
ರಾಜ್ಯ ಸರ್ಕಾರ ಹಾಗು ರಾಜಭವನದ ನಡುವೆ ಸಂಘರ್ಷ ಏರ್ಪಟ್ಟಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ಗೆ ಅವಕಾಶ ಕೇಳ್ತಿದ್ದ ಹಾಗೆ ಒಕೆ ಎಂದಿದ್ದ ರಾಜ್ಯಪಾಲರು ಅದೇ ಬಿಜೆಪಿ ಹಾಗು ಜೆಡಿಎಸ್ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ ಬಗ್ಗೆ ಸೈಲೆಂಟ್ ಆಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ನಡುವೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದಾಗ ರಾಜಭವನದಿಂದ ಉತ್ತರ ಬಂದಿಲ್ಲ.

ಮಾಹಿತಿ ಹಕ್ಕು ಹೋರಾಟಗಾರ H.M ವೆಂಕಟೇಶ್ RTI ಅರ್ಜಿ ಸಲ್ಲಿಕೆ ಮಾಡಿ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹೆಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ, ಶಶಿಕಲಾ ಜೊಲ್ಲೆ ಹಾಗು ಮುರುಗೇಶ್ ನಿರಾಣಿ ವಿರುದ್ಧದ ಭ್ರಷ್ಟಾಚಾರ ಆರೋಪದಲ್ಲಿ ಪ್ರಾಸಿಕ್ಯೂಷನ್ಗೆ ಕೇಳಿರುವ ಅರ್ಜಿಯ ಪ್ರತಿಗಳನ್ನು ನೀಡುವಂತೆ RTI ಅರ್ಜಿ ಸಲ್ಲಿಸಲಾಗಿತ್ತು. ಜೊತೆಗೆ ರಾಜ್ಯಪಾಲರು ಅನುಮತಿ ನೀಡಿದ ಪತ್ರವನ್ನೂ ನೀಡಬೇಕೆಂದು ಮನವಿ ಮಾಡಲಾಗಿತ್ತು.

ಮಾಹಿತಿ ಹಕ್ಕು ಅಧಿನಿಯಮ 2005 ರ ನಿಯಮ 8(1)(H) ಅನ್ವಯ ತನಿಖಾ ಕ್ರಮಕ್ಕೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆ ಮಾಡುವಂತಹ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಇರುತ್ತದೆ ಎಂದು ರಾಜ್ಯಪಾಲರ ಅಧೀನ ಕಾರ್ಯದರ್ಶಿ ಮತ್ತು ಮಾಹಿತಿ ಅಧಿಕಾರಿ ಜಿ ಪ್ರದೀಪ್ ಮಾಹಿತಿ ನೀಡಿದ್ದಾರೆ.






