ಹೊಸದಿಲ್ಲಿ ನಿಗಿನಿಗಿ ಕೆಂಡದಂತೆ ಸುಡುತ್ತಿದೆ. ಬೀಸಿ ಬರುವ ಬಿಸಿ ಗಾಳಿ ರಸ್ತೆಯಲ್ಲಿ ಜನಸಂಚಾರವನ್ನೇ ಕಡಿಮೆ ಮಾಡಿದೆ, ಟ್ಯಾಪಿಂದ ಬರುವ ನೀರೂ ಮುಟ್ಟಲಾಗದಷ್ಟು ಬಿಸಿಯಾಗಿದೆ. ಹಗಲಿನ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ ರಾತ್ರಿಯೂ 30ಕ್ಕಿಂತ ಕಡಿಮೆ ತಾಪಮಾನವನ್ನು ದಾಖಲಿಸುತ್ತಿಲ್ಲ. ಇದರ ಜೊತೆಗೆ ಲಕ್ಷಾಂತರ ಟನ್‌ಗಳಷ್ಟು ಕಸವನ್ನು ಹೊಂದಿರುವ ಕಸದ ರಾಶಿ ಅಲ್ಲಿನ ಉಷ್ಣತೆಗೆ ಹೊಗೆಯಾಡುತ್ತಲೇ ಇದೆ. ಇದು ಈಗಾಗಲೇ ಅಪಾಯಕಾರಿಯಾಗಿ ಕಲುಷಿತಗೊಂಡ ನಗರದ ಗಾಳಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ.
ಕಳೆದ 122 ವರ್ಷಗಳಲ್ಲಿ ಅತ್ಯಂತ ಶಾಖದ ಮಾರ್ಚ್ ಇದಾಗಿದ್ದು ವಿದ್ಯುಚ್ಛಕ್ತಿಯ ಬೇಡಿಕೆಯು ಹೆಚ್ಚಿದ್ದು ಭಾರತದ ಹಲವು ಕಡೆ ದಿನಕ್ಕೆ ಎಂಟು ಗಂಟೆಯಷ್ಟು ವಿದ್ಯುತ್ ಕಡಿತವಾಗುತ್ತಿರುವುದು ವರದಿಯಾಗುತ್ತಿದೆ. ಇನ್ನೊಂದೆಡೆ ದೇಶದ ವಿದ್ಯುತ್ ಉತ್ಪಾದನೆಯ 70 ಪ್ರತಿಶತದಷ್ಟನ್ನು ಪೂರೈಸುತ್ತಿರುವ ಕಲ್ಲಿದ್ದಲು ದಾಸ್ತಾನು ಕಡಿಮೆಯಾಗುತ್ತಿದೆ. ವಿದ್ಯುತ್, ಇಂಧನ ಅಭಾವದ ನಡುವೆಯೇ ಭಾರತದ ಅತಿ ಹೆಚ್ಚು ಜನರ ಆಹಾರವಾಗಿರುವ ಗೋಧಿ ಈ ಬಾರಿಯ ಬಿಸಿಲಿಗೆ ಸುಟ್ಟು ಕರಕಲಾಗಿರುವ ವರದಿಯೂ ಬರುತ್ತಿದೆ. ಮುಂಗಾರು ದೇಶಕ್ಕೆ ಪ್ರವೇಶಿಸುವವರೆಗೂ ಉಷ್ಣತೆ ಹೀಗೇ ಇರಲಿದೆ ಎಂದು ಹೇಳುತ್ತಿದ್ದಾರೆ ತಜ್ಞರು.
ಈ ಹೀಟ್‌ವೇವ್‌ನ ಬಗ್ಗೆ ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಇದು ಕೇವಲ ಒಂದು ಬಾರಿ ಬಂದು ಹೋಗಲಿರುವ ಅಗ್ನಿಪರೀಕ್ಷೆಯಾಗಿ ಉಳಿದಿಲ್ಲ. ಏರುತ್ತಿರುವ ಜಾಗತಿಕ ತಾಪಮಾನವು ಭಾರತದ ಮತ್ತು ಅದರ ನೆರೆಯ ದೇಶವಾಸಿಗಳನ್ನು ವಿಪರೀತದ ಆರೋಗ್ಯ ಸಮಸ್ಯೆಗಳಿಗೆ ತಳ್ಳಲಿದೆ. ಶಾಖ ಮತ್ತು ತೇವಾಂಶವನ್ನು ಹೇಗೆ ಸಂಯೋಜಿಸುತ್ತದೆ, ಎಷ್ಟು ಆವಿಯನ್ನು ಗಾಳಿ ಹೀರಿಕೊಳ್ಳುತ್ತದೆ ಎಂಬುದನ್ನು ಸೂಚಿಸುವ ವೆಟ್- ಬಲ್ಬ್ ತಾಪಮಾನವು ಅತ್ಯಂತ ಆತಂಕಕಾರಿ ಹವಾಮಾನ ಮಾಪನವಾಗಿದ್ದು 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ವೆಟ್-ಬಲ್ಬ್ ತಾಪಮಾನದಲ್ಲಿ, ಬೆವರುವಿಕೆಯ ಮೂಲಕ ನಮ್ಮ ತಾಪಮಾನವನ್ನು ಕಡಿಮೆ ಮಾಡಲು ನಮಗೆ ಸಾಧ್ಯವಾಗುವುದಿಲ್ಲ ಮತ್ತು ನೆರಳು ಮತ್ತು ನೀರಿದ್ದರೂ ಕೂಡ ಕೆಲವೇ ಗಂಟೆಗಳಲ್ಲಿ ಮಾರಣಾಂತಿಕ ಹೀಟ್ ಸ್ಟ್ರೋಕ್ ಗೆ ತುತ್ತಾಗಬಹುದು. ವೆಟ್ ಬಲ್ಬ್ ತಾಪಮಾನವು 32 ಡಿಗ್ರಿಗಳನ್ನು ಮೀರಿದಾಗ ಹೊರಾಂಗಣದಲ್ಲಿ ಕೆಲಸ ಮಾಡುವವರಿಗೆ ಇದೇ ರೀತಿಯ ಪರಿಣಾಮಗಳು ಉಂಟಾಗಬಹುದು ಮತ್ತು 2003 ಮತ್ತು 2010 ರ ಯುರೋಪಿಯನ್ ಮತ್ತು ರಷ್ಯಾದ ಶಾಖದ ಅಲೆಗಳು ಹತ್ತಾರು ಸಾವಿರ ಸಾವುಗಳಿಗೆ ಕಾರಣವಾಗಿತ್ತು.
ಆದರೆ ತಾಪಮಾನ ಹೆಚ್ಚಾದಂತೆ ತೇವಾಂಶವು ಕಡಿಮೆಯಾಗುತ್ತದೆ, ಆದ್ದರಿಂದ ಅಂತಹ ಘಟನೆಗಳು ಸಂಭವಿಸುವುದು ಅಪರೂಪವೆಂದೇ ಭಾವಿಸಲಾಗಿತ್ತು. ಅಲ್ಲದೆ 2018 ರ ಒಂದು ಅಧ್ಯಯನವು 35 ಡಿಗ್ರಿಗಳ ಸಮೀಪವಿರುವ ಅತ್ಯಂತ ತೀವ್ರವಾದ ವೆಟ್-ಬಲ್ಬ್ ತಾಪಮಾನವು “ಪ್ರಸ್ತುತ ಹವಾಮಾನದಲ್ಲಿ ಬಹುತೇಕ ಎಂದಿಗೂ ಸಂಭವಿಸುವುದಿಲ್ಲ” ಎಂದು ತೀರ್ಮಾನಿಸಿತ್ತು. ಆದರೆ ವಾಸ್ತವವಾಗಿ, 2020 ರಲ್ಲಿ ಮಾಡಿದ ಹವಾಮಾನ ಕೇಂದ್ರಗಳ ದತ್ತಾಂಶದ ನಿಕಟ ವಿಶ್ಲೇಷಣೆಯು ಅವು ಈಗಾಗಲೇ ತುಲನಾತ್ಮಕವಾಗಿ ಸಂಭವಿಸುತ್ತಿವೆ ಎಂಬುವುದನ್ನು ಸೂಚಿಸಿತ್ತು, ವಿಶೇಷವಾಗಿ ಪರ್ಷಿಯನ್ ಕೊಲ್ಲಿಯಿಂದ ಪಾಕಿಸ್ತಾನ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ವಾಯುವ್ಯ ಭಾರತದಲ್ಲಿ.


ಭಾರತದ 1.4 ಶತಕೋಟಿ ನಾಗರಿಕರಲ್ಲಿ ಕೇವಲ 12 ಪ್ರತಿಶತದಷ್ಟು ಜನರು ಮಾತ್ರ ಹವಾನಿಯಂತ್ರಣ ಸೌಲಭ್ಯಗಳನ್ನು ಹೊಂದಿದ್ದಾರೆ, ಅಂದರೆ ನೂರಾರು ಮಿಲಿಯನ್ ಜನರಿಗೆ ತಮ್ಮ ದೇಹವು ಹೀಟ್ ಸ್ಟ್ರೋಕ್ ಹಂತವನ್ನು ತಲುಪಿದಾಗ ತಮ್ಮನ್ನು ತಂಪಾಗಿಸಲು ಸಾಧ್ಯವಾಗುವುದಿಲ್ಲ. ಇದೇ ಪರಿಸ್ಥಿತಿ ಪಕ್ಕದ ಪಾಕಿಸ್ತಾನದಲ್ಲೂ ಇದೆ. ಗದ್ದೆಗಳಲ್ಲಿ ದುಡಿಯುವ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮತ್ತು ಕಟ್ಟಡ ನಿರ್ಮಾಣ ಮಾಡುವ, ಬೀದಿಗಳನ್ನು ಗುಡಿಸಿ ರಸ್ತೆ ನಿರ್ಮಿಸುವ ದೈನಂದಿನ ಕೂಲಿಗಳ ಕಷ್ಟಕ್ಕೆ ಪಾರವೇ ಇಲ್ಲ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದ ಅನೇಕ ಪ್ರದೇಶಗಳುಕಳೆದ ವಾರದಲ್ಲಿ ನಿರ್ಣಾಯಕ ವೆಟ್-ಬಲ್ಬ್ ತಾಪಮಾನದ ಸಮೀಪದಲ್ಲಿದ್ದವು, ಆದರೂ ಗರಿಷ್ಠ ಆರ್ದ್ರತೆಯು ಗರಿಷ್ಠ ತಾಪಮಾನದ ಸಮಯದಲ್ಲಿ ಅಷ್ಟು ಸುಲಭವಾಗಿ ಸಂಭವಿಸುವುದಿಲ್ಲ ಎನ್ನುವುದು ಸದ್ಯಕ್ಕೆ ಉಳಿದಿರುವ ಆಶಾವಾದವಾಗಿದೆ. ಪೂರ್ವ ಒಡಿಶಾದಲ್ಲಿ, ಭಾನುವಾರದಂದು ರಾಜಧಾನಿ ಭುವನೇಶ್ವರದ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ ಮತ್ತು ತೇವಾಂಶವು ಒಂದೇ ಸಮಯದಲ್ಲಿ ಸಂಭವಿಸಿದಲ್ಲಿ 36.6 ಸೆಲ್ಸಿಯಸ್ ವೆಟ್-ಬಲ್ಬ್ ತಾಪಮಾನವನ್ನು ಉತ್ಪಾದಿಸಲಿದೆ ಎಂದು ಡೇಟಾ ತೋರಿಸುತ್ತದೆ. ಲಾಸ್ ಏಂಜಲೀಸ್ ಅಥವಾ ಲಂಡನ್‌ಗಿಂತ ದೊಡ್ಡದಾದ ನಗರವಾದ ಕೋಲ್ಕತ್ತಾದಲ್ಲಿ ಕಳೆದ ಶುಕ್ರವಾರದಂದು ಗರಿಷ್ಠ ತಾಪಮಾನ ಮತ್ತು ತೇವಾಂಶ 35 ಡಿಗ್ರಿ ಸೆಲ್ಸಿಯಸ್ ತಲುಪುವ ಸ್ಥಿತಿ ಇತ್ತು ಎನ್ನುವುದು ಮತ್ತಷ್ಟು ಕಳವಳಕಾರಿಯಾಗಿದೆ.
ಅಪಾಯವೆಂದರೆ, ಈ ವರ್ಷದ ಶಾಖದ ಅಲೆಯಲ್ಲಿ ಅತ್ಯಂತ ಅಪಾಯಕಾರಿ ಮಟ್ಟವನ್ನು ತಪ್ಪಿಸಿದರೂ ಸಹ, ಮುಂದಿನ ವರ್ಷವೂ ತಪ್ಪಿಸಬಹುದು ಎಂಬುವುದಕ್ಕೆ ಯಾವ ಖಾತ್ರಿಯೂ ಇಲ್ಲ. ಯಾಕೆಂದರೆ ಪ್ರಪಂಚವು ಈಗ ಹವಾಮಾನ ಚಕ್ರದ ಭಾಗವಾದ ‘ಲಾ ನಿನಾ’ದಲ್ಲಿದೆ. ಇದು ಸಾಮಾನ್ಯವಾಗಿ ಭಾರತಕ್ಕೆ ತಂಪಾದ ಬೇಸಿಗೆಯ ಹವಾಮಾನವನ್ನು ತರುತ್ತದೆ. ಅದು ಮುಂದಿನ ‘ಎಲ್ ನಿನೊ’ಗೆ ತಿರುಗಿದಾಗ, ಅಪಾಯಗಳು ಇನ್ನೂ ಹೆಚ್ಚಾಗಲಿವೆ.
ಭಾರತವು “National Action Plan on Heat Related Illnesses” ಎಂಬ ಯೋಜನೆಯನ್ನು ಹೊಂದಿದೆ ಮತ್ತು ಒಕ್ಕೂಟ ಸರ್ಕಾರವು ಮೇ 1 ರಂದು ಎಲ್ಲಾ ರಾಜ್ಯಗಳಿಗೆ ಆಸ್ಪತ್ರೆಗಳು ಬೇಡಿಕೆಯ ನಿರೀಕ್ಷಿತ ಮಟ್ಟವನ್ನು ಎದುರಿಸಲು ಸಿದ್ಧವಾಗಿರುವಂತೆ ಖಚಿತಪಡಿಸಿಕೊಳ್ಳಲು ಆದೇಶ ನೀಡಿದೆ. ಆದರೆ ಲಕ್ಷಾಂತರ ಏರ್ ಕಂಡಿಷನರ್‌ಗಳ ಅಗತ್ಯವಿರುವಾಗ ಶಾಖ ಮತ್ತು ಹೊರೆಯು ಪವರ್ ಗ್ರಿಡ್ ಮೇಲೆ ಬಿದ್ದರೆ ಆರೋಗ್ಯ ಕೇಂದ್ರಗಳಿಗೆ ಸುರಕ್ಷಿತ ವಿದ್ಯುತ್ ಪೂರೈಕೆಯಾಗಲು ಸರ್ಕಾರದ ಆದೇಶ ಯಾವುದೇ ಸಹಾಯ ಮಾಡುವುದಿಲ್ಲ, ಬದಲಾಗಿ ಸರ್ಕಾರವೇ ಮುಂದೆ ನಿಂತು ಈ ಕಾರ್ಯವನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬುವುದು ಮಾತ್ರ ವಾಸ್ತವ.
ಒಂದು ವರ್ಷದ ಹಿಂದೆ, ಭಾರತವು ಮಾರಣಾಂತಿಕ ಕೋವಿಡ್ -19 ಎರಡನೇ ಅಲೆ ತತ್ತರಿಸಿತ್ತು. ನಾಗರಿಕರು ಆಮ್ಲಜನಕಕ್ಕಾಗಿ, ಆಸ್ಪತ್ರೆಗಳಲ್ಲಿ ಬೆಡ್ ಸಿಗಲು ಪರದಾಡುವಂತಾಗಿತ್ತು. ಆರೋಗ್ಯ ವ್ಯವಸ್ಥೆಯ ಅಸಮರ್ಪಕತೆಯಿಂದಾಗಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಎರಡನೇ ಅಲೆಗೆ ಕನಿಷ್ಠ 4 ಮಿಲಿಯನ್ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದೆ.
ಭಾರತದಲ್ಲಿ ಇದುವರೆಗೆ ಶಾಖದಿಂದ ಹೆಚ್ಚಿನ ಸಾವುಗಳು ದಾಖಲಾಗಿಲ್ಲವಾದ್ದರಿಂದ ಈ ಬಗ್ಗೆಯೂ ನಿಖರ ಅಂಕಿ ಅಂಶ ನಮ್ಮಲ್ಲಿಲ್ಲ. ಬೇಸಗೆ ಮುಗಿಯುವಷ್ಟರಲ್ಲಿ ಎಷ್ಡುಮಂದಿ ಸಾಯಲಿದ್ದಾರೆ ಎಂಬುವುದರ ಬಗ್ಗೆ ಯಾವ ಯೋಚನೆಯೂ ಸರ್ಕಾರಕ್ಕಿಲ್ಲ. ಹವಾಮಾನ ಬದಲಾವಣೆ ಪ್ರೇರಿತ ಯಾವ ವಿಪತ್ತುಗಳಿಗೂ ಸರ್ಕಾರ ಮೂಲಸೌಕರ್ಯಗಳಡಿಯಲ್ಲಿ ಹೂಡಿಕೆ ಮಾಡುವುದಿಲ್ಲ. ಬದಲಾಗುತ್ತಿರುವ ಹವಾಮಾನ, ಏರುತ್ತಿರುವ ಜಾಗತಿಕ ತಾಪಮಾನದ ಪ್ರಸಕ್ತ ಸಂದರ್ಭದಲ್ಲಿ ಸರ್ಕಾರದ ಆದ್ಯತೆಗಳು ಖಂಡಿತವಾಗಿಯೂ ಈ ನಿಟ್ಟಿನಲ್ಲಿ ಬದಲಾಗಲೇಬೇಕಾಗಿದೆ.






