ಕೊರೋನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಇತ್ತೀಚಿನ ಮಾಹಿತಿ ನಿರಾಶಾದಾಯಕವಾಗಿದೆ. ಕೊರೋನಾವನ್ನು ಈಗಲೂ ಸಾಂಕ್ರಾಮಿಕ ರೋಗವೆಂದೇ ಪರಿಗಣಿಸಲಾಗುವುದೆಂದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಏಕೆಂದರೆ ವೈರಸ್ ಅಪಾಯ ಇನ್ನೂ ಕಡಿಮೆಯಾಗಿಲ್ಲ. ಸೋಂಕು ಮತ್ತು ಅದರ ಹೊಸ ರೂಪಾಂತರಿಗಳು ಅಪಾಯವನ್ನು ಹೆಚ್ಚಿಸುತ್ತಿರುವುದರಿಂದ ಇದೀಗ ಪ್ರಪಂಚವು ನಿರ್ಬಂಧಗಳ ನೆರಳಿನಲ್ಲಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯಿಂದ ಸ್ಪಷ್ಟವಾಗಿದೆ.
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವದಾದ್ಯಂತ ಜನರು ಹೆಚ್ಚು ಹೆಚ್ಚು ಲಸಿಕೆ ಪಡೆದಾಗ ಮತ್ತು ರೋಗನಿರೋಧಕ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದಾಗ, ಕರೋನಾದಿಂದ ಸಾವಿನ ಸಂಖ್ಯೆ ಕಡಿಮೆಯಾಗುತ್ತದೆ ಎಂದು WHO ಹೇಳಿದೆ.
ಇದರೊಂದಿಗೆ, ವೈರಸ್ಗೆ ತುತ್ತಾಗುವ ಜನರ ಸಂಖ್ಯೆಯೂ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಈ ಸ್ಥಿತಿಯನ್ನು ತಲುಪಿದ ನಂತರ, ಕರೋನಾವನ್ನು ಸಾಂಕ್ರಾಮಿಕ ರೋಗ ಎಂಬ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಆದರೆ, ಇಂತಹ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ ಎಂದು ಡಬ್ಲ್ಯುಎಚ್ಒ ಸ್ಪಷ್ಟಪಡಿಸಿದೆ.
ಮಕ್ಕಳಿಗೆ ಲಸಿಕೆ ಯಾವಾಗ ?
ಭಾರತದಲ್ಲಿ ಕರೋನಾ ತಡೆಗಟ್ಟಲು ಲಸಿಕೆ ಹಾಕುವ ಕಾರ್ಯಕ್ರಮ ಅತ್ಯಂತ ವೇಗವಾಗಿ ನಡೆಯುತ್ತಿದೆ. ಮತ್ತು ದೇಶದಲ್ಲಿ 75 ಕೋಟಿಗೂ ಹೆಚ್ಚು ಜನರಿಗೆ ಕರೋನಾ ಲಸಿಕೆ ಡೋಸ್ ನೀಡಲಾಗಿದೆ. ಇದರೊಂದಿಗೆ, ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಸಿದ್ಧತೆಗಳು ನಡೆಯುತ್ತಿವೆ ಮತ್ತು ತಿಂಗಳ ಅಂತ್ಯದ ವೇಳೆಗೆ, ಮಕ್ಕಳಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ.
ಮಕ್ಕಳ ಲಸಿಕೆಗಾಗಿ ಜೈಡಸ್ ಕ್ಯಾಡಿಲಾದ ಜಯಕೋವ್ ಡಿ ಅನ್ನು ಅನುಮೋದಿಸಲಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಕ್ಕಳಿಗೆ ಲಸಿಕೆ ಒದಗುವ ನಿರೀಕ್ಷೆ ಇದೆ. ಒಂದು ವೇಳೆ ಅಂದುಕೊಂಡಂತೇ ಆದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ವಿಷಯದಲ್ಲಿ ಅಮೆರಿಕ, ಬ್ರಿಟನ್ ಮತ್ತು ಕೆನಡಾ ನಂತರ ಭಾರತವು ನಾಲ್ಕನೇ ರಾಷ್ಟ್ರವಾಗಲಿದೆ.
ಲಸಿಕೆ ಹಾಕಿಸಿಕೊಂಡವರಲ್ಲಿ ಕ್ರಮೇಣ 3-2 ತಿಂಗಳಲ್ಲಿ ಪ್ರತಿರೋಧಕ ಶಕ್ತಿ ಕುಂಟಿತ : ICMR-RMRC ಅಧ್ಯಯನ !
ಕೋವಿಡ್ -19 ವಿರುದ್ಧ ಕೋವಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡ ಜನರಲ್ಲಿ 2 ತಿಂಗಳ ನಂತರ ಪ್ರತಿಕಾಯಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ಕೋವಿಶೀಲ್ಡ್ ಡೋಸ್ ತೆಗೆದುಕೊಳ್ಳುವವರಲ್ಲಿ, ಪ್ರತಿಕಾಯಗಳ ಮಟ್ಟವು 3 ತಿಂಗಳ ನಂತರ ಕಡಿಮೆಯಾಗಲು ಆರಂಭವಾಗುತ್ತದೆ. ಈ ಮಾಹಿತಿಯನ್ನು ಇತ್ತೀಚೆಗೆ ಭುವನೇಶ್ವರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRC) ನಡೆಸಿರುವ ಅಧ್ಯಯನದಲ್ಲಿ ಕಂಡು ಬಂದಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮತ್ತು ಭಾರತ್ ಬಯೋಟೆಕ್ನ ಈ ಎರಡೂ ಲಸಿಕೆಗಳನ್ನು ದೇಶದಲ್ಲಿ ಜನವರಿ 16 ರಿಂದ ಆರಂಭವಾದ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಹೆಚ್ಚು ಬಳಸಲಾಗುತ್ತಿದೆ.
ಈ ಕುರಿತು ಮಾತನಾಡಿದ ICMR-RMRC ವಿಜ್ಞಾನಿ ಡಾ. ದೇವದತ್ತ ಭಟ್ಟಾಚಾರ್ಯ, ಈ ಅಧ್ಯಯನವನ್ನು ಒಟ್ಟು 614 ಜನರ ಮೇಲೆ ನಡೆಸಲಾಗಿದ್ದು, ಭಾಗವಹಿಸಿದವರಲ್ಲಿ ಶೇ.50.2 ರಷ್ಟು ಅಂದರೆ 308 ಜನರು ಕೊವಿಶಿಲ್ದ್ ಹಾಕಿಸಿಕೊಂಡಿದ್ದಾರೆ, ಶೇ.49.8 ರಷ್ಟು ಅಂದರೆ 306 ಜನರು ಕೊವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡಿದ್ದರು. ಈ ಅವಧಿಯಲ್ಲಿ ಬ್ರೇಕ್ ಥ್ರೂ ಇನ್ಫೆಕ್ಷನ್ ನ (ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕವು ಸೋಂಕು ಹರಡುವಿಕೆ) ಒಟ್ಟು 81 ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದ 533 ಆರೋಗ್ಯ ಕಾರ್ಯಕರ್ತರು ಪ್ರತಿಕಾಯಗಳ ಮಟ್ಟದಲ್ಲಿ ಗಮನಾರ್ಹ ಕುಸಿತ ಕಂಡುಬಂದಿದೆ ಎಂದು ಅಧ್ಯಯನ ಸಾಬೀತುಪಡಿಸಿದೆ. ವ್ಯಾಕ್ಸಿನೇಷನ್ ಮಾಡುವ ಮೊದಲು ಈ ಸಿಬ್ಬಂದಿಯಲ್ಲಿ ಯಾವುದೇ ಸೋಂಕು ಕಂಡುಬಂದಿಲ್ಲ. ಪ್ರತಿಕಾಯಗಳ ನಿರಂತರತೆಯ ಬಗ್ಗೆ ಮಾಹಿತಿ ಪಡೆಯಲು ಸುಮಾರು 2 ವರ್ಷಗಳ ಕಾಲ ಅಧ್ಯಯನ ಮಾಡಲು ಯೋಚಿಸುತ್ತಿರುವುದಾಗಿ ಡಾ ಭಟ್ಟಾಚಾರ್ಯ ಮಾಹಿತಿ ನೀಡಿದ್ದಾರೆ. ‘ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಪ್ರತಿಕಾಯದ ಮಟ್ಟವು ಎರಡು ತಿಂಗಳ ಪೂರ್ಣ ವ್ಯಾಕ್ಸಿನೇಷನ್ ನಂತರ ಕಡಿಮೆಯಾಗುವುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ, ಕೋವಿಶೀಲ್ಡ್ ತೆಗೆದುಕೊಳ್ಳುವವರಲ್ಲಿ, ಈ ಅವಧಿ 3 ತಿಂಗಳುಗಳದ್ದಾಗಿದೆ ಎಂದು ಡಾ. ಭಟ್ಟಾಚಾರ್ಯ ಹೇಳಿದ್ದಾರೆ.
ಈ ಅಧ್ಯಯನವನ್ನು IgGಯನ್ನು ಪತ್ತೆ ಮಾಡಲು ಮಾಡಲಾಗಿದೆ. IgG ಅಂದರೆ ಇಮ್ಯುನೊಗ್ಲಾಬ್ಯುಲಿನ್ ಜಿ, ಇದನ್ನು ಅತ್ಯಂತ ಸಾಮಾನ್ಯವಾದ ಪ್ರತಿಕಾಯ ಎಂದು ಕರೆಯಲಾಗುತ್ತದೆ. ಅಧ್ಯಯನದಲ್ಲಿ ಭಾಗವಹಿಸಿದವರು ತಮ್ಮ ಮೊದಲ ಡೋಸ್ ಪಡೆದ ನಂತರ 24 ವಾರಗಳ ಕಾಲ ಟೈಟ್ರೆ ಸೇರಿದಂತೆ ಹಲವು ಮಾಹಿತಿಯನ್ನು ದಾಖಲಿಸಲಾಗಿದೆ. ಈ ಅಧ್ಯಯನವು ಮಾರ್ಚ್ 2021 ರಲ್ಲಿ ಆರಂಭವಾಗಿದೆ. ಇನ್ನು ಡಾ. ಭಟ್ಟಾಚಾರ್ಯ ಅವರು ಬೂಸ್ಟರ್ ಶಾಟ್ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ವೈಜ್ಞಾನಿಕ ಪುರಾವೆಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಈ ಅಧ್ಯಯನದ ಮುಂದಿನ ಪ್ರಕ್ರಿಯೆಯು ಅಂತಹ ಪುರಾವೆಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ ಈ ರೀತಿಯ ಮೊದಲ ಅಧ್ಯಯನ ಇದಾಗಿದೆ ಎಂದು ಅವರು ಹೇಳಿದ್ದಾರೆ.