ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು….
ಸಾಮಾಜಿಕ ಉನ್ನತಿ ಉಂಟಾಗುವುದು ಯಾವುದರಿಂದ ? ಮೌಲಿಕ ದೃಷ್ಟಿಯಿಂದ ನೋಡಿದಾಗ ಸುತ್ತಲಿನ ಸಮಾಜಗಳಲ್ಲಿ ಅಂತರ್ಗತವಾಗಿರುವ ಜೀವನಾದರ್ಶಗಳು, ವ್ಯಕ್ತಿಗತ ನಡವಳಿಕೆಗಳು, ವೈಯುಕ್ತಿಕ ಭಾವನೆಗಳು ಹಾಗೂ ಇವೆಲ್ಲವನ್ನೂ ಪೋಷಿಸುವ ಸರಿಯಾದ ಶಿಕ್ಷಣ, ಇವೆಲ್ಲವೂ ಕಾರಣವಾಗುತ್ತವೆ. ಸಮಾಜಗಳು ಆರೋಗ್ಯಕರವಾಗಿರಬೇಕಾದರೆ ಈ ಅಂಶಗಳು ಇಂಧನವಾಗಿ ಪರಿಣಮಿಸುತ್ತದೆ. ಭಾರತದಂತಹ ಸಂಪ್ರದಾಯನಿಷ್ಠ ಸಮಾಜಗಳಲ್ಲಿ ʼ ಸಂಸ್ಕಾರ ʼ ಎಂಬ ಪದವನ್ನೂ ಬಳಸಲಾಗುತ್ತದೆ. ಸಂಸ್ಕಾರವಂತ ವ್ಯಕ್ತಿ, ಕುಟುಂಬ ಇತ್ಯಾದಿ ಗುಣವಿಶೇಷಣಗಳು ಬಳಕೆಯಲ್ಲಿರುತ್ತವೆ. ಈ ಸಂಸ್ಕಾರಗಳ ಮೂಲ ಯಾವುದು ? ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸಂಸ್ಕಾರ ಎಂಬ ಲಕ್ಷಣವನ್ನು ಬ್ರಾಹ್ಮಣಶಾಹಿಯು ನಿರ್ವಚಿಸುವ ಜೀವನ ವಿಧಾನಗಳೊಂದಿಗೆ ಸಮೀಕರಿಸಲಾಗುತ್ತದೆ.

ಆದರೆ ವರ್ತಮಾನದಲ್ಲಿ ಭಾರತೀಯ ಸಮಾಜ ಸಾಗುತ್ತಿರುವ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸಂಸ್ಕಾರ ಮತ್ತು ಸುಸಂಸ್ಕೃತ ಎಂಬ ನಿಘಂಟಿನ ಪದಗಳನ್ನೇ ಮರುನಿರ್ವಚಿಸುವ ಅವಶ್ಯಕತೆ ಎದ್ದುಕಾಣುತ್ತದೆ. ಏಕೆಂದರೆ ನಮ್ಮ ಸಾಮಾಜಿಕ ಬದುಕಿನಲ್ಲಿ ವ್ಯಕ್ತಿಗತ ʼ ಸುಸಂಸ್ಕೃತ ʼ ವರ್ತನೆಯನ್ನು ಧಾರ್ಮಿಕ ಅಚರಣೆಗಳ ಮುಖಾಂತರ, ಸಾಂಸ್ಕೃತಿಕ ಅಭಿವ್ಯಕ್ತಿಯ ಮೂಲಕ, ಸಂಪ್ರದಾಯಗಳ ಅನುಸರಣೆಯ ನೆಲೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಸಾಮಾನ್ಯವಾಗಿ ಸಮಾಜದ ಬಲಾಢ್ಯ ವರ್ಗಗಳೇ ನಿರ್ವಚಿಸುವ ಈ ʼಮೌಲ್ಯʼಗಳ ವ್ಯಾಖ್ಯಾನ ಮಾಡುವಾಗ, ಪಾರಂಪರಿಕವಾಗಿ ಒಪ್ಪಿಕೊಂಡು ಬಂದ ಪ್ರಾಚೀನ-ಮಧ್ಯಕಾಲೀನ ಗ್ರಾಂಥಿಕ ಮೂಲಗಳನ್ನು ಆಧರಿಸಲಾಗುತ್ತದೆ. ಹಾಗಾಗಿ ನಿತ್ಯ ಜೀವನದ ಆಚರಣೆಗಳು ಮತ್ತು ನಮಬಿಕೆಗಳು ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವ ಆಕರಗಳಾಗಿ ಕಾಣಲಾಗುತ್ತದೆ.
ದುರಾಚಾರ-ದುರ್ವರ್ತನೆಯ ನಿಷ್ಕರ್ಷೆ
ಈ ಅವೈಚಾರಿಕ ಆಲೋಚನಾ ಕ್ರಮದ ಪರಿಣಾಮವಾಗಿಯೇ ವರ್ತಮಾನದ ದುರ್ವರ್ತನೆಗಳನ್ನು, ದುಷ್ಕೃತ್ಯಗಳನ್ನು, ದುರಾಚಾರಗಳನ್ನು ಖಂಡಿಸುವ ಬದಲು, ಸಮಾಜದ ಸುಶಿಕ್ಷಿತ ಮುಂದುವರೆದ ವರ್ಗಗಳು, ಗತ ಇತಿಹಾಸದ ಗ್ರಾಂಥಿಕ ಹಾಳೆಗಳನ್ನು ಹೊಕ್ಕು ಅಲ್ಲಿ ಇದ್ದಿರಬಹುದಾದ ಔನ್ನತ್ಯಗಳನ್ನು, ಮೌಲ್ಯಗಳನ್ನು ಕೇಂದ್ರೀಕರಿಸುವ ಪ್ರಯತ್ನಗಳು ಕಾಣುತ್ತವೆ. ಉದಾಹರಣೆಗೆ ಮಣಿಪುರದಲ್ಲಿ ಮಹಿಳೆಯನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಿದ ಪಾಶವೀ ಕೃತ್ಯವನ್ನು ಖಂಡಿಸುವ ಬದಲು, ಮಹಾಭಾರತದಲ್ಲಿ ಕೃಷ್ಣ ದ್ರೌಪದಿಗೆ ಅಕ್ಷಯವಸ್ತ್ರ ನೀಡಿ ಆಕೆಯ ಗೌರವ ಕಾಪಾಡಿದ್ದನ್ನು ಉಲ್ಲೇಖಿಸಿ, ಕಣ್ಣೆದುರು ನಡೆಯುವ ದುರ್ಮಾರ್ಗದ ದುಷ್ಟ ಪ್ರವೃತ್ತಿಯನ್ನು ಸಹಜೀಕರಿಸಲಾಗುತ್ತದೆ. “ ಇದು ನಮ್ಮ ಸಂಸ್ಕೃತಿ ಪರಂಪರೆಯಲ್ಲ ” ಎಂದು ಹೇಳುವಾಗ ದ್ರೌಪದಿ ಪ್ರಸಂಗದಲ್ಲಿ ಪುರುಷಾಧಿಪತ್ಯದ ದುಷ್ಯಾಸನ, ಪಿತೃಪ್ರಧಾನ ವ್ಯವಸ್ಥೆಯ ಕೌರವ-ಪಾಂಡವರನ್ನು ಮರೆಗೆ ಸರಿಸಿ, ದ್ರೌಪದಿಯಲ್ಲಿರುವ ಸ್ತ್ರೀ ಅಸ್ಮಿತೆಯನ್ನು ನಗಣ್ಯಗೊಳಿಸಲಾಗುತ್ತದೆ.
ವರ್ತಮಾನದ ಮಾನವ ಸಮಾಜದಲ್ಲಿ ಪ್ರಕಟವಾಗುತ್ತಿರುವ ದುರ್ವರ್ತನೆ ಮತ್ತು ದುಷ್ಟ ಕೃತ್ಯಗಳನ್ನು ವ್ಯಾಖ್ಯಾನಿಸುವಾಗ ನಮ್ಮ ಆಲೋಚನಾ ಕ್ರಮವನ್ನು ಚರಿತ್ರೆ ಅಥವಾ ಪುರಾಣದ ಕೂಪದಲ್ಲಿ ಹುದುಗಿಸಿದಾಗ, ಎಂತಹ ಪಾಶವಿ ಕೃತ್ಯಗಳೂ ಸಮರ್ಥನೀಯ ಎನಿಸಿಬಿಡುತ್ತದೆ. ನಿರ್ದಿಷ್ಟವಾಗಿ ಮಹಿಳೆಯರ ಮತ್ತು ತಳಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳು ಈ ವಿಕೃತ ಚಿಂತನಾಲಹರಿಗೆ ಬಲಿಯಾಗುತ್ತವೆ. ತತ್ಪರಿಣಾಮವಾಗಿ ನಮ್ಮ ಸುತ್ತಲಿನ ಸಮಾಜದಲ್ಲೇ ಘಟಿಸುವ ಘೋರ ಅಪರಾಧಗಳಿಗೆ ಕಾರಣಗಳನ್ನು ಇಸ್ಲಾಮಿಕ್ ಆಕ್ರಮಣಕಾರರಲ್ಲಿ ಅಥವಾ ಬ್ರಿಟೀಷ್ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಹುಡುಕಾಡುತ್ತೇವೆ. ಈ ವಕ್ರದೃಷ್ಟಿಯ ಪರಿಣಾಮ ಅತ್ಯಾಚಾರ-ಹತ್ಯೆ ಇತ್ಯಾದಿ ಕ್ರೌರ್ಯಗಳನ್ನೂ ಸಮರ್ಥಿಸಲಾಗುತ್ತದೆ. ಬಾಬರನ ಸಂಸ್ಕೃತಿಯಲ್ಲಿ ಇದನ್ನು ಕಾಣುವ ಸಮಾಜದ ಮೇಲ್‌ವರ್ಗದ ದೃಷ್ಟಿಯಲ್ಲಿ ಭಾರತೀಯ ಸಂಸ್ಕೃತಿ ಪರಿಶುದ್ಧವಾಗಿ ಕಾಣುತ್ತದೆ.
ವರ್ತಮಾನದ ದುಷ್ಟ ಲೋಕ
ವರ್ತಮಾನದ ಸಾಮಾಜಿಕ ಚಟುವಟಿಕೆ, ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಆಚರಣಾತ್ಮಕ ವರ್ತನೆಗಳಲ್ಲಿ, ಕಾಣಲಾಗುತ್ತಿರುವ ವೈರುಧ್ಯ ಮತ್ತು ವಿರೋಧಾಭಾಸಗಳನ್ನು ವ್ಯಾಖ್ಯಾನಿಸುವಾಗ ಈ ಗ್ರಹಿಕೆಯ ಅಂತರವನ್ನು ಗಮನದಲ್ಲಿಡಬೇಕು. ಸಾಂಸ್ಥಿಕ ನೆಲೆಯಲ್ಲಿ, ಸಂಘಟನಾ ವಲಯದಲ್ಲಿ ಸೃಷ್ಟಿಸಲಾಗುವ ಮನೋವೃತ್ತಿ (Attitude) ತಳಮಟ್ಟಕ್ಕೆ ಪ್ರವಹಿಸಿದಂತೆಲ್ಲಾ ಹೇಗೆ ವೈಯುಕ್ತಿಕ ಮನಸ್ಥಿತಿಯನ್ನು (Personal Mindset) ವ್ಯಕ್ತಿಗತ ನೆಲೆಯಲ್ಲಿ ಸ್ಥಾಪಿಸುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಸಮಷ್ಟಿಯಲ್ಲಿ ಸೃಷ್ಟಿಯಾಗುವ ಮನೋವೃತ್ತಿ ವ್ಯಷ್ಠಿಯ ನೆಲೆಯಲ್ಲಿ ಸಾಂದರ್ಭಿಕವಾಗಿ ಉದ್ಧೀಪನಗೊಳಿಸುವ ಮನಸ್ಥಿತಿ ಹೇಗೆ ಸಮಾಜದಲ್ಲಿ ಕ್ರೌರ್ಯ, ಹಿಂಸೆ ಮತ್ತು ದೌರ್ಜನ್ಯಗಳನ್ನು ಸಾಂಸ್ಥೀಕರಿಸುತ್ತದೆ ಎನ್ನುವುದು ಚರ್ಚೆಗೊಳಪಡಬೇಕಾದ ವಿಚಾರ.
ಇದನ್ನೂ ಓದಿ : BREAKING : ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ : ಸಚಿವ ಸಂತೋಷ್ ಲಾಡ್ ತೀವ್ರ ಸಂತಾಪ
ಇಲ್ಲಿ ನಮಗೆ ಮಾನವ ಸಮಾಜವನ್ನು ಮುನ್ನಡೆಸುವ ಹಾದಿಯಲ್ಲಿ ವ್ಯಕ್ತಿಗತ ಮನಸ್ಥಿತಿ ನಿರ್ಣಾಯಕವಾಗುತ್ತದೆ. ಮನೋವೈಜ್ಞಾನಿಕ ಚೌಕಟ್ಟಿನಲ್ಲಿ (Psychological Framework) ಅತ್ಯಾಚಾರ, ಕೊಲೆ, ಹಲ್ಲೆ, ಗುಂಪು/ವ್ಯಕ್ತಿಗತ ಥಳಿತ, ಲೈಂಗಿಕ ದೌರ್ಜನ್ಯ ಮತ್ತು ಹಿಂಸೆ ಇವೆಲ್ಲವನ್ನೂ ವೈಯುಕ್ತಿಕ ವರ್ತನೆ (Personal behaviour) ಮತ್ತು ವ್ಯಕ್ತಿಗತ ಮನಸ್ಥಿತಿ (Individual Mindset) ಯಲ್ಲಿ ಗುರುತಿಸಬಹುದು. ಸಮಾಜಶಾಸ್ತ್ರೀಯ ಚೌಕಟ್ಟಿನಲ್ಲಿ (Sociological Framework) ನೋಡಿದಾಗ, ನಿರ್ದಿಷ್ಟ ಸಮುದಾಯಗಳ ಜಾತಿ, ಧರ್ಮ ಮತ್ತು ರೂಢಿಗತ ಸಾಂಸ್ಕೃತಿಕ ನಿರ್ದೇಶನಗಳು ಈ ದುರ್ವರ್ತನೆಗಳಿಗೆ ತಾತ್ವಿಕ ಆಕರಗಳಾಗಿ ಕಾಣುತ್ತವೆ. “ ನಾವು ಅಥವಾ ನಮ್ಮ ಸಮಾಜ ಹೀಗಿರಲಿಲ್ಲ ” ಎಂಬ ರಕ್ಷಣಾತ್ಮಕ ವಾದ (Defensive argument) “ ನಾವೇಕೆ ಹೀಗಾಗಿದ್ದೇವೆ ? ” ಎಂದು ಪ್ರಶ್ನಿಸಿಕೊಳ್ಳುವ ವಿವೇಕ-ವಿವೇಚನೆಯನ್ನು ನಾಶಪಡಿಸುತ್ತದೆ.
ವೈಚಾರಿಕತೆಯನ್ನು ರೂಢಿಸಿಕೊಳ್ಳದ ಸಾಂಪ್ರದಾಯಿಕ ಸಮಾಜವೊಂದರ ಲಕ್ಷಣ ಇದು. “ ನಮ್ಮ ಸಂಸ್ಕೃತಿ ಇದಾಗಿರಲಿಲ್ಲ, ಈಗಲೂ ಇದಲ್ಲ ” ಎಂಬ ಅತಾರ್ಕಿಕ ವಾದವನ್ನು ಪುಷ್ಟೀಕರಿಸುವ ಸಲುವಾಗಿಯೇ, ವರ್ತಮಾನದ ದುಷ್ಟ ವರ್ತನೆಗಳನ್ನು, ಕ್ರೌರ್ಯ ಪೈಶಾಚಿಕ ಕೃತ್ಯಗಳನ್ನು ಸಮರ್ಥಿಸಲು ʼಅನ್ಯರನ್ನುʼ (Others) ಸೃಷ್ಟಿಸಲಾಗುತ್ತದೆ. ಭಾರತದ ಸಂದರ್ಭದಲ್ಲಿ ಈ ʼಅನ್ಯʼರು ಕಾಣುವುದು ಹೊರದೇಶಗಳಿಂದ ಬಂದು ನೆಲೆಸಿದ ಅರಬ್ ʼ ಆಕ್ರಮಣಕಾರರು ʼ, ಬ್ರಿಟೀಷ್ ವಸಾಹತುಶಾಹಿ ಮತ್ತು ವಿದೇಶಿ ಸಂಸ್ಕೃತಿಗಳಲ್ಲಿ. ಈ ಬಾಹ್ಯ ಆಕ್ರಮಣಗಳು ನಡೆಯದೆ ಹೋಗಿದ್ದರೆ ಭಾರತೀಯ ಸಮಾಜದ ಔದಾತ್ಯಗಳೆಲ್ಲವೂ ಸುಸ್ಥಿತಿರಿಯಲ್ಲಿರುತ್ತಿದ್ದವು ಎಂಬ ಅತಾರ್ಕಿಕ ವಾದವನ್ನು ಈಗಲೂ ಕಾಣಬಹುದು. ಸಂಘಪರಿವಾರದ ಸಂವಾದಗಳಲ್ಲಿ ಇದು ಢಾಳಾಗಿ ಕಾಣುತ್ತದೆ.
ಸಾಮಾಜಿಕ ಹಂದರದಲ್ಲಿ
ಮತ್ತೊಂದು ಬದಿಯಲ್ಲಿ ಈ ದುರ್ವರ್ತನೆಗಳನ್ನು ಪ್ರತಿರೋಧಿಸುವ ಸಂಕಥನಗಳಲ್ಲಿ ಪ್ರಾಚೀನ ಭಾರತದ ಜೀವನ ಮೌಲ್ಯಗಳು, ಮಧ್ಯಕಾಲೀನ ಬ್ರಾಹ್ಮಣಶಾಹಿ ಮತ್ತು ಮನುಸ್ಮೃತಿಯಂತಹ ಸಂಹಿತೆಗಳು ಪ್ರಧಾನವಾಗಿ ಟೀಕೆಗೊಳಗಾಗುತ್ತವೆ. ಸಮಕಾಲೀನ ಸಮಾಜದ ಎಲ್ಲ ದುಷ್ಟ ಪ್ರವೃತ್ತಿಗಳನ್ನೂ ಈ ಧರ್ಮಶಾಸ್ತ್ರಗಳಲ್ಲಿ, ಸಂಹಿತೆಗಳಲ್ಲಿ ಗುರುತಿಸುವ ಮೂಲಕ, ಅತ್ಯಾಚಾರದಂತಹ ಹೀನಾತಿಹೀನ ಕೃತ್ಯಗಳನ್ನೂ ಪಾರಂಪರಿಕ ಸಾಮಾಜಿಕ ಬೆಳವಣಿಗೆಯ ಒಂದು ಭಾಗ ಎಂದೇ ವ್ಯಾಖ್ಯಾನಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ʼ ಮನುವಾದಿ ʼ ಪದ ಇಲ್ಲಿ ಉಲ್ಲೇಖನಾರ್ಹ. ತಾತ್ವಿಕ ದೃಷ್ಟಿಯಿಂದ ನೋಡಿದಾಗ ಮನುಸ್ಮೃತಿಯಂತಹ ಧಾರ್ಮಿಕ ಸಂಹಿತೆಗಳು ಅಥವಾ ಕುರಾನ್ ಆಧರಿಸಿದ ಇಸ್ಲಾಮೀ ವ್ಯಾಖ್ಯಾನಗಳು ಮೂಲತಃ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ.
ಈ ಸಾಂಸ್ಥಿಕ ವಲಯಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರಬಲ ವರ್ಗಗಳು, ಪ್ರಾಚೀನ-ಮಧ್ಯಕಾಲೀನ ಸಂಹಿತೆಗಳನ್ನು ವರ್ತಮಾನದ ಸಂದರ್ಭಗಳಿಗೆ ಪೂರಕವಾಗುವಂತೆ ಸಾಂಸ್ಥೀಕರಿಸುತ್ತವೆ. ಕೇರಳದ ಮೌಲ್ವಿಯೊಬ್ಬರು ಇತ್ತೀಚೆಗೆ ಮಹಿಳೆಯರನ್ನು ಕುರಿತು ಮಾಡಿದ ವ್ಯಾಖ್ಯಾನವನ್ನು ಮತ್ತು ಸಮಾನಾಂತರವಾಗಿ ಹರಿಯಾಣದಲ್ಲಿ ನಡೆದ ಶುದ್ಧೀಕರಣದ ಘಟನೆಯನ್ನೂ ಗಮನಿಸಬಹುದು. ಮೂಲಭೂತವಾದಿ ಸಂಘಟನೆ-ಸಂಸ್ಥೆಗಳ ಮುಖಾಂತರ ತಳಮಟ್ಟದವರೆಗೂ ಪ್ರವಹಿಸುವ ಈ ʼ ಮನೋವೃತ್ತಿ ʼ (Attitude) ಕಾಲಾನುಕ್ರಮದಲ್ಲಿ ಜನಸಾಮಾನ್ಯರ ನಡುವೆ ಸಂಘಟನಾತ್ಮಕ ʼಅಲೋಚನಾ ಕ್ರಮವಾಗಿ ʼ (Thought process) ರೂಪುಗೊಳ್ಳುತ್ತದೆ. ನಿರ್ದಿಷ್ಟ ಸಂದರ್ಭಗಳಲ್ಲಿ ಈ ಪ್ರಭಾವಕ್ಕೆ ಒಳಗಾಗಿರುವ ವ್ಯಕ್ತಿಗಳಲ್ಲಿ ಕ್ರೌರ್ಯ-ದೌರ್ಜನ್ಯದ ಮನಸ್ಥಿತಿ (Mindset) ನೆಲೆ ಮಾಡುತ್ತದೆ.

ನವ ಭಾರತದ ಕರಾಳ ಚಿತ್ರಣ
ಭಾರತೀಯ ಸಮಾಜ ಎದುರಿಸುತ್ತಿರುವ ಜಟಿಲ ಸಿಕ್ಕುಗಳನ್ನು ಈ ತಾತ್ವಿಕ ನೆಲೆಯಲ್ಲಿ ಮರು ವಿಮರ್ಶೆಗೊಳಪಡಿಸಬೇಕಿದೆ. ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ , ಅತ್ಯಾಚಾರ, ಹತ್ಯೆಗಳು ಸಾಂಸ್ಥಿಕ ಮನೋವೃತ್ತಿ (Institutional Attitude ) ಮತ್ತು ವೈಯುಕ್ತಿಕ ಮನಸ್ಥಿತಿ (Individual Mindset) ಎರಡನ್ನೂ ಬಿಂಬಿಸುತ್ತವೆ. ಕಳೆದ ವಾರ ಅಗ್ನೇಯ ದೆಹಲಿಯ ಕಲ್ಕಾಜಿ ಮಂದಿರ್ ಸಮೀಪದಲ್ಲಿರುವ ಅಸ್ತಾ ಕುಂಜ್ ಉದ್ಯಾನದಲ್ಲಿ 17 ವರ್ಷದ ಅಪ್ರಾಪ್ತೆಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ , ಈ ಸರಣಿ ದೌರ್ಜನ್ಯಗಳಲ್ಲಿ ಇತ್ತೀಚಿನದ್ದು. ಒಬ್ಬ ಉದ್ಯಮಿ, ಒಬ್ಬ ವಕೀಲ ಮತ್ತೊಬ್ಬ ವಿದ್ಯಾರ್ಥಿ ಈ ಅತ್ಯಾಚಾರದ ಆರೋಪಿಗಳಾಗಿದ್ದು ಮೂವರನ್ನೂ ಬಂಧಿಸಲಾಗಿದೆ. ಪೊಲೀಸ್ ವೇಷದಲ್ಲಿ ಸಂತ್ರಸ್ತ ಯುವತಿ ಮತ್ತು ಆಕೆಯ ಗೆಳೆಯನನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ತದನಂತರ ಆಕೆಯನ್ನು ಪ್ರತ್ಯೇಕ ಜಾಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ದೆಹಲಿಯಲ್ಲಿ ನಡೆದಿರುವ ಈ ಘಟನೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ವಿಪರ್ಯಾಸವೆಂದರೆ ಸೆಪ್ಟಂಬರ್ ತಿಂಗಳಲ್ಲೇ ದೆಹಲಿಯಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಸೆಪ್ಟಂಬರ್ 10ರಂದು ಸ್ವರೂಪ್ ನಗರದಲ್ಲಿ 16 ವರ್ಷದ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಸೆಪ್ಟಂಬರ್ 16ರಂದು ಸಾದರ್ ಬಜಾರ್‌ನ ಮಳಿಗೆಯೊಂದರ ಒಳಗೆ ಅಪ್ರಾಪ್ತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸೆಪ್ಟಂಬರ್ 21ರಂದು ಕಿಶನ್ ಗಂಜ್‌ನಲ್ಲಿ ಆರು ವರ್ಷದ ಹಸುಳೆಯ ಮೇಲೆ ಲೈಂಗಿಕ ಹಲ್ಲೆ ನಡೆದಿದೆ. ಕಳೆದ ತಿಂಗಳಿನಲ್ಲಿ ಚಲಿಸುತ್ತಿರುವ ಬಸ್ ಒಂದರಲ್ಲಿ 16 ವರ್ಷದ ಅಪ್ರಾಪ್ರತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. (https://www.thehindu.com/news/cities/Delhi/minor-girl-gang-raped-at-astha-kunj-park-near-kalkaji-mandir-by-men-posing-as-policemen-friend-assaulted/article71494085.ece)
ದೇಶದ ರಾಜಧಾನಿಯಲ್ಲೇ ಇಷ್ಟೊಂದು ಅತ್ಯಾಚಾರಗಳು ನಡೆಯುತ್ತಿದ್ದರೂ, ಕೇಂದ್ರ ಗೃಹಸಚಿವಾಲಯವಾಗಲೀ, ಪ್ರಧಾನಮಂತ್ರಿಗಳ ಕಚೇರಿಯಾಗಲೀ ಅಥವಾ ಮಹಿಳಾ ಕಲ್ಯಾಣ ಸಚಿವಾಲಯವಾಗಲೀ ಸಾರ್ವಜನಿಕವಾಗಿ ಹೇಳಿಕೆಯನ್ನೂ ನೀಡದಿರುವುದು, ಹಿಂದೂ ಧರ್ಮದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಸಂಘಟನೆಗಳು ಮೌನ ವಹಿಸಿರುವುದು ಅಚ್ಛರಿ ಮೂಡಿಸುತ್ತದೆ. ಇದನ್ನೇ ಸಮಾಜಶಾಸ್ತ್ರೀಯ ದೃಷ್ಟಿಯಿಂದ ʼ ಸಾಮಾಜಿಕ ಮನೋವೃತ್ತಿ ʼ (Social Attitude) ಎಂದು ವ್ಯಾಖ್ಯಾನಿಸಬಹುದು. ಈ ಮನೋವೃತ್ತಿ ಸಾಂಸ್ಥೀಕರಣಗೊಂಡಾಗ (Institutionalised) ಜವಾಬ್ದಾರಿಯುತ ಸಂಸ್ಥೆಗಳೂ ಸಹ ವಿವೇಕ ಕಳೆದುಕೊಂಡಂತೆ ವರ್ತಿಸುತ್ತವೆ. ರಾಜಕೀಯ ಪ್ರತಿಕ್ರಿಯೆಗಳು ಕೇವಲ ಅಸ್ತಿತ್ವವಾದಿ ನೆಲೆಯಲ್ಲಿ ಪ್ರಕಟಗೊಳ್ಳುತ್ತವೆ.
ಸಾಂಸ್ಥಿಕ ವೈರುಧ್ಯಗಳು
ಇದರ ಒಂದು ಉದಾಹರಣೆಯನ್ನು ಬಿಹಾರದ ಘಟನೆಯಲ್ಲಿ ಗುರುತಿಸಬಹುದು. ಸೆಪ್ಟಂಬರ್ 19ರಂದು ಬಿಹಾರದ ಜಮುಯಿ ಜಿಲ್ಲೆಯಲ್ಲಿ ಹತ್ತನೆ ತರಗತಿಯ ಬಾಲಕಿ ಮತ್ತು ಆಕೆಯ ಸಹಪಾಠಿಯನ್ನು ಸಾರ್ವಜನಿಕವಾಗಿಯೇ ಅವಮಾನಿಸಲಾಗಿದೆ. ಬಾಲಕಿಗೆ ಲೈಂಗಿಕ ಚಿತ್ರಹಿಂಸೆ ನೀಡಲಾಗಿದೆ. ಈ ಘಟನೆಯನ್ನು ಖಂಡಿಸಿರುವ ಬಿಜೆಪಿ ಶಾಸಕಿ/ಸಚಿವೆ ಶ್ರೇಯಸಿ ಸಿಂಗ್, ದುಷ್ಕರ್ಮಿಗಳು ನೈತಿಕ ಪೊಲೀಸ್‌ಗಿರಿಯನ್ನು (Moral Policing) ಯೋಗ್ಯ ರೀತಿಯಲ್ಲಿ ಆಪ್ತವಾಗುವ ಹಾಗೆ ನಡೆಸಬಹುದಿತ್ತು ಎಂದು ಹೇಳಿದ್ದಾರೆ. ಅಂದರೆ ಒಬ್ಬ ಚುನಾಯಿತ ಪ್ರತಿನಿಧಿ ತುಡುಗುಪಡೆಗಳ (Fringe Elements), ಸಮಾಜಘಾತುಕರ ನ್ಯಾಯಾಂಗೇತರ ಚಟುವಟಿಕೆಗಳನ್ನು (Extra Judicial Activities) ಅನುಮೋದಿಸಿ, ಅದಕ್ಕೆ ಘನತೆಯ ಕವಚವನ್ನೂ ಹೊದಿಸಿದ್ದಾರೆ. ಇದು ಸಾಂಸ್ಥಿಕ ಮನೋವೃತ್ತಿಗೆ ಒಂದು ಜ್ವಲಂತ ನಿದರ್ಶನ.
ಮತ್ತೊಂದು ಪ್ರಸಂಗದಲ್ಲಿ ಪಾಟ್ನಾ ಹೈಕೋರ್ಟ್ ಜುಲೈ 26ರಂದು ನೀಡಿದ್ದ ತೀರ್ಪಿನಲ್ಲಿ “ ಮಹಿಳೆಯೋರ್ವರ ಸೆಲ್ವಾರ್ ತೆಗೆಯಲು ಯತ್ನಿಸಿ ಆಕೆಯ ಎದೆಯನ್ನು ಒತ್ತಿ ದೈಹಿಕವಾಗಿ ಕಿರುಕುಳ ನೀಡುವುದನ್ನು ಅತ್ಯಾಚಾರಕ್ಕೆ ಯತ್ನ ಎಂದು ಪರಿಗಣಿಸಲಾಗುವುದಿಲ್ಲ ” ಎಂದು ಹೇಳಲಾಗಿದೆ. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಸ್ವ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡಿದೆ. ಲೈಂಗಿಕ ಅಪರಾಧಗಳಲ್ಲಿ ನ್ಯಾಯಾಲಯಗಳು, ಕೆಲವು ನ್ಯಾಯಾಧೀಶರು ಬಳಸುವ ಕಾನೂನಾತ್ಮಕ ಮಾನದಂಡಗಳನ್ನು ಪುನರ್ ಪರಿಶೀಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಇದು ಸ್ವಾಗತಾರ್ಹ. ಆದರೆ ಈ ರೀತಿಯ ನ್ಯಾಯಾಂಗದ ನಿಷ್ಕರ್ಷೆಗಳನ್ನು ನಿಯಂತ್ರಿಸುವುದು ಹೇಗೆ ? ಸಾಂಸ್ಥಿಕ ಮನೋವೃತ್ತಿಯ ಸಮಸ್ಯಾತ್ಮಕ ಆಯಾಮವನ್ನು (Problematic Dimension) ಇಲ್ಲಿ ಗುರುತಿಸಬಹುದು.
ಸಂಘಟನೆ ಮತ್ತು ಸಮೂಹ ಮನೋವೃತ್ತಿ
ಮೂಲಭೂತವಾದಿ ಸಂಘಟನೆಗಳು, ಧಾರ್ಮಿಕ ಮತಾಂಧ ಗುಂಪುಗಳು ಈ ಸಾಂಸ್ಥಿಕ ಮನೋವೃತ್ತಿಯನ್ನೇ ತಮ್ಮ ಬತ್ತಳಿಕೆಯಲ್ಲಿಟ್ಟುಕೊಂಡು, ಯುವ ಸಮೂಹದಲ್ಲಿ ಹಿಂಸಾತ್ಮಕ ಪ್ರವೃತ್ತಿಯನ್ನು ಉದ್ಧೀಪನಗೊಳಿಸುತ್ತವೆ. ಶಿಕ್ಷಾಭೀತಿ ಇಲ್ಲದೆ ನಡೆಯುತ್ತಿರುವ ಗುಂಪು ಥಳಿತಗಳು ಇದಕ್ಕೊಂದು ನಿದರ್ಶನ. ಗುಂಪು ಥಳಿತ (Lynching) ಹೊಸ ವಿದ್ಯಮಾನವೇನಲ್ಲ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಯಜಮಾನಿಕೆಯ ದಬ್ಬಾಳಿಕೆಯನ್ನು ಶಾಶ್ವತಗೊಳಿಸಲು, ಅಮಾಯಕ ಶ್ರಮಿಕರ ಪ್ರತಿರೋಧವನ್ನು ಮಣಿಸಲು ಇದೇ ತಂತ್ರವನ್ನು ಬಳಸುವುದು ಚಾರಿತ್ರಿಕ ವಾಸ್ತವ. ಇದರ ಆಧುನಿಕ/ಸಮಕಾಲೀನ ರೂಪವನ್ನು ಮತಾಂಧ ಸಂಘಟನೆಗಳು ಅಳವಡಿಸಿಕೊಂಡಿವೆ. ಬಿಹಾರದ ಜಮುಯಿ ಘಟನೆಯ ನೆರಳಿನಲ್ಲೇ ಗಮನಿಸಿದಾಗ, ಅಮಾಯಕರನ್ನು ಕಂಡಲ್ಲಿ ಹಿಡಿದು ಥಳಿಸುವ ಗುಂಪುಗಳಿಗೂ ಅದೇ ರೀತಿಯ ಸಲಹೆಯನ್ನು ನೀಡುವ ಸಾಧ್ಯತೆಗಳಿವೆ.
ಭಾರತದಲ್ಲಿ ಮತೀಯವಾದ ಮತ್ತು ಕೋಮುವಾದಿ ರಾಜಕೀಯ ಧೃವೀಕರಣಗೊಂಡ ನಂತರದಲ್ಲಿ ಹಿಂದೂ-ಮುಸ್ಲಿಂ ಮತಾಂಧ ಸಂಘಟನೆಗಳು ʼ ಗುಂಪು ಥಳಿತ ಅಥವಾ ಸಮೂಹ ಥಳಿತʼವನ್ನು (Mob Lynching) ಸಾಂಘಿಕ ಚಟುವಟಿಕೆಯ (Organisational Activity) ಒಂದು ಭಾಗವಾಗಿ ಅಳವಡಿಸಿಕೊಂಡಿವೆ. ಇಲ್ಲಿ ಹಲ್ಲೆಕೋರ ಮನಸ್ಥಿತಿಗಳು ಉತ್ಪಾದನೆಯಾಗುತ್ತವೆ. ಅಂತರ್ ಧರ್ಮೀಯ ವಿವಾಹಗಳ ಸಂದರ್ಭದಲ್ಲಿ ಈ ಮತಾಂಧ ಸಂಘಟನೆಗಳು ನಡೆಸುವ ಪರಸ್ಪರ ಹಲ್ಲೆ, ಆಕ್ರಮಣ, ಹತ್ಯೆ ಇತ್ಯಾದಿ ಕ್ರೌರ್ಯಗಳಿಗೆ ಈ ಉತ್ಪಾದಿತ ಮನಸ್ಥಿತಿ ಕಾರಣವಾಗುತ್ತದೆ. ಇದನ್ನು ಕಾರ್ಯಗತಗೊಳಿಸುವ ವ್ಯಕ್ತಿ ಅಥವಾ ಗುಂಪು, ಧಾರ್ಮಿಕ ಸಂಹಿತೆಗಳನ್ನೇನೂ ಓದಿರುವುದಿಲ್ಲ. ಆದರೆ ಅದರ ಸಾಂಸ್ಥಿಕ ಚೌಕಟ್ಟುಗಳು ಒದಗಿಸುವ ನಿರ್ದೇಶನ-ಮಾರ್ಗದರ್ಶನವನ್ನು ಅನುಸರಿಸುತ್ತವೆ.
ಇಂತಹ ಕ್ರೂರ ಮನಸ್ಥಿತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುವುದು ಮಹಿಳೆಯರೇ ಆಗಿರುತ್ತಾರೆ. ಸಾಮಾಜಿಕ ಬಹಿಷ್ಕಾರ, ಮರ್ಯಾದೆಗೇಡು ಹತ್ಯೆ ಲವ್ ಜಿಹಾದ್ ಚೌಕಟ್ಟಿನ ಹಲ್ಲೆಗಳು ಇವೆಲ್ಲವೂ ಸಹ ಸಾಂಸ್ಥಿಕ ಜಾತಿ-ಧರ್ಮವನ್ನು ಕಾಪಾಡುವ ಅಸ್ತ್ರಗಳಾಗಿ ಕಾಣುವುದಾದರೂ, ಮೂಲತಃ ಮಹಿಳೆಯ ಬದುಕುವ ಘನತೆ, ಅಸ್ತಿತ್ವ ಮತ್ತು ಅಸ್ಮಿತೆಯನ್ನು ನಿರ್ಬಂಧಿಸುವ ಅಥವಾ ಅಲ್ಲಗಳೆಯುವ ಪ್ರಯತ್ನವೇ ಆಗಿರುತ್ತದೆ. ಎಷ್ಟು ಆಳಕ್ಕಿಳಿದು ಶೋಧಿಸಿದರೂ ಕಾಣದ ಒಂದು ವಿದ್ಯಮಾನ ಎಂದರೆ, ಎರಡೂ ಧರ್ಮರಕ್ಷಕ ಪಡೆಗಳು ಅಥವಾ ಸಂಸ್ಥೆಗಳು ʼಮಹಿಳೆಯರನ್ನು ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸುವ” ಕಾರ್ಯಪಡೆಗಳನ್ನು ರಚಿಸಿರುವುದು ಕಾಣುವುದಿಲ್ಲ. ಅಥವಾ ʼ ಮಹಿಳೆಯ ವೈಯುಕ್ತಿಕ-ವ್ಯಕ್ತಿಗತ ಘನತೆಯನ್ನು ಕಾಪಾಡುವ ʼ ಸಂಘಟನಾತ್ಮಕ ವೇದಿಕೆಗಳನ್ನು ಕಟ್ಟಿರುವುದು ಕಂಡುಬರುವುದಿಲ್ಲ. ಹಿಂದೂ ಹೆಣ್ಣುಮಕ್ಕಳನ್ನು ಅಥವಾ ಮುಸ್ಲಿಂ ಹೆಣ್ಣು ಮಕ್ಕಳನ್ನು ಅನ್ಯ ಧರ್ಮೀಯರಿಂದ ರಕ್ಷಿಸುವ ತುಡುಗುಪಡೆಗಳು, ಸ್ವಧರ್ಮೀಯರಿಂದ ರಕ್ಷಿಸುವ ಆಲೋಚನೆಯನ್ನೂ ಮಾಡುವುದಿಲ್ಲ. ಇದು ಪಿತೃಪ್ರಧಾನ ಮೌಲ್ಯಗಳ ಸಾಂಸ್ಥೀಕರಣಕ್ಕೆ ಜ್ವಲಂತ ನಿದರ್ಶನ.
ಶ್ರದ್ಧೆ ಆಚರಣೆಗಳ ನಡುವೆ ಕ್ರೌರ್ಯ
ಈ ವೈಯ್ಯುಕ್ತೀಕರಣಗೊಂಡ (Personalised ) ಮನಸ್ಥಿತಿಯೇ ಯುವ ಜನಾಂಗದಲ್ಲಿ ಹಿಂಸಾತ್ಮಕ ಧೋರಣೆಯನ್ನು ಗಟ್ಟಿಗೊಳಿಸುತ್ತದೆ. ಈ ಯುವ ಜನಾಂಗಗಳ ಕೈಗಳಿಗೆ ತಲ್ವಾರು, ಲಾಂಗು, ಮಚ್ಚು, ತ್ರಿಶೂಲ ಇತ್ಯಾದಿ ಸಲಕರಣೆಗಳನ್ನು ವ್ಯವಸ್ಥಿತವಾಗಿ ಒದಗಿಸುವ ಮತಾಂಧ ಸಂಸ್ಥೆ/ಸಂಘಟನೆಗಳು ವ್ಯಕ್ತಿಗತ ನೆಲೆಯಲ್ಲಿ ಹಿಂಸಾತ್ಮಕ ಮನಸ್ಥಿತಿಯನ್ನು (Violent Mindset) ಸೃಷ್ಟಿಸಿಬಿಡುತ್ತವೆ. ಮನೋವೈಜ್ಞಾನಿಕ ದೃಷ್ಟಿಯಿಂದ (Psychological View) ಇದನ್ನು ವಿವೇಚಿಸಿದರೆ, ವ್ಯಕ್ತಿಯ ಕೈಗೆ ಯಾವುದೇ ಹಿಂಸಾತ್ಮಕ ಆಯುಧವನ್ನು ನೀಡುವುದು ಆ ವ್ಯಕ್ತಿಯೊಳಗೆ ಅಂತರ್ಗತವಾಗಿರುವ ದ್ವೇಷ ಮನೋಭಾವಕ್ಕೆ ಇಂಧನ ಒದಗಿಸಿದಂತಾಗುತ್ತದೆ. ಒಮ್ಮೆ ತನ್ನ ಕೈವಶವಾದ ಆಯುಧವನ್ನು ಬಳಸುವ ನಿರ್ಧಾರ ಆ ವ್ಯಕ್ತಿಯದ್ದೇ ಆಗುತ್ತದೆ. ಯಾರ ವಿರುದ್ಧ, ಯಾವ ಸನ್ನಿವೇಶದಲ್ಲಿ, ಯಾವ ಪ್ರಮಾಣದಲ್ಲಿ ಇವೆಲ್ಲವೂ ಸಹ ಸಾಂಸ್ಥಿಕ ನಿರ್ದೇಶನದಂತೆ ನಡೆದರೂ, ತಳಮಟ್ಟದಲ್ಲಿ ಕಾರ್ಯಗತವಾಗುವಾಗ ವೈಯುಕ್ತಿಕ ರಾಗದ್ವೇಷಗಳು ಮುನ್ನಲೆಗೆ ಬರುತ್ತವೆ.

ಸೆಪ್ಟಂಬರ್ 20ರಂದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆಯಲ್ಲಿ 17 ವರ್ಷದ ಸಿಂಹಾದ್ರಿ ಎಂಬ ಮಾದಿಗ ಯುವಕನನ್ನು,. ಮಾರುತೇಶ್ ಎಂಬ ನಾಯಕ ಸಮುದಾಯದ ಯುವಕ , ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಇಬ್ಬರೂ ಶೋಷಿತ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಮುಂಬೈನ ಘಾಟ್‌ಕೋಪರ್ ಬಳಿಯ ಕಾಮರಾಜ್ ನಗರದಲ್ಲಿ ಗಣೇಶೋತ್ಸವದ ಸಂಭ್ರಮದ ನಡುವೆಯೇ, ಗಣೇಶೋತ್ಸವ ಮಂಡಲಿಯ ಅಧ್ಯಕ್ಷ ರಾಜೇಶ್ ರಾಜೇಂದ್ರನ್ ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಗಳ ಮೂಲ ಕಾರಣ ಏನೇ ಇರಲಿ, ಭಕ್ತಿ ಭಾವದಿಂದ ನಡೆಯಬೇಕಾದ ಗಣೇಶೋತ್ಸವದ ನಡುವೆ, ಅಲ್ಲಿ ಭಾಗವಹಿಸುವ ʼ ಭಕ್ತಾದಿ ʼಗಳಿಂದಲೇ ಹತ್ಯೆ ನಡೆಯುವುದು ಹೇಗೆ ಸಾಧ್ಯ ?
ಈ ಹಂತಕ ಮನಸ್ಥಿತಿಗೆ ವೈಯುಕ್ತಿಕ ದ್ವೇಷ, ಜಾತಿ ವೈರತ್ವ, ಸಾಮುದಾಯಿಕ ವೈಮನಸ್ಯ ಇತ್ಯಾದಿಗಳು ಕಾರಣ ಇರಬಹುದು. ಆದರೆ ಈ ಮನಸ್ಥಿತಿ ಸೃಷ್ಟಿಯಾಗುವುದು ಆ ಕ್ಷಣದಲ್ಲಿ ಅಲ್ಲ. ಯುವ ಜನಾಂಗದ ಎದೆಯಾಳದಲ್ಲಿ ಬಿತ್ತಲಾಗುವ ಹಿಂಸಾತ್ಮಕ ಪ್ರವೃತ್ತಿ ಕಾಲಕ್ರಮೇಣ ಮನಸ್ಥಿತಿಯಾಗಿ ರೂಪುಗೊಳ್ಳುತ್ತದೆ. ತನ್ನೊಳಗಿನ ಈ ಕ್ರೌರ್ಯವನ್ನು ಪ್ರಯೋಗಿಸುವಾಗ ವ್ಯಕ್ತಿಯ ಮನಸ್ಸಿನಲ್ಲಿ ದ್ವೇಷ-ಆಕ್ರೋಶ ಮತ್ತು ಎದುರಾಳಿಯನ್ನು ಹೇಗಾದರೂ ಮಣಿಸಬೇಕೆಂಬ ಕೆಟ್ಟ ಛಲ ಉದ್ಧೀಪನಗೊಳ್ಳುತ್ತದೆ. ಗಣೇಶೋತ್ಸವ ಇರಲಿ, ಧಾರ್ಮಿಕ ಮೆರವಣಿಗೆ ಇರಲಿ ಅಥವಾ ಕೋಮು ಗಲಭೆಯಾಗಲಿ ಈ ಉದ್ಧೀಪನಗೊಂಡ ಮನಸ್ಥಿತಿ ಸಮೂಹ ಸ್ವರೂಪ ̈(Mob Form) ಪಡೆದುಕೊಂಡಾಗ ಹತ್ಯಾಕಾಂಡಗಳು, ನರಮೇಧಗಳು ಸಂಭವಿಸುತ್ತವೆ. ಸಾಂಸ್ಥಿಕವಾಗಿ ಮೇಲ್ ಮಟ್ಟದಿಂದ ಪೋಷಿಸಲ್ಪಡುವ ಪ್ರತ್ಯೇಕತಾ ಭಾವ (Seperatist Feeling) ಮತ್ತು ಅನ್ಯ ದ್ವೇಷದ ಭಾವನೆ ( Hating the Other )ಯುವ ಸಮೂಹವನ್ನು ಹಿಂಸೆಯ ಕೂಪಕ್ಕೆ ದೂಡಿಬಿಡುತ್ತದೆ.
ಅವನತಿಯ ಹಾದಿಯ ಸವಾಲುಗಳು
ಈ ಪ್ರವೃತ್ತಿ ಸಮಾಜದಲ್ಲಿ ಬೇರೂರಿದಷ್ಟೂ, ಗಟ್ಟಿಯಾದಷ್ಟೂ ಸಮಾಜಗಳು ನೈತಿಕವಾಗಿ ಅಧಃಪತದ ಹಾದಿಯಲ್ಲಿ ಬಿರುನಡಿಗೆಯಲ್ಲಿ ಸಾಗುತ್ತವೆ. ಸಾಂಸ್ಥೀಕರಣಗೊಂಡ ಈ ಹಿಂಸಾತ್ಮಕ ಪ್ರವೃತ್ತಿಗಳನ್ನು ಜಾತಿ, ಧರ್ಮದ ಹೆಸರಿನಲ್ಲಿ ಅಥವಾ ಲಿಂಗತ್ವದ ಚೌಕಟ್ಟಿನಲ್ಲಿ ಸಹಜೀಕರಣಕ್ಕೊಳಪಡಿಸಿದಾಗ (Naturalise) ಅತ್ಯಾಚಾರ, ಹಿಂಸೆ , ಕೊಲೆ, ದೌರ್ಜನ್ಯ ಇತ್ಯಾದಿ ದುರ್ವರ್ತನೆಗಳು ಸಾಮಾಜಿಕ ವ್ಯಾಧಿಯಾಗಿ ಪರಿವರ್ತನೆಯಾಗುತ್ತವೆ. ಈ ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲ ಘಟನೆಗಳಲ್ಲಿ ಅಪರಾಧಿಯಾಗಿ ಕಾಣುವ ವ್ಯಕ್ತಿಗಳು ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥರಾಗಿ ಶಿಕ್ಷೆಗೊಳಗಾಗುತ್ತಾರೆ. ಸಾಕ್ಷ್ಯಾಧಾರಗಳಿಲ್ಲದೆ ಖುಲಾಸೆಯಾಗುವ ಸಾಧ್ಯತೆಗಳೂ ಇರುತ್ತವೆ.
ಆದರೆ ಈ ನ್ಯಾಯಾಂಗದ ಅಂತಿಮ ತೀರ್ಪು ಸಮಾಜದಲ್ಲಿ ಅಂತರ್ಗತವಾಗಿರುವ ಜೀವ ವಿರೋಧಿ ಸಾಂಸ್ಥಿಕ ಮನೋವೃತ್ತಿಯನ್ನು, ವ್ಯಕ್ತಿಗತ ಮನಸ್ಥಿತಿಯನ್ನು ಸರಿಪಡಿಸುವುದು ಸಾಧ್ಯವೇ ? ಇದು ನ್ಯಾಯಾಂಗದ ಜವಾಬ್ದಾರಿಯಲ್ಲ. ಕಾರ್ಯಾಂಗದ ಜವಾಬ್ದಾರಿ ಹೌದು ಆದರೆ ನಿಭಾಯಿಸುವುದಿಲ್ಲ. ಬಿಹಾರದ ಶಾಸಕಿಯ ವರ್ತನೆ ಇದನ್ನು ದೃಢೀಕರಿಸುತ್ತದೆ. ವಾಸ್ತವವಾಗಿ ಇದು ನಾಗರಿಕತೆಯ ಹಾದಿಯಲ್ಲಿ ಮುನ್ನಡೆದಿರುವ ಆಧುನಿಕ ಸಮಾಜದ ಜವಾಬ್ದಾರಿ. ಈ ನೊಗ ಹೊರುವುದು ಯಾರು ? ವಿದ್ಯಾರ್ಥಿ ದೆಸೆಯಿಂದಲೇ ಸಾಂಸ್ಥಿಕ ಅಸ್ಮಿತೆ ಮತ್ತು ಅಸ್ತಿತ್ವಗಳಿಗಾಗಿ ಯುವ ಸಮೂಹದ ಮಿದುಳುಗಳಲ್ಲಿ ಇಂತಹ ಮನಸ್ಥಿತಿಯನ್ನು ಬಿತ್ತುವ ರಾಜಕೀಯ ಪಕ್ಷಗಳು, ಸಂಘಗಳು, ಸಂಘಟನೆಗಳು ಈ ಪ್ರಶ್ನೆಗೆ ಉತ್ತರಿಸಬೇಕಿದೆ.
ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದವರನ್ನು ʼ ಸಂಸ್ಕಾರವಂತರು ʼ ಎಂದು ಗೌರವಿಸಿ, ಸಾರ್ವಜನಿಕವಾಗಿ ಸನ್ಮಾನಿಸುವ ಸಮಾಜದಲ್ಲಿ ನವ ಭಾರತ ಈ ಉತ್ತರವನ್ನು ನಿರೀಕ್ಷಿಸುತ್ತಿದೆ. ನಾವು ಯಾವ ʼ ಸಂಸ್ಕಾರ ʼ ಬಯಸುತ್ತಿದ್ದೇವೆ ? ಯಾವ ʼ ಸಂಸ್ಕೃತಿ ʼಯನ್ನು ಸಲಹುತ್ತಿದ್ದೇವೆ ? 80ನೆಯ ವಯಸ್ಸಿನಲ್ಲೂ ನಮಗೆ ʼ ಅತ್ಯಾಚಾರ ʼ ಎಂಬ ಅತ್ಯಂತ ಅಮಾನುಷ ಕ್ರೌರ್ಯವನ್ನು ಸ್ಪಷ್ಟವಾಗಿ ನಿರ್ವಚಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅತ್ಯಾಚಾರಕ್ಕೊಳಗಾದ ಹೆಣ್ಣಿಗೆ ಈ ಮರುನಿರ್ವಚನೆ ಅಗತ್ಯವೇ ಇಲ್ಲ. ಆ ನೋವು, ಯಾತನೆ, ಅಪಮಾನ, ಕಳಂಕ ಎಲ್ಲವನ್ನೂ ಹೆಣ್ಣು ಜೀವ ತನ್ನೊಳಗೇ ಹುದುಗಿಸಿಕೊಂಡು ಬದುಕುತ್ತದೆ. ಈ ನೋವಿನ ಅಂತರ್‌ಧ್ವನಿಗೆ (Innner voice) ಸಾಂತ್ವನ ಹೇಳುವ ನೈತಿಕತೆಯನ್ನು ನಾವು ಉಳಿಸಿಕೊಂಡಿದ್ದೇವೆಯೇ ? ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ ಇದು. ಯೋಚಿಸೋಣವೇ ?
-೦-೦-೦-೦-೦-






