನು ಬಂದು ಮೆರವಣಿಗೆ ಆಗುವಾಗ ಧಮ್ ಇದ್ರೆ ನಿಲ್ಲು ಎಂದು ವಾಟ್ಸಪ್‌ನಲ್ಲಿ ಆಡಿಯೋ ಸವಾಲು ಹಾಕಿದ್ದಾನೆ ಮಹಮ್ಮದ್ ಷರೀಫ್.
ಮಹಮ್ಮದ್ ಷರೀಫ್ ಸವಾಲನ್ನು ಸ್ವೀಕರಿಸಿ ಬಿಸಿ ರೋಡ್ ಚಲೋಗೆ ಕರೆ ಕೊಟ್ಟಿದೆ ಹಿಂದೂ ಸಂಘಟನೆ. ವಿಶ್ವ ಹಿಂದೂ ಪರಿಷತ್, ಭಜರಂಗ ದಳದಿಂದ ಬಿಸಿರೋಡ್ ಚಲೋ ಹಮ್ಮಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕಿನ ಬಿಸಿರೋಡ್ ಮೆರವಣಿಗೆ ಸಾಗುವಾಗ ಮೆರವಣಿಗೆ ಎದುರು ನಿಲ್ಲುವ ಸವಾಲು ಸ್ವೀಕರಿಸಿದ್ದಾನೆ ಶರಣ್ ಪಂಪ್‌ವೆಲ್. ಸಾಮಾಜಿಕ ಜಾಲತಾಣ ಮೂಲಕ ಹಿಂದೂ ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.
ಬಂಟ್ವಾಳ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಿದ್ದು, ಆಡಿಯೋ ಸವಾಲು ಹಾಕಿರುವ ಮಹಮ್ಮದ್ ಷರಿಫ್ ವಿರುದ್ಧ FIR ದಾಖಲಾಗಿದ್ದು, ಷರೀಫ್‌ನನ್ನು ವಶಕ್ಕೆ ಪಡೆದ ಬಂಟ್ವಾಳ ಪೊಲೀಸರು ಮುಂದಾಗಿದ್ದಾರೆ. ಕರ್ನಾಟಕದ ಕರಾವಳಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್ರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.