ಮಂಡ್ಯ: ಸೆಪ್ಟೆಂಬರ್ 14 ಹಾಗೂ 15 ರಂದು ಗಗನಚುಕ್ಕಿ ಜಲಪಾತೋತ್ಸವ ಎರಡೂ ದಿನಗಳ ಕಾಲ ನಡೆಯಲಿದ್ದು, ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 14 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದು, ಕಾರ್ಯಕ್ರಮದ ಎರಡೂ ದಿನಗಳ ಕಾಲ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲು ನಿರ್ಧಾರ ಮಾಡಲಾಗಿದೆ. ಗಗನಚುಕ್ಕಿ ಜಲಪಾತೋತ್ಸವದ ಅಂಗವಾಗಿ ವಿದ್ಯುತ್ ದೀಪಾಂಲಕಾರ, ಲೇಸರ್ ಷೋ ಆಯೋಜನೆ ಮಾಡಲಾಗ್ತಿದೆ.
ಗಗನಚುಕ್ಕಿ ಜಲಪಾತೋತ್ಸವದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಸಚಿವರಾದ ಚಲುವರಾಯಸ್ವಾಮಿ, ಹೆಚ್.ಕೆ ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಶಾಸಕ ನರೇಂದ್ರಸ್ವಾಮಿ ವ್ಯವಸ್ಥೆ ಪರಿಶೀಲನೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ ಜಲಪಾತದ ಬಳಿ ಎರಡು ದಿನ ಕಾರ್ಯಕ್ರಮಕ್ಕೆ ಬರುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗ್ತಿದೆ. ಆ ದಿನ ಸಾರಿಗೆ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗ್ತಿದೆ. ಎರಡು ದಿನದ ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ಸಂಗೀತ ರಸ ಸಂಜೆ ನೀಡಲಿವೆ.
ಜಲಪಾತೋತ್ಸವದಲ್ಲಿ ಹೆಚ್ಚಿನ ಜನರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಮಂಡ್ಯ ಡಿಸಿ ಮನವಿ ಮಾಡಿದ್ದಾರೆ. ಇದೇ ವೇಳೆ ಜಲಪಾತದ ಬಳಿ ಜಲಪಾತೋತ್ಸವದ ಲಾಂಛನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಶೇಖ್ ಆಸೀಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭಾಗಿಯಾಗಿದ್ದರು.