ಮೈಸೂರು : ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಕನಸಿನ ಮನೆಯ ಪ್ರವೇಶ ಮಾಡಿದ್ದಾರೆ. ಯಾವುದೇ ಅದ್ಧೂರಿ ಆಚರಣೆಯ ಮೊರೆ ಹೋಗದೆ ಗೃಹ ಪ್ರವೇಶವನ್ನು ಸಿದ್ದರಾಮಯ್ಯ ಖಾಸಗಿಯಾಗಿಯೇ ಮಾಡಿದ್ದಾರೆ.

ಗೃಹ ಪ್ರವೇಶದ ಹಿನ್ನೆಲೆಯಲ್ಲಿ ಇಲ್ಲಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ 80*120 ಅಳತೆಯ ನಿವೇಶನದಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಂಡಿದ್ದವು. ಭವ್ಯವಾಗಿರುವ ಎರಡು ಅಂತಸ್ತಿನ ನೂತನ ಬಂಗಲೆಯ ಪ್ರವೇಶ ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ನಾಯಕರಿಗೆ ಆಹ್ವಾನಿಸಿಲ್ಲ. ಬದಲಿಗೆ ತಮ್ಮ ಆಪ್ತರು, ಕುಟುಂಬಸ್ಥರು ಮಾತ್ರ ಈ ಸರಳ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಅತ್ಯಂತ ಸರಳವಾದ ಈ ಕಾರ್ಯಕ್ರಮದಲ್ಲಿ ಸೋಮವಾರ ಮುಂಜಾನೆ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಅವರ ನೇತೃತ್ವದಲ್ಲಿ ಪೂರ್ಣಾಹುತಿ ಮತ್ತು ಗೃಹಪ್ರವೇಶದ ವಿಧಿಗಳು ಸಂಪನ್ನಗೊಂಡವು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ತೀರ ಹತ್ತಿರದ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದರು.
ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸಿದ್ದರಾಮಯ್ಯ, ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿ, ಪೂಜೆಗಳಲ್ಲಿ ಪಾಲ್ಗೊಂಡರು.
ಇನ್ನೂ ಪ್ರಮುಖವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಿರುವ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ಸ್ವಂತ ಮನೆ ಇಲ್ಲದಿರುವ ಕೊರಗೂ ಇತ್ತು. ಅಲ್ಲದೆ ಸ್ವತಃ ಅವರ ಪತ್ನಿ ಪಾರ್ವತಿಯವರಲ್ಲೂ ಇಂತಹ ಸ್ವಂತ ಮನೆಯ ಕನಸೂ ಇತ್ತು. ಈ ಹಿಂದೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದಾಗಲೆಲ್ಲ ಸಿದ್ದರಾಮಯ್ಯ ಟ.ಕೆ. ಬಡಾವಣೆಯಲ್ಲಿರುವ ತಮ್ಮ ಆಪ್ತ ಸ್ನೇಹಿತ ಮರಿಗೌಡ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಅಂತಿಮವಾಗಿ ಇದೀಗ ಸ್ವಂತ ಸೂರು ನಿರ್ಮಿಸಿ ಪತ್ನಿ ಪಾರ್ವತಿಯವರ ಕನಸು ನನಸು ಮಾಡಿದ್ದಾರೆ.






