ಲಕ್ನೋ: ಉತ್ತರ ಪ್ರದೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಶಾಸಕಿ ಹಾಗೂ ಮಾಜಿ ಸಚಿವೆ ಅನುಪಮಾ ಜೈಸ್ವಾಲ್ ಅವರನ್ನು ಭೇಟಿ ಮಾಡಿದ್ದಾರೆ. ಕಳೆದ ವಾರವಷ್ಟೇ ಅಖಿಲೇಶ್ ಪ್ರತಿಕೃತಿಗೆ ಬೆಂಕಿ ಹಚ್ಚುವ ವೇಳೆ ಶಾಸಕಿ ಮುಖವನ್ನು ಸುಟ್ಟುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರಮುಖವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬಳಿಕ ಬಿಜೆಪಿ ದೇಶಾದ್ಯಂತ ವಿಪಕ್ಷಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಕೂಟದ ವಿರುದ್ಧ ಬೀದಿಗಳಿದು ಉತ್ತರ ಪ್ರದೇಶದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ವೇಳೆ ಬಹ್ರೈಚ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರ ಪ್ರತಿಕೃತಿಗಳನ್ನು ದಹಿಸುತ್ತಿದ್ದಾಗ ಜೈಸ್ವಾಲ್ ತಲೆ, ಕೂದಲು ಮತ್ತು ಮುಖದ ಮೇಲೆ ಸುಟ್ಟ ಗಾಯಗಳಾಗಿದ್ದವು ತಕ್ಷಣ ಶಾಸಕಿಯನ್ನು ಲಕ್ನೋದ ಮೇದಾಂತ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ರಾಜಕೀಯ ಭೇದ ಮರೆತು ಆಸ್ಪತ್ರೆಗೆ ತೆರಳುವ ಮೂಲಕ ರಾಜಕೀಯದಲ್ಲೂ ಮಾನವೀಯತೆ ಮುಖ್ಯ ಎಂಬ ಸಂದೇಶ ಸಾರಿದ್ದಾರೆ.
ಇದನ್ನೂ ಓದಿ : ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!
ಸಮಾಜದಲ್ಲಿ ಭಿನ್ನಾಭಿಪ್ರಾಯದ ಜ್ವಾಲೆಗಳು ಭುಗಿಲೇಳುವುದನ್ನು ನಾವು ಬಯಸುವುದಿಲ್ಲ; ಬದಲಿಗೆ, ಸಾಮರಸ್ಯದ ಸೌಮ್ಯತೆಯ ಮಳೆ ಮೇಲುಗೈ ಸಾಧಿಸಬೇಕೆಂದು ನಾವು ಬಯಸುತ್ತೇವೆ. ನಮ್ಮ ಸಕಾರಾತ್ಮಕ ರಾಜಕೀಯ ಹಾಗೂ ಆರೋಗ್ಯಕರ ಸಂಪ್ರದಾಯವು ನಮಗೆ ಧನಾತ್ಮಕತೆಯನ್ನೇ ಹೇಳಿಕೊಟ್ಟಿದೆ. ಅದಕ್ಕಾಗಿಯೇ ನಾವು ಬಿಜೆಪಿ ಶಾಸಕಿ ಶ್ರೀಮತಿ ಅನುಪಮಾ ಜೈಸ್ವಾಲ್ ಅವರನ್ನು ಭೇಟಿ ಮಾಡಲು ಹೋಗಿದ್ದೇವು. ಅವರ ಆರೋಗ್ಯದಲ್ಲಿ ಶೀಘ್ರ ಚೇತರಿಕೆಗೆ ನಮ್ಮ ಶುಭಾಶಯಗಳನ್ನು ತಿಳಿಸಿದ್ದೇವೆ. ರಾಜಕೀಯಕ್ಕೆ ತನ್ನದೇ ಆದ ಸ್ಥಾನವಿದೆ ಮತ್ತು ಮಾನವ ಸಂಬಂಧಗಳ ಮಹತ್ವಕ್ಕೂ ತನ್ನದೇ ಆದ ಸ್ಥಾನವಿದೆ ಎಂದು ಅಖಿಲೇಶ್ ಯಾದವ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ರಾಜಕೀಯಕ್ಕೂ ಮಿಗಿಲಾದದ್ದು, ಮಾನವ ಸಂಬಂಧ ಎಂಬ ಸಂದೇಶ ನೀಡಿದ್ದಾರೆ.
ಇನ್ನೂ ಅಖಿಲೇಶ್ ನಡೆಯನ್ನು ಪಕ್ಷಾತೀತವಾಗಿ ನಾಯಕರುಗಳು ಶ್ಲಾಘಿಸಿದ್ದಾರೆ. ಅಲ್ಲದೆ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದಲ್ಲೂ ಸಮಾಜವಾದಿ ನಾಯಕನ ಮಾನವೀಯತೆಯ ಹೆಜ್ಜೆಯನ್ನು ಕೊಂಡಾಡಿದ್ದಾರೆ.





