ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮೊದಲ ವಾರವೇ ಪ್ರೇಕ್ಷಕರ ಗಮನ ಸೆಳೆದಿದ್ದ ಸ್ಪರ್ಧಿ ಓಂ ಪ್ರಕಾಶ್ ರಾವ್ ಅವರು ಹಠಾತ್ತನೆ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವೀಕೆಂಡ್‌ನಲ್ಲಿ ಪ್ರಥಮಾ ಪ್ರಸಾದ್ ಎವಿಕ್ಟ್ ಆಗಿದ್ದರು. ಇದರ ಬೆನ್ನಲ್ಲೇ ಮರುದಿನ ಓಂ ಪ್ರಕಾಶ್ ರಾವ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ತಮ್ಮ ವಿಭಿನ್ನ ಡೈಲಾಗ್‌ಗಳು ಹಾಗೂ ಮಾತಿನ ಶೈಲಿಯಿಂದ ಓಂ ಪ್ರಕಾಶ್ ರಾವ್ ಗಮನ ಸೆಳೆದಿದ್ದರು. ಆದರೆ ಕಾಲಿನಲ್ಲಿ ಊತ ಹಾಗೂ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ಅಗತ್ಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದಾಗ ಅವರ ಶುಗರ್ ಮತ್ತು ಬಿಪಿ ಮಟ್ಟ ಹೆಚ್ಚಾಗಿರುವುದು ತಿಳಿದುಬಂದಿದೆ ಎನ್ನಲಾಗಿದೆ.ಆಸ್ಪತ್ರೆಯಿಂದ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಓಂ ಪ್ರಕಾಶ್ ರಾವ್ ಅವರು ತಮ್ಮ ಆರೋಗ್ಯದ ಸಮಸ್ಯೆ, ಬಿಗ್‌ಬಾಸ್ ಮನೆಯ ವಾತಾವರಣ ಹಾಗೂ ಅಲ್ಲಿನ ಅನುಭವಗಳ ಕುರಿತು ಮಾತನಾಡಿದ್ದಾರೆ.
ಬಿಗ್‌ಬಾಸ್ ಮನೆಯ ವಿನ್ಯಾಸ ಹಾಗೂ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಊಟದ ವಿಚಾರದಲ್ಲಿ ಮಾತ್ರ ತಮಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.ತಮಗೆ ಈಗಾಗಲೇ ಶುಗರ್ ಮತ್ತು ಬಿಪಿ ಸಮಸ್ಯೆ ಇರುವುದಾಗಿ ಬಿಗ್‌ಬಾಸ್‌ಗೆ ತೆರಳುವ ಮುನ್ನವೇ ವೈದ್ಯಕೀಯ ವರದಿಗಳನ್ನು ನೀಡಿದ್ದರೂ, ಆಹಾರದ ವಿಚಾರದಲ್ಲಿ ಅಗತ್ಯ ಕಾಳಜಿ ವಹಿಸಲಾಗಿಲ್ಲ ಎಂದು ಓಂ ಪ್ರಕಾಶ್ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮಂತಹ ಆರೋಗ್ಯ ಸಮಸ್ಯೆ ಇರುವವರಿಗೆ ಪ್ರತ್ಯೇಕ ಆಹಾರದ ವ್ಯವಸ್ಥೆ ಮಾಡಬಹುದಿತ್ತು. ಆಹಾರದ ವಿಚಾರದಲ್ಲಿ ಸೂಕ್ತ ಕಾಳಜಿ ವಹಿಸದಿರುವುದು ಬೇಸರ ಹಾಗೂ ಸಿಟ್ಟು ತರಿಸಿತು ಎಂದು ಅವರು ಹೇಳಿದ್ದಾರೆ.ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ತಂಡವೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತು ಎಂದು ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.






