ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳೆ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆದಿದೆ ಎನ್ನಲಾದ ವಿಚಾರದ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, “ದೂರು ಕೊಟ್ಟಿದ್ದು ಕಾಂಗ್ರೆಸ್‌ನವರೇ ಅಲ್ವಾ? ನಮ್ಮ ಪಕ್ಷದ ಒಳಗಿರುವವರೇ ದೂರು ನೀಡಿದ್ದಾರೆ” ಎಂದು ಹೇಳುವ ಮೂಲಕ ಸ್ವಪಕ್ಷೀಯರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.ಅಧಿಕಾರವನ್ನು ವಿಷಕ್ಕೆ ಹೋಲಿಸಿದ ರಾಜಣ್ಣ, “ಅಧಿಕಾರ ಎಂಬುದು ವಿಷವಿದ್ದಂತೆ. ಗಿಡದ ಸುತ್ತ ಬೆಳೆಯುವ ಕಳೆಯಿದ್ದಂತೆ” ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಅಧಿಕಾರಕ್ಕಾಗಿ ನಡೆಯುತ್ತಿರುವ ಆಂತರಿಕ ಪೈಪೋಟಿ ಹಾಗೂ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಅಸಮಾಧಾನ ಹೊರಹಾಕಿದರು.

ಸತೀಶ್ ಜಾರಕಿಹೊಳಿ ಅವರು ಈ ಬೆಳವಣಿಗೆ ಕುರಿತು ನೀಡಿರುವ ಸ್ಪಷ್ಟನೆ ಹಾಗೂ ಹೇಳಿಕೆಯನ್ನು ತಾವು ಸಂಪೂರ್ಣವಾಗಿ ನಂಬುವುದಾಗಿ ರಾಜಣ್ಣ ತಿಳಿಸಿದ್ದಾರೆ. ಪಕ್ಷದೊಳಗಿನ ಆಂತರಿಕ ಅಸಮಾಧಾನ ಮತ್ತು ನಾಯಕರ ನಡುವಿನ ಮುಸುಕಿನ ಗುದ್ದಾಟದಿಂದ ಇಂತಹ ಬೆಳವಣಿಗೆಗಳಿಗೆ ಅವಕಾಶ ಸಿಗುತ್ತಿದೆ ಎಂಬ ಸಂದೇಶವೂ ಅವರ ಹೇಳಿಕೆಯಿಂದ ಹೊರಬಂದಿದೆ.
ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆಯೂ ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುವುದಾಗಿ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ರಾಜಣ್ಣ ಈ ನಿರ್ಧಾರವನ್ನು ಪ್ರಕಟಿಸಿದರು.

ಇತ್ತೀಚೆಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ರಾಜಣ್ಣ, ತಮ್ಮ ನಿರ್ಧಾರದ ಬಗ್ಗೆ ಬಿ.ಕೆ. ಹರಿಪ್ರಸಾದ್ ಅವರಿಗೂ ತಿಳಿಸಿರುವುದಾಗಿ ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರದ 100 ದಿನಗಳ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಬಿ.ಕೆ. ಹರಿಪ್ರಸಾದ್ ಅವರನ್ನು ಆಹ್ವಾನಿಸದಿರುವ ವಿಚಾರಕ್ಕೂ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.
“ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿತ್ತೇ?” ಎಂದು ಪ್ರಶ್ನಿಸಿದ ಅವರು, ಹರಿಪ್ರಸಾದ್ ಅವರಿಗೆ ಪಕ್ಷದಲ್ಲಿ ಸೂಕ್ತ ಗೌರವ ಸಿಗದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು.ಈ ವಿಚಾರವನ್ನು ಎಐಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಬಗೆಹರಿಸಬೇಕಿದೆ ಎಂದು ಅವರು ಹೇಳಿದರು. ಪಕ್ಷದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಹಾಗೂ ಗೊಂದಲಗಳು ಕಾಲಕ್ರಮೇಣ ಸರಿಹೋಗಲಿವೆ ಎಂಬ ವಿಶ್ವಾಸವನ್ನೂ ರಾಜಣ್ಣ ವ್ಯಕ್ತಪಡಿಸಿದ್ದಾರೆ.ರಾಜಣ್ಣ ಅವರ ಈ ಹೇಳಿಕೆಗಳು ಕಾಂಗ್ರೆಸ್‌ನ ಆಂತರಿಕ ರಾಜಕೀಯ, ನಾಯಕತ್ವದ ನಡುವಿನ ಭಿನ್ನಾಭಿಪ್ರಾಯ ಹಾಗೂ ಅಧಿಕಾರ ಹಂಚಿಕೆಯ ವಿಚಾರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ.






