ಕೆಂಪುಕೋಟೆ’ಯಲ್ಲಿ ಕೇಸರಿ ಪಾರುಪಥ್ಯಕ್ಕೆ ನಾಂದಿಹಾಡಿತೆ ವಾಮ ತಂತ್ರ?

[Sassy_Social_Share]

ದೇಶದ ಗಮನ ಸೆಳೆದಿದ್ದ ಪಶ್ಚಿಮಬಂಗಾಳದ ಚುನಾವಣೆ, ಆಯೋಗದ ಚುನಾವಣಾ ಘೋಷಣೆಯಿಂದ ಹಿಡಿದು, ಪ್ರಚಾರ, ಹಣಾಹಣಿ, ಆರೋಪ-ಪ್ರತ್ಯಾರೋಪಗಳ ವಿಷಯದಲ್ಲಿ ಕೂಡ ಸದಾ ವಿವಾದಕ್ಕೀಡಾಗುತ್ತಲೇ ಇತ್ತು. ಕೊನೆಗೆ ಚುನಾವಣಾ ಫಲಿತಾಂಶದ ದಿನ ಕೂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಒಂದು ಕಾಲದ ಬಲಗೈಬಂಟ ಹಾಗೂ ಸದ್ಯದ ಪ್ರತಿಸ್ಫರ್ಧಿ ಸುವೇಂಧು ಅಧಿಕಾರಿ ನಡುವಿನ ಜಯ ಮೇಲಾಟದ ಕಾರಣಕ್ಕೂ ಇಡೀ ದೇಶ ದಿನವಿಡೀ ಮತ ಎಣಿಕೆಯ ಕ್ಷಣಕ್ಷಣದ ಏರಿಳಿತದ ಮೇಲೆ ಕಟ್ಟಿಟ್ಟಿತ್ತು.

ಇದೀಗ, ನಂದಿಗ್ರಾಮದ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಮಮತಾ ಅಲ್ಲಿ ಸುವೇಂಧು ವಿರುದ್ಧಸೋತಿದ್ದರೂ  ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ಸ್ವೀಕರಿಸುವರೇ ಇಲ್ಲವೇ ಎಂಬ ಕುತೂಹಲದ ಚರ್ಚೆ ಕೂಡ ನಡೆದಿದೆ. ನೈತಿಕತೆಯ ಪ್ರಶ್ನೆ ಮುಂದಿಟ್ಟು ಬಿಜೆಪಿ, ಸಿಎಂ ಗಾದಿಗೆ ಏರಲು ಮಮತಾಗೆ ಯಾವ ನೈತಿಕತೆಯೂ ಇಲ್ಲ ಎಂದು ಟೀಕೆಗಿಳಿದಿದೆ.

ಹೀಗೆ ಒಂದು ಕಡೆ ಭರ್ಜರಿ ಜಯಭೇರಿಯೊಂದಿಗೆ ಮೂರನೇ ಬಾರಿಗೆ ಬಂಗಾಳದ ಅಧಿಕಾರ ಹಿಡಿದಿರುವ ಟಿಎಂಸಿ ಮತ್ತು ಮೊದಲ ಬಾರಿಗೆ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ನಡುವಿನ ಲಾಭ-ನಷ್ಟದ ಲೆಕ್ಕಾಚಾರಗಳು ನಡೆದಿದ್ದಿರೆ, ಮತ್ತೊಂದೆಡೆ ಒಂದಂಕಿಯ ಸ್ಥಾನವನ್ನೂ ಪಡೆಯದೇ ರಾಜಕೀಯ ಅಸ್ತಿತ್ವ ಸಾಬೀತು ಮಾಡಬೇಕಾದ ಪಜೀತಿಗೆ ಸಿಲುಕಿರುವ ಸಿಪಿಎಂ ನೇತೃತ್ವದ ವಾಮದಳದ ಭವಿಷ್ಯದ ಬಗ್ಗೆಯೂ ದೊಡ್ಡ ಮಟ್ಟದ ಚರ್ಚೆಗೆ ಈ ಚುನಾವಣಾ ಫಲಿತಾಂಶ ಇಂಬು ನೀಡಿದೆ.

2016ರ ವಿಧಾನಸಭಾ ಚುನಾವಣೆಯಲ್ಲಿ 32 ಸ್ಥಾನಗಳನ್ನು ಗೆದ್ದಿದ್ದ ಸಿಪಿಎಂ ನೇತೃತ್ವದ ಎಡಪಕ್ಷಗಳು ಬಣ ಮತ್ತು 44 ಸ್ಥಾನ ಗೆದ್ದಿದ್ದ ಕಾಂಗ್ರೆಸ್, ಒಟ್ಟಾಗಿ ಒಟ್ಟು 76 ಸ್ಥಾನಗಳೊಂದಿಗೆ ಪ್ರತಿಪಕ್ಷ ಸ್ಥಾನದಲ್ಲಿದ್ದವು. ಆ ಬಾರಿ ಚುನಾವಣೆಯಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ, ಬಳಿಕ ನಡೆದ ವಿವಿಧ ಉಪಚುನಾವಣೆಗಳಲ್ಲಿ ನಾಲ್ಕು ಸ್ಥಾನ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ತನ್ನ ಬಲವನ್ನು ಏಳಕ್ಕೆ ಏರಿಸಿಕೊಂಡಿತ್ತು. 211 ಸ್ಥಾನ ಗೆದ್ದಿದ್ದ ಮಮತಾ ಅವರ ತೃಣಮೂಲ 2011ರ ಬಳಿಕ ಮತ್ತೊಮ್ಮೆ ಅಧಿಕಾರದ ಕುರ್ಚಿ ಹಿಡಿದಿತ್ತು.

ಆದರೆ, ಈ ಬಾರಿ ಬಿಜೆಪಿಯ ಪ್ರಧಾನಿ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ, ಯೋಗಿ ಆದಿತ್ಯನಾಥ ಸೇರಿದಂತೆ ಘಟಾನುಘಟಿ ನಾಯಕರು, ಸರ್ಕಾರದ ಆಡಳಿತ ಯಂತ್ರ ಮತ್ತು ಬಹುತೇಕರ ಆರೋಪದಂತೆ ಪರೋಕ್ಷವಾಗಿ ಚುನಾವಣಾ ಆಯೋಗದ ಬೆಂಬಲದೊಂದಿಗೆ ಸೆಣೆಸಿದರೂ, ಮಮತಾ ಕಳೆದ ಬಾರಿಗಿಂತ ಎರಡು ಸ್ಥಾನ ಹೆಚ್ಚು ಗೆದ್ದು, 213 ಸ್ಥಾನಬಲದೊಂದಿಗೆ ಸತತ ಮೂರನೇ ಬಾರಿಗೆ ಬಂಗಾಳದ ಅಧಿಕಾರಕ್ಕೆ ಏರಿದ್ದಾರೆ. ಬಿಜೆಪಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದೇ ಮೊದಲ ಬಾರಿಗೆ, ಪಕ್ಷದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ತವರು ನೆಲದಲ್ಲಿ ಪ್ರಬಲ ರಾಜಕೀಯ ನೆಲೆ ಕಂಡುಕೊಂಡಿದೆ.

ಈ ನಡುವೆ, ಕುತೂಹಲ ಕೆರಳಿಸಿರುವುದು ಸಿಪಿಎಂ ನೇತೃತ್ವದ ಎಡಪಕ್ಷಗಳ ಶೂನ್ಯ ಸಾಧನೆ. 1962ರ ಬಳಿಕ, ಕಳೆದ ಆರು ದಶಕದಲ್ಲಿ ಎಡಪಕ್ಷಗಳ ಪ್ರಾತಿನಿಧ್ಯವೇ ಇಲ್ಲದೆ ಕಮ್ಯುನಿಸ್ಟರ ಸಾಂಪ್ರದಾಯಿಕ ನೆಲೆಯಲ್ಲಿ ವಿಧಾನಸಭೆ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಒಟ್ಟಾಗಿ ಕಳೆದ ಬಾರಿ ಪಡೆದಷ್ಟೇ ಸ್ಥಾನಗಳನ್ನು ಈ ಬಾರಿ ಬಿಜೆಪಿ ಪಡೆದಿದೆ. ಇಂಡಿಯನ್ ಸೆಕ್ಯುಲರ್ ಫ್ರಂಟ್ ನಾಯಕ ನೌಷಾದ್ ಸಿದ್ದಿಕಿ ಮತ್ತು ಕಾಂಗ್ರೆಸ್ಸಿನ ಒಂದು ಸ್ಥಾನ ಸೇರಿ ಸಿಪಿಎಂ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಬಣಕ್ಕೆ ಈ ಬಾರಿ ಕೇವಲ ಎರಡು ಸ್ಥಾನ ಸಿಕ್ಕಿವೆ, ಇನ್ನುಳಿದಂತೆ ಸಿಪಿಐ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಮತ್ತಿತರ ಪಕ್ಷಗಳು ಕೂಡ ಶೂನ್ಯ ಸಾಧನೆ  ಮಾಡಿವೆ.

ಶೇಕಡವಾರು ಮತಗಳಿಕೆಯಲ್ಲಿ ಕೂಡ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳ ಪತನ ತೀರಾ ಶೋಚನೀಯವಾಗಿದ್ದು, ಕಳೆದ ಬಾರಿ ಶೇ.26.1ರಷ್ಟು ಶೇಕಡವಾರು ಮತ ಪಡೆದಿದ್ದ ಸಿಪಿಎಂ, ಈ ಬಾರಿ ಕೇವಲ 4.73ಕ್ಕೆ ಕುಸಿದಿದೆ. ಕಾಂಗ್ರೆಸ್ ಶೇಕಡವಾರು ಮತ ಕೂಡ, ಕಳೆದ ಬಾರಿಯ ಶೇ.12.3ರಿಂದ ಶೇ.2.3ಕ್ಕೆ ಕುಸಿದಿದೆ. ಅದೇ ಹೊತ್ತಿಗೆ ಬಿಜೆಪಿಯ ಶೇಕಡವಾರು ಮತ ಗಳಿಕೆ ಕಳೆದ ಬಾರಿಯ ಶೇ.10.2ರಿಂದ ಶೇ.38.1ಕ್ಕೆ ಏರಿಕೆ ಕಂಡಿದೆ. ತೃಣಮೂಲ ಕಾಂಗ್ರೆಸ್ ಮತ ಗಳಿಕೆ ಕೂಡ ಕಳೆದ ಬಾರಿಯ ಶೇ.44.9ರಿಂದ 47.9ಕ್ಕೆ ಏರಿದೆ. ಅಂದರೆ, ಶೇಕಡವಾರು ಮತಗಳಿಕೆಯ ವಿಷಯದಲ್ಲಿ ಕೂಡ ಸಿಪಿಎಂ ಮತ್ತು ಕಾಂಗ್ರೆಸ್ ನಷ್ಟ, ಬಿಜೆಪಿಯ ಪಾಲಿಗೆ ಲಾಭವಾಗಿ ಪರಿಣಮಿಸಿದೆ ವಿನಃ ಬಿಜೆಪಿ ಟಿಎಂಸಿಯಲ್ಲಿ ಮತಬುಟ್ಟಿಗೆ ಕೈ ಹಾಕಲು ಸಾಧ್ಯವಾಗಿಲ್ಲ.

ಸ್ಥಾನ ಗಳಿಕೆ ಮತ್ತು ಶೇಕಡವಾರು ಮತಗಳೆರೆಡೂ ಸ್ಪಷ್ಟವಾಗಿ ಹೇಳುತ್ತಿರುವುದು ಎಡಪಕ್ಷಗಳು ಮತ್ತು ಕಾಂಗ್ರೆಸ್ ನಷ್ಟದಲ್ಲಿ ಬಿಜೆಪಿ ಲಾಭ ಪಡೆದಿದೆ ಎಂಬುದನ್ನೇ. ಅಂದರೆ, ಪಶ್ಚಿಮಬಂಗಾಳದಲ್ಲಿ, ಕಮ್ಯುನಿಸ್ಟರ ಸಾಂಪ್ರದಾಯಿಕ ನೆಲೆಯಲ್ಲಿ ಆ ಎರಡೂ ಪಕ್ಷಗಳು, ದೇಶದ ಇತರೆ ಭಾಗಗಳಲ್ಲಿ ಪ್ರಬಲವಾಗಿ ವಿರೋಧಿಸುವ ಬಿಜೆಪಿಗೆ ನೆಲೆಯೂರಲು ಸ್ವತಃ ದೊಡ್ಡ ಮಟ್ಟದ ಕೊಡುಗೆ ನೀಡಿವೆ. ಆ ಕೊಡುಗೆ ಪರೋಕ್ಷವಾಗಿಯೇ ಆಗಿದ್ದರೂ, ಟಿಎಂಸಿ ಮತ್ತು ಅದರ ನಾಯಕಿ ಮಮತಾ ವಿರುದ್ಧದ ಸಿಪಿಎಂ ಮತ್ತು ಇತರೆ ಆ ಬಣದ ಪಕ್ಷಗಳ ರಾಜಕೀಯ ತಂತ್ರಗಾರಿಕೆ ಅಂತಿಮವಾಗಿ ತೃಣಮೂಲ ಕಾಂಗ್ರೆಸ್ಸನ್ನು ಅಧಿಕಾರದಿಂದ ದೂರವಿಡುವ ಬದಲಾಗಿ ಬಿಜೆಪಿಯನ್ನು ಅಧಿಕಾರಕ್ಕೆ ಗದ್ದುಗೆಯ ಸಮೀಪಕ್ಕೆ ತಂದು ನಿಲ್ಲಿಸಿದೆ. ಈ ಅಂಶವನ್ನು 2021ರ ವಿಧಾನಸಭಾ ಚುನಾವಣಾ ಫಲಿತಾಂಶ ಅತ್ಯಂತ ಸ್ಪಷ್ಟವಾಗಿ ಮತ್ತು ಕರಾರುವಾಕ್ಕಾಗಿ ಹೇಳುತ್ತಿದೆ ಎಂಬುದಕ್ಕೆ ಒಂದು ಕಡೆ ಬಿಜೆಪಿ ಮತ್ತು ಮತ್ತೊಂದು ಕಡೆ ಎಡಪಕ್ಷಗಳ ಬಣದ ಸ್ಥಾನ ಗಳಿಕೆ ಮತ್ತು ನಷ್ಟ,  ಶೇಕಡವಾರು ಮತಗಳಿಕೆ ಮತ್ತು ನಷ್ಟವನ್ನು ತಾಳೆ ಮಾಡಿದರೆ ಸಾಕು,. ಎಲ್ಲವೂ ಸ್ಪಷ್ಟವಾಗುತ್ತದೆ.

ಹಾಗಾದರೆ ಎಡಪಕ್ಷಗಳು ಮತ್ತು ಕಾಂಗ್ರೆಸ್, ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಬೇಕು, ಅವರನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಏಕೈಕ ಉದ್ದೇಶದಿಂದ ಆತ್ಮಹತ್ಯಾತ್ಮಕ ತಂತ್ರಗಾರಿಕೆ ಹೂಡಿದವೆ? ಸೂಸೈಡ್ ಬಾಂಬರ್ ರೀತಿಯಲ್ಲಿ ಚುನಾವಣಾ ತಂತ್ರ ಹೆಣದವೆ? ಅಂತಹ ವಿಕ್ಷಿಪ್ತ ನಡೆಯ ಪ್ರತಿಫಲವೇ ಇಂದು, ಸದ್ಯದ ಚುನಾವಣೆಯಲ್ಲಷ್ಟೇ ಅಲ್ಲದೆ, ಭವಿಷ್ಯದ ಚುನಾವಣೆಗಳ ದೃಷ್ಟಿಯಿಂದಲೂ ಆ ಪಕ್ಷಗಳ ಅಸ್ತಿತ್ವಕ್ಕೇ ಬಂಗಾಳದಲ್ಲಿ ಸಂಚಕಾರ ಬಂದಿತೆ? ಏಕೆಂದರೆ, ಬಂಗಾಳದಲ್ಲಿ ಮಮತಾರ ಟಿಎಂಸಿಗಿಂತ ಭವಿಷ್ಯದಲ್ಲಿ ಬಿಜೆಪಿ, ಹೆಚ್ಚು ಅಪಾಯಕಾರಿಯಾಗುವುದು ಅದು ಅಲ್ಲಿ ನೆಲೆಯೂರಲು ಪರೋಕ್ಷವಾಗಿ ನೆರವಾದ ಎಡಪಕ್ಷಗಳ ಪಾಲಿಗೇ ಎಂಬುದನ್ನು ಯಾರು ಬೇಕಾದರೂ ಊಹಿಸಬಲ್ಲರು.

ಅಷ್ಟಕ್ಕೂ ಎಡಪಕ್ಷಗಳು ಹೀಗೆ ಅಗಣಿ ತೆಗೆಯಲು ಹೋಗಿ ಬಾಗಿಲನ್ನೇ ತಲೆ ಮೇಲೆ ಬೀಳಿಸಿಕೊಂಡ ಯಡವಟ್ಟು ಮಾಡಿಕೊಂಡಿದ್ದು ಹೇಗೆ? ಎಂದರೆ; ನಂದಿಗ್ರಾಮ ಚಳವಳಿಯ ಕಾಲದಿಂದ ಈವರೆಗಿನ ಎಡಪಕ್ಷಗಳು ಮತ್ತು ತೃಣಮೂಲದ ಸಂಘರ್ಷದ ಇತಿಹಾಸ ನೋಡಬೇಕಾಗುತ್ತದೆ. ನಂದಿಗ್ರಾಮದ ಎಸ್‌ಇಝಡ್‌ ಮತ್ತು ಸಿಂಗೂರು ಕೃಷಿ ಭೂಮಿಯನ್ನು ಟಾಟಾ ನ್ಯಾನೋ ಕಾರು ತಯಾರಿಕಾ ಕಾರ್ಖಾನೆಗೆ ನೀಡುವ ಸಿಪಿಎಂನ ಬುದ್ಧದೇವ ಭಟ್ಟಾಚಾರ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಆರಂಭವಾದ ರೈತ ಹೋರಾಟವನ್ನು ಕೈಗೆತ್ತಿಕೊಂಡ ಮಮತಾ, ಆ ಹೋರಾಟದ ಸಂಘರ್ಷ, ಹಿಂಸಾಚಾರವನ್ನೇ ಮುಂದಿಟ್ಟುಕೊಂಡು 2011ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಮತ್ತು ಅದರ ವಾಮದಳದ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು. ಆ ಮೂಲಕ 34 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ಬಂಗಾಳದ ನೆಲದಲ್ಲಿ ವಿರಾಮ ಹಾಕಿದ್ದರು.

ಆ ಸೋಲಿನಿಂದ ಕಂಗೆಟ್ಟು ಹೋಗಿದ್ದ ಸಿಪಿಎಂ ಈವರೆಗೆ ಆ ಆಘಾತದಿಂದ ಹೊರಬಂದಿಲ್ಲ ಎಂಬುದಕ್ಕೆ ಈಗಲೂ ಆ ಪಕ್ಷ ಬಿಜೆಪಿಗಿಂತ ತನಗೆ ಮಮತಾ ಮತ್ತು ಅವರ ತೃಣಮೂಲ ಕಾಂಗ್ರೆಸ್ಸೇ ಪರಮ ಶತ್ರು ಎಂದು ಭಾವಿಸಿರುವುದು ಮತ್ತು ಅಂತಹ ಲೆಕ್ಕಾಚಾರದ ಮೇಲೆಯೇ ಚುನಾವಣಾ ತಂತ್ರಗಳನ್ನು ಹೆಣೆದಿರುವುದು ಸಾಕ್ಷಿ. ಇಡೀ ದೇಶವ್ಯಾಪಿ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ, ದೇಶಕ್ಕೆ ಅಪಾಯಕಾರಿ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ಕೂಡ, ಬಂಗಾಳದ ವಿಷಯಕ್ಕೆ ಬಂದರೆ ತನ್ನ ಮೊದಲ ವೈರಿ ಬಿಜೆಪಿಯಲ್ಲ; ಬದಲಾಗಿ ಮಮತಾ ಎಂದು ಭಾವಿಸಿ, ಇಂಡಿಯನ್ ಸೆಕ್ಯುಲರ್ ಫ್ರಂಟ್ ನಂತಹ ಕಟ್ಟಾ ಮುಸ್ಲಿಂ ಮೂಲಭೂತವಾದಿ ಸಂಘಟನೆಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮಮತಾ ಅವರ ಮತಬ್ಯಾಂಕಿಗೆ ಕನ್ನ ಹಾಕಲು ಯತ್ನಿಸಿತು. ಪರಿಣಾಮ ಬಿಜೆಪಿಗೆ ಮುಸ್ಲಿಂ ಮೂಲಭೂತವಾದದ ಅಸ್ತ್ರ ಪ್ರಯೋಗಿಸಿ ಹಿಂದುತ್ವದ ಜಪ ಮಾಡಲು ಮತ್ತು ಆ ಮೂಲಕ ಬಂಗಾಳಿ ಹಿಂದೂ ಮತಗಳ ಧ್ರುವೀಕರಣಕ್ಕೆ ಮತ್ತೊಂದು ಅವಕಾಶ ಒದಗಿತು.

ಜೊತೆಗೆ 2011ರ ಹೀನಾಯ ಸೋಲು ಮತ್ತು ಆ ಚುನಾವಣಾ ಫಲಿತಾಂಶದ ಬಳಿಕದ ವ್ಯಾಪಕ ಹಿಂಸಾಚಾರದ ಪರಿಣಾಮವಾಗಿ ಸಿಪಿಎಂ ಮತ್ತು ಇತರೆ ಎಡಪಕ್ಷಗಳ ಕೇಡರ್ ನಲ್ಲಿ ಹುಟ್ಟಿದ ಅನಿಶ್ಚಿತತೆ ಮತ್ತು ಭೀತಿಯನ್ನು ಬಿಜೆಪಿ ಬಹಳ ಜಾಣ್ಮೆಯಿಂದ ಬಳಸಿಕೊಂಡಿತು. ಅದೇ ಹೊತ್ತಿಗೆ ಬುದ್ಧದೇವ್ ಭಟ್ಟಾಚಾರ್ಯರಂತಹ ಅನುಭವಿ, ಸುಧಾರಣಾವಾದಿ ನಾಯಕರು ಬದಿಗೆ ಸರಿದು, ಬಂಗಾಳದ ಎಡಪಕ್ಷಗಳಲ್ಲಿ ಪ್ರಭಾವಿ ನಾಯತ್ವದ ನಿರ್ಯಾತ ಸೃಷ್ಟಿಯಾಯಿತು. ಮಮತಾ ಅವರಂತಹ ಆಕ್ರಮಣಶೀಲ ನಾಯಕಿಯ ಎದುರಿಗೆ ಪ್ರಬಲ ನಾಯಕರು ಪ್ರತಿಪಕ್ಷದ ಪಾಳೆಯಲ್ಲಿ ಇದ್ದು, ಸದನದ ಒಳಹೊರಗೆ ಪ್ರಬಲ ದನಿಯಾಗಬೇಕಿದ್ದ ಹೊತ್ತಲ್ಲಿ ಎಡಪಕ್ಷಗಳ ನಾಯಕರು ಮೆತ್ತಗಾದರು. ಸಹಜವಾಗೇ ಅದು ಕೇಡರ್ ಮಟ್ಟದಲ್ಲಿ ನೈತಿಕ ಸ್ಥೈರ್ಯ ಮತ್ತು ಭರವಸೆಯನ್ನು ಕುಂದಿಸಿತು. ಈ ಸಂದರ್ಭವನ್ನೂ ಕೂಡ ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತು.

ಹಾಗಾಗಿಯೇ ಈ ಬಾರಿಯ ಚುನಾವಣೆಯಲ್ಲಿ “ಆಗೇ ರಾಮ್, ಪೂರೆ ಬಾಮ್(ಮೊದಲು ರಾಮ, ಆಮೇಲೆ ವಾಮ(ಎಡಪಕ್ಷ)) ಎಂಬ ಘೋಷಣೆ ಸದ್ದು ಮಾಡಿತು. ಒಂದು ಕಡೆ ತೃಣಮೂಲ ಕಾಂಗ್ರೆಸ್ಸಿನ ಆಕ್ರಮಕಾರಿ ರಾಜಕಾರಣ, ಮತ್ತೊಂದು ಕಡೆ ದುರ್ಬಲ ನಾಯಕತ್ವದಿಂದ ಕಂಗೆಟ್ಟ ಎಡಪಕ್ಷಗಳ ಕೇಡರ್ ಮತ್ತು ಸಾಮಾನ್ಯ ಬೆಂಬಲಿಗರಿಗೆ ಮಮತಾಗೆ ಪ್ರಬಲ ಪೈಪೋಟಿಯ ದಾಟಿಯಲ್ಲಿ ಆಕ್ರಮಣಕಾರಿ ಪ್ರಚಾರ ತಂತ್ರ ಹೂಡಿದ ಬಿಜೆಪಿ ಮತ್ತು ಅದರ ನಾಯಕರ ಆಕ್ರಮಣಕಾರಿ ವರಸೆಗಳು ಹೊಸ ಪರ್ಯಾಯದ ಭರವಸೆ ತುಂಬಿದವು. ಬಹಳಷ್ಟು ಎಡಪಕ್ಷಗಳ ನಾಯಕರು ಮತ್ತು ಎರಡನೇ ಹಂತದ ಮುಖಂಡರು ಬಿಜೆಪಿಯ ಪಾಳೆಯಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡದ್ದು ಇಂತಹ ಬೆಂಬಲಿಗರಿಗೆ ಮತ್ತಷ್ಟು ಕುಮ್ಮಕ್ಕು ನೀಡಿತು.

ಹಾಗೇ ಬಿಜೆಪಿ ಗೆದ್ದರೂ ಪರವಾಗಿಲ್ಲ, ಮಮತಾ ಸೋಲಬೇಕು ಎಂಬ ಎಡಪಕ್ಷಗಳ ಒಂದಂಶದ ತಂತ್ರಗಾರಿಕೆ ತಳಮಟ್ಟದಲ್ಲಿ, ಅದರ ಬೆಂಬಲಿಗ ವಲಯದಲ್ಲಿ ಕೊನೇ ಹಂತದಲ್ಲಿ ಕೆಂಪಿಗೆ ಬದಲಾಗಿ ಕೇಸರಿಯನ್ನೇ ಹಿತವಾಗಿ ಕಾಣಿಸಿತು! ಇದೆಲ್ಲದರ ಒಟ್ಟಾರೆ ಪರಿಣಾಮ, ಬಿಜೆಪಿ ಅಧಿಕಾರದ ಕುರ್ಚಿಯ ಸಮೀಪಕ್ಕೆ ಬಂದು ನಿಂತಿದೆ. ಈ ಬಾರಿ ತೃಣಮೂಲ ನಾಯಕಿಯ ಏಕವ್ಯಕ್ತಿ ಹೋರಾಟದ ಫಲವಾಗಿ ಬಂಗಾಳಿಗರು ಎರಡು ಸ್ಥಾನ ಹೆಚ್ಚು ಕೊಟ್ಟು ಅಧಿಕಾರಕ್ಕೆ ಮತ್ತೆ ಏರಿಸಿದ್ದರೂ, ಈಗಾಗಲೇ ಬಂಗಾಳದ ‘ಕೆಂಪುಕೋಟೆ’ಯನ್ನು ನುಚ್ಚುನೂರು ಮಾಡಿರುವ ಕೇಸರಿ ಪಡೆ, ಮುಂದಿನ ಬಾರಿ ವಿಜಯ ಪತಾಕೆ ಹಾರಿಸಲು ಸಜ್ಜಾಗಿದೆ.

ಹಾಗಾದಲ್ಲಿ; ಈಗಾಗಲೇ ದಶಕದ ಹಿಂದೆಯೇ, ಮೂರೂವರೆ ದಶಕದ ಪಾರುಪಥ್ಯ ಕಳೆದುಕೊಂಡು ವಾನಪ್ರಸ್ಥಾಶ್ರಮದಲ್ಲಿರುವ ವಾಮಪಂಥೀಯರು, ಬಂಗಾಳದ ನೆಲದಿಂದ ರಾಜಕೀಯ ಸನ್ಯಾಸ ಪಡೆಯಬೇಕಾಗುತ್ತದೆ!

Related posts

Latest posts

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...

ಆಕ್ಸಿಜನ್‌ ಕೊರತೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು -ಸಿದ್ದರಾಮಯ್ಯ

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ...