ಬೆಂಗಳೂರು : ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ 3 ರೂಪಾಯಿ ಬೆಲೆ ಏರಿಕೆಯಾಗಿರುವುದಕ್ಕೆ ಕೇಂದ್ರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಅಲ್ಲದೆ ಇದರಿಂದ ಜನಸಾಮಾನ್ಯರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿವೆ. ಈ ನಡುವೆಯೇ ಅಥಣಿಯ ಕಾಂಗ್ರೆಸ್ ಶಾಸಕ ಕೇಂದ್ರದ ನಡೆಯನ್ನು ಖಂಡಿಸಿದ್ದಾರೆ.

ಜಾಗತಿಕ ವಿದ್ಯಮಾನಗಳ ನೆಪವೊಡ್ಡಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುತ್ತಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದರ ಹೆಚ್ಚಳದ ಹೊರೆಯನ್ನು ನೇರವಾಗಿ ಸಾರ್ವಜನಿಕರ ಮೇಲೆ ಹಾಕುವ ಬದಲು ಕೇಂದ್ರ ಸರ್ಕಾರವು ತಾನು ವಿಧಿಸುವ ತೆರಿಗೆಯಲ್ಲಿ ಕಡಿತ ಮಾಡಬೇಕಿತ್ತು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್ ಅಶೋಕ್ ಸಿಡಿಸಿದ್ರು ಹೊಸ ಬಾಂಬ್..!
ಇಂಧನ ದರ ಏರಿಕೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರವು ತಾನು ವಿಧಿಸುವ ತೆರಿಗೆಯಲ್ಲಿ ಕನಿಷ್ಠ ಮೂರು ರೂಪಾಯಿಗಳನ್ನಾದರೂ ಕಡಿಮೆ ಮಾಡಿಕೊಂಡಿದ್ದರೆ ಸಾರ್ವಜನಿಕರಿಗೆ ಇಷ್ಟೊಂದು ಹೊರೆಯಾಗುತ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೂ, “ಬೆಳಗಾವಿ ಜಿಲ್ಲೆಗೆ ಒಂದು ಡಿಸಿಎಂ (ಉಪಮುಖ್ಯಮಂತ್ರಿ) ಸ್ಥಾನ ಸಿಗುವ ಮಾತುಗಳು ಕೇಳಿಬರುತ್ತಿವೆಯಲ್ಲ? ಎಂಬ ವಿಚಾರಕ್ಕೆ ಶಾಸಕ ಸವದಿ ಯಾವುದೇ ಸ್ಪಷ್ಟ ಅಥವಾ ನೇರವಾದ ಪ್ರತಿಕ್ರಿಯೆ ನೀಡದೆ, ವಿಷಯವನ್ನು ಬೇರೆಡೆಗೆ ಹೊರಳಿಸಿ ಮಾಧ್ಯಮಗಳ ಪ್ರಶ್ನೆಗಳಿಂದ ಜಾರಿಕೊಂಡಿದ್ದಾರೆ.





