ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮಾನಸ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿ, ಕ್ಯಾಂಪಸ್ ಒಳಗಿನ ಸಾರ್ವಜನಿಕ ವಾಹನ ಸಂಚಾರವನ್ನು ನಿಯಂತ್ರಿಸುವಂತೆ ಒತ್ತಾಯಿಸಿದ್ದಾರೆ.

ದೃಶ್ಯಕಲಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಮಾನಸ ಅವರು ಜುಲೈ 30ರಂದು ಪರೀಕ್ಷೆ ಮುಗಿಸಿ ರಸ್ತೆ ದಾಟುತ್ತಿದ್ದ ವೇಳೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹಲವು ದಿನಗಳ ಚಿಕಿತ್ಸೆ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ.ವಿದ್ಯಾರ್ಥಿನಿಯ ಸಾವಿನ ಬಳಿಕ ವಿದ್ಯಾರ್ಥಿಗಳು ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ‘ಜಸ್ಟಿಸ್ ಫಾರ್ ಮಾನಸ’ ಅಭಿಯಾನ ಆರಂಭಿಸಿದ್ದಾರೆ. ಆಡಳಿತ ಕಚೇರಿಯಿಂದ ನಾಗರಭಾವಿ ವೃತ್ತದವರೆಗೆ ಇರುವ ಗಾಂಧಿ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ರಸ್ತೆಯಲ್ಲಿ ವಾಹನಗಳ ವೇಗ ಹೆಚ್ಚಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ವಿಶ್ವವಿದ್ಯಾಲಯ ಆಡಳಿತ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿಭಟನಾನಿರತ ವಿದ್ಯಾರ್ಥಿಗಳು ಕುಲಪತಿಗೆ ಪತ್ರ ಬರೆದು, ಗಾಂಧಿ ಮಾರ್ಗವನ್ನು ಸಾರ್ವಜನಿಕ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧಿಸಬೇಕು ಅಥವಾ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆ ಮಧ್ಯೆ ವೇಗ ನಿಯಂತ್ರಣ ಬ್ಯಾರಿಕೇಡ್‌ಗಳನ್ನು ಅಳವಡಿಸುವುದು, ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸುವುದು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪತ್ರದಲ್ಲಿ ಮಾನಸ ಅವರ ಸಾವಿಗೆ ನ್ಯಾಯ ದೊರಕಿಸಬೇಕು, ಅವರ ಕುಟುಂಬಕ್ಕೆ ವಿಶ್ವವಿದ್ಯಾಲಯ ನೆರವು ನೀಡಬೇಕು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು ಎಂದು ಮನವಿ ಮಾಡಲಾಗಿದೆ.
ವಿದ್ಯಾರ್ಥಿಗಳ ಪ್ರಕಾರ, ಗಾಂಧಿ ಮಾರ್ಗದಲ್ಲಿ ವಾಹನಗಳ ಅತಿವೇಗ, ಅಸ್ತವ್ಯಸ್ತ ಸಂಚಾರ ಹಾಗೂ ರಸ್ತೆ ಬದಿಯ ಅನಧಿಕೃತ ನಿಲುಗಡೆಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಅನಾಹುತಗಳು ಸಂಭವಿಸುವ ಆತಂಕವಿದೆ.






