ಬೆಂಗಳೂರು : ಒಂದು ಕಾಲದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿಗಿಂತಲೂಹೆಚ್ಚಿನ ಶಕ್ತಿ ಹೊಂದಿದ್ದ ಜೆಡಿಎಸ್, ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವುದು ರಾಜಕೀಯ ವಾಸ್ತವ. ದೇವೇಗೌಡರ ರಾಜಕೀಯ ಪರಂಪರೆ, ಕುಮಾರಸ್ವಾಮಿ ಅವರ ನಾಯಕತ್ವ ಮತ್ತು ಹಳೆ ಮೈಸೂರು ಭಾಗದ ಮತಬ್ಯಾಂಕ್ ಪಕ್ಷದ ದೊಡ್ಡ ಆಸ್ತಿಗಳು. ಆದರೆ ಈ ಆಸ್ತಿಗಳನ್ನೇ ನಂಬಿಕೊಂಡು ಮುಂದುವರಿಯುವುದು ಸಾಧ್ಯವಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳಿಗೆ ಕುಸಿದಿದ್ದು, ಪಕ್ಷದ ಸಂಘಟನೆ ಮತ್ತು ಮತಬ್ಯಾಂಕ್ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹಳೆ ಮೈಸೂರು ಭಾಗವೇ ಜೆಡಿಎಸ್ನ ಕೋಟೆ, ಆದರೆ ಆ ಕೋಟೆ ಎಷ್ಟು ಸುರಕ್ಷಿತ?
ಮಂಡ್ಯ, ಹಾಸನ, ರಾಮನಗರ, ತುಮಕೂರು ಸೇರಿದಂತೆ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಪಕ್ಷದ ನೆಲೆ ಇನ್ನೂ ಇದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ಪ್ರದೇಶಗಳಲ್ಲಿ ತಮ್ಮ ಸಂಘಟನೆಯನ್ನು ವಿಸ್ತರಿಸುತ್ತಿರುವುದರಿಂದ ಜೆಡಿಎಸ್ಗೆ ಹಿಂದಿನಷ್ಟು ಸುಲಭದ ರಾಜಕೀಯ ಪರಿಸ್ಥಿತಿ ಉಳಿದಿಲ್ಲ. ಮತ್ತೊಂದೆಡೆ, ‘ವಕ್ಕಲಿಗರ ಪಕ್ಷ’ ಎಂಬ ಹಣೆಪಟ್ಟಿ ಜೆಡಿಎಸ್ನ ರಾಜ್ಯವ್ಯಾಪಿ ವಿಸ್ತರಣೆಗೆ ಅಡ್ಡಿಯಾಗುತ್ತಿದೆ ಎಂಬ ಟೀಕೆಯೂ ಇದೆ. ಇತರ ಸಮುದಾಯಗಳು, ಯುವಕರು, ಮಹಿಳೆಯರು ಮತ್ತು ನಗರ ಮತದಾರರನ್ನು ದೊಡ್ಡ ಪ್ರಮಾಣದಲ್ಲಿ ಪಕ್ಷದತ್ತ ಸೆಳೆಯಲು ಜೆಡಿಎಸ್ಗೆ ಸಾಧ್ಯವಾಗಬೇಕಿದೆ.

ನಿಖಿಲ್ಗೆ ದೊಡ್ಡ ಪರೀಕ್ಷೆ..
ಜೆಡಿಎಸ್ನ ಭವಿಷ್ಯದ ಚರ್ಚೆಯಲ್ಲಿ ಈಗ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಯುವ ನಾಯಕತ್ವದ ಮುಖವಾಗಿ ನಿಖಿಲ್ ಅವರನ್ನು ಬೆಳೆಸುವ ಪ್ರಯತ್ನ ನಡೆಯುತ್ತಿದೆ.
ಇತ್ತೀಚಿನ ಬಿಡದಿ ಪಾದಯಾತ್ರೆ ಮೂಲಕ ನಿಖಿಲ್ ಮತ್ತೆ ಸಕ್ರಿಯ ರಾಜಕೀಯ ಹೋರಾಟದ ಮೂಲಕ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಆದರೆ ಪಾದಯಾತ್ರೆ ನಡೆಸುವುದಕ್ಕಿಂತ ದೊಡ್ಡ ಸವಾಲು ಪಕ್ಷದ ಕಾರ್ಯಕರ್ತರನ್ನು ಮತ್ತೆ ಸಂಘಟಿಸುವುದು.

ನಿಖಿಲ್ಗೆ ಈಗ ಎದುರಾಗಿರುವ ಪ್ರಶ್ನೆ ಒಂದೇ.
ಅವರು ಕೇವಲ ದೇವೇಗೌಡರ ಕುಟುಂಬದ ಉತ್ತರಾಧಿಕಾರಿಯಾಗಿಯೇ ಉಳಿಯುತ್ತಾರಾ? ಅಥವಾ ತಮ್ಮದೇ ಆದ ಜನನಾಯಕನಾಗಿ ಗುರುತಿಸಿಕೊಳ್ಳುತ್ತಾರಾ?
ಈ ಪ್ರಶ್ನೆಗೆ 2028ರ ಚುನಾವಣೆ ಬಹುಮುಖ್ಯ ಉತ್ತರ ನೀಡಲಿದೆ.
ಕುಮಾರಸ್ವಾಮಿ ಕೇಂದ್ರದಲ್ಲಿ… ರಾಜ್ಯಕ್ಕೆ ಲಾಭ ಎಷ್ಟು?..
ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಭಾರೀ ಕೈಗಾರಿಕೆ ಸಚಿವರಾಗಿದ್ದಾರೆ. ಕರ್ನಾಟಕಕ್ಕೆ ಕೈಗಾರಿಕೆ ಮತ್ತು ಹೂಡಿಕೆಗಳನ್ನು ತರುವ ವಿಚಾರದಲ್ಲಿ ಇದು ಜೆಡಿಎಸ್ಗೆ ದೊಡ್ಡ ರಾಜಕೀಯ ಅವಕಾಶ. ಕೇಂದ್ರದಲ್ಲಿ ಮಹತ್ವದ ಕೈಗಾರಿಕಾ ಖಾತೆ ಹೊಂದಿರುವ ಕುಮಾರಸ್ವಾಮಿ ಅವರಿಂದ ಕರ್ನಾಟಕಕ್ಕೆ ದೊಡ್ಡ ಕೈಗಾರಿಕಾ ಯೋಜನೆಗಳು, ಉದ್ಯೋಗ ಸೃಷ್ಟಿ ಮತ್ತು ಹೂಡಿಕೆಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯ ವಿಚಾರದಲ್ಲಿ ತಮ್ಮ ಸಚಿವ ಸ್ಥಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿತ್ತು ಎಂಬ ಟೀಕೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಅಂದರೆ, ಕೇಂದ್ರದ ಅಧಿಕಾರವನ್ನು ಜೆಡಿಎಸ್ನ ಕರ್ನಾಟಕದ ರಾಜಕೀಯ ಶಕ್ತಿಯಾಗಿ ಪರಿವರ್ತಿಸಲು ಕುಮಾರಸ್ವಾಮಿಗೆ ಸಾಧ್ಯವಾಗುತ್ತದೆಯೇ? ಎಂಬುದು ಮುಂದಿನ ದಿನಗಳಲ್ಲಿ ನಿರ್ಣಾಯಕ.
ಪ್ರಜ್ವಲ್ ಪ್ರಕರಣದ ಖಲೆ..
ಜೆಡಿಎಸ್ನ ಇಮೇಜ್ಗೆ ದೊಡ್ಡ ಹೊಡೆತ ನೀಡಿದ ವಿಚಾರಗಳಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣವೂ ಒಂದು. ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಪಕ್ಷದ ಮೇಲೆ ನೈತಿಕ ಮತ್ತು ರಾಜಕೀಯ ಒತ್ತಡವನ್ನು ಹೆಚ್ಚಿಸಿದೆ.

ಜೆಡಿಎಸ್ನ ಮತ್ತೊಂದು ದೊಡ್ಡ ಸಮಸ್ಯೆ ಅವರ ಕ್ಯಾಡರ್…
ದಶಕಗಳಿಂದ ಪಕ್ಷದ ಜೊತೆಗಿರುವ ಅನೇಕ ಕಾರ್ಯಕರ್ತರು ಈಗ ವಯಸ್ಸಾಗಿದ್ದಾರೆ. ಅವರ ಜಾಗವನ್ನು ತುಂಬುವಷ್ಟು ದೊಡ್ಡ ಪ್ರಮಾಣದಲ್ಲಿ ಯುವ ಕಾರ್ಯಕರ್ತರ ಪಡೆಯನ್ನು ನಿರ್ಮಿಸುವ ಕೆಲಸ ಪಕ್ಷಕ್ಕೆ ಇನ್ನೂ ದೊಡ್ಡ ಸವಾಲಾಗಿದೆ. ಇದರ ಜೊತೆಗೆ ಇಂದಿನ ಚುನಾವಣಾ ರಾಜಕಾರಣದಲ್ಲಿ ಹಣದ ಪ್ರಭಾವವೂ ಹೆಚ್ಚಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಎದುರಾದಾಗ ಅಭ್ಯರ್ಥಿಗಳನ್ನು ನಿಲ್ಲಿಸುವುದು, ಬೂತ್ ಮಟ್ಟದಲ್ಲಿ ಸಂಘಟನೆ ನಡೆಸುವುದು ಮತ್ತು ಚುನಾವಣಾ ವೆಚ್ಚವನ್ನು ನಿಭಾಯಿಸುವುದು ಜೆಡಿಎಸ್ಗೆ ಕಠಿಣ ಪರೀಕ್ಷೆಯಾಗಬಹುದು.

ಹಳೆಯ ಕಾರ್ಯಕರ್ತರ ಭಾವನಾತ್ಮಕ ನಿಷ್ಠೆ ಮಾತ್ರ ಸಾಕಾಗುತ್ತದೆಯೇ? ಅಥವಾ ಹೊಸ ತಲೆಮಾರಿನ ಆರ್ಥಿಕವಾಗಿ ಬಲಿಷ್ಠ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿರುವ ಯುವ ಕ್ಯಾಡರ್ ಬೇಕೇ? ಜೆಡಿಎಸ್ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕು.
ಬಿಜೆಪಿ ಮೈತ್ರಿ… ಬಲವೇ? ದುರ್ಬಲತೆಯೇ?
ಬಿಜೆಪಿ ಜೊತೆಗಿನ ಮೈತ್ರಿ ಜೆಡಿಎಸ್ಗೆ ಚುನಾವಣಾ ಲಾಭ ನೀಡಬಹುದು. ಆದರೆ ದೀರ್ಘಾವಧಿಯಲ್ಲಿ ಇದೇ ಮೈತ್ರಿ ಪಕ್ಷದ ಸ್ವತಂತ್ರ ಪ್ರಾದೇಶಿಕ ಗುರುತಿಗೆ ಸವಾಲಾಗುವ ಸಾಧ್ಯತೆಯೂ ಇದೆ.ಬಿಜೆಪಿ ಜೊತೆ ಇದ್ದರೂ ಜೆಡಿಎಸ್ ಏಕೆ ಬೇಕು? ಈ ಪ್ರಶ್ನೆಗೆ ಪಕ್ಷ ಮತದಾರರಿಗೆ ಸ್ಪಷ್ಟ ಉತ್ತರ ನೀಡಬೇಕಾಗಿದೆ. ಜೆಡಿಎಸ್ ತನ್ನದೇ ಆದ ಕರ್ನಾಟಕ ಕೇಂದ್ರಿತ ರಾಜಕೀಯ ಧ್ವನಿಯನ್ನು ಕಳೆದುಕೊಂಡರೆ, ಅದು ಪ್ರಾದೇಶಿಕ ಪರ್ಯಾಯ ಪಕ್ಷದಿಂದ ಕೇವಲ ಮೈತ್ರಿ ಪಾಲುದಾರ ಪಕ್ಷವಾಗಿ ಕುಗ್ಗುವ ಅಪಾಯವಿದೆ.

2028 ನಿರ್ಧರಿಸಲಿದೆ ಭವಿಷ್ಯ..
ಜೆಡಿಎಸ್ಗೆ 2028ರ ವಿಧಾನಸಭಾ ಚುನಾವಣೆ ಮತ್ತೊಂದು ಚುನಾವಣೆ ಮಾತ್ರವಲ್ಲ. ಅದು ಪಕ್ಷದ ರಾಜಕೀಯ ಪುನರುತ್ಥಾನದ ಪರೀಕ್ಷೆ. ನಿಖಿಲ್ ಹೊಸ ತಲೆಮಾರನ್ನು ಸಂಘಟಿಸಬಹುದೇ?ಕುಮಾರಸ್ವಾಮಿ ಕೇಂದ್ರದ ಸಚಿವ ಸ್ಥಾನವನ್ನು ಕರ್ನಾಟಕದ ರಾಜಕೀಯ ಬಲವಾಗಿ ಪರಿವರ್ತಿಸಬಹುದೇ? ಪ್ರಜ್ವಲ್ ಪ್ರಕರಣದಿಂದ ಉಂಟಾದ ಇಮೇಜ್ ಹಾನಿಯಿಂದ ಪಕ್ಷ ಹೊರಬರಬಹುದೇ? ಹಳೆಯ ಕ್ಯಾಡರ್ಗೆ ಬದಲಾಗಿ ಯುವ ಕ್ಯಾಡರ್ ನಿರ್ಮಿಸಬಹುದೇ? ಹಳೆ ಮೈಸೂರು ಕೋಟೆಯನ್ನು ಉಳಿಸಿಕೊಂಡು ಉತ್ತರ ಕರ್ನಾಟಕ, ಕರಾವಳಿ ಮತ್ತು ಬೆಂಗಳೂರು ಭಾಗದಲ್ಲೂ ನೆಲೆ ವಿಸ್ತರಿಸಬಹುದೇ? ಈ ಎಲ್ಲಾ ಪ್ರಶ್ನೆಗಳಿಗೆ 2028ರ ಚುನಾವಣೆ ಉತ್ತರ ನೀಡಲಿದೆ.

ಜೆಡಿಎಸ್ಗೆ ಇನ್ನೂ ಅವಕಾಶವಿದೆ. ಆದರೆ ಸಮಯ ಕಡಿಮೆಯಾಗುತ್ತಿದೆ. ಕುಟುಂಬದ ರಾಜಕಾರಣದಿಂದ ಜನರ ರಾಜಕಾರಣಕ್ಕೆ… ಹಳೆ ಕ್ಯಾಡರ್ನಿಂದ ಹೊಸ ಯುವ ಶಕ್ತಿಗೆ… ಹಳೆ ಮೈಸೂರು ಕೋಟೆಯಿಂದ ಇಡೀ ಕರ್ನಾಟಕದತ್ತ… ಜೆಡಿಎಸ್ ತನ್ನ ರಾಜಕೀಯ ಹೆಜ್ಜೆ ಬದಲಿಸಿದರೆ ಮಾತ್ರ ಪುನರುತ್ಥಾನದ ಸಾಧ್ಯತೆ. ಇಲ್ಲವಾದರೆ, ಒಮ್ಮೆ ಕರ್ನಾಟಕದ ರಾಜಕಾರಣದಲ್ಲಿ ‘ಕಿಂಗ್ಮೇಕರ್’ ಆಗಿದ್ದ ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷಗಳ ಮೈತ್ರಿಯಲ್ಲಿ ಸೀಮಿತ ಪಾಲುದಾರನಾಗಿ ಉಳಿಯುವ ಅಪಾಯ ಎದುರಿಸಬೇಕಾಗುತ್ತದೆ. ಹಾಗಾದರೆ ಜೆಡಿಎಸ್ ಮತ್ತೆ ಪುಟಿದೇಳುತ್ತದೆಯೇ? ಇದಕ್ಕೆ ಉತ್ತರ 2028ರ ಕರ್ನಾಟಕದ ರಾಜಕೀಯವೇ ಹೇಳಬೇಕು.






