ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆಗಷ್ಟೇ ಸೀಮಿತವಾದವರಲ್ಲ. ರಾಜಕೀಯ ಮಹತ್ವಾಕಾಂಕ್ಷೆಯುಳ್ಳವರು. ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ತಮ್ಮ ಪಡಿಹಚ್ಚು ಹೊತ್ತಬೇಕೆಂದು ಪರಿಪರಿ ಪ್ರಯತ್ನಪಟ್ಟವರು. ತನಗೆ ಬಿಜೆಪಿಯಲ್ಲಿ Space ಇಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿಯೇ ಮೊದಲೆಲ್ಲಾ ಬಿಜೆಪಿ ಪರವಾಗಿಯೇ ಅತಿಹೆಚ್ಚು ಕೆಲಸ ಮಾಡಿದರೂ ಅವರಿಗೀಗ ಪ್ರತಿಪಕ್ಷಗಳ ಮೇಲೆ ಪ್ರೀತಿ ಜಾಸ್ತಿಯಾಗಿದೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್, ಶರದ್ ಪವಾರ್, ಕೆ. ಚಂದ್ರಶೇಖರರಾವ್, ಎಂ.ಕೆ. ಸ್ಟಾಲಿನ್, ನವೀನ್ ಪಟ್ನಾಯಕ್ ಮತ್ತಿತರರನ್ನು ಹತ್ತು-ಹಲವು ಭಾರಿ ಭೇಟಿಯಾಗಿ ‘ಬಿಜೆಪಿಗೆ ಪರ್ಯಾಯವಾಗಿ ಏನಾದರೂ ಮಾಡಬೇಕೆಂದು’ ಸಮಾಲೋಚನೆ ನಡೆಸಿದ್ದಾರೆ. ಆದರೆ ‘ಪ್ರತಿಪಕ್ಷಗಳು ಒಂದಾಗಬೇಕು’ ಎಂಬ ಕಾರ್ಯಸೂಚಿ ಕೈಗೂಡಿಲ್ಲ, ಮುಂದೆಯೂ ಅದು ಕಷ್ಟಸಾಧ್ಯವೇ ಆಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿದರು. ಕಾಂಗ್ರೆಸ್ ಮುಕ್ತವಾಗಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿತಾದರೂ ಪಕ್ಷದಲ್ಲಿ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ನಿಖರವಾಗಿ ತಿಳಿಸಲಿಲ್ಲ. ಗೊತ್ತು-ಗುರಿ ಇಲ್ಲದೆ ಕಾಂಗ್ರೆಸ್ ಸೇರಲು ಪ್ರಶಾಂತ್ ಕಿಶೋರ್ ತಯಾರಿರಲಿಲ್ಲ. ಹಾಗಾಗಿ ಅವರಿಗೆ ಸ್ವತಂತ್ರವಾಗಿ ರಾಜಕೀಯ ಮಾಡುವುದು ಅನಿವಾರ್ಯವಾಗಿದೆ.
ಪ್ರಶಾಂತ್ ಕಿಶೋರ್ ಬಿಹಾರವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಅದು ಅವರಿಗೆ ತವರು ರಾಜ್ಯ. ಕಾನ್ಷಿರಾಮ್ ಹಿಂದೆ ಪಂಜಾಬಿನಿಂದ ಉತ್ತರ ಪ್ರದೇಶಕ್ಕೆ ಬಂದು ಬಹುಜನ ಸಮಾಜಪಕ್ಷ ಕಟ್ಟಿ ಬೆಳಸಿದಷ್ಟು ಚಾಣಾಕ್ಷತನ, ತಾಳ್ಮೆಗಳು ಪ್ರಶಾಂತ್ ಕಿಶೋರ್ ಬಳಿ ಇಲ್ಲ. ಮಂಗಳೂರು ಬಿಟ್ಟು ಮುಂಬೈನಲ್ಲಿ ಕಾರ್ಮಿಕ ಹೋರಾಟ ಮಾಡಿ ಜೈ ಎನಿಸಿಕೊಂಡ, ಅಲ್ಲಿಂದ ಪಾಟ್ನಾಗೆ ಬಂದು ರಾಜಕಾರಣ ಮಾಡಿಯೂ ಸೈ ಎನಿಸಿಕೊಂಡ ಜಾರ್ಜ್ ಫರ್ನಾಂಡೀಸ್ ಅವರಿಗಿದ್ದ ತ್ಯಾಗ, ಬದ್ಧತೆಯೂ ಪ್ರಶಾಂತ್ ಕಿಶೋರ್ ಅವರಿಗಿಲ್ಲ. ಈ ಎಲ್ಲಾ ಗುಣಗಳು ಇದ್ದಿದ್ದರೆ ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಇನ್ನಷ್ಟು ಶ್ರಮಿಸಬಹುದಿತ್ತು, ಕಾಂಗ್ರೆಸ್ ಸೇರಿ ಕೆಲಸ ಮಾಡಬಹುದಿತ್ತು ಅಥವಾ ಜೆಡಿಯುನಲ್ಲೇ ಒಳ್ಳೆಯ ದಿನಗಳಿಗಾಗಿ ಕಾಯಬಹುದಿತ್ತು.
ರಾಜಕೀಯವಾಗಿ ಕೂಡ ಬಿಹಾರ ಪ್ರಶಾಂತ್ ಕಿಶೋರ್ ಅವರಿಗೆ ಹೊಸ ಪ್ರದೇಶವಲ್ಲ. 2015ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗೆ ತಂತ್ರಗಾರಿಕೆ ಮಾಡಿದ್ದಾರೆ. 2020ರ ಚುನಾವಣೆಯಲ್ಲಿ ಮೇಲ್ನೋಟಕ್ಕೆ ತಟಸ್ಥವಾಗಿದ್ದರೂ ಎಂದು ಕಂಡುಬಂದರೂ ಕಾಂಗ್ರೆಸ್-ಆರ್ ಜೆಡಿ-ಎಡಪಕ್ಷಗಳ ಮಹಾಮೈತ್ರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅವರಿಗೆ ಬಿಹಾರದ ಆಳ-ಅಗಲಗಳ ಪರಿಚಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಕಳೆದ 30 ವರ್ಷಗಳಿಂದ ಬಿಹಾರವನ್ನಾಳಿದ್ದಾರೆ. ಈಗ ಜನ ಪರ್ಯಾಯವಾದುದನ್ನು, ಹೊಸ ಪ್ರಯತ್ನಗಳನ್ನು, ಹೊಸ ಭರವಸೆಗಳನ್ನು ಒಪ್ಪಿಕೊಳ್ಳುತ್ತಾರೆ ಎಂಬುದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ.

ಈ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಏಕಾಏಕಿ ಬಿಹಾರದಲ್ಲಿ ರಾಜಕೀಯ ಪಕ್ಷವೊಂದನ್ನು ಹುಟ್ಟುಹಾಕುವ ಸಾಹಸವನ್ನೂ ತೋರುತ್ತಿಲ್ಲ. Practical ಆಗಿರುವ ಅವರು ಮೊದಲಿಗೆ ವೇದಿಕೆ ಸಿದ್ಧಪಡಿಸಲು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಬಿಹಾರದುದ್ದಕ್ಕೂ 3 ಸಾವಿರ ಕಿಲೋ ಮೀಟರ್ ಗಳ ಪಾದಯಾತ್ರೆ. ಜನರನ್ನು ತಲುಪಲು ಬಹಳ ಒಳ್ಳೆಯ ಮಾರ್ಗ ಪಾದಯಾತ್ರೆ ಎಂಬುದು ಮಾಜಿ ಪ್ರಧಾನಿ ಚಂದ್ರಶೇಖರ್ ಅವರಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯವರೆಗೆ ಈಗಾಗಲೇ ಸಾಬೀತಾಗಿರುವ ಸಂಗತಿ. ಪ್ರಶಾಂತ್ ಕಿಶೋರ್ ಆ Successful Model ಮೂಲಕವೇ ಜನರ ಬಳಿ ಹೋಗುತ್ತಿದ್ದಾರೆ. ಸ್ವತಂತ್ರ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು ಬಿಹಾರದ ವಕೀಲರು, ಯುವಕರು, ರೈತರು ಮತ್ತು ಕಾರ್ಮಿಕರನ್ನು ಬಡಿದೆಬ್ಬಿಸಿದ ಪಶ್ಚಿಮ ಚಂಪಾರಣ್ ಪ್ರದೇಶದಿಂದ ಪ್ರಶಾಂತ್ ಕಿಶೋರ್ ತಮ್ಮ ಪಾದಯಾತ್ರೆ ಪ್ರಾರಂಭಿಸುತ್ತಿದ್ದಾರೆ. ಅದೂ ಮಹಾತ್ಮ ಗಾಂಧೀಜಿ ಅವರ ಜಯಂತಿಯಾದ ಅಕ್ಟೋಬರ್ 2ರಂದು. ಈ ಸಣ್ಣ ಭಾವನಾತ್ಮಕ ಸಂಗತಿಗಳು ರಾಜಕೀಯದಲ್ಲಿ ದೊಡ್ಡ ಮಟ್ಟದ ಲಾಭ ತಂದುಕೊಡುವಂತಹವು.
2022ರ ಅಕ್ಟೋಬರ್ 2ರಿಂದ 2024ರ ಲೋಕಸಭೆ ಚುನಾವಣೆವರೆಗೂ ರಾಜ್ಯಾದ್ಯಂತ ಸುತ್ತಾಡಿ 2025ರ ವಿಧಾನಸಭಾ ಚುನಾವಣೆಗೆ ಅಖಾಡವನ್ನು ಅಣಿಗೊಳಿಸುವುದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ. ಅವರಿಗೆ ಸಮಾಯವಕಾಶವೂ ಸಾಕಷ್ಟಿದೆ. ಬಿಹಾರದಲ್ಲಿ ‘ಸುಹಾಸನ್ ಬಾಬು’ ಅಥವಾ ‘ವಿಕಾಸ್ ಪುರುಷ’ ಎಂದೇ ಪ್ರಖ್ಯಾತರಾಗಿರುವ ನಿತೀಶ್ ಕುಮಾರ್ ಅವರನ್ನಾಗಲಿ, ‘ಹಿಂದುಳಿದವರ ಆರಾಧ್ಯದೈವ’ ಆಗಿರುವ ಲಾಲು ಪ್ರಸಾದ್ ಯಾದವ್ ಅವರನ್ನಾಗಲಿ ಹಿಂದಿಕ್ಕುವುದು ಸುಲಭವಲ್ಲ ಎಂಬುದು ಪ್ರಶಾಂತ್ ಕಿಶೋರ್ ಅವರಿಗೆ ಚೆನ್ನಾಗಿ ಗೊತ್ತಿರುವಂತೆ ಕಾಣುತ್ತಿದೆ. ಹಾಗಾಗಿಯೇ ಲಾಲೂ ಪ್ರಸಾದ್ ಯಾದವ್ ಪಠಿಸಿದ ‘ಹಿಂದುಳಿದವರ ಕಲ್ಯಾಣ’ದ ಮಂತ್ರ ಮತ್ತು ನಿತೀಶ್ ಕುಮಾರ್ ಪಠಿಸಿದ ‘ಅಭಿವೃದ್ಧಿ’ ಮಂತ್ರಗಳನ್ನು ಪ್ರಶಾಂತ್ ಕಿಶೋರ್ ಜೊತೆಜೊತೆಯಾಗಿ ಗುನುಗುತ್ತಿದ್ದಾರೆ. ಇದಲ್ಲದೆ ಯಾವ ರೀತಿಯ ಹೊಸ ಸಮೀಕರಣವನ್ನು ಸೃಷ್ಟಿಸುತ್ತಾರೆ ಎಂಬುದು ಈಗ ಉಳಿದಿರುವ ಪ್ರಶ್ನೆ.
ಜೆಡಿಯು ಮತ್ತು ನಿತೀಶ್ ಕುಮಾರ್ ಅವರೊಂದಿಗೆ ವಿರಸ ಮೂಡಲು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಷಯಗಳ ಬಗ್ಗೆ ಇದ್ದ ಭಿನ್ನಾಭಿಪ್ರಾಯಗಳು ಕಾರಣ. ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಕರೋನಾ ಕಾರಣಕ್ಕೆ ಕೈಬಿಡಲಾಗಿದ್ದ ಎನ್‌ಆರ್‌ಸಿ ಮತ್ತು ಸಿಎಎ ಕಾರ್ಯಸೂಚಿಗಳನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು’ ಎಂದಿದ್ದಾರೆ. 2024ರ ಲೋಕಸಭಾ ಚುನಾವಣೆ ವೇಳೆಗೆ ಈ ವಿಷಯ ಚರ್ಚೆಯ ಮುನ್ನೆಲೆಗೆ ಬರಬಹುದು. ನಿತೀಶ್ ಕುಮಾರ್ ಕೂಡ ಬಿಜೆಪಿಯನ್ನು ಬೆಂಬಲಿಸಬಹುದು. ಆಗ ಇದಕ್ಕೆ ವಿರುದ್ಧವಾಗಿ ಪ್ರಶಾಂತ್ ಕಿಶೋರ್ ಪರ್ಯಾಯವಾದ ಕಾರ್ಯತಂತ್ರವನ್ನು ರೂಪಿಸಲೇಬೇಕಾಗುತ್ತದೆ. ಈ ವಿಷಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ನಿಖರವಾದ ನಡೆ ಇಟ್ಟವರಲ್ಲ. ಪ್ರಶಾಂತ್ ಕಿಶೋರ್ ಹೇಗೆ ಪ್ರತಿಕ್ರಿಯಿಸಬಹುದು ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ.
ಹೊಸ ಭರವಸೆಯೊಂದಿಗೆ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಶೇಕಡಾ 58ರಷ್ಟು ಯುವ ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಈಗಾಗಲೇ ರಾಜ್ಯದ ಯುವ ನಾಯಕ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಬಿಜೆಪಿ ಈಗ ಬಿಹಾರದಲ್ಲಿ ದಷ್ಟಪುಷ್ಟವಾಗಿ ಬೆಳೆದಿದೆ. ಈ ಅಂಶಗಳ ನಡುವೆಯೂ ಪ್ರಶಾಂತ್ ಕಿಶೋರ್ ಪ್ರಯತ್ನ ಕೈಗೂಡುತ್ತಾ ಎನ್ನುವುದನ್ನು ಕಾದುನೋಡಬೇಕು.