ದೇಶದ ಬಹುತೇಕ ರಾಜ್ಯಗಳಲ್ಲಿ 20 ತಿಂಗಳ ಸುದೀರ್ಘ ಅವಧಿಯ ನಂತರ ಶಾಲೆ ಶುರುವಾಗಿದ್ದು ಕರ್ನಾಟಕದಲ್ಲೂ ಇಂದಿನಿಂದ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ಕೊರೋನಾ ಕಡಿಮೆಯಾದ ಹಿನ್ನೆಲೆಯಲ್ಲಿ ದಸರಾ ಬಳಿಕ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತೆ ಎಂದು ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ತಿಳಿಸಿದಂತೆಯೇ ಇಂದಿನಿಂದ ಮತ್ತೆ ಶಾಲೆಯ ಅಂಗಳ ಮಕ್ಕಳಿಂದ ತುಂಬಲಿದೆ. ಒಂದು ವಾರದವರೆಗೆ ಮಕ್ಕಳಿಗೆ ಅರ್ಧ ದಿನ ಮಾತ್ರ ತರಗತಿಗಳು ಇರಲಿದ್ದು ನಂತರ ಪೂರ್ಣಾವಧಿ ಶಾಲೆ ಶುರುವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಆನ್ಲೈನ್ ಶಿಕ್ಷಣದಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇತ್ತು. ಈ ಹಿನ್ನೆಲೆಯಲ್ಲೇ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಬೇಕು ಎನ್ನುವ ಒತ್ತಾಯ ಶಿಕ್ಷಣ ತಜ್ಞರ ಕಡೆಯಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಇದಕ್ಕೆ ಪೂರಕವಾಗಿ ಹೊಸ ಸಮೀಕ್ಷೆಯೊಂದು ಬಿಡುಗಡೆಯಾಗಿದ್ದು ಸುಮಾರು 43 ಪ್ರತಿಶತ ಶಿಕ್ಷಕರು ಆನ್ಲೈನ್ ಬೋಧನೆಯಿಂದ ತೃಪ್ತರಾಗಿಲ್ಲ ಎಂದು ಹೇಳಿರುವುದಾಗಿ ಮತ್ತು ಅವರಲ್ಲಿ ಒಂಬತ್ತು ಪ್ರತಿಶತದಷ್ಟು ಜನರು ಶಿಕ್ಷಣದ ವಿಧಾನದ ಬಗ್ಗೆ ಸಂಪೂರ್ಣ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.
ಒಟ್ಟು 220 ಶಾಲಾ ಶಿಕ್ಷಕರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ದೆಹಲಿ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ (ಡಿಸಿಪಿಸಿಆರ್) ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಬಹುಪಾಲು ಶಿಕ್ಷಕರು (43 ಪ್ರತಿಶತ) ಆನ್ಲೈನ್ನಲ್ಲಿ ಕಲಿಸುವುದರಲ್ಲಿ ತೃಪ್ತರಾಗಿಲ್ಲ ಮತ್ತು ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಒಂಬತ್ತು ಪ್ರತಿಶತ ಶಿಕ್ಷಕರು ಸಂಪೂರ್ಣ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ಒತ್ತಿ ಹೇಳಿದೆ.
ಗೈರುಹಾಜರಿ (ಶೇಕಡಾ 14), ವಿಶೇಷ ಗಮನದ ಅಗತ್ಯವಿರುವ ಮಕ್ಕಳನ್ನು ಪರಿಗಣಿಸದಿರುವುದು (21 ಪ್ರತಿಶತ), ಪಾಠದ ಕಡೆ ವಿದ್ಯಾರ್ಥಿಗಳ ಗಮನ ಇಲ್ಲದಿರುವುದು(28 ಪ್ರತಿಶತ), ವಿದ್ಯಾರ್ಥಿಗಳ ಭಾವನಾತ್ಮಕ ಸಮಸ್ಯೆಗೆ ಪ್ರತಿಕ್ರಿಯಿಸಲಾಗದಿರುವುದು(19 ಪ್ರತಿಶತ) ಮತ್ತು ನೀಡಿರುವ ಅಸೈನ್ಮೆಂಟ್ಗಳನ್ನು ವಿದ್ಯಾರ್ಥಿಗಳು ಮಾಡದಿರುವುದು (10 ಪ್ರತಿಶತ) ಎಂದು ಶಿಕ್ಷಕರು ಆನ್ಲೈನ್ ತರಗತಿಗಳಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸಮೀಕ್ಷೆಯಲ್ಲಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರೋಕೆ ಪೋಷಕರಿಂದ ಮಾತ್ರ ಸಾಧ್ಯವಿರುವುದರಿಂದ ಶಾಲಾ ಶಿಕ್ಷಣದಲ್ಲಿ ಪೋಷಕರ ಒಳಗೊಳ್ಳುವಿಕೆ ಅಗತ್ಯವಾಗಿದೆ ಎಂಬುವುದಕ್ಕೆ ಸಮೀಕ್ಷೆಯಲ್ಲಿ ಶಿಕ್ಷಕರು ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಈ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸ್ನೇಹಿತರನ್ನು ಭೇಟಿಯಾಗುವುದು, ಜನರೊಂದಿಗೆ ಸಂವಹನ ನಡೆಸುವುದು, ಆಚರಣೆಗಳು, ಸ್ನೇಹ ಸಂಬಂಧಗಳು ಸೇರಿದಂತೆ ಅನೇಕ ಶಾಲಾ ಚಟುವಟಿಕೆಗಳನ್ನು ಕಳೆದುಕೊಂಡಿದ್ದೇವೆ ಎಂದು ಆನ್ಲೈನ್ ಶಿಕ್ಷಣದ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆನ್ಲೈನ್ ಮೋಡ್ಗೆ ಶಿಕ್ಷಣದ ಯಶಸ್ವಿ ಪರಿವರ್ತನೆಗಾಗಿ, ಕೆಲವು ವಿಷಯಗಳು ಅಗತ್ಯವೆಂದು ಸಮೀಕ್ಷೆಯು ತೀರ್ಮಾನಿಸಿದ್ದು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಕೈಗೆಟುಕುವಿಕೆ, ಅಗತ್ಯಾಧಾರಿತ ಪಠ್ಯಕ್ರಮ ಶಿಕ್ಷಣಶಾಸ್ತ್ರದ ಬದಲಾವಣೆ ಮತ್ತು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಉದ್ದೀಪನಗೊಳಿಸುವುದು ಅವುಗಳಲ್ಲಿ ಪ್ರಮುಖವಾದವುಗಳು.
ಇದೀಗ ಪೂರ್ಣ ಭೌತಿಕ ತರಗತಿಗಳು ಪ್ರಾರಂಭವಾಗಿದ್ದು ಶಿಕ್ಷಕರಿಗೂ ತುಸು ನಿರಾಳತೆ ತಂದಿದೆ. ಆನ್ಲೈನ್ ಭೋದನಾ ವೇಳಾಪಟ್ಟಿಯನ್ನು ಮುಂದುವರೆಸುವ ಮತ್ತು ತಮ್ಮ ತಮ್ಮ ಮನೆಯೊಳಗಿನ ಜವಾಬ್ದಾರಿಯನ್ನು ನಿಭಾಯಿಸುವ ಒತ್ತಡದಿಂದ ಇನ್ನಾದರೂ ಶಿಕ್ಷಕರು ಹೊರಬರುವಂತಾಗಲಿ ಮತ್ತು ಮಕ್ಕಳಿಗೆ ತಮ್ಮ ವಯಸ್ಸಿನವರೊಂದಿಗೆ ಒಡನಾಡುವ ಅವಕಾಶ ಸಿಗಲಿ.