ಮುಂಬೈ :
ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, Uber, Ola Consumer ಹಾಗೂ Rapido ಆ್ಯಪ್‌ಗಳನ್ನು ಆ್ಯಪ್ ಸ್ಟೋರ್‌ಗಳಿಂದ ತೆಗೆದುಹಾಕುವಂತೆ Apple ಮತ್ತು Google ಗೆ ನೋಟಿಸ್ ನೀಡಲಾಗಿದೆ. ಮಹಾರಾಷ್ಟ್ರ ಸೈಬರ್ ವಿಭಾಗವು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)(b) ಅಡಿಯಲ್ಲಿ ಈ ನೋಟಿಸ್ ಜಾರಿ ಮಾಡಿದ್ದು, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಕಾನೂನುಬಾಹಿರವಾಗಿ ನಡೆಯುತ್ತಿವೆ ಎಂದು ಆರೋಪಿಸಿದೆ.
ರಾಜ್ಯ ಸರ್ಕಾರದ ಪ್ರಕಾರ, ಅಗತ್ಯ ಅನುಮತಿ ಮತ್ತು ಸಾರಿಗೆ ಇಲಾಖೆಯ ಒಪ್ಪಿಗೆ ಇಲ್ಲದೆ ಬೈಕ್ ಟ್ಯಾಕ್ಸಿ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದು, ಇದು ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುತ್ತಿದೆ. ಮಹಿಳಾ ಸುರಕ್ಷತೆ ಹಾಗೂ ನಿಯಂತ್ರಣ ನಿಯಮ ಉಲ್ಲಂಘನೆಯ ಕುರಿತೂ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಈಗಾಗಲೇ ಬೈಕ್ ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲು ಹಾಗೂ ಕಂಪನಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬಳಿಕ ಸೈಬರ್ ವಿಭಾಗ ಗೂಗಲ್ ಮತ್ತು ಆ್ಯಪಲ್‌ಗೆ ನೇರ ನೋಟಿಸ್ ಕಳುಹಿಸಿದೆ.

ಸರ್ಕಾರ ಸ್ಪಷ್ಟಪಡಿಸಿರುವಂತೆ, ಈ ಕ್ರಮ ಕೇವಲ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಮಾತ್ರ ಸೀಮಿತವಾಗಿದ್ದು, ಕ್ಯಾಬ್, ಆಟೋ ಹಾಗೂ ಆಹಾರ ವಿತರಣೆ ಸೇವೆಗಳು ಮುಂದುವರಿಯಲಿವೆ.ಭಾರತದ ಹಲವು ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕಾನೂನುಬದ್ಧತೆ ಕುರಿತ ವಿವಾದಗಳು ಮುಂದುವರಿದಿವೆ. ಕರ್ನಾಟಕ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ರಾಪಿಡೊ ಮತ್ತು ಇತರೆ ಬೈಕ್ ಟ್ಯಾಕ್ಸಿ ಸಂಸ್ಥೆಗಳು ಕಾನೂನು ಸಮಸ್ಯೆ ಎದುರಿಸಿದ್ದವು.






