ಮಹಿಳೆಯರ ಆರೋಗ್ಯ ಮತ್ತು ಋತುಬಂಧ (ಮೆನೋಪಾಸ್) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ‘ಋತುತಾರೆ’ ಎಂಬ ವಿಶೇಷ ಯೋಜನೆಯನ್ನು ಆರಂಭಿಸಿದೆ. ಮಹಿಳೆಯರು ಋತುಬಂಧದ ಅವಧಿಯಲ್ಲಿ ಎದುರಿಸುವ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ, ಸೂಕ್ತ ಮಾರ್ಗದರ್ಶನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಋತುಮತಿ ಎನ್ನುವುದು ಮಹಿಳೆಯ ಜೀವನದ ಮಹತ್ವದ ಹಂತವಾಗಿದ್ದರೆ, ಋತುಬಂಧವೂ ಸಹಜ ದೈಹಿಕ ಪ್ರಕ್ರಿಯೆಯ ಮತ್ತೊಂದು ಪ್ರಮುಖ ಘಟ್ಟವಾಗಿದೆ. ಆದರೆ ಈ ವಿಷಯಗಳ ಬಗ್ಗೆ ಸಮಾಜದಲ್ಲಿ ಇನ್ನೂ ಮುಕ್ತ ಚರ್ಚೆಗಳು ನಡೆಯದಿರುವುದು ಹಾಗೂ ಅರಿವಿನ ಕೊರತೆ ಇರುವುದರಿಂದ ಅನೇಕ ಮಹಿಳೆಯರು ಅನಗತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ‘ಋತುತಾರೆ’ ಅಭಿಯಾನಕ್ಕೆ ಚಾಲನೆ ನೀಡಿದೆ.ಯೋಜನೆ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ನಟಿ ರಮ್ಯಾ ಮಾಹಿತಿ ನೀಡಿದರು. ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ರಮ್ಯಾ ಅವರನ್ನು ಸರ್ಕಾರ ನೇಮಕ ಮಾಡಿದೆ. ಮಹಿಳೆಯರ ಆರೋಗ್ಯ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರ ಕ್ರಮಗಳನ್ನು ರೂಪಿಸಲು ಮಹಿಳಾ ತಜ್ಞೆ ಡಾ. ಜೋಸ್ನಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯನ್ನೂ ರಚಿಸಲಾಗಿದೆ.

ಸಾಮಾನ್ಯವಾಗಿ ಮಹಿಳೆಯರು 45ರಿಂದ 55 ವರ್ಷದೊಳಗೆ ಋತುಬಂಧ ಹಂತವನ್ನು ತಲುಪುತ್ತಾರೆ. ಈ ಅವಧಿಯಲ್ಲಿ ಹಾರ್ಮೋನ್ಗಳಲ್ಲಿ ಆಗುವ ಬದಲಾವಣೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವು ರೀತಿಯ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಆದರೆ ಇವು ಮೆನೋಪಾಸ್ನ ಲಕ್ಷಣಗಳೆಂಬ ಅರಿವು ಅನೇಕ ಮಹಿಳೆಯರಿಗೆ ಇರುವುದಿಲ್ಲ. ಇದೇ ಅರಿವಿನ ಕೊರತೆಯನ್ನು ನಿವಾರಿಸುವುದು ‘ಋತುತಾರೆ’ ಯೋಜನೆಯ ಪ್ರಮುಖ ಗುರಿಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ಕುರಿತು ಮಾತನಾಡಿದ ನಟಿ ರಮ್ಯಾ, “ಮೆನೋಪಾಸ್ ಯಾವುದೇ ರೋಗವಲ್ಲ; ಅದು ಮಹಿಳೆಯ ಜೀವನದ ಸಹಜ ಹಂತ. ಈ ಸಮಯದಲ್ಲಿ ಕುಟುಂಬದ ಬೆಂಬಲ ಹಾಗೂ ಸರಿಯಾದ ಆರೋಗ್ಯ ಮಾರ್ಗದರ್ಶನ ಅತ್ಯಗತ್ಯ. ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ರಾಜ್ಯ ಸರ್ಕಾರದ ಈ ಯೋಜನೆಯ ಭಾಗವಾಗಿರುವುದು ಸಂತಸದ ವಿಷಯ” ಎಂದು ಹೇಳಿದರು. ಭಾರತದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಮೆನೋಪಾಸ್ ಬೇಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದು, ಈ ಹಂತವನ್ನು ಸಮರ್ಥವಾಗಿ ಎದುರಿಸಲು ಅರಿವು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಯೋಜನೆಯ ಭಾಗವಾಗಿ ಮುಂದಿನ ಆರು ತಿಂಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮೆನೋಪಾಸ್ ಕುರಿತು ಮಹಿಳೆಯರಿಗೆ ಮಾಹಿತಿ ನೀಡಲಿದ್ದಾರೆ. ಋತುಬಂಧದ ಸಮಯದಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳು, ಜೀವನಶೈಲಿ ಬದಲಾವಣೆಗಳು ಹಾಗೂ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಜಾಗೃತಿ ಮೂಡಿಸಲಿದ್ದಾರೆ.





