ಭಾರತದ ರಾಜಕಾರಣ ಸಂವಿಧಾನದ ಚೌಕಟ್ಟಿನಲ್ಲೇ ಸರ್ವಾಧಿಕಾರದ ಛಾಯೆಯಲ್ಲಿ ನಲುಗುತ್ತಿರುವ ವಿಷಮ ಸನ್ನಿವೇಶದಲ್ಲಿ ಪ್ರಜಾತಂತ್ರದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದು ಜವಾಬ್ದಾರಿಯುತ ರಾಜಕೀಯ ಪಕ್ಷದ ಧ್ಯೇಯವಾಗಿರಬೇಕು. ಭಾರತದ ಬಹುಸಾಂಸ್ಕೃತಿಕ ನೆಲೆಗಳನ್ನು ಸಂರಕ್ಷಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ದೇಶದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯ ಮುಂದೆ ಎರಡು ಪ್ರಮುಖ ಗುರಿಗಳಿವೆ. ಮೊದಲನೆಯದು ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಆಶಯಗಳನ್ನು ಕಾಪಾಡಿಕೊಂಡುಬರುವುದು, ಎರಡನೆಯದು ಆಡಳಿತ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕ ನಿಯಮಗಳನ್ನು ಅನುಸರಿಸುವ ಮೂಲಕ ದೇಶದ ಬಹುಸಂಖ್ಯಾತ ಜನತೆಯ, ದಲಿತ-ಆದಿವಾಸಿ-ಅಲ್ಪಸಂಖ್ಯಾತ-ಮಹಿಳಾ ಸಮುದಾಯಗಳ ಜೀವನ ಹಾಗು ಜೀವನೋಪಾಯ ಮಾರ್ಗಗಳನ್ನು ಹಸನುಗೊಳಿಸುವುದು.

ಈ ಜೀವನೋಪಾಯ ಮಾರ್ಗಗಳಿಗೆ ಧಕ್ಕೆ ಉಂಟುಮಾಡುವ ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಆರ್ಥಿಕ ಆಡಳಿತ ನೀತಿಗಳನ್ನು ಭಾರತದ ಸಾರ್ವಭೌಮ ಜನತೆ ತಿರಸ್ಕರಿಸುತ್ತಲೇ ಬಂದಿದ್ದಾರೆ. ಶಾಶ್ವತವಾಗಿ ಅಧಿಕಾರದಲ್ಲಿರುವ ಕನಸು ಎಲ್ಲ ರಾಜಕಾರಣಿಗಳಿಗೂ, ರಾಜಕೀಯ ಪಕ್ಷಗಳಿಗೂ ಸಹಜವಾಗಿ ಇರುವುದಾದರೂ ಭಾರತದ ಪ್ರಜ್ಞಾವಂತ ಮತದಾರರು ಈ ರಾಜಕೀಯ ಮಹತ್ವಾಕಾಂಕ್ಷೆಗೆ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ. ಆದರೆ ಬದಲಾದ ಭಾರತದಲ್ಲಿ ಇಂದು ಅಧಿಕಾರ ರಾಜಕಾರಣವನ್ನು ನಿಯಂತ್ರಿಸುತ್ತಿರುವುದು ಮೂಲತಃ ಬಂಡವಾಳ ಮತ್ತು ಕಾರ್ಪೋರೇಟ್ ಮಾರುಕಟ್ಟೆಯಾಗಿದ್ದು, ರಾಜಕೀಯ ಪಕ್ಷಗಳೂ ಸಹ ಈ ಮಾರುಕಟ್ಟೆ ಆಶ್ರಯದಲ್ಲೇ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿವೆ. ಪ್ರಾತಿನಿಧಿಕ ಸಂಸದೀಯ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿರುವ ಆಡಳಿತ ವ್ಯವಸ್ಥೆಯಲ್ಲಿ ಶಾಸನ ಸಭೆಗೆ ಚುನಾಯಿತರಾದ ಸದಸ್ಯರು ತಮ್ಮ ಸಂಸದೀಯ ನಾಯಕರನ್ನು ಆಯ್ಕೆ ಮಾಡುವ ಹಕ್ಕು ಮತ್ತು ಬಾಧ್ಯತೆಯನ್ನು ಹೊಂದಿರುತ್ತಾರೆ. ಹಾಗಾಗಿ ಯಾವುದೇ ರಾಜಕೀಯ ನಾಯಕರು ಸಂಭಾವ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯಾಗುವ ಅಪೇಕ್ಷೆಯನ್ನು ವ್ಯಕ್ತಪಡಿಸಬಹುದೇ ಹೊರತು ತಾವೇ ಆ ಸ್ಥಾನವನ್ನು ಅಲಂಕರಿಸುತ್ತೇವೆ ಎಂದು ನಿಶ್ಚಿತವಾಗಿ ಘೋಷಿಸುವುದು ಅಸಾಂವಿಧಾನಿಕ ನಡೆ ಆಗುತ್ತದೆ. ಆದರೆ ಇತ್ತೀಚೆಗೆ ಈ ರೀತಿಯ ಸ್ವಘೋಷಣೆ ಸಾಮಾನ್ಯವಾಗಿರುವುದು ಬದಲಾದ ಭಾರತದ ಸೂಚಕವೇ ಆಗಿದೆ.
ಮತದಾರ ಮತ್ತು ಪ್ರಜಾಸತ್ತೆ
76 ವರ್ಷಗಳ ತನ್ನ ಸ್ವತಂತ್ರ ನಡಿಗೆಯಲ್ಲಿ ಭಾರತದ ಸಾರ್ವಭೌಮ ಮತದಾರರು ನಿರೀಕ್ಷಿತ ಪಕ್ಷಗಳನ್ನು ಆಯ್ಕೆ ಮಾಡಿರುವುದಿದೆ, ಅನಿರೀಕ್ಷಿತ ಫಲಿತಾಂಶಗಳನ್ನು ನೀಡಿರುವುದೂ ಉಂಟು. 1977ರ ಮಹಾ ಚುನಾವಣೆಗಳಲ್ಲಿ 30 ವರ್ಷಗಳ ಕಾಂಗ್ರೆಸ್ ಪಕ್ಷದ ಆಧಿಪತ್ಯವನ್ನು ಕೊನೆಗೊಳಿಸಿದ ಭಾರತದ ಮತದಾರರು ಅಷ್ಟೇ ಅನಿರೀಕ್ಷಿತವಾಗಿ 1980ರಲ್ಲಿ ಅದೇ ಕಾಂಗ್ರೆಸ್ ಪಕ್ಷವನ್ನು ಚುನಾಯಿಸಿದ್ದು ಇತಿಹಾಸದ ವಿಡಂಬನೆ ಎನ್ನಬಹುದಾದರೂ, ಈ ಫಲಿತಾಂಶಗಳಲ್ಲಿ ಭಾರತದ ಪ್ರಜಾಪ್ರಭುತ್ವದಲ್ಲಿ ಇಂದಿಗೂ ಕಾಣಬಹುದಾದ ತೀವ್ರ ತುಡಿತವನ್ನು ಗಮನಿಸಬಹುದಿತ್ತು. ಆಡಳಿತಾರೂಢ ಪಕ್ಷಗಳ ಅತಿಯಾದ ಆತ್ಮವಿಶ್ವಾಸಕ್ಕೆ ವ್ಯತಿರಿಕ್ತವಾಗಿ ಭಾರತದ ಮತದಾರರು ತಮ್ಮ ಆಯ್ಕೆ ಸ್ವಾತಂತ್ರ್ಯವನ್ನು ಪ್ರಯೋಗಿಸಿರುವುದನ್ನು ಹಲವು ಸಂದರ್ಭಗಳಲ್ಲಿ ಕಂಡಿದ್ದೇವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯನ್ನು 2004ರ ಮಹಾ ಚುನಾವಣೆಗಳಲ್ಲಿ ಗುರುತಿಸಬಹುದು.

ಭಾರತದ ರಾಜಕಾರಣದಲ್ಲಿ ಭಿನ್ನ ರಾಜಕೀಯ ಸಿದ್ಧಾಂತದ ಹೊರತಾಗಿಯೂ ತಮ್ಮ ಮುತ್ಸದ್ದಿತನವನ್ನು ಕಾಪಾಡಿಕೊಂಡು, ರಾಜಕೀಯ ವಲಯಗಳಲ್ಲಿ ಅಜಾತಶತ್ರು ಎಂದೇ ಬಿಂಬಿತವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಈ ದೇಶ ಕಂಡ ಅತ್ಯುತ್ತಮ ಪ್ರಧಾನಿ ಎಂದೂ ಹೆಸರುಗಳಿಸಿದ್ದಾರೆ. ಈ ಕುರಿತ ಭಿನ್ನಾಭಿಪ್ರಾಯಗಳು ಏನೇ ಇದ್ದರೂ 1998 ರಿಂದ 2004ರವರೆಗಿನ ಅವರ ಎನ್ಡಿಎ ಆಡಳಿತದ ನಂತರ “ ಭಾರತ ಪ್ರಕಾಶಿಸುತ್ತಿದೆ ” ಎಂಬ ಘೋಷವಾಕ್ಯದೊಂದಿಗೆ ಸ್ಪರ್ಧಿಸಿದ ಬಿಜೆಪಿ ಮುಂದಾಳತ್ವದ ಎನ್ಡಿಎ ಮೈತ್ರಿಕೂಟ 2004ರ ಚುನಾವಣೆಗಳಲ್ಲಿ ಪರಾಭವಗೊಂಡಿತ್ತು. ವಾಜಪೇಯಿ ಅವರ ವೈಯುಕ್ತಿಕ ವರ್ಚಸ್ಸು ಸಹ ಗೆಲುವಿಗೆ ಸಹಕಾರಿಯಾಗಲಿಲ್ಲ. ಆಹಾರ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯ್ದೆಗಳ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಿದ ಮನಮೋಹನ್ ಸಿಂಗ್ ಸರ್ಕಾರ ನರೇಗಾದಂತಹ ಜನೋಪಯೋಗಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರೂ, ಯುಪಿಎ ಎರಡನೆ ಅವಧಿಯ ಭ್ರಷ್ಟಾಚಾರದ ಹಗರಣಗಳು 2014ರಲ್ಲಿ ಕಾಂಗ್ರೆಸ್ ಪರಾಭವಕ್ಕೆ ಕಾರಣವಾಗಿತ್ತು.
ಈಗ 2024ರ ಮಹಾಚುನಾವಣೆಗಳಿಗೆ ಮುನ್ನ ಭಾರತ ಅಂತಹುದೇ ಸನ್ನಿವೇಶವನ್ನು ಎದುರಿಸುತ್ತಿದೆ. ಇತ್ತೀಚಿನ ಸಿಎಜಿ ವರದಿಗಳು ಆಡಳಿತ ವ್ಯವಸ್ಥೆಯೊಳಗಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಹೊರಗೆಡಹುತ್ತಿದ್ದು, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಯಾವುದೇ ಆಳ್ವಿಕೆಯೂ ಭ್ರಷ್ಟಾಚಾರ ಮತ್ತು ಹಗರಣಗಳಿಂದ ಮುಕ್ತವಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದೆ. 2012-13ರಲ್ಲಿ ಸಿಎಜಿ ವರದಿಯಿಂದ ಬಹಿರಂಗವಾದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ “ ಎರಡನೆ ಸ್ವಾತಂತ್ರ್ಯ ಸಂಗ್ರಾಮ ”ದ ನೇತಾರರು ಇಂದು ಮೌನಕ್ಕೆ ಜಾರಿದ್ದಾರೆ. ಏಕೆಂದರೆ ಕಾರ್ಪೋರೇಟ್ ಮಾರುಕಟ್ಟೆ ಇಂದು ಬಹುತೇಕ ಎಲ್ಲ ಸಂವಹನ ಮಾರ್ಗಗಳನ್ನೂ ಆಕ್ರಮಿಸಿದೆ. ವಿದ್ಯುನ್ಮಾನ-ಮುದ್ರಣ ಮಾಧ್ಯಮಗಳಿಗೆ ಇದು ರೋಚಕ ಸುದ್ದಿಯಾಗಿ ಕಾಣುವುದೂ ಇಲ್ಲ. ಬಂಡವಾಳ ಮತ್ತು ಮಾರುಕಟ್ಟೆಯ ಈ ನಿಯಂತ್ರಣವೇ ಸಂಭಾವ್ಯ ಜನಪ್ರತಿನಿಧಿಗಳಲ್ಲೂ ಅಧಿಕಾರ ರಾಜಕಾರಣವನ್ನು ಸಮೀಪಿಸುವ ಮಾರ್ಗಗಳನ್ನು ತೆರೆಯುತ್ತವೆ. ಭ್ರಷ್ಟ ರಾಜಕಾರಣಿಗಳನ್ನು ಅಧಿಕಾರಕೇಂದ್ರಗಳಿಂದ ದೂರ ಇರಿಸುವ ಔದಾತ್ಯವನ್ನು ಎಂದೋ ಮರೆತಿರುವ ಭಾರತದ ರಾಜಕೀಯ ವ್ಯವಸ್ಥೆ ಈಗ ಅತಿ ಹೆಚ್ಚು ಭ್ರಷ್ಟರಿಗೂ ಆಶ್ರಯ ನೀಡುವ ಪಕ್ಷ ರಾಜಕಾರಣವನ್ನು ಸೃಷ್ಟಿಸಿದೆ.
ಆಪರೇಷನ್ಗಳ ಮಾರುಕಟ್ಟೆ ಆಯಾಮ
2023ರ ಚುನಾವಣೆಗಳಲ್ಲಿ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಐದು ವರ್ಷಗಳ ಕಾಲ ನಿರಾತಂಕವಾಗಿ ಆಳ್ವಿಕೆ ನಡೆಸುವ ಅವಕಾಶವನ್ನು ಕಲ್ಪಿಸಿದ್ದರೂ ಸ್ಥಾಪಿತ ಸರ್ಕಾರ ಅಸ್ಥಿರತೆಯ ಆತಂಕದಲ್ಲೇ ಆಡಳಿತ ನಡೆಸುವಂತಹ ಪರಿಸ್ಥಿತಿಯನ್ನು ನಿರ್ಮಿಸಲಾಗಿದೆ. ಚುನಾಯಿತ ಜನಪ್ರತಿನಿಧಿಗಳಲ್ಲಿ ಸಾಂವಿಧಾನಿಕ ಬಾಧ್ಯತೆ ಮತ್ತು ಮೌಲ್ಯಗಳು ಕುಸಿಯುತ್ತಿರುವುದರಿಂದ ತತ್ವ ಸಿದ್ಧಾಂತಗಳೆಲ್ಲವೂ ಗಾಳಿಗೆ ತೂರಲ್ಪಟ್ಟಿದ್ದು ವ್ಯಕ್ತಿಗತ ಅಸ್ತಿತ್ವಗಳೇ ಪ್ರಧಾನವಾಗಿ ಪರಿಣಮಿಸಿವೆ. ಹಾಗಾಗಿ ಸಾಂವಿಧಾನಿಕವಾಗಿ ಬಳಕೆಯಲ್ಲಿದ್ದ ಪಕ್ಷಾಂತರ ಎಂಬ ಪದ ತನ್ನ ಅರ್ಥ ಕಳೆದುಕೊಂಡಿದ್ದು, ʼ ಆಪರೇಷನ್ ʼ ಎಂಬ ಹೊಸ ರೂಪ ಪಡೆದಿದೆ. 2008ರಲ್ಲಿ ಬಿಜೆಪಿ ಹುಟ್ಟುಹಾಕಿದ ಆಪರೇಷನ್ ಕಮಲ ಈಗ ಹಸ್ತ, ತೆನೆಹೊತ್ತ ಮಹಿಳೆಯನ್ನೂ ಆಕ್ರಮಿಸಿದ್ದು ಚುನಾಯಿತ ಪ್ರತಿನಿಧಿಗಳನ್ನು ಹಲವು ಆಮಿಷಗಳ ಮೂಲಕ ಸೆಳೆದುಕೊಳ್ಳುವ ತಂತ್ರಗಾರಿಕೆ ಹೊಸ ರೀತಿಯ ತಂತ್ರಜ್ಞರನ್ನೂ ಸೃಷ್ಟಿಮಾಡಿದೆ. ಚುನಾವಣೆಗಳಲ್ಲಿ ಬಹುಮತ ಪಡೆಯದೆ ಇದ್ದರೂ ಸರ್ಕಾರ ರಚಿಸುತ್ತೇವೆ ಎಂಬ ದಾರ್ಷ್ಟ್ಯದ ಮಾತುಗಳನ್ನು 2023ರ ಸಂದರ್ಭದಲ್ಲೇ ಕೇಳಿದ್ದೇವೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ ಈ ಪ್ರಾತ್ಯಕ್ಷಿಕೆಗಳಿಗೆ ಪ್ರಯೋಗಾಲಯಗಳಾಗಿ ನಮ್ಮ ನಡುವೆ ಇದೆ.

ಈ ಹಿನ್ನೆಲೆಯಲ್ಲೇ ಕರ್ನಾಟಕದಲ್ಲಿ ಕೇಳಿಬರುತ್ತಿರುವ ʼ ಆಪರೇಷನ್ ಹಸ್ತ ʼದ ಕೂಗನ್ನೂ ಗಮನಿಸಬೇಕಿದೆ. 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಕಾರ್ಯಾಚರಣೆಯ ಅವಶ್ಯಕತೆ ಇಲ್ಲವಾದರೂ, ಭವಿಷ್ಯದ ಅನಿಶ್ಚಿತತೆಯನ್ನು ಹೋಗಲಾಡಿಸಿಕೊಳ್ಳಲು ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವ ತಂತ್ರವನ್ನು ಅನುಸರಿಸುತ್ತಿರುವಂತೆ ತೋರುತ್ತದೆ. ಬಿಜೆಪಿಯ ಆಪರೇಷನ್ ಕಮಲ ಕಾರ್ಯಾಚಾರಣೆಯನ್ನು ಖಂಡತುಂಡವಾಗಿ ಖಂಡಿಸಿದ ಕಾಂಗ್ರೆಸ್ ನಾಯಕರೇ ಇಂದು ʼ ಅವರು ಮಾಡಿಲ್ಲವೇ ನಾವು ಮಾಡಿದರೆ ತಪ್ಪೇನು ʼ ಎಂದು ಸಮಜಾಯಿಷಿ ನೀಡುವ ಮೂಲಕ ಈ ಅಸಾಂವಿಧಾನಿಕ ನಡೆಗೆ ಅಧಿಕೃತತೆಯನ್ನು ನೀಡುತ್ತಿದ್ದಾರೆ. ಮತದಾರರು ಎಷ್ಟೇ ಸ್ಥಾನಗಳನ್ನು ನೀಡಿದರೂ, ಅಧಿಕಾರ ಗ್ರಹಣಕ್ಕೆ ಅವಶ್ಯವಾದಷ್ಟು ಶಾಸನಸಭಾ ಸದಸ್ಯರನ್ನು ಪಡೆದುಕೊಳ್ಳುವ ಸಾಮರ್ಥ್ಯ ಎಲ್ಲ ಪಕ್ಷಗಳಿಗೂ ಇರುವುದು, ಇಡೀ ರಾಜಕೀಯ ವ್ಯವಸ್ಥೆಯ ಮೇಲೆ ಬಂಡವಾಳ ಮತ್ತು ಮಾರುಕಟ್ಟೆಯ ನಿಯಂತ್ರಣವನ್ನು ಸೂಚಿಸುತ್ತದೆ. ನವ ಉದಾರವಾದದ ವಿಸ್ತರಣೆಗೆ ಈ ರಾಜಕೀಯ ಪ್ರಕ್ರಿಯೆ ಅನಿವಾರ್ಯವೂ ಆಗಿದೆ. ಒಂದು ಕಾಲದಲ್ಲಿ ಅತ್ಯಂತ ತೀಕ್ಷ್ಣ ಟೀಕೆಗೆ ಗುರಿಯಾಗಿದ್ದ ಹೈಕಮಾಂಡ್ ಸಂಸ್ಕೃತಿ ಇಂದು ಸಾರ್ವತ್ರಿಕತೆಯನ್ನು ಪಡೆದುಕೊಂಡಿದ್ದು, ಎಲ್ಲ ರಾಜಕೀಯ ಪಕ್ಷಗಳೂ ಇದೇ ಸಂಸ್ಕೃತಿಯನ್ನು ಪೋಷಿಸುತ್ತಿವೆ. ಕರ್ನಾಟಕದ ಚುನಾವಣೆಗಳು ಮುಗಿದು ಮೂರು ತಿಂಗಳು ಕಳೆದಿದ್ದರೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗದಿರುವುದು ಹೈಕಮಾಂಡ್ ಸಂಸ್ಕೃತಿಯ ಆಳ-ಅಗಲವನ್ನು ಸೂಚಿಸುತ್ತದೆ.

ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಕಡೆಗಣಿಸಿ, ಅಧಿಕಾರ ಕೇಂದ್ರದ ಒಂದು ಭಾಗವಾಗಿ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗುವ ಹಪಹಪಿ ಇವತ್ತಿನ ರಾಜಕಾರಣಿಗಳ ಮೂಲ ಲಕ್ಷಣವೂ ಆಗಿದೆ. ತಮ್ಮ ಮೇಲಿನ ಕ್ರಿಮಿನಲ್ ಆಪಾದನೆಗಳಿಂದ, ಭ್ರಷ್ಟಾಚಾರದ ಆರೋಪಗಳಿಂದ, ಸಂಭಾವ್ಯ ಅಕ್ರಮ ಹಗರಣಗಳಿಂದ ಮುಕ್ತರಾಗಲು ರಾಜಕೀಯ ನಾಯಕರಿಗೆ ʼಆಪರೇಷನ್ʼ ಕಾರ್ಯಾಚರಣೆಗಳು ವರದಾನವಾಗಿ ಪರಿಣಮಿಸಿದೆ. ಇಲ್ಲಿ ಪಕ್ಷಗಳ ಸೋಲು ಗೆಲುವುಗಳನ್ನು ನಿರ್ಧರಿಸುವುದು ಆಯಾ ಪಕ್ಷಗಳ ಮಾರುಕಟ್ಟೆ ಸಾಮರ್ಥ್ಯ ಮತ್ತು ಬಂಡವಾಳ ಕೋಶದ ಗಾತ್ರ. ಶಾಸನ ಸಭೆಯಲ್ಲಿನ ಬಹುಮತದ ಪ್ರಮಾಣವೇ ಶಾಸನ-ಕಾಯ್ದೆಗಳನ್ನು ಸುಗಮವಾಗಿ ಜಾರಿಗೊಳಿಸುವ ಅವಕಾಶವನ್ನೂ ಕಲ್ಪಿಸುವುದರಿಂದ, ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆ ತನ್ನ ವಿಸ್ತರಣೆ ಮತ್ತು ನಿಯಂತ್ರಣಕ್ಕೆ ಅಗತ್ಯವಾದ ಕಾಯ್ದೆಗಳ ಸುಲಭ ಅನುಷ್ಟಾನವನ್ನು ಅಪೇಕ್ಷಿಸುವುದು ಸಹಜ. ಇತ್ತೀಚೆಗೆ ಮುಗಿದ ಸಂಸತ್ ಅಧಿವೇಶನಗಳಲ್ಲಿ ಧ್ವನಿಮತದ ಮೂಲಕ ಜಾರಿಯಾದ ಕಾನೂನುಗಳನ್ನು ಗಮನಿಸಿದರೆ ಈ ಸೂಕ್ಷ್ಮವೂ ಅರ್ಥವಾಗುತ್ತದೆ. ಮಾರುಕಟ್ಟೆ ವಿಸ್ತರಣೆ ಮತ್ತು ಬಂಡವಾಳದ ನಿಯಂತ್ರಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಲೆಂದೇ ದತ್ತಾಂಶ ನಿಯಂತ್ರಿಸುವ, ಅರಣ್ಯಗಳನ್ನು ಮುಕ್ತಗೊಳಿಸುವ ಹಲವು ಶಾಸನಗಳಿಗೆ ಸಂಸತ್ತು ಅಂಗೀಕಾರ ನೀಡಿರುವುದನ್ನೂ ಈ ಹಿನ್ನೆಲೆಯಲ್ಲೇ ನೋಡಬೇಕಾಗಿದೆ.
ಸಾಂವಿಧಾನಿಕ ಬದ್ಧತೆಯ ಅಗತ್ಯತೆ
ತನ್ನ ಐದು ಗ್ಯಾರಂಟಿಗಳನ್ನೂ ಸೇರಿದಂತೆ ಹಲವು ಜನಕಲ್ಯಾಣ ಯೋಜನೆಗಳ ಭರವಸೆಯೊಂದಿಗೆ, ಅಪಾರ ಜನಬೆಂಬಲದೊಂದಿಗೆ ಕರ್ನಾಟಕದಲ್ಲಿ ಮರಳಿ ಅಧಿಕಾರ ಗಳಿಸಿರುವ ಕಾಂಗ್ರೆಸ್ ಸರ್ಕಾರ ʼ ಆಪರೇಷನ್ ಹಸ್ತ ʼದ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವುದರ ಔಚಿತ್ಯವನ್ನು ಇಂದು ಪ್ರಶ್ನಿಸಲೇಬೇಕಿದೆ. ತಮ್ಮ ವೈಯುಕ್ತಿಕ ಲಾಭ ಮತ್ತು ವ್ಯಕ್ತಿಗತ ಅಸ್ತಿತ್ವದ ರಕ್ಷಣೆಗಾಗಿ ರಾಜಕೀಯ ತಂಗುದಾಣಗಳನ್ನು ನಿರಂತರವಾಗಿ ಅರಸುತ್ತಿರುವ ರಾಜಕೀಯ ನಾಯಕರಿಗೆ ಜನಸೇವೆಗಿಂತಲೂ ಮುಖ್ಯವಾಗಿ ಕಾಣುವುದು ತಮ್ಮ ಸ್ಥಾಪಿತ ಸಾಮ್ರಾಜ್ಯದ ವಿಸ್ತರಣೆ ಮತ್ತು ಸಂರಕ್ಷಣೆ. ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತಿ ಪಡೆಯಲು ನ್ಯಾಯಾಂಗವನ್ನು ಅರಸುತ್ತಿದ್ದ ನಾಯಕರು ಇಂದು ಆಡಳಿತಾರೂಢ ಪಕ್ಷಗಳ ಆಶ್ರಯಕ್ಕೆ ಮೊರೆ ಹೋಗುತ್ತಿರುವುದು ಪ್ರಜಾಸತ್ತೆಯ ದುರಂತ ಎಂದೇ ಹೇಳಬಹುದು. ಈ ಪ್ರಕ್ರಿಯೆಯಲ್ಲೇ ಅಪರೂಪವಾಗಿ ಕಾಣಬಹುದಾದ ಕೆಲವೇ ಪ್ರಾಮಾಣಿಕ ನಾಯಕರೂ ಸಹ ಎಲ್ಲರೊಳಗೊಂದಾಗಿ ಗೋಚರಿಸುವ ಮೂಲಕ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವ ದುರಂತವೂ ನಮ್ಮ ನಡುವೆ ಇದೆ.

ಈ ದುರಂತಗಳ ನಡುವೆಯೇ ನಾವು ಅಧಿಕಾರ ರಾಜಕಾರಣದಿಂದ ಮರೆಯಾಗಿರುವ ಆಡಳಿತ ಸೂಕ್ಷ್ಮತೆಯನ್ನು ಮರಳಿ ಶೋಧಿಸಬೇಕಿದೆ. ಪ್ರಜಾಪ್ರಭುತ್ವ ಅಳಿವು ಉಳಿವು ಸಂಖ್ಯೆಗಳನ್ನು ಆಧರಿಸಿರುವುದಿಲ್ಲ. ಬದಲಾಗಿ ಆಡಳಿತಾರೂಢ ಪಕ್ಷಗಳ ಸಂವಿಧಾನ ಬದ್ಧತೆ, ಸಾಮಾಜಿಕ ಸೂಕ್ಷ್ಮತೆ ಹಾಗೂ ಜನಪರ ಕಾಳಜಿಯನ್ನು ಅವಲಂಬಿಸಿರುತ್ತದೆ. “ ಅವರು ಮಾಡಿಲ್ಲವೇ ನಾವು ಮಾಡಿದರೆ ತಪ್ಪೇನು ” ಎಂಬ ದಾರ್ಷ್ಟ್ಯ ಪ್ರಜಾಪ್ರಭುತ್ವವನ್ನು ಹಳಿತಪ್ಪಿಸುವ ಮಾರ್ಗವಾಗುತ್ತದೆ. ಕ್ರಮೇಣ 1975ರ ತುರ್ತುಪರಿಸ್ಥಿತಿಯನ್ನೂ ಇದೇ ಪ್ರಮೇಯದೊಂದಿಗೆ ಮುಂದಿಡುವ ಪ್ರಸಂಗ ಎದುರಾದರೂ ಅಚ್ಚರಿಪಡಬೇಕಿಲ್ಲ. ಪ್ರಜಾಪ್ರಭುತ್ವದಲ್ಲಿ ತಮ್ಮ ಬೆನ್ನ ಹಿಂದಿರುವುದು ಸಾರ್ವಭೌಮ-ಪ್ರಜ್ಞಾವಂತ ಮತದಾರರೇ ಹೊರತು ವೈಯುಕ್ತಿಕ ಸ್ವಾರ್ಥಕ್ಕಾಗಿ ಯಾವ ಬದಿಗಾದರೂ ಹಾರುವ ಜನಪ್ರತಿನಿಧಿಗಳಲ್ಲ ಎಂಬ ಪರಿವೆ ರಾಜಕೀಯ ಪಕ್ಷಗಳಲ್ಲಿ ಇನ್ನಾದರೂ ಮೂಡಬೇಕಿದೆ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಹೊಸ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಬೇಕಿದೆ.