ಬೆಳಗಾವಿ : ಬೇಸಿಗೆಯ ಹೊಡೆತಕ್ಕೆ ಉತ್ತರ ಕರ್ನಾಟಕದ ಹಲವು ನಲುಗಿ ಹೋಗಿವೆ. ಕಂಡದಂತ ಬಿಸಿಲಿಗೆ ಜನ – ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅಲ್ಲದೆ ನೀರಿನ ಅಭಾವವು ಹೆಚ್ಚಾಗಿದ್ದು, ನದಿಗಳು ಬತ್ತಿ ಹೋಗುತ್ತಿರುವುದು ರೈತರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕರ್ನಾಟಕದ ಕಪ್ಪು ಮಣ್ಣಿನ ಜೀವನಾಡಿಯಾದ ಕೃಷ್ಣಾ ನದಿ ಬೇಸಿಗೆಯ ಪ್ರಖರತೆಗೆ ಸಿಲುಕಿ ಸಂಪೂರ್ಣ ಬತ್ತಿ ಹೋಗಿದೆ. ನದಿಯಲ್ಲಿ ನೀರಿನ ಅಭಾವದಿಂದಾಗಿ ರಾಶಿ ರಾಶಿ ಜಲಚರಗಳು ಸಾವನ್ನಪ್ಪಿದ್ದು, ನದಿಪಾತ್ರದ ಹತ್ತಾರು ಗ್ರಾಮಗಳ ಜನರು ಕುಡಿಯುವ ಹಾಗೂ ದಿನಬಳಕೆ ನೀರಿಗಾಗಿ ಪರದಾಡುವಂತಹ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ತಿಂಗಳಿನಿಂದ ನದಿಯಲ್ಲಿ ಹನಿ ನೀರಿಲ್ಲದೆ, ನದಿಪಾತ್ರದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಕಣ್ಣೆದುರೇ ಒಣಗುತ್ತಿವೆ. ಅನ್ನದಾತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲಾಗದೆ ಕಂಗಾಲಾಗಿದ್ದಾರೆ.
ನದಿಯಲ್ಲಿ ನೀರು ಬತ್ತಿದ ಪರಿಣಾಮದಿಂದ ಪ್ರಮುಖವಾಗಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ, ಬಳವಾಡ, ಶಿರಹಟ್ಟಿ, ಸವದಿ, ನದಿ ಇಂಗಳಗಾಂವ, ದರೂರ, ಹಲ್ಯಾಳ ಗ್ರಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಶಿರಗುಪ್ಪಿ, ಮೈಗೂರ, ಮುತ್ತೂರ, ತುಬಚಿ, ಜಂಬಗಿ, ಹಿರೇಪಡಸಲಗಿ, ಟಕ್ಕಳಕ್ಕಿ, ಟಕ್ಕೋಡ, ಸೂರ್ಪಾಲಿ, ಕಂಕನವಾಡಿ, ಕಡಕೋಳ ಸೇರಿದಂತೆ ನದಿ ತೀರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದೆ.
ಇದನ್ನೂ ಓದಿ : ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು
ಕೃಷ್ಣಾ ನದಿಯನ್ನೇ ಆಧಾರವಾಗಿಟ್ಟುಕೊಂಡಿದ್ದ ರೂಪಿಸಲಾಗಿದ್ದ ‘ಏತ ನೀರಾವರಿ’ ಯೋಜನೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ನಿಂತುಹೋಗಿದೆ. ನದಿಯ ಪಕ್ಕದಲ್ಲೇ ಇದ್ದರೂ ದನಕರುಗಳಿಗೂ ಕುಡಿಯಲು ನೀರಿಲ್ಲದಂತಾಗಿದ್ದು, ಗ್ರಾಮಸ್ಥರು ಹಣ ಕೊಟ್ಟು ಶುದ್ಧ ಕುಡಿಯುವ ನೀರಿನ (RO) ಘಟಕಗಳ ಮೊರೆ ಹೋಗುವ ದುಸ್ಥಿತಿ ಒದಗಿದೆ.
ಬೆಳೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಹತಾಶೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ (ಬೋರ್‌ವೆಲ್) ಕೊರೆಸುತ್ತಿದ್ದಾರೆ. ಆದರೆ ಅಂತರ್ಜಲ ಕುಸಿತದಿಂದಾಗಿ ಹೆಚ್ಚಿನ ಬೋರ್‌ವೆಲ್‌ಗಳು ನೀರಿಲ್ಲದ ವಿಫಲವಾಗುತ್ತಿವೆ. ಒಂದೆಡೆ ಒಣಗುತ್ತಿರುವ ಬೆಳೆ, ಮತ್ತೊಂದೆಡೆ ಕೈಕಚ್ಚಿದ ಬೋರ್‌ವೆಲ್ ಖರ್ಚು—ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.

ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಸಾರ್ವಜನಿಕರು, ಕೂಡಲೇ ನೀರು ಪೊರೈಕೆಗೆ ಆಗ್ರಹ..
ಇನ್ನೂ ಮಹಾರಾಷ್ಟ್ರದಿಂದ ನದಿಗೆ ನೀರು ಹರಿಸುವ ಸಂಬಂಧ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಿಯೋಗವೊಂದು ತೆರಳಿ ಮಾತುಕತೆ ನಡೆಸಲಿದೆ” ಎಂದು ಈ ಭಾಗದ ಜನಪ್ರತಿನಿಧಿಗಳು ಹೇಳಿಕೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಸಚಿವರಾಗಲಿ, ಸಂಸದರು, ಶಾಸಕರಾಗಲಿ ಮಹಾರಾಷ್ಟ್ರದ ಜೊತೆ ಮಾತುಕತೆಗೆ ಮುಂದಾಗದಿರುವುದು ಇಲ್ಲಿನ ರೈತರ ಹಾಗೂ ಸಾರ್ವಜನಿಕರ ಕೆಂಗಣ್ನಿಗೆ ಗುರಿಯಾಗಿದೆ.
ಅಲ್ಲದೆ ಪ್ರತಿ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಕೃಷ್ಣಾ ನದಿ ಬತ್ತಿ ಹೋಗುವುದು ಸಾಮಾನ್ಯವಾಗಿದೆ. ಆದರೂ ಈ ಭಾಗದ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. “ನಮ್ಮ ಕಷ್ಟಕ್ಕೆ ಸ್ಪಂದಿಸದ ರಾಜಕಾರಣಿಗಳಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ” ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇನ್ನಾದರೂ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತು ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ಕಾರ್ಯಕ್ಜೆ ಮುಂದಾಗಬೇಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಅಥಣಿ ಶಾಸಕ ಲಕ್ಷ್ಮಣ್ ಸವದಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರವನ್ನು ಗಂಭೀರವಾಗಿ ಸ್ವೀಕರಿಸಿ ಸಾರ್ವಜನಿಕರ ಸಮಸ್ಯೆಗ ಸ್ಪಂದಿಸುವ ಕೆಲಸ ಮಾಡಬೇಕಿದೆ.






