ಬೆಂಗಳೂರು : ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಇದರಿಂದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಭಾರಿ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೆಪಿಎಸ್ಸಿ ವಿರುದ್ಧ ವ್ಯಕ್ತವಾಗುತ್ತಿವೆ. ಆದರೆ ಇದೀಗ ರಾಜ್ಯದ ಅತ್ಯಂತ ವಿಶ್ವಾಸ್ವಾರ್ಹ ನೇಮಕಾತಿಗೆ ಹೆಸರುವಾಸಿಯಾಗಿದ್ದ ಕೆಇಎನಲ್ಲೂ ಅಕ್ರಮದ ವಾಸನೆಗಳೂ ಕೇಳಿ ಬಂದಿದೆ.

ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಹೊಸ ಬಾಂಬ್ ಸಿಡಿದಿದ್ದು, ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (Karnataka Publice service Commission) ಹಗರಣದ ಬಳಿಕ ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಕೇಳಿ ಬಂದಿದೆ ಎಂದು ಆರೋಪಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 10ರಂದು ಕೃಷಿ ವಿಜ್ಞಾನ ಕೋರ್ಸ್ಗಳ ಆಯ್ಕೆಗಾಗಿ ರಾಜ್ಯದ ಒಟ್ಟು 17 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿತ್ತು. ಆದರೆ, ಚಿತ್ರದುರ್ಗದ ಹಿರಿಯೂರು ಕೇಂದ್ರವೊಂದರಲ್ಲೇ 74 ವಿದ್ಯಾರ್ಥಿಗಳಿಗೆ 200ಕ್ಕೆ 200 ಪೂರ್ಣ ಅಂಕಗಳು ಬಂದಿದ್ದು ಹೇಗೆ ? ಒಂದೇ ಕೇಂದ್ರದಲ್ಲಿ ಇಷ್ಟೊಂದು ವಿದ್ಯಾರ್ಥಿಗಳಿಗೆ ಔಟ್ ಆಪ್ ಔಟ್ ಮಾರ್ಕ್ಸ್ ಬಂದಿರುವುದು ಪರೀಕ್ಷಾ ಅಕ್ರಮ ನಡೆದಿರುವುದಕ್ಕೆ ಸಾಕ್ಷಿ ಎಂದು ಪೋಷಕರೇ ಆರೋಪಿಸಿದ್ದಾರೆ ಎಂದು ಆರ್.ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ : ಊಬರ್, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಡ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಬೇಡಿ. ಕೃಷಿ ಮಂತ್ರಿ ಚೆಲುವರಾಯಸ್ವಾಮಿ ಅವರೇ, ಕೃಷಿ ವಿಜ್ಞಾನ ಕೋರ್ಸ್ಗಳ ಪ್ರಾಯೋಗಿಕ ಪರೀಕ್ಷೆಯನ್ನು (KCET) ರದ್ದುಗೊಳಿಸಿ, ನಿಷ್ಪಕ್ಷಪಾತ ತನಿಖೆಗೆ ಆದೇಶಿ, ಜೊತೆಗೆ ಮರು ಪರೀಕ್ಷೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.






