ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು..
(ಮೂಲ : Draft SIR list shows statistical absurdities. Audit by an independent agency is needed Written by:Rahul Shastri, Yogendra Yadav ಇಂಡಿಯನ್ ಎಕ್ಸ್ಪ್ರೆಸ್)
ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂರು ಹಂತಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಕೆಲವು ಸಣ್ಣ ರಾಜ್ಯಗಳನ್ನು ಹೊರತುಪಡಿಸಿ, ಉಳಿದಂತೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.
ಸಾಮಾನ್ಯವಾಗಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆ ನಡೆಸುವ ಕಾರ್ಯಾಚರಣೆಗಳು ಪಾರದರ್ಶಕವಾಗಿದ್ದು, ಜನಸಾಮಾನ್ಯರ ಜಿಜ್ಞಾಸೆ, ಗೊಂದಲಗಳಿಗೆ ಉತ್ತರ ನೀಡುವಂತಿರುತ್ತದೆ. ಬಹುಶಃ ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿ ಈ ನಿರೀಕ್ಷೆ ಹುಸಿಯಾಗಿದೆ. ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರಡು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಾಣದ ಭಾರತೀಯ ಪ್ರಜೆಗಳು (Indian Citizens) ಈಗ ತಮ್ಮ ಪೌರತ್ವದ (Citizenship) ಸಾಕ್ಷಿಗಾಗಿ ಹುಡುಕಾಡುವಂತಾಗಿದೆ.

ಉತ್ತರ ಕಾಣದ ಪ್ರಶ್ನೆಗಳು
ನಾವು ಇಷ್ಟು ವರ್ಷಗಳಿಂದ ಇಲ್ಲೇ ಬಾಳಿ ಬದುಕಿದ್ದೇವಲ್ಲವೇ ? ದಶಕಗಳಿಂದ ನಮ್ಮ ಶ್ರಮಶಕ್ತಿಯಿಂದ ಈ ದೇಶವನ್ನು ಕಟ್ಟಿದ್ದೇವಲ್ಲವೇ ? ಇಷ್ಟು ವರ್ಷ ಮತದಾನದ ಸಾಂವಿಧಾನಿಕ ಹಕ್ಕನ್ನು ಬಳಸಿಕೊಂಡು ನಮಗೆ ಬೇಕಾದ ಪಕ್ಷಗಳನ್ನು ಚುನಾಯಿಸಿದ್ದೇವಲ್ಲವೇ ? ನಾವು ಮತ್ತು ನಮ್ಮ ಸಂತತಿ ಹಲವು ವರ್ಷಗಳಿಂದ ದೇಶದ ಜಿಡಿಪಿಗೆ , ಸಮೃದ್ಧಿಗೆ ಕೈಲಾದ ಕೊಡುಗೆ ನೀಡಿದ್ದೇವಲ್ಲವೇ ? ನಮ್ಮ ಸಾಧಾರಣ ಜೀವನದಲ್ಲಿ ಸಂವಿಧಾನ ಮತ್ತು ಕಾನೂನುಗಳನ್ನು ಗೌರವದಿಂದ ಪಾಲಿಸಿಕೊಂಡೇ ಬಂದಿದ್ದೇವಲ್ಲವೇ ? ಪ್ರಭುತ್ವದ ದೃಷ್ಟಿಯಲ್ಲಿ ʼ ದೇಶದ್ರೋಹ ʼ ಎಂಬಂತೆ ಕಾಣುವ ಚಟುವಟಿಕೆಗಳಿಂದ ದೂರವಾಗಿಯೇ ಇದ್ದೇವಲ್ಲವೇ ? ನಮ್ಮ ಕೈಲಾದ ಮಟ್ಟಿಗೆ ಸಮಾಜದಲ್ಲಿ ನೆರೆಹೊರೆಯವರಿಗೆ ನೆರವಾಗುತ್ತಾ ಪರಸ್ಪರ ಸೌಹಾರ್ದತೆಯಿಂದ ಜೀವನ ಸವೆಸಿದ್ದೇವಲ್ಲವೇ ?
ಅಬ್ಬಾ !!! ಎಷ್ಟೊಂದು ಪ್ರಶ್ನೆಗಳು.
ನೀವು ನಾಳೆಯಿಂದ ಸಂವಿಧಾನ ಕಲ್ಪಿಸಿರುವ ಮತದಾನದ ಹಕ್ಕನ್ನು ಚಲಾಯಿಸುವಂತಿಲ್ಲ ಎಂದು SIR ಹೇಳಿಬಿಟ್ಟರೆ ನಾವು ಎಲ್ಲಿಗೆ ಹೋಗುವುದು ? ಹುಟ್ಟಿದ ನೆಲವೇ ನಮ್ಮನ್ನು ನಿರಾಕರಿಸುತ್ತದೆಯೇ ? ನಮ್ಮ ಬೆವರು ಬೆರೆತಿರುವ ಕರ್ಮಭೂಮಿಯ ಮಣ್ಣು ನಮ್ಮ ಭವಿಷ್ಯವನ್ನು ಮಣ್ಣುಪಾಲು ಮಾಡುತ್ತದೆಯೇ ? ಒಬ್ಬ ಪ್ರಜೆಗೆ ಒಂದು ಮತ, ಒಂದು ಮತಕ್ಕೆ ಒಂದು ಮೌಲ್ಯ ಎಂಬ ಅಂಬೇಡ್ಕರ್ ಅವರ ಸಾಂವಿಧಾನಿಕ ತತ್ವವನ್ನು ನಂಬಿದ್ದೆವಲ್ಲಾ, ಈಗೇಕೆ ನಮ್ಮ ಮತ ಅಪಮೌಲ್ಯಕ್ಕೊಳಗಾಯಿತು ? ಸಂವಿಧಾನ ಕಲ್ಪಿಸಿದ ಹಕ್ಕನ್ನೇ ಕಳೆದುಕೊಳ್ಳುವಂತಹ ಅಪರಾಧ ಏನು ಮಾಡಿದ್ದೇವೆ ? ಇನ್ನು ನಮ್ಮ ಭವಿಷ್ಯದ ಸಂತತಿಯ ಪಾಡೇನು ? ಈ ಮನದಾಳದ ಪ್ರಶ್ನೆಗಳು ಕೊಟ್ಯಂತರ ಜನರಿಂದ ಹೊರಬರಲಾರಂಭಿಸುತ್ತವೆ.
![]()
ಸಾಂವಿಧಾನಿಕ ಪ್ರಕ್ರಿಯೆಯ ಸಿಕ್ಕುಗಳು
2025ರ ಬಿಹಾರ ವಿಧಾನಸಭಾ ಚುನಾವಣೆಗಳಿಗೂ ಮುನ್ನ ಅತಿ ಅವಸರದಲ್ಲಿ ಜಾರಿಗೊಳಿಸಲಾದ ಎಸ್ಐಆರ್ ಪ್ರಕ್ರಿಯೆ ಒಂದೇ ವರ್ಷದಲ್ಲಿ ಈ ಪ್ರಶ್ನೆಗಳ ಆಡುಂಬೊಲದಲ್ಲಿ ದಿಕ್ಕುತೋರದೆ ನಿಂತ ಒಂದು ಪ್ರತ್ಯೇಕ ಸಮಾಜವನ್ನೇ ಸೃಷ್ಟಿಸಿಬಿಟ್ಟಿದೆ. ಈ ಸಂಭಾವ್ಯ ಮತವಂಚಿತರು ನಾಳೆ ಬೆಳಗಾನೆದ್ದು ಸೂರ್ಯನ ಕಿರಣಗಳಲ್ಲಿ ಭವಿಷ್ಯದ ಬೆಳಕನ್ನು ಕಾಣುತ್ತಾರೆಯೇ ಅಥವಾ ಅತ್ತಿತ್ತ ನೋಡುವ ಅವಕಾಶವೂ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿ ತೂಗಾಡುತ್ತಾರೆಯೇ ? ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 10ಕ್ಕಿಂತಲೂ ಹೆಚ್ಚು ಜನರು ಈ ʼ ಮತವಂಚಿತ ಸಮಾಜದ ʼ ಸದಸ್ಯರಾಗಿ ಯಾರ ಕಡೆ ನೋಡಬೇಕು ? ಯಾರಲ್ಲಿ ಮೊರೆ ಹೋಗಬೇಕು ? ಪವಿತ್ರ ಎನ್ನಲಾಗುವ ಸಂವಿಧಾನಕ್ಕೋ, ಚುನಾಯಿತ ಜನಪ್ರತಿನಿಧಿಗಳಿಗೋ , ಪ್ರಭುತ್ವದ ಕಾನೂನು ಗ್ರಂಥಗಳಿಗೋ ಅಥವಾ ಸದಾ ಆಸರೆಯ ತಾಣವಾಗಿದ್ದ ನ್ಯಾಯಾಂಗಕ್ಕೋ ?
1893ರ ತಮ್ಮ ಇತಿಹಾಸ ಪ್ರಸಿದ್ಧ ಉಪನ್ಯಾಸದಲ್ಲಿ ಸ್ವಾಮಿ ವಿವೇಕಾನಂದರು ಅಮೆರಿಕದ ನೆಲದಲ್ಲಿ ನಿಂತು “ಭ್ರಾತೃ ಭಗಿನಿಯರೇ” (ಸೋದರ ಸೋದರಿಯರೇ} ಎಂದು ಸಂಬೋಧಿಸಿದಾಗ ಇಡೀ ವಿಶ್ವವೇ ನಿಬ್ಬೆರಗಾಗಿ ನೋಡಿತ್ತು.
ಇದನ್ನೂ ಓದಿ : ಗಣೇಶ ಹಬ್ಬದಿಂದ ಯಾರಿಗೆ ಎಷ್ಟು ಲಾಭ?; ₹30 ಸಾವಿರ ಕೋಟಿಯ ವಹಿವಾಟಿನ ಸಂಪೂರ್ಣ ಲೆಕ್ಕ ಇಲ್ಲಿದೆ
133 ವರ್ಷಗಳ ನಂತರ ಭಾರತದ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವ ಜವಾಬ್ದಾರಿ ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತರು ಅಹಮದಾಬಾದ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಆಯೋಜಿಸಿದ ಸಮಾವೇಶದಲ್ಲಿ, ಇದೇ ಪದವನ್ನು ಬಳಸಿರುವುದು ಅಷ್ಟೇ ಬೆರಗು ಮೂಡಿಸುತ್ತದೆ, ಆದರೆ ಬೇರೊಂದು ಅರ್ಥದಲ್ಲಿ. “ ಹಲವು ರಾಜ್ಯಗಳಲ್ಲಿ ಈಗಾಗಲೇ ಪೂರೈಸಲಾಗಿರುವ ಮತ್ತು ನಡೆಯುತ್ತಿರುವ ಎಸ್ಐಆರ್ ಸೋದರ ಸೋದರಿಯರಿಗೆ ಕೊಂಚ ಕಷ್ಟಕರವಾಗಿ ಕಾಣಬಹುದು ” ಎಂದು ಹೇಳಿರುವ ಆಯುಕ್ತರು ಅ ಕಷ್ಟ ಎಂತಹುದು ಎಂದಾದರೂ ಹೇಳಬಹುದಿತ್ತು. ನಿತ್ಯ ಬದುಕಿನ ಸಂಕಷ್ಟಗಳಿಂದಲೇ ಹೈರಾಣಾಗಿರುವ ತಳಸಮಾಜದ ಜನತೆಗೆ ಮತ್ತೊಂದು ಕಷ್ಟ ಎಂದರೆ ಗಾಬರಿಯಾಗುವುದು ಸಹಜವಲ್ಲವೇ ?
ಪ್ರಜೆ – ನಾಗರಿಕ ಮತ್ತು ಪೌರತ್ವ
ಒಂದು ಬಲಿಷ್ಠ ರಾಷ್ಟ್ರ ನಿರ್ಮಾಣದ ದೃಷ್ಟಿಯಿಂದ ಎಸ್ಐಆರ್ ಕ್ರಮ ಅಗತ್ಯ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ. ಬಲಿಷ್ಠ ದೇಶವೊಂದು ತನ್ನ ಪ್ರಜೆಗಳಿಗಾಗಿ ಕೆಲಸ ಮಾಡಬೇಕು ಎಂಬ ಆಯುಕ್ತರ ಮಾತುಗಳು ಅರ್ಥಪೂರ್ಣವಾದುದು, ಸ್ವಾಗತಾರ್ಹ. ಆದರೆ ಇದೇ ಸಂದರ್ಭದಲ್ಲಿ “ಪ್ರಜೆಗಳಲ್ಲದವರಿಗಾಗಿ (non citizens) ಕೆಲಸ ಮಾಡುವಾಗ ಸಮಸ್ಯೆಯೇನೂ ಇಲ್ಲವಾದರೂ ಪ್ರಜ್ಞಾಪೂರ್ವಕವಾಗಿ ನಿರ್ಧಾರ (Consciously) ಕೈಗೊಳ್ಳಬೇಕಾಗುತ್ತದೆ, ಏಕೆಂದರೆ ತೆರಿಗೆದಾರರ ಹಣ ಸಾಮಾನ್ಯವಾಗಿ, ಬಹುಮುಖ್ಯವಾಗಿ ಪ್ರಜೆಗಳಿಗೇ ಸಲ್ಲಬೇಕಾಗುತ್ತದೆ, ಈ ಕಾರಣಕ್ಕಾಗಿಯೇ ಎಸ್ಐಆರ್ ಪ್ರಕ್ರಿಯೆ ಜಾರಿಗೊಳಿಸಲಾಗಿದೆ ”ಎಂದು ಹೇಳಿರುವುದು ಅಚ್ಚರಿ ಮೂಡಿಸುತ್ತದೆ. “ಪೌರತ್ವಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ , ಶೇಕಡಾ 80ರಷ್ಟು ಮತದಾರರು ಹೊಸ ಕರಡು ಮತದಾರ ಪಟ್ಟಿಯಲ್ಲಿ ದಾಖಲಾಗಿರುವ ನಿರ್ವಹಣಾ ವಿಶ್ಲೇಷಣೆಯ (Management analysis) ಅವಶ್ಯಕತೆ ಇತ್ತು” ಎಂಬ ಆಯುಕ್ತರ ಮಾತುಗಳು ನಾನಾ ಅರ್ಥಗಳಿಗೆ ಎಡೆಮಾಡಿಕೊಡುತ್ತವೆ. (https://www.deccanherald.com/india/sir-was-little-difficult-for-people-but-was-important-for-building-a-strong-country-cec-gyanesh-kumar-4142264)

“ ಒಬ್ಬ ವ್ಯಕ್ತಿಯ ಪೌರತ್ವದ ಬಗ್ಗೆ ಸಂಶಯವಿದ್ದಲ್ಲಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕುವ ಸಾಂವಿಧಾನಿಕ ಅಧಿಕಾರ ಭಾರತೀಯ ಚುನಾವಣಾ ಆಯೋಗಕ್ಕೆ (ECI) ಇದ್ದರೂ, ಪೌರತ್ವವನ್ನು ನಿರ್ಧರಿಸುವ ಅಧಿಕಾರ ಅದಕ್ಕಿಲ್ಲ ” ಎಂದು ಸುಪ್ರೀಂ ಕೋರ್ಟ್ ಜುಲೈ 18 ರ ತೀರ್ಪಿನಲ್ಲಿ ಸ್ಪಷ್ಟವಾಗಿ ಪುನರುಚ್ಚರಿಸಿದೆ. ಆದರೆ ಮುಖ್ಯ ಚುನಾವಣಾ ಆಯುಕ್ತರು ಪೌರತ್ವದ ಪ್ರಸ್ತಾಪ ಮಾಡುತ್ತಾರೆ. “ ಹಾಗಾದಲ್ಲಿ ಅಂತಿಮ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಲು ಸಾಧ್ಯವಾಗದ ʼಸೋದರ ಸೋದರಿಯರಿಗೆ ʼ ಅವರನ್ನು ಗಡೀಪಾರು ಮಾಡುವವರೆಗೆ, ಬಂಧನ ಶಿಬಿರಗಳ ಜೀವನ ಕಷ್ಟವಾಗಲಿದೆ ” ಎಂದು ಅರ್ಥೈಸಬಹುದೇ ಎಂದು ನಿವೃತ್ತ ಮೇಜರ್ ಜನರಲ್ ಒಬ್ಬರು ಆತಂಕ ವ್ಯಕ್ತಪಡಿಸುತ್ತಾರೆ. ಈ ಆತಂಕ ಉತ್ಪ್ರೇಕ್ಷೆಯೇನಲ್ಲ. ಏಕೆಂದರೆ ಮತವಂಚಿತ ಸಮಾಜವನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ಹೇಗೆ ಪರಿಭಾವಿಸಲಾಗುತ್ತದೆ ಎಂಬ ಸ್ಪಷ್ಟ ಚಿತ್ರಣವನ್ನು ಈವರೆಗೂ ಗುರುತಿಸಲಾಗಿಲ್ಲ.
ಸ್ವಾತಂತ್ರ್ಯದ ನಡಿಗೆಯ ವ್ಯತ್ಯಯ
ಸ್ವತಂತ್ರ ಭಾರತದ 80 ವರ್ಷಗಳ ಪ್ರಜಾಸತ್ತಾತ್ಮಕ ನಡಿಗೆಯಲ್ಲಿ ಪ್ರಪ್ರಥಮ ಬಾರಿಗೆ ದೇಶದ ಸಾರ್ವಭೌಮ ಪ್ರಜೆಗಳು ತಮ್ಮ ಪೌರತ್ವದ ಬಗ್ಗೆ ಚಿಂತಿತರಾಗುವ ದಿನಗಳು ಎದುರಾಗಿವೆ. 2025ರಲ್ಲಿ ನಡೆಸಲಾದ ಬಿಹಾರದ ಎಸ್ಐಆರ್ ಪ್ರಕ್ರಿಯೆಯಲ್ಲಿ 65 ಲಕ್ಷ ಮತದಾರರು ʼ ಮತವಂಚಿತರಾಗಿ ʼ ಗುರುತಿಸಲ್ಪಟ್ಟ ಸಂದರ್ಭದಲ್ಲಿ, ಯೋಗೇಂದ್ರ ಯಾದವ್, ರಾಹುಲ್ ಶಾಸ್ತ್ರಿ ಮತ್ತಿತರ ಜನಸಂಖ್ಯಾಶಾಸ್ತ್ರಜ್ಞರು , ದೇಶವ್ಯಾಪಿ ಎಸ್ಐಆರ್ ಪೂರ್ಣಗೊಳ್ಳುವ ವೇಳೆಗೆ ಕನಿಷ್ಠ 10 ಕೋಟಿ ಜನರ ಹೆಸರುಗಳು ಮತದಾರ ಪಟ್ಟಿಯಿಂದ ಹೊರಗುಳಿದಿರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಆಗ ಅನೇಕ ವಿದ್ವಾಂಸರು, ಸಂವಿಧಾನ ತಜ್ಞರೂ ಸಹ ಈ ಅಭಿಪ್ರಾಯವನ್ನು ಅತಿರೇಕ ಎಂದೇ ವ್ಯಾಖ್ಯಾನಿಸಿದ್ದುಂಟು. ಇದನ್ನು ನಂಬಿದವರ ಸಂಖ್ಯೆಯೂ ಕಡಿಮೆಯೇ. ಈಗ ಅಂತಿಮ ಕರಡು ಮತದಾರರ ಪಟ್ಟಿ ಸಿದ್ಧವಾಗಿದ್ದು ಈ ಆತಂಕ ನಿಜವಾಗಿದೆ.
ಕಳೆದ ವಾರ ಮುಖ್ಯ ಚುನಾವಣಾ ಆಯೋಗವು, ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಂಡಿರುವ ಎಲ್ಲ ಪ್ರಮುಖ ರಾಜ್ಯಗಳ ಕರಡು ಮತದಾರ ಪಟ್ಟಿಯನ್ನು ಸಾರ್ವಜನಿಕರ ಮುಂದೆ ಮಂಡಿಸಿದೆ. ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಅಂತಿಮ ಪಟ್ಟಿ ಸಿದ್ಧವಾಗಬೇಕಿ, ಹಿಮಾಚಲಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ಪ್ರಕ್ರಿಯೆ ಆರಂಭವಾಗಬೇಕಿದೆ. ಆದಾಗ್ಯೂ ಒಟ್ಟಾರೆ ಚಿತ್ರಣವನ್ನು ಗಮನಿಸಿದಾಗ ಕರಡು ಹಂತದಲ್ಲಿ ಮತದಾರ ಪಟ್ಟಿಯಿಂದ ಹೊರಗುಳಿದಿರುವವರ ಸಂಖ್ಯೆ 13 ಕೋಟಿ 37 ಲಕ್ಷ ಇದೆ. ಅಂತಿಮ ಪಟ್ಟಿಯ ವೇಳೆಗೆ ಈ ಸಂಖ್ಯೆ ಕಡಿಮೆಯಾಗಬಹುದು. ಹೇಗೇ ಆದರೂ ಅಂತಿಮವಾಗಿ 11.5 ಕೋಟಿ ಮತದಾರರು ಹೊರಗುಳಿಯಲಿದ್ದಾರೆ ಎಂದು ಜನಸಂಖ್ಯಾಶಾಸ್ತ್ರಜ್ಞ ಯೋಗೇಂದ್ರ ಯಾದವ್ ಅಂದಾಜು ಮಾಡುತ್ತಾರೆ. (https://indianexpress.com/article/opinion/columns/draft-sir-list-shows-statistical-absurdities-audit-by-an-independent-agency-is-needed-10867629/) ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಮೇಲಿನ ಲೇಖನದಲ್ಲಿ ಈ ಚಿತ್ರಣವನ್ನು ಕೂಲಂಕುಷವಾಗಿ ತೆರೆದಿಡಲಾಗಿದೆ.

2014ರ ಲೋಕಸಭಾ ಚುನಾವಣೆಗಳ ಸಮಯದಲ್ಲಿ ಭಾರತದ ಒಟ್ಟು ಮತದಾರರ ಸಂಖ್ಯೆ 98 ಕೋಟಿ ಇತ್ತು. ಇದೇ ಸಮಯದಲ್ಲಿ ಮತದಾನದ ಹಕ್ಕು ಪಡೆದ ವಯಸ್ಕರ ಸಂಖ್ಯೆಯೂ 99 ಕೋಟಿ ಇತ್ತು. ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಮತದಾನಯೋಗ್ಯ ವಯಸ್ಕ ಜನಸಂಖ್ಯೆ 103 ಕೋಟಿ ಆಗಿರುತ್ತದೆ ಎಂದು ಅಂದಾಜು ಮಾಡಲಾಗಿದೆ. ಆದರೆ ಈ ವೇಳೆಗೆ ಎಸ್ಐಆರ್ ಪರಿಣಾಮವಾಗಿ ಮತದಾರರ ಸಂಖ್ಯೆ 88 ಕೋಟಿ ಆಗಿರುತ್ತದೆ. ಅಂದರೆ ವಯಸ್ಕ ಜನಸಂಖ್ಯೆಯ ಅಂದಾಜು ಜನಗಣತಿಯ ಅಂಕಿಸಂಖ್ಯೆಗಳಿಗೂ, ಚುನಾವಣಾ ಆಯೋಗ ಮಂಡಿಸುವ ಮತದಾರರ ಸಂಖ್ಯೆಗೂ ಅಪಾರ ಅಂತರ ಉಂಟಾಗುತ್ತದೆ. 15 ಕೋಟಿಗೂ ಹೆಚ್ಚು ಜನರು ಮತವಂಚಿತ ಸಮಾಜಕ್ಕೆ ಸೇರುತ್ತಾರೆ ಮೂರು ಹಂತಗಳ ಎಸ್ಐಆರ್ ಪ್ರಕ್ರಿಯೆಯ ನಂತರ ಕಾಣುವ ಚಿತ್ರಣ (ಕೃಪೆ ಇಂಡಿಯನ್ ಎಕ್ಸ್ಪ್ರೆಸ್)
(https://indianexpress.com/article/opinion/columns/draft-sir-list-shows-statistical-absurdities-audit-by-an-independent-agency-is-needed-10867629/) ಕೋಷ್ಟಕ

ಅಳಿಸುವಿಕೆಯ ಜಟಿಲ ಪ್ರಶ್ನೆಗಳು
ಆದರೆ ಮತದಾರ ಪಟ್ಟಿಯಿಂದ ಅಳಿಸಿಹಾಕಿರುವುದೆಲ್ಲವೂ ತಪ್ಪಾಗಿ ನಡೆದಿದೆ ಎಂದು ಹೇಳಲಾಗುವುದಿಲ್ಲ. ಹಾಲಿ ಜಾರಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಬಹಳ ವರ್ಷಗಳ ಸಂಚಿತ ದೋಷಗಳು (Accumulated Defects) ಹಾಗೂ ನಕಲಿ ಹೆಸರುಗಳು ಇರುವುದು ವಾಸ್ತವ. ಈ ದೃಷ್ಟಿಯಿಂದ ಮೂರನೆ ಒಂದರಷ್ಟು ಹೆಸರುಗಳನ್ನು ದೋಷಪೂರಿತ ಎಂದು ಭಾವಿಸಿದರೂ, ಒಟ್ಟಾರೆಯಾಗಿ ಮತದಾರ ಪಟ್ಟಿಯಲ್ಲಿ ಸ್ವೀಕಾರಾರ್ಹವಲ್ಲದ ತಿರುಚುವಿಕೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇವರಲ್ಲಿ ಎಸ್ಐಆರ್-ಪೂರ್ವ ಪಟ್ಟಿಯಲ್ಲಿ ಇಲ್ಲದಿದ್ದ ಕೋಟ್ಯಂತರ ಅರ್ಹ ಮತದಾರರು, ಪಟ್ಟಿಯಲ್ಲಿದ್ದರೂ ಎಸ್ಐಆರ್ ಪ್ರಕ್ರಿಯೆಗೆ ಮುನ್ನ ಹೆಸರುಗಳನ್ನು ತೆಗೆದುಹಾಕಲಾದವರು ಹಾಗೂ ಎಸ್ಐಆರ್ ಅವಧಿಯಲ್ಲಿ ಹೆಸರು ಸೇರ್ಪಡೆಯಾಗಬೇಕಿದ್ದರೂ ಸೇರ್ಪಡೆಯಾಗದ ಯುವ ಮತದಾರರು ಸೇರಿದ್ದಾರೆ. ವಯಸ್ಕ ಜನಸಂಖ್ಯೆ ಮತ್ತು ಮತದಾರರ ಸಂಖ್ಯೆಯ ನಡುವಿನ ವ್ಯತ್ಯಾಸಕ್ಕೆ ಇವು ಕಾರಣವಾಗಿರಬಹುದು.
ಈಗ ಕೈಗೊಳ್ಳಲಾಗಿರುವ ಎಸ್ಐಆರ್ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಮತದಾರರ ಅಳಿಸುಹಾಕುವ ಲಕ್ಷಣಗಳು ನಕಾರಾತ್ಮಕವಾಗಿಯೇ ಕಾಣುತ್ತವೆ. ಮೊದಲ ಹಂತದಲ್ಲಿ, ಬಿಹಾರದಲ್ಲಿ 65 ಲಕ್ಷ ಮತದಾರರು ಹೊರಹಾಕಲ್ಪಟ್ಟಿದ್ದರು. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 8ರಷ್ಟು. ತದನಂತರ ನ್ಯಾಯಾಂಗದ ಮಧ್ಯಪ್ರವೇಶದ ಕಾರಣ ಅಂತಿಮ ಸಂಖ್ಯೆ 45 ಲಕ್ಷಕ್ಕೆ ಇಳಿದಿತ್ತು. ಎರಡನೆಯ ಹಂತದ 13 ರಾಜ್ಯಗಳ ಅಂತಿಮ ಫಲಿತಾಂಶಗಳಲ್ಲಿ ಶೇಕಡಾ 13ರಷ್ಟು ಇಳಿಕೆಯಾದರೂ ಜನರಿಗೆ ಗಾಬರಿಯಾಗಲಿಲ್ಲ. ಏಕೆಂದರೆ ಬಿಹಾರದ ಪೂರ್ವನಿದರ್ಶನವಿತ್ತು. ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರೇ ಹೆಚ್ಚು ಮತವಂಚಿತರಾಗಿದ್ದುದು ಅನೇಕರಲ್ಲಿ ವಿಸ್ಮಯ ಮೂಡಿಸಿತ್ತು.

ಮೂರನೆಯ ಹಂತ ಈಗ ಪೂರ್ಣವಾಗುತ್ತಿದ್ದು ದೇಶದ ಉಳಿದ ರಾಜ್ಯಗಳನ್ನು ಒಳಗೊಂಡಿದೆ. ಈ ಹಂತದಲ್ಲಿ ಕರಡು ಎಸ್ಐಆರ್ ಮತದಾರ ಪಟ್ಟಿಯಲ್ಲಿ ತೆಗೆದುಹಾಕಲ್ಪಟ್ಟವರ ಸಂಖ್ಯೆ ಶೇಕಡಾ 17ರಷ್ಟಿದೆ. ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಅತಿಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ. ಮೂರೂ ಹಂತಗಳಲ್ಲಿ ತೆಗೆದುಹಾಕಲ್ಪಟ್ಟವರ ಪೈಕಿ ಸತ್ತುಹೋಗಿರುವವರ ಪ್ರಮಾಣ ಶೇಕಡಾ 3ರಷ್ಟೇ ಇದೆ. ಅತಿ ಹೆಚ್ಚು ಪ್ರಮಾಣದಲ್ಲಿ ವರ್ಗಾವಣೆಯಾದವರು ಮತ್ತು ಗೈರುಹಾಜರಾದವರು (Shifted and Absent) ಕಾಣುತ್ತಿದ್ದು ಈ ಎರಡೂ ಲಕ್ಷಣಗಳನ್ನು ಸ್ಪಷ್ಟವಾಗಿ ನಿರ್ವಚಿಸಲಾಗಿಲ್ಲ. ಸ್ಥಳೀಯ ಚುನಾವಣಾ ಅಧಿಕಾರಿಗಳು ತಮ್ಮ ವಿವೇಚನೆಗೆ ತಕ್ಕಂತೆ ವ್ಯಾಖ್ಯಾನಿಸುತ್ತಿದ್ದಾರೆ.
ನಿರ್ವಚಿಸಲಾಗದ ವ್ಯಾಖ್ಯಾನಗಳು
ಕರಡು ಮತದಾರರ ಪಟ್ಟಿಯಲ್ಲಿ ಶೇಕಡಾ 20ರಷ್ಟು ಮತದಾರರು ʼ ತಾರ್ಕಿಕ ವೈರುಧ್ಯʼ ( Logical Discrepancy) ದ ಕಾರಣದಿಂದ ಹೊರಗುಳಿದಿದ್ದಾರೆ. ತೆಲಂಗಾಣ, ಒಡಿಷಾ ಮತ್ತು ಜಾರ್ಖಂಡ್ನಲ್ಲಿ ಹೆಚ್ಚಿನ ಪ್ರಮಾಣದ ತಾರ್ಕಿಕ ವೈರುಧ್ಯಗಳನ್ನು ಗುರುತಿಸಲಾಗಿದ್ದು, ಇದನ್ನು ಹೇಗೆ ನಿರ್ವಹಿಸಬೇಕು ಎಂಬ ಸ್ಪಷ್ಟ ಕಾರ್ಯಾಚರಣೆಯ ಮಾನದಂಡಗಳನ್ನು ನಿಗದಿಪಡಿಸಲಾಗಿಲ್ಲ. ಮೂರನೆಯ ಹಂತದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಅಪಾರ ಸಂಖ್ಯೆಯ ಮತದಾರರನ್ನು ಅಳಿಸಿಹಾಕಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಮತದಾರರಿಗೆ ́ ಗಣತಿ ನಮೂನೆಗಳನ್ನೂ ʼ (Enumeration Forms) ಒದಗಿಸಲಾಗುವುದಿಲ್ಲ. ಇದು ಎಸ್ಐಆರ್ ಅಳಿಸುವಿಕೆ ಎಂದೂ ಪರಿಗಣಿಸಲ್ಪಡುವುದಿಲ್ಲ. ಇಂತಹ 14 ಲಕ್ಷ ಪ್ರಕರಣಗಳನ್ನು ಗುರುತಿಸಲಾಗಿದ್ದು ಮಹಾರಾಷ್ಟ್ರದಲ್ಲೇ 8 ಲಕ್ಷ ದಾಖಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಚುನಾವಣೆಗಳ ನಂತರ ದೆಹಲಿಯಲ್ಲಿ 11 ಲಕ್ಷ ಮತದಾರರ ಹೆಸರನ್ನು ಅಳಿಸಿಹಾಕಲಾಗಿದ್ದು, 1.56 ಕೋಟಿ ಇದ್ದ ಒಟ್ಟು ಮತದಾರರ ಸಂಖ್ಯೆ ಎಸ್ಐಆರ್ ಕರಡು ಪಟ್ಟಿಯಲ್ಲಿ 98 ಲಕ್ಷಕ್ಕೆ ಕುಸಿದಿದೆ.
ಈ ವ್ಯತ್ಯಾಸಗಳಿಗೆ ಹಲವು ಕಾರಣಗಳಿರಬಹುದು. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಗಟ್ಟಿ ಧ್ವನಿಯಲ್ಲಿ ಹೇಳುತ್ತಿರುವ ʼ ಅಕ್ರಮ ಬಾಂಗ್ಲಾ ವಲಸಿಗರು ʼ ಸಹ ಇರಬಹುದು. ಆದರೆ ಈ ಸಂಖ್ಯೆ ಎಷ್ಟು ಎಂದು ಈವರೆಗೂ ಚುನಾವಣಾ ಆಯೋಗ ಒದಗಿಸಿಲ್ಲ. ಈ ವಲಸಿಗರ ಸಂಖ್ಯೆ ನಗಣ್ಯವಾಗಿದ್ದರೆ ಅಥವಾ ಕನಿಷ್ಠ ಮಟ್ಟದಲ್ಲಿದ್ದರೆ, ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಾಣದ ಆದರೆ ಇನ್ನೂ ಬದುಕಿರುವ 13 ಕೋಟಿ ಮತದಾರರಿಗೆ ಯಾರು ಉತ್ತರಿಸಬೇಕು ? ಇಷ್ಟು ವರ್ಷಗಳ ಕಾಲ ತಮ್ಮ ಆಯ್ಕೆಯ ಜನಪ್ರತಿನಿಧಿಗಳಿಗೆ ಮತ ಚಲಾಯಿಸುತ್ತಾ ಬಂದಿರುವ ಈ ಸಾರ್ವಭೌಮ ಪ್ರಜೆಗಳ ಅಸ್ತಿತ್ವ ಮತ್ತು ಅಸ್ಮಿತೆ (Existence and Identity) ಏನು ? ಮುಖ್ಯ ಚುನಾವಣಾ ಆಯುಕ್ತರು ಹೇಳಿರುವಂತೆ ಈ ಜನರು ಎದುರಿಸುವ ಸಂಭಾವ್ಯ ಸಂಕಷ್ಟಗಳು ಏನು ? ಅಥವಾ ಈ ಸಂಕಷ್ಟಗಳಿಂದ ಹೊರಬರಲು ಈ ಜನರು ಏನು ಮಾಡಬೇಕು ?
ಯಾವುದೇ ಆಳವಾದ ಸಂಶೋಧನೆಯ ಅಗತ್ಯವಿಲ್ಲದೆಯೇ ಹೇಳಬಹುದಾದ ವಾಸ್ತವ ಎಂದರೆ,

ಹೀಗೆ ಮತದಾರ ಪಟ್ಟಿಯಿಂದ ಅಳಿಸಿಹಾಕಲ್ಪಟ್ಟ ʼಮತವಂಚಿತ ವರ್ಗ ʼದಲ್ಲಿ ಕಾಣುವುದು ಅಲ್ಪಸಂಖ್ಯಾತರು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳು, ಗ್ರಾಮೀಣ ಜನರು, ಮಹಿಳೆಯರು ಹಾಗೂ ಚುನಾವಣಾ ಆಯೋಗ ಅಪೇಕ್ಷಿಸುವ ದಾಖಲೆಗಳನ್ನು ಒದಗಿಸಲು ಸಾಧ್ಯವೇ ಆಗದ ತಳಸ್ತರದ ದುಡಿಯುವ ಜನತೆ. ಈ ಜನರು ಯಾರು ? ಇವರ ಹೆಸರು-ಊರು ಇತ್ಯಾದಿ ಕನಿಷ್ಠ ವಿವರಗಳನ್ನಾದರೂ ಸಾರ್ವಜನಿಕವಾಗಿ ತಾಲ್ಲೂಕು, ಬ್ಲಾಕ್ ಮಟ್ಟದಲ್ಲಿ ಪ್ರಕಟಿಸಲು ಸಾಧ್ಯವೇ ? ಈ ಮತವಂಚಿತ ವರ್ಗದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗುವಂತಹ ದಾಖಲೆಗಳನ್ನು ಸೂಚಿಸಿ ಇನ್ನೂ ಹೆಚ್ಚಿನ ಕಾಲಾವಕಾಶ ಒದಗಿಸಲು ಸಾಧ್ಯವೇ ?
ಉತ್ತರದಾಯಿತ್ವದ ಸಿಕ್ಕುಗಳ ನಡುವೆ
ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಉತ್ತರಿಸಬೇಕಾಗುತ್ತದೆ. ಇಲ್ಲವಾದರೆ ಭಾರತದ ಒಟ್ಟು ವಯಸ್ಕ ಜನಸಂಖ್ಯೆಯ (Adult Population) ಶೇಕಡಾ 8ರಷ್ಟು ಜನರಾದರೂ ದಿಕ್ಕಿಲ್ಲದ ಅಬ್ಬೇಪಾರಿಗಳಾಗುತ್ತಾರೆ. ಇವರನ್ನು ಆಡಳಿತಾತ್ಮಕ ಪರಿಭಾಷೆಯಲ್ಲಿ ʼನಾಗರಿಕರಲ್ಲದವರುʼ (Non Citizens), ʼಪೌರತ್ವ ಇಲ್ಲದವರುʼ (No Citizenship) ಎಂದು ಕರೆಯಲಾಗುತ್ತದೆ. ಇಂತಹ ದಿಕ್ಕುಗಾಣದ ಜನತೆಯನ್ನು ಜೈಲು ಎಂಬ ಪದಕ್ಕೆ ಸಂವಾದಿಯಾಗಿ ಬಳಕೆಯಾಗುವ ʼ ಬಂಧನ ಶಿಬಿರಗಳಲ್ಲಿ ʼ (Detention Camps) ಕೂಡಿಹಾಕಲಾಗುವುದೇ ? ಒಂದು ವೇಳೆ ಹೀಗೆ ಅಳಿಸಿಹಾಕಲ್ಪಟ್ಟವರ ಪೈಕಿ ಭಾರತಲ್ಲೇ ಹುಟ್ಟಿ ಬೆಳೆದಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವರಿಗೆ ʼ ಮತದಾನದ ಸಾಂವಿಧಾನಿಕ ಹಕ್ಕು ʼ ಅನ್ವಯಿಸುವುದಿಲ್ಲವೇ ? ಈ ಮತವಂಚಿತ ಸಮಾಜದ ಸದಸ್ಯರು ಇಷ್ಟು ವರ್ಷಗಳ ಕಾಲ ಚಲಾಯಿಸಿದ ʼ ಪವಿತ್ರ ಮತಗಳ ʼ (Sacred Votes) ಸಾಂವಿಧಾನಿಕ ಔಚಿತ್ಯ, ಪ್ರಸ್ತುತತೆ ಮತ್ತು ಅನ್ವಯಿಕೆಯನ್ನು ಹೇಗೆ ನಿರ್ವಚಿಸುವುದು ?
ವಿದ್ವಾಂಸರು, ಪಂಡಿತರು ವ್ಯಾಖ್ಯಾನಿಸುವ ಸಾಂವಿಧಾನಿಕ ಪರಿಭಾಷೆಗಳ ಚೌಕಟ್ಟಿನಿಂದ ಹೊರಗೆ, ಸಾಮಾನ್ಯ ಜನರು ಈ ಪ್ರಶ್ನೆಗಳನ್ನು ಕೇಳಬಹುದು. ಚೀನಾದಲ್ಲಿರುವ ಫಾಕ್ಸ್ಕಾನ್ ಔದ್ಯಮಿಕ ಸಾಮ್ರಾಜ್ಯದಲ್ಲಿ ಬೆವರು ಸುರಿಸುವ ಗ್ರಾಮೀಣ ವಲಸೆ ಕಾರ್ಮಿಕರು ತಮ್ಮ ಹತಾಶೆಯನ್ನು ಹತ್ತಿಕ್ಕಲಾರದೆ “ ನಾವೂ ಬದುಕಿದ್ದೆವು ಎಂದು ಪ್ರಮಾಣೀಕರಿಸಲು ಇರುವ ಏಕೈಕ ಮಾರ್ಗ ನಮ್ಮ ಸಾವು ” (The Precariate – Guy Standing) -ಎಂದು ಗೋಡೆಗಳ ಮೇಲೆ ಬರೆಯುತ್ತಾರೆ. ಬಹುಶಃ ಭಾರತದಲ್ಲಿ ಸೃಷ್ಟಿಯಾಗಲಿರುವ ʼಮತವಂಚಿತ ಸಮಾಜʼ ದಲ್ಲಿ ಇದೇ ಅಭಿವ್ಯಕ್ತಿಯನ್ನು ಕಾಣುವ ಸಾಧ್ಯತೆ ಇದೆ. ಈ ಅನ್ಯಾಯವನ್ನು ಸರಿಪಡಿಸಿ, ಎಸ್ಐಆರ್ ಪ್ರಕ್ರಿಯೆಯನ್ನೇ ಅನೂರ್ಜಿತಗೊಳಿಸಿ, ಅಳಿಸಿಹಾಕಲ್ಪಟ್ಟವರನ್ನು ಮತ್ತೆ ಮತದಾರ ಪಟ್ಟಿಗೆ ಸೇರಿಸಿ ಇತ್ಯಾದಿ ಬೇಡಿಕೆಗಳನ್ನು ಹೊತ್ತ ಹೋರಾಟಗಳು ನಮ್ಮ ನಡುವೆ ನಡೆದಿವೆ, ನಡೆಯುತ್ತಿವೆ.

ಪ್ರದರ್ಶನಗಳಿಂದಾಚೆಗೆ,,,,,,
ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ ಈ ಜನದನಿ ಅರಣ್ಯ ರೋದನವಾಗಿ ಕಾಣುತ್ತದೆ. ಆದರೆ ನಾಗರಿಕ ಜಗತ್ತಿನ ಪ್ರಜ್ಞಾವಂತರಿಗೆ ಇದು ʼ ಇಂದಿನ ಬದುಕು ನಾಳೆಯ ಬೆಳಕಿನ ʼ ಪ್ರಶ್ನೆಯಾಗಿ ಕಾಡುತ್ತದೆ. ಈ ದುರ್ಭಾಗ್ಯ ಜನತೆಯನ್ನು ಸಂಪರ್ಕಿಸುವುದು ಹೇಗೆ ? ಇದಕ್ಕೆ ಬೇಕಾದ ಭೌತಿಕ-ಬೌದ್ಧಿಕ-ಆರ್ಥಿಕ ಸಂಪನ್ಮೂಲಗಳು ನಮ್ಮಲ್ಲಿ, ನಾಗರಿಕ ಸಮಾಜದಲ್ಲಿ, ಲಭ್ಯವಿದೆಯೇ ? ಇರುವುದೇ ಆದರೆ ಕಾರ್ಯಗತಗೊಳಿಸುವ ಜವಾಬ್ದಾರಿ ಹೊರುವವರು ಯಾರು ? ಪ್ರಜಾಪ್ರಭುತ್ವ-ಸಂವಿಧಾನ-ಅಂಬೇಡ್ಕರ್ ಜಪ ಮಾಡುವ So called ಸೆಕ್ಯುಲರ್ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಈ ನೊಗ ಹೊರಲು ಸಾಧ್ಯವೇ ? ದಾಖಲೆ ಸಮೇತ ಸಿಗುವ ʼ ಅಕ್ರಮ ಬಾಂಗ್ಲಾ ವಲಸಿಗರನ್ನು ʼ ಹೊರತುಪಡಿಸಿ ಉಳಿದ ಭಾರತೀಯರಿಗೆ ಭವಿಷ್ಯದ ಹಾದಿ ತೋರಲು ಏನು ಮಾಡಬೇಕು ? ನಾಗರಿಕ ಜಗತ್ತನ್ನು ಗಾಢವಾಗಿ ಕಾಡಬೇಕಾದ ಪ್ರಶ್ನೆ ಇದು.
ಹೋರಾಟ, ಜಾಥಾ, ಪ್ರತಿಭಟನೆ, ಸಮಾವೇಶ ಇತ್ಯಾದಿ ಪ್ರದರ್ಶನಗಳು (Spectacles) ಉತ್ತರಿಸುವುದಿಲ್ಲ. ಇದು ಬೌದ್ಧಿಕ ಪ್ರಶ್ನೆಯಲ್ಲ ಭವಿಷ್ಯದ ಬದುಕಿನ ಭೌತಿಕ ಪ್ರಶ್ನೆ (Material Question) . ಉತ್ತರದಾಯಿತ್ವದ ಕಲ್ಪನೆಯೂ ಇಲ್ಲದ ಒಂದು ಪ್ರಜಾತಂತ್ರದಲ್ಲಿ ನಾವಿದ್ದೇವೆ. ಆದರೆ ಉತ್ತರದಾಯಿಗಳಾಗಿ ನಿಲ್ಲಬೇಕಾದವರು ನಮ್ಮಿಂದಲೇ ಚುನಾಯಿತರಾಗಿದ್ದಾರೆ. ಸಮಸ್ತ ನಾಗರಿಕರ ಶ್ರಮ ಮತ್ತು ತೆರಿಗೆ ಹಣದಿಂದಲೇ ಸುರಕ್ಷಿತವಾಗಿ, ಸುಭದ್ರವಾಗಿ ನೆಲೆಯೂರಿದ್ದಾರೆ. ಇವರ ನಡುವಿನಿಂದ ಒಂದು ಕ್ಷೀಣ ಸ್ವರವೂ ಹೊರಬರುತ್ತಿಲ್ಲ. ಇದು ವಿಕಸಿತ ಭಾರತದ ಅತಿದೊಡ್ಡ ದುರಂತ. ಯಾರು ಕಾರಣ ಎನ್ನುವುದಕ್ಕಿಂತಲೂ ಏಕೆ ಹೀಗಾಯ್ತು ಎಂಬ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ. ಇದು ನಾಗರಿಕರ ಜವಾಬ್ದಾರಿಯೇ ಹೌದಾದರೆ ನಾವು ಏನು ಮಾಡಬೇಕು, ಮಾಡಬಹುದು ? ಯೋಚಿಸೋಣ.
-೦-೦-೦-೦-






