ಬ್ರಿಟೀಷ್ ವಸಾಹತು ಕಾಲದ ಕರಾಳ ಕಾಯ್ದೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನಗತ್ಯ
ಸ್ವತಂತ್ರ ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಒಂದು ಗಣರಾಜ್ಯವಾಗಿ ರೂಪುಗೊಂಡ ನಂತರವೂ ಸಹ ದೇಶದ ಹಲವಾರು ಕಾನೂನುಗಳು ಯಥಾವತ್ತಾಗಿ, ಕೆಲವೊಮ್ಮೆ ಅಲ್ಪಸ್ವಲ್ಪ ತಿದ್ದುಪಡಿಗಳೊಡನೆ, ಜಾರಿಯಲ್ಲಿವೆ. ಬದಲಾದ ಸಾಮಾಜಿಕ-ಆರ್ಥಿಕ ಸಂದರ್ಭಗಳಿಗೆ ಅನುಸಾರವಾಗಿ ಸರ್ಕಾರಗಳು ಅನೇಕ ವಸಾಹತು ಕಾನೂನುಗಳಲ್ಲಿ ತಿದ್ದುಪಡಿ ಮಾಡಿದೆ. ಇತ್ತೀಚಿನ ಉದಾಹರಣೆಯನ್ನು ಕಾರ್ಮಿಕ ಕಾಯ್ದೆಗಳಲ್ಲಿ ಕಾಣಬಹುದು. ಕಾರ್ಮಿಕ ಕಾಯ್ದೆಗಳನ್ನು ವಸಾಹತು ಕಾನೂನುಗಳೆಂದು ವರ್ಗೀಕರಿಸಲಾಗುವುದಿಲ್ಲವಾದರೂ, ಸ್ವಾತಂತ್ರ್ಯ ಪೂರ್ವ ಭಾರತದ ವಸಾಹತು ಆಡಳಿತದಲ್ಲಿ ರೂಪುಗೊಂಡ ಕಾನೂನುಗಳಾಗಿವೆ. ಆದರೂ ನವ ಉದಾರವಾದದ ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ ಕೇಂದ್ರ ಸರ್ಕಾರ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಸಾಂವಿಧಾನಿಕ ಆಶಯಗಳಿಗೆ ಅನುಗುಣವಾಗಿ ಆಯಾ ಕಾಲಕ್ಕೆ ತಕ್ಕಂತೆ ಹಲವು ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತಿದ್ದು, ಹೊಸ ಕಾಯ್ದೆಗಳನ್ನೂ ಜಾರಿಗೊಳಿಸಲಾಗುತ್ತಿದೆ.
ಆದರೆ ಇಂತಹುದೇ ಒಂದು ವಸಾಹತುಶಾಹಿಯ ಕಾನೂನು ಇಂದಿಗೂ ಸಹ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು, ಕೆಲವು ಸಾಂದರ್ಭಿಕ ತಿದ್ದುಪಡಿಗಳೊಂದಿಗೆ ಜಾರಿಯಲ್ಲಿದೆ. ಅದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅಥವಾ ದೇಶದ್ರೋಹದ ಕಾನೂನು. ಭಾರತ ಎದುರಿಸುತ್ತಿರುವ ಭಯೋತ್ಪಾದನೆ, ಉಗ್ರವಾದಿಗಳ ಉಪಟಳ, ಪ್ರತ್ಯೇಕತಾ ಚಳುವಳಿಗಳು ಮತ್ತು ಉಗ್ರ ಎಡಪಂಥೀಯವಾದದ ಜಟಿಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಭಾರತದ ಏಕತೆ ಮತ್ತು ಅಖಂಡತೆಯನ್ನು ಸಂರಕ್ಷಿಸುವ ದೃಷ್ಟಿಯಿಂದ ಈ ಕಾನೂನು ಇಂದಿಗೂ ಸಹ ಮಾನ್ಯತೆ ಪಡೆದಿದ್ದು, ಸುಪ್ರೀಂಕೋರ್ಟ್ ಸಹ 1962ರ ತೀರ್ಪೊಂದರಲ್ಲಿ ಈ ಕಾಯ್ದೆಯ ಔಚಿತ್ಯವನ್ನು ಮಾನ್ಯ ಮಾಡಿತ್ತು. ಆದರೆ ಮತ್ತೊಂದು ನೆಲೆಯಲ್ಲಿ ಬ್ರಿಟೀಷ್ ವಸಾಹತು ಕಾಲದ ಕರಾಳ ಶಾಸನಗಳು ಜಾರಿಯಲ್ಲಿರುವುದು ನ್ಯಾಯಯುತವೋ ಅಲ್ಲವೋ ಎಂಬ ಪ್ರಶ್ನೆ ಕಾನೂನು ತಜ್ಞರನ್ನು ಮಾತ್ರವೇ ಅಲ್ಲದೆ ದೇಶದ ಸಮಾಜಶಾಸ್ತ್ರಜ್ಞರು, ಬೌದ್ಧಿಕ ವಲಯದ ವಿದ್ವಾಂಸರು ಹಾಗೂ ಸಾಮಾಜಿಕ ಚಿಂತಕರನ್ನೂ ಸಹ ಕಾಡುತ್ತಲೇ ಇದೆ.
ಭಾರತ ತನ್ನ ಬಹುತ್ವದ ಸಮನ್ವಯ ಸಂಸ್ಕೃತಿಗೆ ತಕ್ಕಂತಹ ತನ್ನದೇ ಆದ ಕಾನೂನುಗಳನ್ನು ರೂಪಿಸಿಕೊಂಡು ಬಂದಿದೆಯಾದರೂ ವಸಾಹತು ಕಾಲದ ಕೆಲವು ಕರಾಳ ಕಾನೂನುಗಳು, ರೂಪಾಂತರಗೊಂಡು ಇಂದಿಗೂ ಸಹ ಜನಸಾಮಾನ್ಯರ ನೆತ್ತಿಯ ಮೇಲಿನ ತೂಗುಗತ್ತಿಯಂತೆ ಕಾಡುತ್ತಲೇ ಇವೆ. ಅದರಲ್ಲಿ ಪ್ರಮುಖವಾಗಿ ಕಾಣುವುದು ದೇಶದ್ರೋಹದ ಕಾಯ್ದೆ ಮತ್ತು ಯುಎಪಿಎ ಕಾಯ್ದೆ. ದೇಶದ ಪ್ರಸ್ತುತ ರಾಜಕೀಯ ಹಾಗೂ ನ್ಯಾಯ ವ್ಯವಸ್ಥೆಯ ಚಿಂತನಾ ವಾಹಿನಿಗಳು, ಮಾನವ ಹಕ್ಕು ಸಂಘಟನೆಗಳು ಈ ವಸಾಹತು ಕಾಲದ ಕರಾಳ ಕಾಯ್ದೆಯನ್ನು ರದ್ದುಪಡಿಸಲು ಆಗ್ರಹಿಸುತ್ತಲೇ ಇವೆ. ಹಿನ್ನೆಲೆಯಲ್ಲೇ ಇತ್ತೀಚೆಗೆ “ಎಸ್.ಜಿ. ಒಂಬತ್ಕೆರೆ Vs ಒಕ್ಕೂಟ ಸರ್ಕಾರ” ಮೊಕದ್ದಮೆಯಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಈ ಕಾಯ್ದೆಯ ದುರುಪಯೋಗವನ್ನು ತಡೆಗಟ್ಟುವ ದೃಷ್ಟಿಯಿಂದ ಮರುಪರಿಷ್ಕರಣೆ ಮಾಡುವಂತೆ ಸರ್ಕಾರವನ್ನು ಕೋರಿತ್ತು. ದೇಶದ್ರೋಹ ಎಂದು ಆರೋಪಿಸಲಾಗುವ ಯಾವುದೇ ಕೃತ್ಯವು ಹಿಂಸಾಚಾರಕ್ಕೆ ಅಥವಾ ಸಾರ್ವಜನಿಕ ಅವ್ಯವಸ್ಥೆಗೆ ಕಾರಣವಾಗುವಂತಿದ್ದರೆ ಅಥವಾ ದೇಶದ ಅಖಂಡತೆಗೆ ಭಂಗ ತರುವಂತಹ ಅಂಶಗಳನ್ನು ಒಳಗೊಂಡಿದ್ದರೆ ಅಂತಹ ಸನ್ನಿವೇಶಗಳಲ್ಲಿ ಮಾತ್ರ ಈ ಕಾಯ್ದೆಯನ್ನು ಬಳಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಕಾಯ್ದೆಯನ್ನು ತಾತ್ಕಾಲಿಕವಾಗಿ ಅನ್ವಯಿಸದಂತೆ, ಯಾವುದೇ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದೇಶಿಸಿತ್ತು.
ಸುಪ್ರೀಂಕೋರ್ಟ್ ಆದೇಶದ ಅನುಸಾರ ಕೇಂದ್ರ ಸರ್ಕಾರ ಸೆಕ್ಷನ್ 124ಎ ಪರಿಷ್ಕರಣೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕಾನೂನು ಆಯೋಗಕ್ಕೆ ವಿನಂತಿಸಿತ್ತು. ಆದರೆ ಇತ್ತೀಚೆಗೆ ಬಿಡುಗಡೆಯಾದ ಕಾನೂನು ಆಯೋಗದ 279ನೆಯ ವರದಿಯು, ಈ ಕಾಯ್ದೆಯ ರದ್ದತಿಯ ಬಗ್ಗೆ ಯಾವುದೇ ಶಿಫಾರಸುಗಳನ್ನು ನೀಡದೆ, ಐಪಿಸಿ ಸೆಕ್ಷನ್ 124ಎ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುವಂತಹ ಸಲಹೆಗಳನ್ನು ಸರ್ಕಾರಕ್ಕೆ ನೀಡಿರುವುದು ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಕಾನೂನನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದೇ ಅಲ್ಲದೆ ಮತ್ತಷ್ಟು ಕಠಿಣ ಶಿಕ್ಷೆಗೆ ಅವಕಾಶಗಳನ್ನು ಕಲ್ಪಿಸಲು ಕಾನೂನು ಆಯೋಗ ಶಿಫಾರಸು ಮಾಡಿರುವುದು ಪ್ರಜಾಸತ್ತೆಯ ಆಶಯಗಳಿಗೆ ವಿರುದ್ಧವಾಗಿದೆ. ಈ ಕಾಯ್ದೆಯಲ್ಲಿರುವ ಹಲವು ಕರಾಳ ಅಂಶಗಳು ಹಾಗೂ ಕಠಿಣ ನಿಯಮಗಳನ್ನು ಸಡಿಲಗೊಳಿಸುವ ಸಾಮಾಜಿಕ ಚಿಂತಕರ ನಿರೀಕ್ಷೆಯನ್ನು ಕಾನೂನು ಆಯೋಗ ಹುಸಿಗೊಳಿಸಿದೆ. ಈ ಕಾಯ್ದೆಯನ್ನು ರದ್ಸುಪಡಿಸಿದರೆ ದೇಶದ ಏಕತೆ ಮತ್ತು ಭದ್ರತೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಕಾನೂನು ಆಯೋಗ, ಈ ಕಾಯ್ದೆಯಡಿ ನೀಡಬಹುದಾದ ಕನಿಷ್ಠ ಶಿಕ್ಷೆಯ ಅವಧಿಯನ್ನು ಮೂರು ವರ್ಷಗಳಿಂದ ಏಳು ವರ್ಷಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿರುವುದು ಪ್ರಜಾಸತ್ತೆಗೆ ಮಾರಕವಾಗಿ ಪರಿಣಮಿಸಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲಿ ಆಳುವ ಸರ್ಕಾರದ ವಿರುದ್ಧ ಯಾವುದೇ ರೀತಿಯ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕುವ ಸಲುವಾಗಿಯೇ ವಸಾಹತು ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿತ್ತು. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್ ಅವರಂತಹ ಅನೇಕ ಸ್ವಾತಂತ್ರ್ಯ ಸಂಗ್ರಾಮಿಗಳನ್ನು ಈ ಕಾಯ್ದೆಯಡಿಯೇ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ ಸ್ವತಂತ್ರ ಭಾರತದಲ್ಲಿ ಸಂವಿಧಾನದ ಅಡಿ ಪ್ರಜೆಗಳಿಗೆ ಸಾಂವಿಧಾನಿಕವಾಗಿ ಇರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಈ ಕಾಯ್ದೆಯು ಉಲ್ಲಂಘಿಸುತ್ತದೆ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ದೇಶದ ಅಖಂಡತೆಗೆ ಭಂಗ ತರುವಂತಹ ಯಾವುದೇ ಚಟುವಟಿಕೆಗಳನ್ನು ಅಥವಾ ಬರಹಗಳನ್ನು, ಮಾತುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಲು ಈಗಾಗಲೇ ಯುಎಪಿಎ ಅಂತಹ ಕಾನೂನುಗಳು ಜಾರಿಯಲ್ಲಿವೆ. ಯುಎಪಿಎ ಕಾಯ್ದೆಯ ಅಡಿಯಲ್ಲೇ ಆಡಳಿತಾರೂಢ ಸರ್ಕಾರದ ವಿರುದ್ಧ ತಿರಸ್ಕಾರ ಮೂಡಿಸುವಂತಹ, ದ್ವೇಷ ಸೃಷ್ಟಿಸುವಂತಹ ಹಾಗೂ ಸರ್ಕಾರದ ಬಗ್ಗೆ ಅತೃಪ್ತಿ ಮತ್ತು ದ್ವೇ಼ಷವನ್ನು ಹೆಚ್ಚಿಸುವಂತಹ ಯಾವುದೇ ಭಾಷಣ ಅಥವಾ ಬರಹಗಳನ್ನು ಶಿಕ್ಷಾರ್ಹ ಎಂದು ಪರಿಗಣಿಸಲಾಗುತ್ತದೆ. ಸೆಕ್ಷನ್ 124ಎ ಸಹ ಇದೇ ನಿಯಮಗಳನ್ನು ಅನುಸರಿಸುವ ವಸಾಹತುಶಾಹಿ ಕಾಯ್ದೆಯಾಗಿದೆ.
ಕಳೆದ ಮೂರು ನಾಲ್ಕು ದಶಕಗಳಿಂದಲೂ ಜಾಗತಿಕ ಭಯೋತ್ಪಾದನೆಯಿಂದ ಸತತ ದಾಳಿಗೊಳಗಾಗಿರುವ ಭಾರತ ಭೌಗೋಳಿಕ ರಕ್ಷಣೆ ಹಾಗೂ ದೇಶದ ಏಕತೆ-ಅಖಂಡತೆಯ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತಲೇ ಬಂದಿವೆ. ಆದರೆ ಈ ಕಾನೂನುಗಳನ್ನು ಬಳಕೆ ಮಾಡುವ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷಗಳು ಎಲ್ಲ ರೀತಿಯ ಸಾಮಾಜಿಕ/ರಾಜಕೀಯ ಪ್ರತಿರೋಧಗಳನ್ನು ಹತ್ತಿಕ್ಕಲು ಇಂತಹ ಕರಾಳ ಶಾಸನಗಳನ್ನು ಬಳಸುವುದು ಪ್ರಜಾತಂತ್ರ ವಿರೋಧಿ ಕ್ರಮವಾಗುತ್ತದೆ. ಕಳೆದ ಮೂರು ನಾಲ್ಕು ದಶಕಗಳಲ್ಲಿ ಯುಎಪಿಎ, ಟಾಡಾ, ಪೋಟಾ ಮುಂತಾದ ಶಾಸನಗಳನ್ನು ಬಳಸಿಕೊಳ್ಳುವ ಮೂಲಕವೇ ಚುನಾಯಿತ ಸರ್ಕಾರಗಳು ವಿರೋಧಿ ಧ್ವನಿಗಳನ್ನು ಹತ್ತಿಕ್ಕುವ ಕ್ರಮಗಳನ್ನು ಕೈಗೊಂಡಿರುವುದನ್ನು ಕಾಣಬಹುದು. ಸರ್ಕಾರವನ್ನು ಟೀಕೆ ಮಾಡುವವರು, ಆಡಳಿತ ನೀತಿಗಳನ್ನು ಖಂಡಿಸುವವರು, ಸಾಮಾಜಿಕ ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳು ಮತ್ತು ರಾಜಕೀಯ ವಿರೋಧಿಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವುದೇ ಅಲ್ಲದೆ ಇದೇ ಸೆಕ್ಷನ್ ಅಡಿಯಲ್ಲಿ ದೇಶದ್ರೋಹದ ಆರೋಪವನ್ನೂ ಎದುರಿಸುವ ಪ್ರಸಂಗಗಳು ಹೇರಳವಾಗಿವೆ. ಭಿನ್ನಾಭಿಪ್ರಾಯಗಳನ್ನು ಮತ್ತು ಟೀಕೆಗಳನ್ನು ಹತ್ತಿಕ್ಕುವ ಕಾನೂನಾತ್ಮಕ ಕ್ರಮಗಳಿಗೆ ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ. ಇದು ಸಾಮಾನ್ಯ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಉಂಟುಮಾಡುತ್ತದೆ ಎಂದು ಕಾನೂನು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯಲ್ಲಿ ಇರುವ ದೇಶದ್ರೋಹಕ್ಕೆ ಸಂಬಂಧಿಸಿದ ಕಾನೂನನ್ನು ಯಥಾವತ್ತಾಗಿ ಉಳಿಸಿಕೊಳ್ಳುವುದು ಅತ್ಯವಶ್ಯ ಎಂದು ಹೇಳಿರುವ ಕಾನೂನು ಆಯೋಗ, ಈ ಸೆಕ್ಷನ್ ಅಡಿಯಲ್ಲಿ ವಿಧಿಸಬಹುದಾದ ಶಿಕ್ಷೆಯ ಅವಧಿಯನ್ನು ಮೂರು ವರ್ಷಗಳ ಬದಲು ಏಳು ವರ್ಷಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿದೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದಷ್ಟೇ ಅಲ್ಲದೆ ಹಿಂಸಾಚಾರವು ವಾಸ್ತವದಲ್ಲಿ ಸಂಭವಿಸಿದೆ ಇದ್ದರೂ, ಹಿಂಸಾಚಾರವನ್ನು ಪ್ರಚೋದಿಸುವ ಒಲವು ಹೊಂದಿರುವುದನ್ನೂ ಸಹ ಈ ಕಾಯ್ದೆಯಡಿ ಶಿಕ್ಷಾರ್ಹವಾಗಿ ಪರಿಗಣಿಸುವಂತೆ ಕಾನೂನು ಆಯೋಗ ಹೇಳಿದೆ. ಹೆಚ್ಚಾಗುತ್ತಿರುವ ಉಗ್ರವಾದಿಗಳ ಸಾಮಾಜಿಕ ಜಾಲತಾಣಗಳು, ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ ಉಲ್ಬಣಿಸುತ್ತಿರುವ ಉಗ್ರಗಾಮಿಗಳ ಸಮಸ್ಯೆ ಹಾಗೂ ಮಾವೋವಾದಿಗಳ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ತನ್ನ ಕಠಿಣ ನಿಲುವು ಅಗತ್ಯವಾಗಿದೆ ಎಂದು ಕಾನೂನು ಆಯೋಗ ತನ್ನ ವರದಿಯಲ್ಲಿ ಹೇಳಿದೆ.
ಈ ನಿಟ್ಟಿನಲ್ಲಿ ಕಾನೂನು ಆಯೋಗವು ಸೆಕ್ಷನ್ 124ಎ ರದ್ದುಪಡಿಸುವ ಸಲಹೆ ನೀಡದೆ ಹೋದರೂ, ಪ್ರಜೆಗಳ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಬಾರದಂತೆ ಈ ಕಾಯ್ದೆಯನ್ನು ಪರಿಷ್ಕರಿಸಿ, ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದೇ ಅಲ್ಲದೆ, ಈ ಕಾಯ್ದೆಯಡಿ ವಿಧಿಸಲಾಗುವ ಕಠಿಣ ನಿಯಮಗಳನ್ನು ಸಡಿಲಗೊಳಿಸುವ ಮೂಲಕ ಸಾಮಾನ್ಯ ಜನರ, ಸಾಮಾಜಿಕ ಹೋರಾಟಗಾರರ ಮತ್ತು ಸಂಘಟನೆಗಳ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವಂತಹ ಸಲಹೆಗಳನ್ನು ನೀಡುವ ನಿರೀಕ್ಷೆಗಳಿದ್ದವು. ಆದರೆ ಕಾನೂನು ಆಯೋಗದ ಶಿಫಾರಸುಗಳು ಈ ಆಶಯಗಳಿಗೆ ವ್ಯತಿರಿಕ್ತವಾಗಿದೆ. 2018ರ ತನ್ನ ವರದಿಯಲ್ಲಿ ಕಾನೂನು ಆಯೋಗವು ದೇಶದ್ರೋಹದ ಕಾನೂನನ್ನು ಪುನರ್ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದುದನ್ನು ಸ್ಮರಿಸಬೇಕಿದೆ. ಆದರೆ ಇತ್ತೀಚಿನ ವರದಿಯಲ್ಲಿ ಕಾನೂನು ಆಯೋಗವು ಇದಕ್ಕೆ ವ್ಯತಿರಿಕ್ತವಾಗಿ ದೇಶದ್ರೋಹ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸುವ ರೀತಿಯಲ್ಲಿ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿಲುವನ್ನು ಪ್ರಮಾಣೀಕರಿಸಬೇಕಿರುವ ಕೇಂದ್ರ ಸರ್ಕಾರ ಈ ಶಿಫಾರಸುಗಳನ್ನೇ ಆಧರಿಸಿ ತನ್ನ ವಾದ ಮಂಡಿಸುವ ಸಾಧ್ಯತೆಗಳೂ ಇವೆ. ಉಗ್ರವಾದ, ಪ್ರತ್ಯೇಕತಾವಾದ, ಭಯೋತ್ಪಾದನೆ ಮತ್ತು ಮತೀಯವಾದವನ್ನೂ ಒಳಗೊಂಡಂತೆ ಭಾರತದ ಏಕತೆ ಮತ್ತು ಅಖಂಡತೆಯನ್ನು ಭಂಗಗೊಳಿಸುವ ಯಾವುದೇ ಚಟುವಟಿಕೆಗಳನ್ನು ನಿಯಂತ್ರಿಸುವುದು, ನಿಗ್ರಹಿಸುವುದು ಸರ್ಕಾರಗಳ ಆದ್ಯತೆ ಮತ್ತು ಕರ್ತವ್ಯವೇ ಆಗಿರುತ್ತದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಮಾಜಘಾತುಕ ಶಕ್ತಿಗಳ ಉಪಟಳದಿಂದ ಸಾರ್ವಜನಿಕ ಜೀವನದಲ್ಲೂ ಕ್ಷೋಭೆ ಹೆಚ್ಚಾಗುವುದರಿಂದ ಯಾವುದೇ ರೀತಿಯ ವಿಧ್ವಂಸಕ-ವಿಚ್ಛಿದ್ರಕಾರಿ ಚಟುವಟಿಕೆಗಳನ್ನು, ಸಮಾಜವಿರೋಧಿ ನಿಲುವುಗಳನ್ನು ನಿಯಂತ್ರಿಸುವುದು ಅತ್ಯವಶ್ಯವಾಗಿರುತ್ತದೆ. ಆದರೆ ಈ ನಿಯಂತ್ರಣದ ಕಾಯ್ದೆ-ಕಾನೂನುಗಳು ಸಂವಿಧಾನದ ಚೌಕಟ್ಟಿನೊಳಗೇ ರೂಪುಗೊಳ್ಳಬೇಕಿದ್ದು, ಜನಸಾಮಾನ್ಯರ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರತಿರೋಧದ ಸ್ವಾತಂತ್ರ್ಯಗಳನ್ನು ರಕ್ಷಿಸುವುದೂ ಸರ್ಕಾರಗಳ ಸಾಂವಿಧಾನಿಕ ಜವಾಬ್ದಾರಿಯಾಗಿರುತ್ತದೆ. ಸಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸಲು ರೂಪಿಸಲಾಗಿರುವ ಶಾಸನಗಳ ದುರ್ಬಳಕೆಯಾಗದಂತೆ ಎಚ್ಚರ ವಹಿಸುವುದು ಸರ್ಕಾರಗಳ ಸಾಂವಿಧಾನಿಕ ಆದ್ಯತೆಯಾಗಬೇಕಿದೆ.ಈ ದೃಷ್ಟಿಯಿಂದ ನೋಡಿದಾಗ ಭಾರತದಲ್ಲಿ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಸಂಹಿತೆ ಹಾಗೂ ಯುಎಪಿಎ ಮುಂತಾದ ಕಾನೂನುಗಳಲ್ಲೇ ಯಾವುದೇ ರೀತಿಯ ಸಮಾಜಘಾತುಕ, ವಿಧ್ವಂಸಕಾರಿ ಚಟುವಟಿಕೆಗಳನ್ನೂ ನಿಯಂತ್ರಿಸಬಹುದಾದ ನಿಯಮಗಳಿವೆ. ಸಾಮಾಜಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಸಮಾಜದ ವಿವಿಧ ಸ್ತರಗಳಲ್ಲಿ ಜನಸಾಮಾನ್ಯರ ನಡುವೆ ಸಾಮರಸ್ಯ, ಸದ್ಭಾವನೆ ಮತ್ತು ಸಂವೇದನಾಶೀಲತೆಯನ್ನು ಬೆಳೆಸಲು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸರ್ಕಾರಗಳ ಆಡಳಿತ ನೀತಿಗಳಿಗೆ ವ್ಯಕ್ತವಾಗುವ ಸಾರ್ವಜನಿಕ ವಿರೋಧ ಮತ್ತು ಪ್ರತಿರೋಧದ ಹಿಂದೆ ಸಮಾಜದ ಒಳಿತಿನ ಕಾಳಜಿ ಇರುತ್ತದೆ ಎನ್ನುವುದನ್ನು ಸರ್ಕಾರಗಳು ಅರ್ಥಮಾಡಿಕೊಳ್ಳುವುದು ಅತ್ಯವಶ್ಯ. ಸರ್ಕಾರದ ನೀತಿಗಳನ್ನು ವಿರೋಧಿಸುವುದು ಅಥವಾ ಟೀಕಿಸುವುದು ದೇಶವನ್ನು ಅಥವಾ ಪ್ರಭುತ್ವವನ್ನು ವಿರೋಧಿಸಿದಂತಾಗುವುದಿಲ್ಲ ಎಂಬ ಎಚ್ಚರಿಕೆಯನ್ನೂ ಹೊಂದಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್ ಈ ದೇಶದ್ರೋಹದ ಕಾನೂನಿನ ಪರಿಷ್ಕರಣೆಗಾಗಿ ಮೊಕದ್ದಮೆಯನ್ನು ವಿಚಾರಣೆಗೊಳಪಡಿಸಿದೆ. ತನ್ನ ವಸಾಹತು ಆಳ್ವಿಕೆಯಲ್ಲಿ ಈ ಕಾನೂನು ರೂಪಿಸಿದ ಬ್ರಿಟನ್ ಒಳಗೊಂಡಂತೆ ಹಲವು ರಾಷ್ಟ್ರಗಳು ದೇಶದ್ರೋಹ ಕಾಯ್ದೆಯನ್ನು ರದ್ದುಪಡಿಸಿವೆ. ಭಾರತ ಸರ್ಕಾರವೂ ಇದೇ ಹಾದಿಯಲ್ಲಿ ಸಾಗಲಿದೆ ಎಂಬ ಶ್ರೀಸಾಮಾನ್ಯನ ನಿರೀಕ್ಷೆಯನ್ನು ಸುಪ್ರೀಂಕೋರ್ಟ್ ಸಾಕಾರಗೊಳಿಸುತ್ತದೆ ಎಂಬ ಆಶಯದೊಂದಿಗೆ, ನ್ಯಾಯಾಲಯದ ಅಂತಿಮ ತೀರ್ಪಿಗೆ ಕಾಯಬೇಕಾಗಿದೆ.