ಪ್ರತಿಧ್ವನಿ ವಿಶೇಷ ವರದಿ :
ಬಿಜೆಪಿಯಲ್ಲಿದ್ದಾಗ ರಾಜ್ಯ ರಾಜಕೀಯದ ಕಂಟ್ರೋಲ್ ಹೊಂದಿದ್ದ ಸವದಿ, ಕಾಂಗ್ರೆಸ್ನಲ್ಲಿ ಪವರ್ ಲೆಸ್ ಆದ್ರಾ..?
ಅಂದು ರಾಜ್ಯ ಬಿಜೆಪಿಯ ಟ್ರಬಲ್ ಶೂಟರ್ ಆಗಿದ್ದ ಸವದಿ, ಇಂದು ‘ಕೈ’ ಪಡೆಯಲ್ಲಿ ಗುಂಡಿಲ್ಲದ ಬಂದೂಕಿನಂತಾದ್ರಾ..!?
ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ : ಮಂತ್ರಿಗಿರಿಗೆ ಮುಳುವಾಯ್ತಾ ಶಾಸಕರ ನಡೆ..?
ಬೆಳಗಾವಿ : ಒಂದು ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಬಿಗಿ ಹಿಡಿತ ಸಾಧಿಸಿದ್ದ, ಬಿಜೆಪಿ ಹೈಕಮಾಂಡ್ನ ಅಚ್ಚುಮೆಚ್ಚಿನ ನಾಯಕರಾಗಿದ್ದ ಅಥಣಿ ಶಾಸಕ ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರಿದ ಮೇಲೆ ತಮ್ಮ ಪ್ರಾಬಲ್ಯ ಕಳೆದುಕೊಂಡರಾ? ಎನ್ನುವಂತೆ ರಾಜ್ಯ ರಾಜಕೀಯದಲ್ಲಿ ಈಗ ಇಂಥದ್ದೊಂದು ಭಾರೀ ಚರ್ಚೆ ಶುರುವಾಗಿದೆ.

ಕಮಲ ಪಾಳಯದಲ್ಲಿ ಎಲ್ಲಾ ಶಾಸಕರಿಗೂ ಪವರ್ ಸೆಂಟರ್ ಆಗಿದ್ದ ಸವದಿ, ಇದೀಗ ‘ಕೈ’ ಪಾಳಯದಲ್ಲಿ ಸಂಪೂರ್ಣ ಮೂಲೆಗುಂಪಾಗಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆರ್.ಎಸ್.ಎಸ್ ಸಿದ್ದಾಂತದ ಪ್ರಬಲ ಪ್ರತಿಪಾದಕರಾಗಿ, ಸಂಘ ಪರಿವಾರ ನಾಯಕರ ನಿಕಟವರ್ತಿಯಾಗಿದ್ದ ಲಕ್ಷ್ಮಣ್ ಸವದಿ ಬಿಜೆಪಿಯಲ್ಲಿ ಘಟಾನುಘಟಿ ನಾಯಕರ ಜೊತೆ ಆತ್ಮೀಯ ಒಡನಾಟ ಹೊಂದಿದ್ದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೂ ನೇರ ಸಂಪರ್ಕ ಹೊಂದಿದ್ದ ಉತ್ತರ ಕರ್ನಾಟಕದ ಈ ಪ್ರಭಾವಿ ರೈತ ನಾಯಕ, ರಾಜ್ಯ ಬಿಜೆಪಿಯ ಪಾಲಿಗೆ ಅಕ್ಷರಶಃ ಟ್ರಬಲ್ ಶೂಟರ್ ಆಗಿದ್ದರು. ಆಗಿನ ದಿನಗಳಲ್ಲಿ ಸಚಿವ ಸ್ಥಾನ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಇವರ ಅಭಿಪ್ರಾಯಕ್ಕೆ ಅಪಾರ ಮನ್ನಣೆ ಇತ್ತು. ರೈತ ಮೋರ್ಚಾ, ಕೋರ್ ಕಮಿಟಿ ಸದಸ್ಯರಾಗಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಇದನ್ನೂ ಓದಿ : ಮದ್ವೆ ಬಳಿಕ ಕ್ಯಾಮೆರಾ ಮುಂದೆ ರಶ್ಮಿಕಾ! : ಬ್ರೇಕ್ಲೆಸ್ ಶೂಟ್…! ಇದು ಬಿಗ್ ಅಪ್ಡೇಟ್
ಆದರೆ, ಯಾವಾಗ ಬಿಜೆಪಿ ತೊರೆದು ಕಾಂಗ್ರೆಸ್ “ಕೈ” ಹಿಡಿದರೋ, ಅಲ್ಲಿಂದ ಅವರ ರಾಜಕೀಯ ಬೆಳವಣಿಗೆಗೆ ಅಂಕುಶ ಬೀಳುತ್ತಾ ಬರುತ್ತಿದೆಯಾ ಎಂಬ ಅನುಮಾನ ಉದ್ಭವಿಸಿದೆ. ರಾಜ್ಯ ಬಿಜೆಪಿಗೆ ಆಪತ್ಬಾಂಧವನಂತಿದ್ದ ನಾಯಕ, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಗುಂಡಿಲ್ಲದ ಬಂದೂಕಿನಂತಾಗಿದ್ದಾರಾ? ಬಿಜೆಪಿಯಲ್ಲಿ ರಾಜಾಧಿರಾಜನಂತೆ ಮೆರೆದಿದ್ದ ನಾಯಕನಿಗೆ, ಈಗ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವ ದುಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ವಿಧಾನಸಭಾ ಚುನಾವಣೆಗೂ ಮುನ್ನ ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಾಗ, ಅಂದಿನ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಕರೆಸಿಕೊಳ್ಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದರು ಎಂಬುವುದು ಜನರ ಮಾತಾಗಿದೆ. ಅಷ್ಟೊಂದು ಪ್ರಾಮುಖ್ಯತೆ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕರು, ಇಂದು ಅದೇ ಸವದಿಯವರನ್ನು ಸಚಿವ ಸಂಪುಟದಿಂದ ದೂರವಿಟ್ಟಿದ್ದೇಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪಕ್ಷದಲ್ಲಿ ಯಾವುದೇ ಪ್ರಮುಖ ಸ್ಥಾನಮಾನ ಹಂಚಿಕೆಯಾಗದೆ ಅಥಣಿ ಶಾಸಕ ಸೈಡ್ ಲೈನ್ ಆಗಿದ್ದಾರೆ ಎಂಬ ಮಾತುಗಳು ಅಥಣಿ ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿವೆ.
ಸವದಿಗೆ ಮುಳುವಾಯ್ತಾ ಪಕ್ಷ ವಿರೋಧಿ ಚಟುವಟಿಕೆಯ ಆರೋಪ..? :
ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳೇ ಅವರಿಗೆ ಮಂತ್ರಿಗಿರಿ ಕೈತಪ್ಪಲು ಪ್ರಮುಖ ಕಾರಣವಾದವಾ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.

ಹಿಂದಿನ, ಇಂದಿನ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ..
ಮೊದಲ ಹಂತದಲ್ಲಿ ಸುಮಾರು 13 ಜನರನ್ನು ಸಚಿವರನ್ನಾಗಿ ಮಾಡಲಾಗಿದೆ. ಸಂಪುಟದಲ್ಲಿ ಇನ್ನು 20 ಜನರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಹಿಂದಿನ ಮುಖ್ಯಮಂತ್ರಿಗಳು ಹಾಗೂ ಇಂದಿನ ಮುಖ್ಯಮಂತ್ರಿಗಳು ಸೇರಿದಂತೆ ವರಿಷ್ಠರು ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನದ ಭರವಸೆಯನ್ನು ನೀಡಿದ್ದಾರೆ. ನಮ್ಮ ನಾಯಕರು ನನಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ, ಪಕ್ಷದ ವರಿಷ್ಠರು ಕೂಡ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಹೇಳಿದ್ದಾರೆ ಎನ್ನುವುದು ಶಾಸಕ ಲಕ್ಷ್ಮಣ್ ಸವದಿ ನಿರೀಕ್ಷೆಯಾಗಿದೆ.
ಒಟ್ಟಿನಲ್ಲಿ, ಕನಕಪುರದ ಬಂಡೆ, ಕಾಂಗ್ರೆಸ್ ಪಕ್ಷದ ಪಾಲಿನ ಟ್ರಬಲ್ ಶೂಟರ್ ಎನ್ನಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅಂದು ಸವದಿಯವರಿಗೆ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂಬುವುದು ಸವದಿ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ. ಅಂದು ಇಡೀ ಉತ್ತರ ಕರ್ನಾಟಕದ ಪ್ರಭಾವಿ ರೈತ ನಾಯಕನಾಗಿದ್ದ ಸವದಿಯವರ ಇಂದಿನ ಸ್ಥಿತಿ ಕಂಡು ಅವರ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡುವಂತಾಗಿರುವುದು ಸುಳ್ಳಲ್ಲ..!






