ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಇನ್ನೂ ಮಹಿಳಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡದ ಕ್ರಮವನ್ನು ಆಮ್ ಆದ್ಮಿ ಪಕ್ಷದ ಮಹಿಳಾ ವಿಭಾಗ ಖಂಡಿಸಿದ್ದು, ಕೂಡಲೇ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ, ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಅಪಮಾನಿಸಿದ ಪ್ರಕರಣ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ಮಾಡಿದ ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಯಕರ್ತರು, ರಾಜ್ಯ ಸರ್ಕಾರಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿ ಕಾರಿದರು.
” ಬೆಳಗಾವಿಯಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ನಮ್ಮ ನಾಗರೀಕ ಸಮಾಜದಲ್ಲಿ ಅತ್ಯಂತ ಅಮಾನವೀಯ, ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ. ಕೊಡುವುದು ಕಾಂಗ್ರೆಸ್ ಸರ್ಕಾರದ ನಾಟಕ. ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮಹಿಳಾ ಆಯೋಗ ಏನು ಮಾಡುತ್ತಿದೆ. ರಾಜ್ಯ ಸರ್ಕಾರಕ್ಕೆ ನಾಚಿಕೆ ಇದ್ದರೆ ಕೂಡಲೇ ಮಹಿಳಾ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಬೇಕು ” ಎಂದು ಪಕ್ಷದ ಬೆಂಗಳೂರು ನಗರ ಮಹಿಳಾ ಘಟಕದ ಅಧ್ಯಕ್ಷ ವೀಣಾ ಸರ್ರಾವ್ ಒತ್ತಾಯಿಸಿದರು.
” ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಳಗಾವಿ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಇದೇ ರೀತಿ ಹಲವು ದೌರ್ಜನ್ಯಗಳು ರಾಜ್ಯದಲ್ಲಿ ನಡೆಯುತ್ತಿವೆ. ಪ್ರತಿ ವರ್ಷ 10 ಸಾವಿರ ಮಹಿಳಾ ದೌರ್ಜನ್ಯ ಪ್ರಕರಣ ವರದಿಯಾಗುತ್ತಿವೆ ಆದರೆ ರಾಜ್ಯದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರನ್ನೇ ನೇಮಕ ಮಾಡದೆ ಸರ್ಕಾರ ತಾತ್ಸಾರ ನೀತಿ ಅನುಸರಿಸುತ್ತಿದೆ. ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ , ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ನ್ಯಾಯ ಸಿಗುತ್ತಿಲ್ಲ” ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಕಿಡಿ ಕಾರಿದರು.
” ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ. ಮಹಿಳೆಯರ ಸುರಕ್ಷತೆಗೆ ಇರುವ ಅಪ್ಲಿಕೇಶನ್ ಕೆಲಸ ಮಾಡುತ್ತಿಲ್ಲ, ಅದು ಅಪ್ಡೇಟ್ ಆಗಿಲ್ಲ. 112 ಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ಕಾರ, ಪೊಲೀಸ್ ಇಲಾಖೆಗೆ ಇದರ ಬಗ್ಗೆ ಕಾಳಜಿಯೇ ಇಲ್ಲ, ಮಹಿಳೆಯರ ರಕ್ಷಣೆಯನ್ನೇ ಒದಗಿಸದೆ ಯಾವ ಸಬಲೀಕರಣ ಮಾಡ್ತೀರಾ ? ಕೂಡಲೇ ಮಹಿಳಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡದಿದ್ದಲ್ಲಿ ಪಕ್ಷವು ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ” ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಸರ್ಕಾರವನ್ನು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾವ್, ರಾಜ್ಯ ಕಾರ್ಯದರ್ಶಿ ಉಷಾ ಮೋಹನ್, ಅಂಜನಾ ಗೌಡ, ಮರಿಯ, ಪುಷ್ಪ ಕೇಶವ್ , ಸತ್ಯವಾಣಿ ಸೇರಿದಂತೆ ಇತರೆ ಮುಖಂಡರು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು.
ಈ ವರದಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಲು ಕೋರಿಕೆ