ನಾಗರಿಕರಿಗೆ ಇನ್ನಷ್ಟು ಹತ್ತಿರದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಇ-ಆಡಳಿತ ಇಲಾಖೆಯ ಅಡಿಯಲ್ಲಿನ ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಇನ್ನು ಮುಂದೆ ನಾಗರಿಕರು ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಸಮಗ್ರ ನಾಗರಿಕ ಸೇವಾ ಕೇಂದ್ರಗಳ ಮೂಲಕ ಇ-ಸ್ವತ್ತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಒಪ್ಪಂದವು 3 ವರ್ಷಗಳ ಅವಧಿಗೆ ಚಾಲ್ತಿಯಲ್ಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಭಿವೃದ್ಧಿಪಡಿಸಿರುವ ಇ-ಸ್ವತ್ತು ವ್ಯವಸ್ಥೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಸೇವೆ ಇನ್ನು ಮುಂದೆ ರಾಜ್ಯದಾದ್ಯಂತ ಇರುವ ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್), ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಲಭ್ಯವಾಗಲಿದೆ ಎಂಬ ಮಹತ್ತರ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ.

ಕೇಂದ್ರಗಳ ನಿರ್ವಾಹಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಇ-ಸ್ವತ್ತು ವ್ಯವಸ್ಥೆಯ ಬಗ್ಗೆ ಅಗತ್ಯ ತರಬೇತಿ ನೀಡಲಾಗುವುದು ಹಾಗೂ ನಿರ್ವಾಹಕರಿಗೆ ಪ್ರತ್ಯೇಕ ಲಾಗಿನ್ ಖಾತೆಗಳನ್ನು ಇಲಾಖೆ ರಚಿಸಿಕೊಡಲಾಗುವುದು ಎಂದು ವಿವರಗಳನ್ನು ನೀಡಿರುವ ಸಚಿವರು ಸೇವೆಗಳ ಸಮನ್ವಯಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಹೇಳಿದ್ದಾರೆ.

ಹೊಸ ಖಾತಾ ಸೇವೆಗೆ 45 ರೂ. ಶುಲ್ಕ ನಿಗದಿಪಡಿಸಿದ್ದು ಈ ವೆಚ್ಚವನ್ನು ನಾಗರಿಕರೇ ಭರಿಸಬೇಕು, ಇ-ಆಸ್ತಿ ಅರ್ಜಿಗೆ ಬೇಕಾದ ದಾಖಲೆಗಳ ಸ್ಕ್ಯಾನಿಂಗ್ ಮತ್ತು ಅಪ್‌ಲೋಡ್ ಮಾಡಲು ಪ್ರತಿ ಪುಟಕ್ಕೆ 5 ರೂ ಪಾವತಿಸಬೇಕಾಗುವುದು. ಎಲ್ಲ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳು ವರ್ಷದ ಎಲ್ಲ ದಿನಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಮತ್ತು ಮತದಾನದ ದಿನಗಳಂದು ಈ ಕೇಂದ್ರಗಳಿಗೆ ರಜೆ ಇರುತ್ತದೆ. ಈ ಒಪ್ಪಂದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಆಡಳಿತ ನಿರ್ದೇಶಕರಾದ ರಾಹುಲ್ ರತ್ನಂ ಪಾಂಡೆ ಮತ್ತು ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶಕರಾದ ಅಪರ್ಣಾ ರಮೇಶ್ ಅವರು ಸಹಿ ಹಾಕಿದ್ದಾರೆ.






