ಕೊಡಗು: ಆನೆ ‘ಕುಶ’ನನ್ನು ಕಾಡಿಗೆ ಬಿಡುವ ಸರ್ಕಾರದ ನಿರ್ಧಾರಕ್ಕೆ ಗ್ರಾಮಸ್ಥರ ಆಕ್ರೋಶ

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕಾಡಾನೆಗಳ ಉಪಟಳ ಸದಾ ಇದ್ದಿದ್ದೇ. ಜಿಲ್ಲೆಯಲ್ಲಿ ಇರುವ ರೈತಾಪಿ ವರ್ಗದವರು ತಾವು ವರ್ಷವಿಡಿ ಬೆಳೆದಿದ್ದನ್ನು ರಾತ್ರಿ ಹೊಲ ಗದ್ದೆಗಳಲ್ಲಿ ಕಾವಲು ಕಾದು ಕಾಡಾನೆಗಳಿಂದ ರಕ್ಷಿಸಿ ಉಳಿದಿದ್ದನ್ನು ಮನೆಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಇದೆ. ಕಾಡಾನೆಗಳ ಹಾವಳಿಯಿಂದ ರೈತರನ್ನು ಪಾರು ಮಾಡಲು ಶಾಶ್ವತ ಪರಿಹಾರ ರೂಪಿಸಿ ಎಂದು ಹಲವು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮೊರೆಯಿಡುತಿದ್ದರೂ ಪ್ರಯೋಜನ ಮಾತ್ರ ಶೂನ್ಯ ಆಗಿದೆ. ಈ ನಡುವೆ ಅರಣ್ಯ ಇಲಾಖೆಯು ಹಲವು ವರ್ಷಗಳ ಹಿಂದೆ ಸೆರೆ ಹಿಡಿದು ಪಳಗಿಸಿದ್ದ ಆನೆ ಕುಶನನ್ನು ಅರಣ್ಯ ಸಚಿವರು ಮತ್ತೆ ಕಾಡಿಗೆ ಬಿಡುವಂತೆ ಆದೇಶಿಸಿರುವುದು ಚರ್ಚೆಗೆ ಗ್ರಾಸವಾಗಿದೆ ಅಷ್ಟೇ ಅಲ್ಲ ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿದೆ.

 ಕಳೆದ ವಾರ ಬೆಂಗಳೂರಿನಲ್ಲಿ ಅರಣ್ಯ ಸಚಿವ ಅರವಿಂದ್‌ ಲಿಂಬಾವಳಿ ಹಿರಿಯ ಅರಣ್ಯಾಧಿಕಾರಿಗಳ ಜತೆ ಸಭೆ ನಡೆಸಿ ಈ ತೀರ್ಮಾನವನ್ನು ಕೈಗೊಂಡಿದ್ದಾರೆ. ಆನೆ ಕುಶನ ಕುರಿತ ಕೆಲವು ಮಾಧ್ಯಮಗಳ ವರದಿಯನ್ನು ಗಮನಿಸಿ ಕೇಂದ್ರದ ಸಂಸದೆ ಹಾಗೂ ಪರಿಸರವಾದಿ ನಾಯಕಿ ಮೆನೇಕಾ ಗಾಂಧಿ ಕುಶನನ್ನು ಬಂಧಮುಕ್ತ ಗೊಳಿಸಬೇಕೆಂದು ಒತ್ತಾಯಿಸಿದ ಫಲವಾಗಿ ತಜ್ಞರ ಸಮಿತಿ ಖುದ್ದಾಗಿ ಸಾಕಾನೆ ಶಿಬಿರಕ್ಕೆ ಬಂದು ಕುಶನನ್ನು ಪರಿಶೀಲಿಸಿತು. ಬಳಿಕ ನಡೆದ ಬೆಳವಣಿಗೆಯಲ್ಲಿ ಸಚಿವರು ಸಭೆ ನಡೆಸಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಕಳೆದ ಒಂದು ವರ್ಷದಿಂದ ದುಬಾರೆ ಸಾಕಾನೆ ಶಿಬಿರದಿಂದ ತಪ್ಪಿಸಿಕೊಂಡು ಕಾಡಾನೆಗಳ ಜತೆ ಸೇರಿಕೊಂಡಿದ್ದ ಆನೆ ಕುಶನನ್ನು ಮತ್ತೆ ಸೆರೆ ಹಿಡಿದು ತರಲಾಗಿತ್ತು, ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸಚಿವ ಅರವಿಂದ ಲಿಂಬಾವಳಿ ಅವರು ಸಭೆ ನಡೆಸಿ ಮಾಹಿತಿ ಪಡೆದರು. ಅರಣ್ಯ  ಅಧಿಕಾರಿಗಳು ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ. ಕುಶ ಆನೆ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು. ಅಂತಿಮವಾಗಿ ಸಚಿವರು ಕುಶ ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. ಸೂಕ್ತ ಸ್ಥಳ ನಿಗದಿ ಪಡಿಸಿದ ಮೇಲೆ, ಎಲ್ಲಾ ಎಚ್ಚರಿಕೆ ಕ್ರಮಗಳನ್ನೂ ತೆಗೆದುಕೊಂಡು ಬಿಡುಗಡೆ ಮಾಡಲು ಆದೇಶಿಸಿದರು. ಈ ಸಭೆಯಲ್ಲಿ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ರಾಜ್ಯ ಅರಣ್ಯ ಪಡೆ ಮುಖ್ಯಸ್ಥರು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್ ಗೋಗಿ ಹಾಗೂ ವನ್ಯಜೀವಿ ಪರಿಪಾಲಕರು ಭಾಗವಹಿಸಿದ್ದರು.

ಸುಮಾರು ನಾಲ್ಕೂವರೆ ವರ್ಷದಿಂದ ದುಬಾರೆಯ ಸಾಕಾನೆ ಶಿಬಿರದಲ್ಲಿರುವ ಕುಶ ಎಂಬ ಗಂಡಾನೆಯನ್ನು ಬಂಧನ ಮುಕ್ತಗೊಳಿಸಿ ಎಂಬ ಪರಿಸರವಾದಿಗಳ ಒತ್ತಾಯಕ್ಕೆ ಮಣಿದು ಕುಶನನ್ನು ಬಂಧ ಮುಕ್ತಗೊಳಿಸಲಾಗುತ್ತಿದೆ. ಹೊರೂರು, ಮೋದೂರು, ಅತ್ತೂರು-ನಲ್ಲೂರು, ಚೆಟ್ಟಳ್ಳಿ ಮಡಿಕೇರಿಯಲ್ಲೆಲ್ಲ ನಿರಂತರ ತೊಂದರೆ ನೀಡುತ್ತಿದ್ದ ಗಂಡು ಕಾಡಾನೆಯೊಂದನ್ನು 2016 ರ ನವೆಂಬರ್‌ನಲ್ಲಿ ಚೆಟ್ಟಳ್ಳಿ ಸಮೀಪದ ಕಾಫಿ ಮಂಡಳಿ ಆವರಣದಲ್ಲಿ ಸೆರೆ ಹಿಡಿಯಲಾಯಿತು. ದುಬಾರೆ ಸಾಕಾನೆ ಶಿಬಿರದಲ್ಲಿ ಸಂಪೂರ್ಣ ತರಬೇತಿ ನೀಡಿದ ಬಳಿಕ ಕುಶನೆಂಬ ನಾಮಕರಣದೊಂದಿಗೆ ದುಬಾರೆಯ ಸಾಕಾನೆಯೊಂದಿಗೆ ಸೇರಿಸಿಕೊಳ್ಳಲಾಗಿತ್ತು.

ಮದವೇರಿದ ಕುಶ ಕಬ್ಬಿಣದ ಸರಳನ್ನು ಬೇಧಿಸಿ ಸಂಗಾತಿಯನ್ನು ಹುಡುಕಿ 2019 ರಲ್ಲಿ ಕಾಡಿನಲ್ಲಿ ಸೇರಿಕೊಂಡವನು ಮತ್ತೆ ಹಿಂತಿರುಗಿ ಬರಲೇ ಇಲ್ಲ. ಅರಣ್ಯ ಇಲಾಖಾಧಿಕಾರಿಗಳು ಇವತ್ತು ಬರಬಹುದು ನಾಳೆ ಬರಬಹುದೆಂದು ಕಾದು ಕೂತರು. ಒಂದು ವರ್ಷ ಕಳೆದರೂ ಕುಶ ಆನೆ ಶಿಬಿರಕ್ಕೆ ಹಿಂತಿರುಗಲೇ ಇಲ್ಲ. ದುಬಾರೆಯ ಸಾಕಾನೆ ಕುಶ ಕಾಣೆಯಾದ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಅರಣ್ಯ ಇಲಾಖಾಧಿಕಾರಿಗಳು ಹಗಲಿರುಳು ಹುಡುಕಾಡಿದರು. ದುಬಾರೆ ಅರಣ್ಯ ದಿಂದ ಈ ಹಿಂದೆ ಬಂಧಿಸಲಾಗಿದ್ದ ಮೀನುಕೊಲ್ಲಿ ಮೀಸಲು ಅರಣ್ಯದಲ್ಲಿ ಸೇರಿಕೊಂಡಿತ್ತು. ಅರಣ್ಯಯ ಅಧಿಕಾರಿಗಳು ಸಾಕಾನೆ, ವೈದ್ಯರ ಸಹಕಾರದೊಂದಿಗೆ ಮಾರ್ಚ್ 30 ರಂದು ಕುಶನನ್ನು ಕಾಡಾನೆಗಳ ಹಿಂಡಿನಿಂದ ಬಿಡಿಸಿ ಕರೆತರಲು ಅರಣ್ಯ ಇಲಾಖೆ ಹರಸಾಹಸ ಪಡಬೇಕಾಯಿತು.

ದುಬಾರೆಯ ಸಾಕಾನೆ ಶಿಬಿರದೊಳಗಿನ ಕ್ರೋಲ್ನಲ್ಲಿ 2 ದಿನ ಬಂಧಿಸಿ ಕುಶನ ಚಲನವಲನವನ್ನು ವೀಕ್ಷಿಸಲಾಯಿತು. ಮಾರನೆಯ ದಿನದಿಂದ ಕಾಲಿಗೆ ಸರಪಳಿಯೊಂದಿಗೆ ಶಿಬಿರದ ಸಾಕಾನೆಯೊಂದಿಗೆ ಕುಶ ತನ್ನ ಎಂದಿನ ಒಡನಾಟ ಇಟ್ಟುಕೊಂಡಿತು. ಮಾಧ್ಯಮಗಳ ವರದಿ ಆಧಾರದಲ್ಲಿ ಸಂಸದೆ ಹಾಗೂ ಪರಿಸರವಾದಿ ನಾಯಕಿ ಮನೇಕಾ ಗಾಂಧಿ ಕುಶನ ಬಂಧಮುಕ್ತ ಗೊಳಿಸಬೇಕೆಂದು ಒತ್ತಾಯಿಸಿದ ಫಲವಾಗಿ ತಜ್ಞರ ಸಮಿತಿ ಖುದ್ದಾಗಿ ಸಾಕಾನೆ ಶಿಬಿರಕ್ಕೆ ಬಂದು ಕುಶನನ್ನು ಪರಿಶೀಲಿಸಿತು.

ದುಬಾರೆಯ ಸಾಕಾನೆ ಶಿಬಿರದಲ್ಲಿ ಕುಶನೆಂಬ ಗಂಡಾನೆಯೂ ಸೇರಿ ಒಟ್ಟು 31 ಸಾಕಾನೆಗಳಿವೆ. ಪ್ರಶಾಂತ್, ಇಂದ್ರ, ವಿಕ್ರಮ್, ಕರ್ಣ, ಲವ-ಕುಶ, ರಾಮ-ಲಕ್ಷ್ಮಣ ಒಟ್ಟು ಸೇರಿ 29 ಗಂಡಾನೆಗಳಿದ್ದು ಆನೆ ಶಿಬಿರದಲ್ಲಿ ವಿಜಯ ಹಾಗೂ ಕಾವೇರಿ ಒಟ್ಟು ಎರಡೇ ಹೆಣ್ಣಾನೆ. ಶಿಬಿರದ ಅಷ್ಟೂ ಗಂಡಾನೆಗಳಿಗೆ ಮದವೇರಿದಾಗ ಶಾಂತಗೊಳಿಸಲು 2 ಹೆಣ್ಣಾನೆಗಳಿಂದ ಸಾಧ್ಯವೇ? ಈ ಹಿಂದೆ ಇದ್ದ ಕಪಿಲ ಎಂಬ ಹೆಣ್ಣಾನೆ ಶಿಬಿರದ ಹಲವು ಗಂಡಾನೆಗಳನ್ನೆಲ್ಲ ನಿಭಾಯಿಸುತ್ತಿದ್ದಳು. ಆ ಸಮಯದಲ್ಲಿ ಕಾಡಾನೆಗಳು ಕೂಡ ಕಪಿಲಳನ್ನು ಹುಡುಕಿ ಶಿಬಿರಕ್ಕೆ ಬರುತ್ತಿದ್ದವು. ನಂತರದಲ್ಲಿ ಕಪಿಲಳನ್ನು ಸರಕಾರದ ಆದೇಶದಂತೆ ಬೇರೆ ರಾಜ್ಯಕ್ಕೆ ನೀಡಲಾಯಿತು. ಹೆಣ್ಣಾನೆಗಳ ಕೊರತೆ ಶಿಬಿರದಲ್ಲಿ ಕಾಡತೊಡಗಿತು.

ಕಾಡಾನೆಗಳ ಧಾಳಿಯಿಂದ ನಿತ್ಯವೂ ರೈತರು ಹಾಗೂ ಬೆಳೆಗಾರರು ಬವಣೆಪಡುತ್ತಿದ್ದಾರೆ. ಕುಶನನ್ನು ಶಿಬಿರದಿಂದ ಮುಕ್ತಿಗೊಳಿಸುವ ಕ್ರಮದ ಬಗ್ಗೆ ಈ ಮಂದಿ ಅಸಮಾಧಾನ ಗೊಂಡಿದ್ದಾರೆ. ಈ ಹಿಂದೆ ತೀವ್ರವಾಗಿ ತೊಂದರೆ ನೀಡಿರುವ ಹಾಗೂ ಕಾರ್ಮಿಕರನ್ನು, ಬೆಳೆಗಾರರನ್ನು ಕೊಂದು ಹಾಕಿರುವ ಕಾಡಾನೆಗಳನ್ನು ಹಿಡಿಯಲು ರೈತ ಸಂಘ ಹಾಗೂ ಹಲವು ಸಂಘಟನೆಗಳು ಸ್ಥಳದಲ್ಲೇ ಪಟ್ಟುಹಿಡಿದ ಫಲವಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಬಂಧಿಸಲಾಗಿತ್ತು. ಅವೆಲ್ಲವನ್ನು ಮತ್ತೆ ಕಾಡಿಗೆ ಬಿಟ್ಟರೆ ಪುನಃ ಹೊಲ ಗದ್ದೆಗಳ ಮೇಲೆ ಧಾಳಿ ನಡೆಸಿದರೆ ಅರಣ್ಯ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳುತ್ತದೋ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸುತ್ತಾರೆ .

ಇನ್ನೊಂದೆಡೆ ದುಬಾರೆ ಸಾಕಾನೆ ಶಿಬಿರದಲ್ಲಿ ಹೆಣ್ಣಾನೆಗಳಿಲ್ಲದೆ ಮೂಕವೇದನೆ ಅನುಭವಿಸುತ್ತಿರುವ ಗಂಡಾನೆಗಳಿಗೆ ಈ ಶಿಬಿರಕ್ಕೆ ಬೇಕಾದ ಹೆಣ್ಣಾನೆಯನ್ನು ಹಿಡಿದುತರುವುದೋ ಇಲ್ಲವೇ ಬೇರೆ ಸಾಕಾನೆ ಶಿಬಿರದಿಂದ ಹೆಣ್ಣಾನೆ ತರಿಸಿಕೊಂಡಾಗ ಮಾತ್ರ ಗಂಡಾನೆಗಳು ಮದವೇರಿದ ಸಮಯದಲ್ಲಿ ಕಾಡಿನೊಳಗಿನ ಹೆಣ್ಣಾನೆ ಗಳನ್ನು ಹುಡುಕಿ ನಡೆಯುವುದು ತಪ್ಪುವುದು. ಇದಕ್ಕೆ ಇಲಾಖಾ ಮಟ್ಟದಲ್ಲಿ ಶಾಶ್ವತ ಪರಿಹಾರಕ್ಕೆ ಚಿಂತಿಸಬೇಕಿದೆ ಎನ್ನುವ ಒತ್ತಾಯವೂ ಕೇಳಿಬಂದಿದೆ.

Related posts

Latest posts

ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ...

ಬ್ಲಾಕ್ ಫಂಗಸ್: ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ, ಉಚಿತ ಚಿಕಿತ್ಸೆ ಕೊಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಂದಾಗಿ ಸಾವು...

ನಾರದಾ ಲಂಚ ಪ್ರಕರಣ- ಟಿಎಂಸಿ ಶಾಸಕ, ಸಚಿವರ ಬಂಧನ ವಿರೋಧಿಸಿ ಸಿಬಿಐ ಕಚೇರಿ ಮುಂದೆ ಟಿಎಂಸಿ ಬೆಂಬಲಿಗರಿಂದ ಪ್ರತಿಭಟನೆ

ನಾರದಾ ಲಂಚಪ್ರಕರಣದ ಆರೋಪದಡಿ ತೃಣಮೂಲ ಕಾಂಗ್ರೆಸ್ ಶಾಸಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಮಾಜಿ ಸಚಿವ, ಕೋಲ್ಕತಾ ಮೇಯರ್ ಶೋವನ್ ಚಟರ್ಜಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವು...