ಶಾಂತಿಯುತ ಗಣೇಶ ಹಬ್ಬ ಆಚರಣೆ ಖಾತರಿಗೆ ಪೊಲೀಸರಿಗೆ ಸೂಚನೆ..
ಅಧಿಕಾರ ದುರುಪಯೋಗ ಮಾಡಲ್ಲ, ಯಾರಿಗೂ ನಿರ್ಬಂಧ ಹೇರಲ್ಲ..
ಬೆಂಗಳೂರು : ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ ಶಕ್ತಿಗಳ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಎಂದು ಪೋಲೀಸರಿಗೆ ಸೂಚಿಸಿದ್ದೇವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಗಣೇಶೋತ್ಸವ ಆಚರಣೆಗೆ ಸರ್ಕಾರ ಅನೇಕ ನಿರ್ಬಂಧ ಹೇರಿದೆ ಎಂಬ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆಗೆ ಕೆಪಿಸಿಸಿ ಕಚೇರಿಯಲ್ಲಿ ತಿರುಗೇಟು ನೀಡಿ, ಅವರು ಈ ವಿಚಾರದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಗಣೇಶ ಹಬ್ಬವನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಬೇಕು. ಮೆರವಣಿಗೆ ಹೋಗುವಾಗ ಶಿಸ್ತು ಪಾಲನೆ ಆಗಬೇಕು, ವಿದ್ಯುತ್ ಕಂಬ, ತಂತಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದ್ದಾರೆ.
ಅವರು ಏನಾದರೂ ಮಾಡಲಿ. ಗಣೇಶ ಬಿಜೆಪಿಯವರ ಆಸ್ತಿಯಲ್ಲ. ಬಾಲಗಂಗಾಧರ ತಿಲಕರು ಆರಂಭಿಸಿದ ಆಚರಣೆ ನಡೆದುಕೊಂಡು ಬರುತ್ತಿದೆ. ನಾವು ಹಬ್ಬಕ್ಕೆ ರಜೆ ನೀಡಿ, ಹಬ್ಬ ಆಚರಣೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಅವರು ಮೈಸೂರಿನ ಟಿ ನರಸೀಪುರ ಪೊಲೀಸ್ ಠಾಣೆಗಾದರೂ ಅಥವಾ ಎಲ್ಲಿಗಾದರೂ ಹೋಗಲಿ. ಏನಾದರೂ ಮಾಡಲಿ. ಸುಳ್ಳೇ ಬಿಜೆಪಿಯವರ ಮನೆ ದೇವರು. ಪೊಲೀಸ್ ಠಾಣೆಗೆ ಯಾಕೆ ಹೋಗುತ್ತಿದ್ದಾರೆ? ಇಲ್ಲದ ವಿಚಾರ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಗೃಹ ಸಚಿವರಾಗಿದ್ದವರು. ಅವರ ಪರಿಮಿತಿ ಏನು ಎಂದು ಅರಿಯಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಸತೀಶ್ ಜಾರಕಿಹೊಳಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್; ‘ಆರೋಪಗಳಿವೆ, ಬಲವಾದ ಸಾಕ್ಷ್ಯ ಎಲ್ಲಿದೆ?’
ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ನಿರ್ಬಂಧ ಹೇರಲ್ಲ..
ನಾವು ಬಿಜೆಪಿಯವರ ಸಭೆಗಳಿಗೆ ನಿಯಂತ್ರಣ ಹಾಕುವುದಿಲ್ಲ. ಅವರು ಕಾನೂನು ಚೌಕಟ್ಟಿನಲ್ಲಿ ಎಲ್ಲಿ ಬೇಕಾದರೂ ತಮ್ಮ ರಾಜಕೀಯ ಸಭೆ ಮಾಡಬಹುದು. ಬಿಜೆಪಿ ಅಧ್ಯಕ್ಷರು ಅನಗತ್ಯವಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಅವರು ಏನಾದರೂ ಮಾಡಬಹುದು, ಏನಾದರೂ ಹೇಳಬಹುದು. ಅವರು ಯಾವ ಮೈದಾನದಲ್ಲಿ ಕಾರ್ಯಕ್ರಮ ಮಾಡಿದರೂ ಅವರಿಗೆ ಅನುಮತಿ ನೀಡಿ ಎಂದು ನಾನೇ ಹೇಳಿರುವೆ. ಅಧಿಕಾರ ದುರುಪಯೋಗ ಮಾಡಿಕೊಂಡು ಯಾರಿಗೂ ನಿರ್ಬಂಧ ಹೇರುವುದಿಲ್ಲ. ಅದು ನಮ್ಮ ಕಾರ್ಯವೈಖರಿಯಲ್ಲ” ಎಂದು ಬಿಜೆಪಿ ಆರೋಪಕ್ಕೆ ಸಿಎಂ ಡಿಕೆ ಶಿವಕುಮಾರ್ ಕೌಂಟರ್ ನೀಡಿದ್ದಾರೆ.






