ವಾಷಿಂಗ್ಟನ್ : ಮಧ್ಯಂತರ ಚುನಾವಣೆಯ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಿಲುವು ಮೃದುವಾದಂತೆ ಕಂಡುಬರುತ್ತಿದೆ. ಇರಾನ್ ಜೊತೆಗಿನ ಯುದ್ಧವು (War) ಪರಿಣಾಮಕಾರಿಯಾಗಿ ಕೊನೆಗೊಂಡಿದೆ ಎಂದು ಅವರು ಘೋಷಿಸಿದ್ದಾರೆ.
ಸದ್ಯಕ್ಕೆ ಅಮೆರಿಕ ಪ್ರಸ್ತುತ ಪರಿಸ್ಥಿತಿಯನ್ನು ಕಾಯ್ದುಕೊಳ್ಳಲು ಬಯಸುತ್ತಿದೆ. ತಕ್ಷಣಕ್ಕೆ ಯಾವುದೇ ಸೇನಾ ಕಾರ್ಯಾಚರಣೆಯ ಅಗತ್ಯವಿಲ್ಲದಿದ್ದರೂ, ಪರಿಸ್ಥಿತಿ ಬದಲಾದರೆ ಅಮೆರಿಕ ಸೇನೆ ಕಾರ್ಯಾಚರಣೆಗೆ ಸಂಪೂರ್ಣ ಸಿದ್ಧವಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಕತಾರ್ ಪ್ರಧಾನಿ ಭೇಟಿ ಬಳಿಕ ಟ್ರಂಪ್ ಪ್ರತಿಕ್ರಿಯೆ
ಸೋಮವಾರ ಶ್ವೇತಭವನದಲ್ಲಿ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರನ್ನು ಟ್ರಂಪ್ ಭೇಟಿಯಾದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇರಾನ್ ಮಿಲಿಟರಿ ಶಕ್ತಿ ಗಣನೀಯವಾಗಿ ದುರ್ಬಲಗೊಂಡಿದ್ದು, ಆ ದೇಶ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಸದ್ಯ ಯಾವುದೇ ಅಂತಿಮ ಒಪ್ಪಂದವನ್ನು ಘೋಷಿಸಿಲ್ಲವಾದರೂ, ಭವಿಷ್ಯದಲ್ಲಿ ಅಗತ್ಯಬಿದ್ದರೆ ಸೇನಾ ಕಾರ್ಯಾಚರಣೆಗೆ ಅಮೆರಿಕ ಸನ್ನದ್ಧವಾಗಿದೆ ಎಂದಿದ್ದಾರೆ.
ಅಮೆರಿಕದ ಮುಂದೆ 7 ಷರತ್ತುಗಳನ್ನಿಟ್ಟ ಇರಾನ್
ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಇರಾನ್ ಕಠಿಣ ನಿಲುವು ತಳೆದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯ ವರದಿಗಳನ್ನು ಕೇವಲ ಕಾಲ್ಪನಿಕ ಎಂದು ತಳ್ಳಿಹಾಕಿರುವ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಕಾರ್ಯದರ್ಶಿ ಮೇಜರ್ ಜನರಲ್ ಮೊಹ್ಸೆನ್ ರೆಜಾಯಿ, ವಾಷಿಂಗ್ಟನ್ ಪಶ್ಚಿಮ ಏಷ್ಯಾದ ಹೊಸ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬೇಕು ಮತ್ತು ತಮ್ಮ 7 ಷರತ್ತುಗಳಿಗೆ ಶರಣಾಗಬೇಕು ಎಂದು ಆಗ್ರಹಿಸಿದ್ದಾರೆ.
ಇರಾನ್ ವಿಧಿಸಿರುವ ಪ್ರಮುಖ ಷರತ್ತುಗಳು
ಇರಾನ್ ಅಮೆರಿಕದ ಮುಂದೆ ಪ್ರಮುಖವಾಗಿ ಏಳು ಷರತ್ತುಗಳನ್ನು ಮುಂದಿಟ್ಟಿದೆ. ಅವುಗಳೆಂದರೆ, ಎಲ್ಲಾ ರಂಗಗಳಲ್ಲೂ ಸೇನಾ ಸಂಘರ್ಷವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಹೇರಿರುವ ನೌಕಾ ದಿಗ್ಬಂಧನವನ್ನು ಹಿಂಪಡೆಯಬೇಕು ಮತ್ತು ಅಲ್ಲಿನ ಹಡಗು ಮಾರ್ಗಗಳನ್ನು ತಕ್ಷಣವೇ ತೆರೆಯಬೇಕು. ಇರಾನ್ ಮೇಲೆ ವಿಧಿಸಲಾಗಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು, ವಿದೇಶಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಸಂಪತ್ತನ್ನು ಬಿಡುಗಡೆ ಮಾಡಬೇಕು. ಇರಾನ್‌ನ ಆಂತರಿಕ ವಿಷಯಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಯುದ್ಧದಿಂದಾದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂಬುದೇ ಆ ಏಳು ಷರತ್ತುಗಳಾಗಿವೆ.
ಇರಾನ್ ಪರಮಾಣು ಕಾರ್ಯಕ್ರಮದ ಬಗ್ಗೆ ಒಪ್ಪಂದಕ್ಕೆ ಅಮೆರಿಕ ಒಲವು
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದದಂತೆ ನೋಡಿಕೊಳ್ಳುವುದು ಅಮೆರಿಕದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ವಾಷಿಂಗ್ಟನ್ ಬಯಸಿದೆ. ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್ ಮತ್ತು ಕುವೈತ್‌ನಂತಹ ಪಶ್ಚಿಮ ಏಷ್ಯಾದ ಮಿತ್ರ ರಾಷ್ಟ್ರಗಳು ಸಹ ಪ್ರಸ್ತುತ ಪರಿಸ್ಥಿತಿಯನ್ನು ಕಾಪಾಡಿಕೊಳ್ಳುವ ಪರವಾಗಿವೆ ಎಂದು ಟ್ರಂಪ್ ಹೇಳಿದ್ದಾರೆ.
ಸೇನಾ ಕಾರ್ಯಾಚರಣೆಗೆ ಸಿದ್ಧ, ದಿಗ್ಬಂಧನ ಮುಂದುವರಿಕೆ
ಯುದ್ಧ ಮುಕ್ತಾಯದ ಮುನ್ಸೂಚನೆಗಳಿದ್ದರೂ ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಅಂತ್ಯಗೊಳಿಸುವ ಬಗ್ಗೆ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಇರಾನ್ ಬಂದರುಗಳಿಂದ ತೈಲ ಸಾಗಣೆಯನ್ನು ತಡೆಯಲು ದಿಗ್ಬಂಧನವನ್ನು ಮುಂದುವರಿಸಿದೆ. ಕಳೆದ ವಾರ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿ ಸೀಮಿತ ದಾಳಿ ನಡೆಸಿದ್ದ ಅಮೆರಿಕ, ಶನಿವಾರ ದಿಗ್ಬಂಧನ ಮುರಿಯಲು ಯತ್ನಿಸಿದ ವಾಣಿಜ್ಯ ಹಡಗೊಂದರ ಮೇಲೂ ದಾಳಿ ಮಾಡಿತ್ತು. ಸದ್ಯ ಉದ್ವಿಗ್ನತೆ ಕಡಿಮೆಯಾಗಿದ್ದರೂ, ಷರತ್ತುಗಳು, ಅಮೆರಿಕದ ನೌಕಾ ದಿಗ್ಬಂಧನ ಹಾಗೂ ಪರಮಾಣು ಕಾರ್ಯಕ್ರಮದ ಬಗ್ಗೆ ಉಭಯ ದೇಶಗಳ ನಡುವೆ ಇನ್ನೂ ಸಹಮತ ಮೂಡಬೇಕಿದೆ.
ಭಾರತ-ಪಾಕಿಸ್ತಾನವನ್ನು ಆವರಿಸಿರುವ ದಟ್ಟವಾದ ಹೊಗೆ: ನಾಸಾ ಉಪಗ್ರಹದಲ್ಲಿ ದೃಶ್ಯ ಸೆರೆ






