ದೆಹಲಿ ಗಲಭೆ ಪ್ರಕರಣ ಕುರಿತು ಪೊಲೀಸರ ತನಿಖೆಯನ್ನು ನಿಷ್ಕಾಳಜಿಯುತ ಹಾಗೂ ಪ್ರಹಸನದಂತಿದೆ ಎಂದಿರುವ ನ್ಯಾಯಾಲಯವು ದೆಹಲಿ ಪೋಲೀಸರಿಗೆ 25 ಸಾವಿರ ರೂ ದಂಡ ವಿಧಿಸುವ ಮೂಲಕ ಚಾಟಿಯೇಟು ಬೀಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಅವರು ದಂಡದ ಮೊತ್ತವನ್ನು ಭಜನ ಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಆತನ ಮೇಲಾಧಿಕಾರಿಗಳಿಂದ ವಸೂಲಿ ಮಾಡುವಂತೆ ಆದೇಶಿಸಿದ್ದು, ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯವನ್ನು ನಿಭಾಯಿಸುವಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ ಗಲಭೆಯ ಸಂದರ್ಭದಲ್ಲಿ ಗುಂಡೇಟಿನಿಂದ ಎಡಗಣ್ಣನ್ನು ಕಳೆದುಕೊಂಡಿದ್ದ ಮೊಹಮ್ಮದ್ ನಾಸೀರ್ ಎಂಬಾತನ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸುವಂತೆ ಮ್ಯಾಜಿಸ್ಟೀರಿಯಲ್ ಕೋರ್ಟ್ ನೀಡಿದ ಆದೇಶವನ್ನು ಪೊಲೀಸರು ಈ ಮೊದಲು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ಧರು.
ಆದಾಗ್ಯೂ ತನಿಖಾಧಿಕಾರಿಗಳು, ಈಗಾಗಲೇ ಒಂದು ಎಫ್.ಐ.ಆರ್ ನ್ನು ದಾಖಲಿಸಿರುವುದರಿಂದ ಮತ್ತು ಗುಂಡುಹಾರಿಸಿದ್ದ ನೆಂದು ಹೇಳಲಾದ ವ್ಯಕ್ತಿಯು ಆ ಸಂದರ್ಭದಲ್ಲಿ ದೆಹಲಿಯಲ್ಲಿ ಉಪಸ್ಥಿತನಿದ್ದ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲದೆ ಇರುವುದರಿಂದ ಮತ್ತೊಂದು ಪ್ರತ್ಯೇಕ ಎಫ್.ಐ.ಆರ್ ನ್ನು ದಾಖಲಿಸುವ ಅಗತ್ಯವಿಲ್ಲವೆಂದು ವಾದಿಸಿದ್ದರು.
ಈ ಕುರಿತ ತನಿಖೆಯಲ್ಲಿ ಪೊಲೀಸರ ದಕ್ಷತೆ ಹಾಗೂ ನ್ಯಾಯಪರತೆಯ ಕೊರತೆಯನ್ನು ಖಂಡಿಸಿದ ನ್ಯಾಯಾಧೀಶರು ಈ ತನಿಖೆಯು ಬೇಕಾಬಿಟ್ಟಿಯಾಗಿ ನಿಷ್ಕಾಳಜಿಯಿಂದ ನಡೆದ ಪ್ರಹಸನದಂತೆ ಇದೆ ಎಂದು ಅಭಿಪ್ರಾಯಪಟ್ಟರು.
ತನಿಖಾ ಮಟ್ಟವನ್ನು ಗಮನಿಸಿ ತನಿಖೆಯ ಮೇಲ್ವಿಚಾರಣೆ ನಡೆಸಲು ಹಾಗೂ ನ್ಯಾಯಾಲಯದ ಗಮನಕ್ಕೆ ತಂದು ಸೂಕ್ತ ಪರಿಹಾರಾತ್ಮಕ ಕ್ರಮಕೈಗೊಳ್ಳಲು ಈ ಆದೇಶದ ಪ್ರತಿಯನ್ನು ದೆಹಲಿ ಪೊಲೀಸ್ ಆಯುಕ್ತರಿಗೆ ತಲುಪಿಸುವಂತೆ ಜುಲೈ 13ರ ಆದೇಶದಲ್ಲಿ ತಿಳಿಸಲಾಗಿದೆ.
ಸಂತ್ರಸ್ತ ಮೊಹಮ್ಮದ್ ನಾಸೀರ್ ತನ್ನ ದೂರಿನಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಲಿಕ್ಕಾಗಿ ಕಾನೂನಿನಲ್ಲಿ ಲಭ್ಯವಿರುವ ಪರಿಹಾರಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಮುಕ್ತರಾಗಿದ್ದಾರೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಸಂತ್ರಸ್ತರ ಪರ ವಕೀಲ ಮೆಹಮೂದ್ ಬಾಷಾ ರವರ ಪ್ರಕಾರ “ನರೇಶ್ ತ್ಯಾಗಿ ಎಂಬಾತ ನಾಸಿರ್ ನ ಮೇಲೆ ಗುಂಡು ಹಾರಿಸಿದ ನೆಂದು ಹೇಳಲಾಗಿದ್ದು ಅದರ ಪರಿಣಾಮವಾಗಿ ಗುಂಡೇಟಿನಿಂದ ನಾಸಿರ್ ನ ಎಡಗಣ್ಣಿಗೆ ಗಾಯವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಈ ಕುರಿತು ಪೊಲೀಸರಿಗೆ ಸಾಕಷ್ಟು ಮನವಿ ಮಾಡಿದರೂ, ಎಫ್ಐಆರ್ ದಾಖಲಿಸದಿದ್ದರಿಂದ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಮೊರೆ ಹೋಗಬೇಕಾಯಿತು”ಎಂದು ಹೇಳಿದ್ದಾರೆ.