‘ ಡಾರ್ಕ್‍ನೆಸ್ ಅಟ್ ನೂನ್ ‘ ಈ ಕೃತಿಯನ್ನು ಆರ್ಥರ್ ಕೋಸ್ಲರ್ ಬಿಡುಗಡೆ ಮಾಡಿ 81 ವರ್ಷಗಳೇ ಕಳೆದಿವೆ. ಸ್ಟಾಲಿನ್ ಆಳ್ವಿಕೆಯಲ್ಲಿ ಸೋವಿಯತ್ ಸಂಘದಲ್ಲಿ ನಡೆದ ಶೋಷಣೆ ಮತ್ತು ದಮನದ ಹಿನ್ನೆಲೆಯಲ್ಲಿ ರಚಿಸಲಾದ ಕೃತಿ ಇದು. ಈ ಅವಧಿಯಲ್ಲಿ, ಇತರ ರಾಜಕೀಯ ಬೆಳವಣಿಗೆಗಳೊಂದಿಗೇ, ರಾಜಕೀಯ ದಮನ, ಪೊಲೀಸ್ ಬೇಹುಗಾರಿಕೆ, ವಿರೋಧಿಗಳ ಬಗ್ಗೆ ಶಂಕೆ, ಜೈಲು ಶಿಕ್ಷೆ, ಮರಣದಂಡನೆ ಇವೆಲ್ಲವೂ ತೀವ್ರವಾಗಿದ್ದವು. ಹಲವು ದಶಕಗಳ ನಂತರ, ಸಾವಿರಾರು ಮೈಲು ದೂರದ ಭಾರತದಲ್ಲೂ ಒಂದು ಮಧ್ಯಾಹ್ನ ಅಂಧಕಾರ ಆವರಿಸಿದಂತಾಗಿದೆ. ಫಾದರ್ ಸ್ಟ್ಯಾನ್ ಸ್ವಾಮಿ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸಂದರ್ಭದಲ್ಲಿ. ಕೋಸ್ಲರ್ ತನ್ನ ಕೃತಿಯಲ್ಲಿ ಚಿತ್ರಿಸಿದ್ದ ಭೀಕರ ಜಗತ್ತನ್ನೇ ಹೋಲುವಂತೆ ಕಾಣುವ ಈ ಸಂದರ್ಭದಲ್ಲಿ, ಸ್ಟ್ಯಾನ್ ಸ್ವಾಮಿ ಅವರ ಸಾವು ಮೇಲ್ನೋಟಕ್ಕೆ ಕಾಣುವಂತೆ ಕೇವಲ ಭಯೋತ್ಪಾದಕ ಚಟುವಟಿಕೆಗಳ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬರ ಅಂತ್ಯ ಎಂದು ಭಾವಿಸಲಾಗುವುದಿಲ್ಲ. ಇದು ಬಹುಮತ ಆಧಾರಿತ ಅಧಿಕಾರದ ಸ್ಪಷ್ಟ ದುರುಪಯೋಗ ಮತ್ತು ಕಾನೂನು ನಿಯಮಗಳ ಕಡೆಗಣನೆಯ ಫಲವೇ ಆಗಿದೆ.
ಫಾದರ್ ಸ್ಟ್ಯಾನ್ ಸ್ವಾಮಿಯನ್ನು ಒಂದು ಸ್ಫೂರ್ತಿಯ ಸೆಲೆಯಾಗಿ ಕಾಣಲಾಗುತ್ತದೆ. ಜೆಸೂಟ್ ಪಾದ್ರಿಯಾಗಿ ಕಾರ್ಯನಿರ್ವಹಿಸಿದ ಸ್ವಾಮಿ, ಜಾರ್ಖಂಡ್‍ನ ಅವಕಾಶವಂಚಿತ ಸಮುದಾಯಗಳ ಸಬಲೀಕರಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದವರು. ಒಂದು ಸಣ್ಣ ಕೋಣೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸ್ಟ್ಯಾನ್ ಸ್ವಾಮಿ, ಉಚ್ಚಾಟಿತ ಜನಸಮುದಾಯಗಳ ಬಗ್ಗೆ ಎಪ್ಪತ್ತು ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಕಾರ್ಯಕರ್ತರಾಗಿಯೇ ಇದ್ದ ಸ್ವಾಮಿ ಅನಗತ್ಯವಾಗಿ ಆಡಳಿತ ವ್ಯವಸ್ಥೆಯ ಅನ್ಯಾಯಗಳಿಗೆ ಗುರಿಯಾಗುತ್ತಿದ್ದ ಜನಸಮುದಾಯಗಳ ಹಕ್ಕುಗಳಿಗಾಗಿ ಕಾನೂನು ವ್ಯಾಪ್ತಿಯಲ್ಲೇ ಹೋರಾಟ ನಡೆಸುತ್ತಿದ್ದರು. ಜನತೆಗೆ ನ್ಯಾಯ ಒದಗಿಸುವಲ್ಲಿ ಸಂವಿಧಾನ ನೆರವಾಗುತ್ತದೆ ಎಂಬ ದೃಢ ವಿಶ್ವಾಸ ಅವರಲ್ಲಿತ್ತು. ಈ ನಂಬಿಕೆಯೊಂದಿಗೇ ವಿಚಾರಣಾಧೀನ ಕೈದಿಗಳ ಪರವಾಗಿ ಜಾರ್ಖಂಡ್ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಈ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ, ತಾವು ಬಳಸುತ್ತಿದ್ದ ಮತ್ತು ತಾವು ನಂಬಿಕೆ ಇರಿಸಿದ್ದ ವ್ಯವಸ್ಥೆ ತಮ್ಮ ಜೀವಕ್ಕೇ ಸಂಚಕಾರ ತರುತ್ತದೆ ಎಂದು ಸ್ಟ್ಯಾನ್ ಸ್ವಾಮಿ ಊಹಿಸಿರಲಿಕ್ಕಿಲ್ಲ.

ಇದು ಆರಂಭವಾದದ್ದು ಆಗಸ್ಟ್ 2018ರಲ್ಲಿ. ಪುಣೆಯ ಪೊಲೀಸರು ಸ್ಟ್ಯಾನ್ ಸ್ವಾಮಿ ಅವರ ಒಂದೇ ಕೋಣೆಯ ಮನೆಯ ಮೇಲೆ ಹಠಾತ್ ದಾಳಿ ನಡೆಸಿ, ಅವರ ಕಂಪ್ಯೂಟರ್, ಮೊಬೈಲ್ ಫೋನ್, ಪುಸ್ತಕಗಳು ಮತ್ತು ಶಾಸ್ತ್ರೀಯ ಸಂಗೀತದ ಕೆಲವು ಕ್ಯಾಸೆಟ್ಟುಗಳನ್ನು ವಶಪಡಿಸಿಕೊಂಡಿದ್ದರು. 2019ರ ಜೂನ್‍ನಲ್ಲಿ ಮತ್ತೊಮ್ಮೆ ದಾಳಿ ನಡೆದಿತ್ತು. ಕೊನೆಗೂ 2020ರ ಅಕ್ಟೋಬರ್ 8ರಂದು ಸ್ಟ್ಯಾನ್ ಸ್ವಾಮಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಯುಎಪಿಎ ಕಾಯ್ದೆಯಡಿ ಬಂಧಿಸಿತ್ತು. ಭೀಮಾಕೊರೆಗಾಂವ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿದ್ದ 15 ಜನ ಬುದ್ಧಿಜೀವಿಗಳ, ಪ್ರಾಧ್ಯಾಪಕರ, ವಕೀಲರ, ಕಾರ್ಯಕರ್ತರ, ಲೇಖಕರ ಶಂಕಿತರ ಪಟ್ಟಿಗೆ ಸ್ವಾಮಿ 16ನೆಯವರಾಗಿ ಸೇರ್ಪಡೆಯಾಗಿದ್ದರು. 80 ವರ್ಷದ ಸ್ವಾಮಿ ಆರೋಪಿಯಾಗಿ ಕೊನೆಯವರೆಗೂ ಪ್ರಭುತ್ವದ ಸೆರೆಯಾಳಾಗಿದ್ದರು. ಅಸಂಭವ ಎನ್ನಬಹುದಾದ ಕಾರಣಗಳಿಗಾಗಿ ಬಂಧನಕ್ಕೊಳಗಾಗುವುದೇ ಅಲ್ಲದೆ, ಭಾರತದಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಲ್ಪಟ್ಟ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದುದೇ ಅಲ್ಲದೆ, ಇವರ ಬಂಧನದ ಸಮಯದಲ್ಲಿ ಪ್ರಭುತ್ವ, ಪೊಲೀಸರು ಮತ್ತು ನ್ಯಾಯಾಲಯಗಳೂ ಸಹ, ಇವರನ್ನು ನಡೆಸಿಕೊಂಡ ರೀತಿ ನಿಜಕ್ಕೂ ಒಂದು ದುರಂತ ಎನ್ನಬಹುದು.
ಇದೇ ಕಾರಣಗಳಿಗಾಗಿ ಬಂಧಿಸಲ್ಪಟ್ಟಿದ್ದ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭರದ್ವಾಜ್ ಮತ್ತು ವರಾವರರಾವ್ ಅವರೊಡನೆ ಸ್ಟ್ಯಾನ್ ಸ್ವಾಮಿ ನಡೆಸಿದ್ದ ಕೆಲವು ಪತ್ರ ವ್ಯವಹಾರಗಳು ಮತ್ತು ಇತರ ಸಂಪರ್ಕ ಹಾಗೂ ಕೆಲವು ಪ್ರಚಾರದ ಸಾಮಗ್ರಿಗಳನ್ನೇ ಸಾಕ್ಷಿಯಾಗಿರಿಸಿಕೊಂಡು ಸ್ಟ್ಯಾನ್ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಈ ಶಂಕಿತ ದೋಷಾರೋಪಣೆಯ ದಾಖಲೆಗಳ ಮತ್ತು ಕೆಲವು ಪ್ರಮುಖ ವರದಿಗಳ ಅಧಿಕೃತತೆಯನ್ನು ಅಂತಾರಾಷ್ಟ್ರೀಯ ಫೊರೆನ್ಸಿಕ್ ತಜ್ಞರು ಪ್ರಶ್ನಾರ್ಹ ಎಂದೇ ಪರಿಗಣಿಸಿದ್ದಾರೆ. ಆದರೆ ಈ ವಿಚಾರಗಳನ್ನು ವಿಚಾರಣೆಯ ಸಂದರ್ಭದಲ್ಲಷ್ಟೇ ಪರಿಗಣಿಸಬಹುದು ಎಂಬ ಕಾರಣ ನೀಡಿ ಪ್ರಭುತ್ವ ಸ್ಟ್ಯಾನ್ ಸ್ವಾಮಿ ಅವರ ಬಂಧನವನ್ನು ಸಮರ್ಥಿಸಿಕೊಂಡಿತ್ತು. ಅಲ್ಲಿಯವರೆಗೂ ಸ್ಟ್ಯಾನ್ ಸ್ವಾಮಿ ಸೆರೆಮನೆಯಲ್ಲಿ ಇರಬೇಕಿತ್ತು.
ನ್ಯಾಯಾಂಗದ ಕುಸಿತಕ್ಕೆ ದಿಕ್ಸೂಚಿ
ಈ ಬೆಳವಣಿಗೆಗಳ ಮೂಲ ವಾತಾಲಿ ತೀರ್ಪಿನಲ್ಲಿದೆ (ಮುಂದೆ ಇದನ್ನು ಉಲ್ಲೇಖಿಸಲಾಗಿದೆ). ವೈದ್ಯಕೀಯ ಸಹಾಯಕ್ಕಾಗಿ ಸ್ಟ್ಯಾನ್ ಸ್ವಾಮಿ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಅದನ್ನು ಅಲಕ್ಷಿಸಲಾಯಿತು ಅಥವಾ ನಿರಾಕರಿಸಲಾಯಿತು. ಸ್ಟ್ಯಾನ್ ಸ್ವಾಮಿ ಹದಗೆಡುತ್ತಲೇ ಇದ್ದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನುವುದು ದಾಖಲಾಗಿರುವ ವೈದ್ಯಕೀಯ ವರದಿಗಳಲ್ಲೇ ಸ್ಪಷ್ಟವಾಗುತ್ತದೆ. ಕೈಯ್ಯಲ್ಲಿ ಚಮಚೆ ಹಿಡಿಯಲೂ ಆಗದೆ, ನಡೆಯಲೂ ಆಗದೆ, ಬರೆಯಲೂ ಆಗದೆ ತಾವೇ ಸ್ನಾನ ಮಾಡಲೂ ಆಗದಂತಹ ಪರಿಸ್ಥಿತಿಯಲ್ಲಿ ಸ್ವಾಮಿ ಇದ್ದರು. ದೈಹಿಕವಾಗಿ ಸ್ಟ್ಯಾನ್ ಸ್ವಾಮಿ ದುರ್ಬಲರಾಗಿದ್ದುದನ್ನು ಮತ್ತು ಶ್ರವಣ ದೋಷದಿಂದ ಬಳಲುತ್ತಿದ್ದುದನ್ನು ನ್ಯಾಯಾಲಯವೇ ಗಮನಿಸಿತ್ತು.
ಇಷ್ಟಾದರೂ ನ್ಯಾಯಾಲಯ ಅನುಕಂಪ ತೋರಲಿಲ್ಲ. ಸ್ವಾಮಿ ಅವರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ನ್ಯಾಯಾಲಯವು ನಿರ್ದಾಕ್ಷೀಣ್ಯವಾಗಿ ತಿರಸ್ಕರಿಸಿತ್ತು. ಸ್ಟ್ಯಾನ್ ಸ್ವಾಮಿ ವೈದ್ಯಕೀಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ನಂತರವೂ ವಿಚಾರಣೆಯನ್ನು ಮುಂದೂಡುತ್ತಲೇ ವಿಳಂಬ ಮಾಡಲಾಯಿತು. ಬದಲಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಆದೇಶಿಸಲಾಯಿತು. ಇದು ನ್ಯಾಯಾಧೀಶರಲ್ಲಿ ಸೂಕ್ಷ್ಮತೆಯ ಕೊರತೆ ಇದ್ದುದನ್ನು ಸ್ಪಷ್ಟವಾಗಿ ತೋರುತ್ತದೆ. ಈ ಧೋರಣೆ ದುರದೃಷ್ಟಕರವೂ ಹೌದು. ಸ್ಟ್ಯಾನ್ ಸ್ವಾಮಿ ಅವರ ದುರಂತ ಸಾವಿನೊಂದಿಗೆ ಅಂತ್ಯಗೊಂಡ ಈ ಬೆಳವಣಿಗೆಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ನ್ಯಾಯಾಂಗದ ಕುಸಿತದ ದ್ಯೋತಕವಾಗಿದ್ದು ಕಾಕತಾಳೀಯವಾಗಿ ಇದು ಪ್ರಸ್ತುತ ರಾಜಕೀಯ ಅಧಿಕಾರ ವ್ಯವಸ್ಥೆಯ ಸಂಕೇತವೂ ಆಗಿದೆ.

ಫಾದರ್ ಸ್ಟ್ಯಾನ್ ಸ್ವಾಮಿ ಅವರಂತಹ ವ್ಯಕ್ತಿಗಳ ವಿರುದ್ಧ ಯುಎಪಿಎ ಮುಂತಾದ ಕರಾಳ ಶಾಸನಗಳನ್ನು ಈ ದೇಶದ ರಾಜಕೀಯ ವ್ಯವಸ್ಥೆ ಮತ್ತು ಪೊಲೀಸರು ಬಳಸಲು ಹೇಗೆ ಸದಾ ಸಿದ್ಧವಾಗಿರುತ್ತಾರೆ ? ಇದಕ್ಕೆ ಕಾರಣವೇ ನಮ್ಮ ದುರ್ಬಲ ನ್ಯಾಯ ವ್ಯವಸ್ಥೆ. ನಮ್ಮ ದೇಶದ ನ್ಯಾಯಾಂಗವು ಇಂದು ಹಲವು ದೌರ್ಬಲ್ಯಗಳೊಂದಿಗೆ ಸಾಕಷ್ಟು ಲೋಪಗಳನ್ನೂ ಎದುರಿಸುತ್ತಿದೆ. ಫಾದರ್ ಸ್ವಾಮಿ ಪ್ರಕರಣದಲ್ಲಿ ನ್ಯಾಯಾಧೀಶರು ಅಪಾರ ನಿರಾಸಕ್ತಿ ಪ್ರದರ್ಶಿಸಿದ್ದಾರೆ. ಒಂದೆಡೆ ದೇಶದ ಮುಖ್ಯ ನ್ಯಾಯಾಧೀಶರು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಅತ್ಯವಶ್ಯ ಎಂದು ಹೇಳುತ್ತಿರುವ ಸಂದರ್ಭದಲ್ಲೇ ನ್ಯಾಯಾಲಯಗಳಲ್ಲಿ ತದ್ದಿರುದ್ಧವಾದ ತೀರ್ಪುಗಳು ವ್ಯಕ್ತವಾಗುತ್ತಿರುವುದು ಸೋಜಿಗದ ಸಂಗತಿ.
ಅಪರಾಧ ಸಾಬೀತಾಗುವವರೆಗೂ ಆರೋಪಿ ನಿರಪರಾಧಿ ಎಂದೇ ಭಾವಿಸುವುದು ಅಪರಾಧಿ ನ್ಯಾಯ ಮತ್ತು ನಿಯಮಗಳ ಬಹುಮುಖ್ಯ ಅಂಶ. ಆದರೆ ಭಾರತದಲ್ಲಿ ಇತ್ತೀಚೆಗೆ ಈ ಸೂಕ್ಷ್ಮತೆ ಮರೆಯಾಗುತ್ತಿರುವುದು ಚಿಂತೆಗೀಡುಮಾಡುವ ವಿಚಾರ. ಈ ಚಿಂತೆಯ ಮೂಲ ಇರುವುದು ಮೇಲೆ ಉಲ್ಲೇಖಿಸಲಾಗಿರುವ ವಾತಾಲಿ ತೀರ್ಪಿನಲ್ಲಿ. 2019ರ ‘ ಎನ್‍ಐಎ ಮತ್ತು ಜಹೂರ್ ಅಹಮದ್ ಶಾ ವಾತಾಲಿ’ ಮೊಕದ್ದಮೆಯ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಯುಎಪಿಎ ನಿಯಮಗಳಿಗೆ ನೀಡಿರುವ ವ್ಯಾಖ್ಯಾನವೇ, ನಂತರದ ಎಲ್ಲ ನ್ಯಾಯಾಲಯದ ತೀರ್ಪುಗಳಿಗೆ ಆಧಾರವಾಗಿದೆ. ಈ ತೀರ್ಪು ಒಂದು ಹೊಸ ವಾದವನ್ನೇ ಹುಟ್ಟುಹಾಕಿದೆ. ತತ್ಪರಿಣಾಮ, ಅಂತಿಮವಾಗಿ ನ್ಯಾಯಾಲಯದಲ್ಲಿ ಸಲ್ಲಿಸಲಾಗುವ ಸಾಕ್ಷ್ಯಾಧಾರಗಳು ಸ್ವೀಕಾರಾರ್ಹವಾಗದಿದ್ದರೂ , ಆರೋಪಿಯ ಬಿಡುಗಡೆಯಾದರೂ ಸಹ, ವಿಚಾರಣೆ ಪೂರ್ತಿಯಾಗುವವರೆಗೂ ಆರೋಪಿ ಸೆರೆವಾಸದಲ್ಲೇ ಇರಬೇಕಾಗುತ್ತದೆ. ಅಂತಿಮವಾಗಿ ಬಿಡುಗಡೆ ಹೊಂದುವ ಆರೋಪಿ ದೀರ್ಘ ಕಾಲ ಸೆರೆವಾಸ ಏಕೆ ಅನುಭವಿಸಬೇಕು ? ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆ.
ಈ ತೀರ್ಪಿನ ಅನುಸಾರ ಯುಎಪಿಎ ಕಾಯ್ದೆಯಡಿ ಜಾಮೀನು ಅರ್ಜಿಯನ್ನು ಪರಿಶೀಲಿಸುವಾಗ ನ್ಯಾಯಾಲಯಗಳು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗುವ ಎಲ್ಲ ಆರೋಪಗಳನ್ನೂ ಮೇಲ್ನೋಟಕ್ಕೆ ಸತ್ಯ ಎಂದೇ ಭಾವಿಸಬೇಕಾಗುತ್ತದೆ. ಸರ್ಕಾರಿ ವಕೀಲರ ಆರೋಪಗಳನ್ನು ಅಲ್ಲಗಳೆಯುವಂತಹ ದಾಖಲೆಗಳನ್ನು ಒದಗಿಸಿದಲ್ಲಿ ಮಾತ್ರವೇ ಆರೋಪಿಗಳು ಜಾಮೀನಿಗೆ ಅರ್ಹರಾಗುತ್ತಾರೆ. ಅಂದರೆ, ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳನ್ನು ಅಲ್ಲಗಳೆಯುವ ಹೊಣೆ ಆರೋಪಿಯ ಮೇಲಿರುತ್ತದೆ. ಬಹುಪಾಲು ಪ್ರಕರಣಗಳಲ್ಲಿ ಇದು ಅಸಾಧ್ಯ ಎನ್ನುವುದು ಸರ್ವವಿಧಿತ. ಜಾಮೀನು ನೀಡುವ ಹಂತದಲ್ಲಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವ ಅವಕಾಶವನ್ನೇ ಈ ತೀರ್ಪು ಕಸಿದುಕೊಂಡಿದೆ. ಸಾಕ್ಷ್ಯಾಧಾರ ಕಾಯ್ದೆಯನ್ನೇ ಅಲ್ಲಗಳೆಯಲಾಗಿದ್ದು, ಈ ತೀರ್ಪು ಅಸಾಂವಿಧಾನಿಕ ಎನಿಸುತ್ತದೆ. ಹಾಗಾಗಿ ಯುಎಪಿಎ ಮೊಕದ್ದಮೆಗಳಲ್ಲಿ ಜಾಮೀನು ವಿಚಾರಣೆಗಳು ಕೇವಲ ತೋರಿಕೆಯಾಗಿಬಿಡುತ್ತವೆ. ಸಾಕ್ಷಿಗಳನ್ನು ಸಲ್ಲಿಸಲಾಗದ ಆರೋಪಿಗೆ ಜಾಮೀನು ಪಡೆಯುವುದೇ ದುಸ್ತರವಾಗುತ್ತದೆ. ಆರೋಪಿಯನ್ನು ದೀರ್ಘ ಕಾಲ ಸೆರೆಮನೆಯಲ್ಲಿರಿಸಲು ಇದು ಅನುಕೂಲಕರ ಸಾಧನವಾಗಿದೆ. ಬಂಧನಕ್ಕೊಳಗಾದವರ ಪಾಲಿಗೆ ಇದು ಭೀಕರ ಸಂಗತಿ.
ಈ ತೀರ್ಪಿನ ಹಿನ್ನೆಲೆಯಲ್ಲೇ ಸರ್ಕಾರ, ಪೊಲೀಸರು ಮತ್ತು ಸರ್ಕಾರಿ ವಕೀಲರು ಯುಎಪಿಎ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುವುದು ಸುಲಭವಾಗಿದೆ. ಪ್ರತಿರೋಧ ವ್ಯಕ್ತಪಡಿಸುವ ಎಲ್ಲರನ್ನೂ ರಾಜದ್ರೋಹ ಅಥವಾ ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ, ಕಲ್ಪಿತ ಆರೋಪಗಳೊಂದಿಗೆ ಬಂಧಿಸಲಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮ ಹೈಕೋರ್ಟ್‍ಗಳೂ ಸಹ ಅನಿವಾರ್ಯವಾಗಿ ಜಾಮೀನು ನಿರಾಕರಿಸುತ್ತಿವೆ. ಪ್ರಕರಣದ ಸಾಕ್ಷಿಗಳನ್ನು ಪರಿಶೀಲಿಸಿ ಜಾಮೀನು ನೀಡುವುದು ಹೈಕೋರ್ಟ್ ನ್ಯಾಯಾಧೀಶರಿಗೆ ಅಸಾಧ್ಯವೇ ಆಗಿರುತ್ತದೆ. ಹಾಗಾಗಿ ಎಲ್ಲ ಪ್ರಕರಣಗಳಲ್ಲೂ ಜಾಮೀನು ನಿರಾಕರಿಸುವುದು ಸಹಜ ಪ್ರಕ್ರಿಯೆಯಾಗಿದೆ. ಪರಿಣಾಮ, ತುರ್ತುಪರಿಸ್ಥಿತಿಯಲ್ಲಿದ್ದ ಕರಾಳ ನಿರ್ಬಂಧಕ ಕಾನೂನುಗಳ ಪುನರಾವರ್ತನೆಯನ್ನು ನಾವು ನೋಡುತ್ತಿದ್ದೇವೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿತ ಆರೋಪಿಗಳಿಗೆ ನ್ಯಾಯಾಂಗ ಮರೀಚಿಕೆಯಾಗಿದ್ದುದನ್ನು ಸ್ಮರಿಸಬಹುದು. ಆ ಕಾಲಘಟ್ಟದ ದುರಂತಗಳ ಪುನಾರವರ್ತನೆಯನ್ನು ತಪ್ಪಿಸಬೇಕಾದರೆ, ಈ ತೀರ್ಪನ್ನು ಪುನರ್ ಪರಿಶೀಲನೆಗೊಳಪಡಿಸಿ ಹಿಂಪಡೆಯುವುದು ಅತ್ಯಗತ್ಯ. ಇಲ್ಲವಾದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮರೀಚಿಕೆಯಾಗಿಬಿಡುತ್ತದೆ.
ಯುಎಪಿಎ ಕಾಯ್ದೆಯ ನಿಯಮಗಳ ಅತಿಯಾದ ದುರ್ಬಳಕೆ ಮತ್ತು ಜಾಮೀನು ನಿರಾಕರಣೆಯನ್ನು ಭೀಮಾ ಕೊರೆಗಾಂವ್ ಪ್ರಕರಣಗಳಲ್ಲಿ ಮತ್ತು ಸಿಎಎ ವಿರೋಧಿ ಹೋರಾಟಗಳ ಪ್ರಕರಣಗಳಲ್ಲಿ ಕಾಣಬಹುದು. ಪ್ರತಿರೋಧದ ಧ್ವನಿಯನ್ನು ದಮನಿಸುವ ಈ ಪ್ರಕ್ರಿಯೆಯಲ್ಲೇ ಸ್ಟ್ಯಾನ್ ಸ್ವಾಮಿ ಸಹ ಬಲಿಯಾಗಿದ್ದಾರೆ. ಈ ಪ್ರಕರಣಗಳಲ್ಲಿ ಆಲೋಚನೆಯನ್ನೇ ಅಪರಾಧ ಎಂದು ಪರಿಗಣಿಸಲಾಗಿದೆ. ಅನೇಕ ಸಂದರ್ಭಗಳಲ್ಲಿ ಸಾಕ್ಷಿಗಳು ಸಮರ್ಥನೀಯವಾಗಿರುವುದಿಲ್ಲ. ಕೆಲವೊಮ್ಮೆ ಸಾಕ್ಷಿಗಳನ್ನು ತುರುಕಲಾಗಿರುವುದನ್ನೂ ಕಾಣುತ್ತಿದ್ದೇವೆ. ಯುಎಪಿಎ ಕಾಯ್ದೆಯನ್ನು ಅನ್ವಯಿಸುವುದರಿಂದ ಆರೋಪಿಗೆ ಜಾಮೀನು ಪಡೆಯುವುದೂ ಅಸಾಧ್ಯವಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೆಳಹಂತದ ನ್ಯಾಯಾಲಯಗಳು ಮೊಕದ್ದಮೆಯ ಸತ್ಯಾಸತ್ಯತೆಗಳ ಪರಾಮರ್ಶೆಗೂ ಮುಂದಾಗುವುದಿಲ್ಲ.
ಇದು ನ್ಯಾಯಾಂಗದ ವಿಚಾರ
ಇಂತಹ ವಿಚಾರಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಿದಾಗ ಸುಪ್ರೀಂಕೋರ್ಟ್ ತಕ್ಷಣವೇ ಪ್ರತಿಕ್ರಯಿಸುತ್ತದೆ. ಉದಾಹರಣೆಗೆ, 2020ರ ದೆಹಲಿ ಗಲಭೆಗಳ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ದೆಹಲಿಯ ಹೈಕೋರ್ಟ್ ಜಾಮೀನು ನೀಡಿದ ಕೂಡಲೇ ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಹೈಕೋರ್ಟ್‍ನ ತೀರ್ಪಿನ ಬಗ್ಗೆ ತನ್ನ ಅಚ್ಚರಿ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ “ ಇನ್ನು ಮುಂದೆ ಇದೇ ರೀತಿಯ ಆದೇಶಗಳನ್ನು ನೀಡಲು ಹೈಕೋರ್ಟ್‍ನ ಈ ತೀರ್ಪು ಪೂರ್ವನಿದರ್ಶನ ಆಗಕೂಡದು ” ಎಂದು ಎಚ್ಚರಿಸಿದೆ. “ ಜಾಮೀನು ವಿಚಾರಣೆಯೊಂದರಲ್ಲಿ ನೂರು ಪುಟಗಳ ತೀರ್ಪು ನೀಡಿರುವುದು ಆಶ್ಚರ್ಯಕರವಾಗಿ ಕಾಣುತ್ತದೆ ” ಎಂದು ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್‍ನ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಈ ಎಲ್ಲ ಬೆಳವಣಿಗೆಗಳಿಗೆ ಮೂಲ ಕಾರಣವಾದ ಸುಪ್ರೀಂಕೋರ್ಟ್‍ನ ವಾತಾಲಿ ತೀರ್ಪು ಸಹ ಜಾಮೀನು ವಿಚಾರಣೆಯ ಸಂದರ್ಭದಲ್ಲೇ ಹೊರಬಂದಿರುವುದನ್ನು ಗಮನಿಸಬೇಕಿದೆ.
ಅಂದರೆ, ಶಾಸನಬದ್ಧ ವ್ಯಾಖ್ಯಾನಗಳನ್ನು ಮಾಡಲು ಸುಪ್ರೀಂಕೋರ್ಟ್ ಮಾತ್ರವೇ ಅಧಿಕಾರ ಹೊಂದಿದೆ, ಸಾಂವಿಧಾನಿಕ ಮಾನ್ಯತೆ ಹೊಂದಿರುವ ಹೈಕೋರ್ಟ್‍ಗಳು ಇದರ ವ್ಯಾಪ್ತಿಗೊಳಪಡುವುದಿಲ್ಲ ಎಂದು ಅರ್ಥೈಸಬಹುದೇ ? ಹಾಗಾದಲ್ಲಿ, ಹೈಕೋರ್ಟ್‍ಗಳು ಶಾಸನಗಳನ್ನು ಪರಿಶೀಲಿಸಲೇಕೂಡದು ಎಂದಾದರೆ, ಬಂಧಿತ ಆರೋಪಿಗಳು, ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳ ಸಾಂವಿಧಾನಿಕ ಔಚಿತ್ಯ ನಿರ್ಧಾರವಾಗುವವರೆಗೂ, ಸೆರೆಮನೆಯಲ್ಲೇ ಇರಬೇಕು ಎಂದು ಹೇಳಿದಂತಾಗುತ್ತದೆ. ಇದು ಅತಾರ್ಕಿಕ ಎನ್ನದೆ ವಿಧಿಯಿಲ್ಲ. ಸ್ಟ್ಯಾನ್ ಸ್ವಾಮಿ ಅವರ ಬಂಧನ ಮತ್ತು ಕಸ್ಟಡಿ ಸಾವಿಗೆ, ಅವರಂತೆಯೇ ಬಂಧನಕ್ಕೊಳಗಾಗಿರುವ ಇತರರ ಬವಣೆಗೆ ನ್ಯಾಯಾಂಗವೇ ಕಾರಣ ಎಂಬ ಭಾವನೆ ಮುಂದಿನ ತಲೆಮಾರಿನವರಲ್ಲಿ ಮೂಡಬಹುದು. ಆದಾಗ್ಯೂ ಪ್ರತಿರೋಧದ ಧ್ವನಿಗಳು ಕೊನೆಯಾಗುವುದಿಲ್ಲ. ಸ್ಟ್ಯಾನ್ ಸ್ವಾಮಿ ಅವರೇ ಹೇಳಿದಂತೆ “ ನಮ್ಮಿಂದ ಸಮೂಹ ಗಾನ ಇನ್ನೂ ಸಾಧ್ಯವಿದೆ. ಪಂಜರದ ಗಿಳಿಯೂ ಹಾಡಬಲ್ಲದು.”.
ಮೂಲ : ಅಜಿತ್ ಪ್ರಕಾಶ್ ಶಾ (ದ ಹಿಂದೂ 8-7-2021) ಅನುವಾದ : ನಾ ದಿವಾಕರ
(ಅಜಿತ್ ಪ್ರಕಾಶ್ ಶಾ ದೆಹಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಮತ್ತು ಭಾರತೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷರು).