ದೀದಿ ಗೆಲುವಿನ ಪ್ರಮುಖ ರೂವಾರಿ ಪ್ರಶಾಂತ್ ಕಿಶೋರ್ ಹಠಾತ್ ನಿವೃತ್ತಿಗೆ ಕಾರಣಗಳೇನು?

ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ಟಿಎಂಸಿ ಮತ್ತು ಡಿಎಂಕೆಗಳ ಗೆಲುವಿಗೆ ತೆರೆಯ ಹಿಂದಿದ್ದು ಕೆಲಸ ಮಾಡಿದ I-PAC ಸಂಸ್ಥೆಯ ಮಹಾನ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ತಾನು ಇನ್ನುಮುಂದೆ ಈ ಚುನಾವಣಾ ತಂತ್ರಗಾರಿಕೆಯ ಕೆಲಸದಿಂದ ಮುಕ್ತನಾಗಿ ಜೀವನದಲ್ಲಿ ಬೇರೇನನ್ನಾದರೂ ಹುಡುಕುವೆ ಎಂದಿದ್ದಾರೆ. ಇದು ಅನೇಕರ ಹುಬ್ಬೇರಿಸಿದೆ ಕೂಡಾ. ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ  ಎರಡಂಕಿ ದಾಟಲು ಸಾಧ್ಯವಿಲ್ಲ ಹಾಗೇನಾದರೂ ದಾಟಿದರೆ ತಾನು ಈಗ ಮಾಡಿತ್ತಿರುವ ಕೆಲಸವನ್ನೇ ಬಿಡುತ್ತೇನೆ ಎಂದು ಘೋಷಿಸಿದ್ದರು. ಈಗ ಅವರ ಭವಿಷ್ಯ ಸುಳ್ಳಾಗಿಲ್ಲ. ಬಿಜೆಪಿ ಸೋತಿದೆ, ಟಿಎಂಸಿ ಗೆದ್ದಿದೆ. ಆದರೂ ಮನುಷ್ಯ ಸಧ್ಯ ಇದರಿಂದ ಕೈತೊಳೆದುಕೊಳ್ಳುತ್ತೇನೆ, ಹೇಗೂ ಇದನ್ನು ಸಮರ್ಥವಾಗಿ ಮುನ್ನಡೆಸಲು ಐ-ಪ್ಯಾಕ್ ನಲ್ಲಿ ಹಲವರಿದ್ದಾರೆ ಎಂದು ಹೇಳಿದ್ದಾರೆ.

ನೆನ್ನೆ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದು ಮಮತಾ ದೀದಿ ಗೆಲುವಿನ ನಗೆ ಬೀರುತ್ತಿದ್ದ ಸಮಯದಲ್ಲಿ ಪ್ರಶಾಂತ್ ಕಿಶೋರ್ ಎನ್ ಡಿ ಟಿವಿ ಗೆ ನೀಡಿದ ಸಂದರ್ಶನದಲ್ಲಿ ಬಹಳ ಗಹನವಾದ ವಿಚಾರಗಳನ್ನು ಹಂಚಿಕೊಂಡರು.

ಮುಖ್ಯವಾಗಿ ಪ.ಬಂಗಾಳದ ಚುನಾವಣೆಯಲ್ಲಿ ಚುನಾವಣಾ ಆಯೋಗ ನಡೆದುಕೊಂಡ ರೀತಿಯನ್ನು ವಿವರಿಸಿದ ಪ್ರಶಾಂತ್ ಕಿಶೋರ್, ‘ಅದು ನಮಗೆ (ಟಿಎಂಸಿಗೆ) ಅಕ್ಷರಶಃ ನರಕವನ್ನು ಸೃಷ್ಟಿಸಿತು. ಹೆಚ್ಚೆಂದರೆ ನಾಲ್ಕೈದು ಸುತ್ತಿನಲ್ಲಿ ಮುಗಿಯುತ್ತಿದ್ದ ಚುನಾಣೆಯನ್ನೆ ಬೇಕೆಂದೇ ಎರಡು ತಿಂಗಳು ಲಂಬಿಸಿದ್ದು, ಬಿಜೆಪಿಗೆ ಯಾವ ರೀತಿ ಅನುಕೂಲವಾಗುತ್ತದೆಯೋ ಅದೇ ರೀತಿಯಲ್ಲಿ ಚುನಾವಣಾ ದಿನಾಂಕಗಳನ್ನು ನಿಗದಿ ಮಾಡಿದ್ದು ಎಲ್ಲವೂ ಬಿಜೆಪಿಯನ್ನು ಗೆಲ್ಲಿಸಲೇಬೇಕು ಎಂದು ಚುನಾವಣಾ ಆಯೋಗ ಪಣ ತೊಟ್ಟಂತಿತ್ತು. ಅದರ ನಡವಳಿಕೆ ನೋಡಿ ಇದು ಚುನಾವಣಾ ಆಯೋಗವೋ ಅಥವಾ ಬಿಜೆಪಿ ಪಕ್ಷದ ವಿಸ್ತೃತ ಅಂಗಸಂಸ್ಥೆಯೋ ಎನಿಸುವಷ್ಟರ ಮಟ್ಟಿಗೆ ಅದು ನಡೆದುಕೊಂಡಿದೆ. ಮೋದಿ ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ಲೆಕ್ಕವಿಲ್ಲದಷ್ಟು ಸಲ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆದರೆ ಒಂದೇ ಒಂದು ಪ್ರಕರಣದಲ್ಲೂ ಕ್ರಮ ಕೈಗೊಳ್ಳಲಿಲ್ಲ. ಒಂದು ಚುನಾವಣಾ ಆಯೋಗ ಈ ಮಟ್ಟಕ್ಕೆ ಕುಸಿದಿರುವುದು ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಬಹಳ ಅಪಾಯಕಾರಿಯಾಗಿದೆ’ ಎಂದರು.

ಪ್ರಶಾಂತ್ ಪ್ರತಿಸ್ಪಂದನೆ ನೀಡಿದ ಎರಡನೇ ಅಂಶ, ಮತದಾರರ ಧ್ರುವೀಕರಣ. ಹಿಂದೆಂದೂ ಇಲ್ಲದ ರೀತಿಯಲ್ಲಿ ಈ ಸಲ ಬಿಜೆಪಿ ಪ.ಬಂಗಾಳದ ಮತದಾರರನ್ನು ಧರ್ಮದ ಆಧಾರದಲ್ಲಿ ಇಬ್ಬಾಗ ಮಾಡಲು ಯತ್ನಿಸಿತು. ಈ ಬಾರಿ ಅವರು ಬಳಸಿದಷ್ಟು ಜೈ ಶ್ರೀರಾಮ್, ಓಂ ಇತ್ಯಾದಿ ಧಾರ್ಮಿಕ ಸಂಕೇತಗಳನ್ನು ಪ್ರಾಯಶಃ ಹಿಂದೆ ಬಳಸಿರಲಿಕ್ಕಿಲ್ಲ. ಆದರೆ ನಾವು  ಅರ್ಥ ಮಾಡಿಕೊಳ್ಳಬೇಕಾದ ಒಂದು ಸಂಗತಿ ಏನೆಂದರೆ ಹೀಗೆ ಧರ್ಮದ ಆಧಾರದಲ್ಲಿ ನಡೆಸುವ ಧ್ರುವೀಕರಣಕ್ಕೆ ಒಂದು ಮಿತಿ ಇರುತ್ತದೆ. ಇದನ್ನು ಗ್ರಹಿಸದೇ ಎಲ್ಲರೂ ಮಾಡುವ ತಪ್ಪೇನೆಂದರೆ ಬಿಜೆಪಿ ಧರ್ಮದ ಹೆಸರಲ್ಲಿ ಇಬ್ಬಾಗ ಮಾಡಿತು ಎಂದಾಕ್ಷಣ ಹೋರಾಟದಿಂದಲೇ ಹಿಂದೆ ಸರಿದು ಬಿಜೆಪಿ ಅನಾಯಾಸವಾಗಿ ಗೆಲ್ಲುವಂತೆ ಮಾಡುತ್ತಾರೆ. ವಾಸ್ತವವಾಗಿ ಅಂತಹ ಸಂದರ್ಭದಲ್ಲಿ ಧ್ರುವೀಕರಣ ತಂತ್ರದಿಂದಾಗಿ  ಬಿಜೆಪಿ ಗೆದ್ದಿರುವುದಿಲ್ಲ. ಬದಲಿಗೆ ಕಣದಲ್ಲಿ ಹೋರಾಟವನ್ನು ಬಿಟ್ಟು ಹಿಂದೆ ಸರಿದ ಕಾರಣಕ್ಕಾಗಿ ಅದು ಗೆಲ್ಲಿತ್ತದೆ.‌ ನಾವು ಇಂತಹ ತಪ್ಪಾಗಲು ಅವಕಾಶ ಕೊಡಲಿಲ್ಲ ಎಂದ ಪ್ರಶಾಂತ್ ಕಿಶೋರ್ ಮಾತುಗಳು ಚಿಂತನಾಯೋಗ್ಯವಾಗಿವೆ.‌

ಚುನಾವಣೆಗೆ ಸಜ್ಜಾಗುವ ಮೊದಲು ನಾವು ನಮ್ಮ ಮತ್ತು ಎದುರಾಳಿಗಳಲ್ಲಿ ಇರುವ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮೊದಲು ಸರಿಯಾಗಿ ಗುರುತಿಸಿಕೊಳ್ಳಬೇಕು (cognizant). ಇದು ಬಹಳ ಮುಖ್ಯ. ಕಳೆದ ಲೋಕಸಭಾ ಚುನಾವಣಾ ನಂತರದಲ್ಲಿ ನಾವು ಮಾಡಿದ ಮೊದಲ ಕೆಲಸ ಇದು. ಕೆಲವು ಸಂಗತಿಗಳನ್ನು ಗುರುತಿಸಿಕೊಂಡ ಬಳಿಕ ಅದಕ್ಕೆ ಸೂಕ್ತವಾದ ಬದಲಾವಣೆಗಳನ್ನು ಪಕ್ಷದ ಒಳಗೆ ಸಂಘಟನಾ ಮಟ್ಟದಲ್ಲಿ ತಂದೆವು. ಇದರ ಪರಿಣಾಮವಾಗಿ ಕೆಲವರಿಗೆ ಪಕ್ಷ ತೊರೆಯುವುದು ಅನಿವಾರ್ಯವಾಗಿ ಕೊನೆಗೆ ಅವರು ಹೋಗಿ  ಬಿಜೆಪಿ‌ ಸೇರಿಕೊಂಡರು. ಅವರು ನಾವು ಪಕ್ಷದೊಳಗೆ ತಂದ ಬದಲಾವಣೆಗೆ ಹೊಂದಿಕೊಂಡು ಬದಲಾಗುವ ಮನಸ್ಥಿತಿ ಹೊಂದಿರಲಿಲ್ಲ. ಮಾತ್ರವಲ್ಲದೇ ತಮ್ಮಿಂದಲೇ ಪಕ್ಷ ಎಂಬ ಭಾವನೆಯುಳ್ಳವರಾಗಿದ್ದರು. ಈಗ ನೋಡಿ ಬಹುತೇಕ ಅವರೆಲ್ಲರೂ ಸೋತಿದ್ದಾರೆ.‌

ನಿಮ್ಮ ಸಹಾಯವನ್ನು ಕಾಂಗ್ರೆಸ್ ಬಯಸಿದರೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರಶಾಂತ್ ಕಿಶೋರ್, “ಈ ಪ್ರಶ್ನೆ ಉದ್ಭವಿಸುವುದಿಲ್ಲ. ಕಾಂಗ್ರೆಸ್ 100 ವರ್ಷ ಇತಿಹಾಸವಿರುವ ದೊಡ್ಡ ಪಕ್ಷ, ಅದಕ್ಕೆ ಅದರದ್ದೇ ರೀತ ರಿವಾಜು ಇರತ್ತೆ. ನಾನು ಬಹಳ ಸಣ್ಣ ವ್ಯಕ್ತಿ’ ಎಂದರು.‌ ಮತ್ತೆ ಮುಂದುವರಿದು, “ಕಾಂಗ್ರೆಸ್ ನಲ್ಲಿ ತಮ್ಮ  ಸಮಸ್ಯೆ, ದೌರ್ಬಲ್ಯಗಳನ್ನು ಗುರುತಿಸಿ ಒಪ್ಪಿಕೊಳ್ಳುವ ಮನಸ್ಥಿತಿಯೇ ಇಲ್ಲ, ಇನ್ನೇನು ನಿರೀಕ್ಷಿಸಬಹುದು ಹೇಳಿ” ಎಂದ ಅವರ ಅಭಿಪ್ರಾಯ ನೂರಕ್ಕೆ ನೂರ ಸರಿಯೆನಿಸುತ್ತದೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ತೋರಿದ ಅತ್ಯಂತ ಪೇಲವ ಪ್ರದರ್ಶನವೂ ಪ್ರಶಾಂತ್ ಕಿಶೋರ್ ಅವರ ಮಾತುಗಳಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಒಳಗೂ ನಿಜ ಬದಲಾವಣೆ ತರಬಯಸುವ ಕೆಲವು ಮುಖಂಡರು ಅಲ್ಲಲ್ಲಿ ಇದ್ದಾರಾದರೂ ಅವರ ಮಾತಿಗೆ ಅಲ್ಲಿ ಎಷ್ಟು ಬೆಲೆಯಿದೆ ಎಂಬುದು ಪ್ರಶ್ನೆ. ಉದಾಹರಣೆಗೆ ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿಯಂತಹ ಮುತ್ಸದ್ಧಿ ನಾಯಕರು ಸಾಕಷ್ಟು ಭವಿಷ್ಯದಲ್ಲಿ ಯೋಚನೆ ಮಾಡುತ್ತಾರಾದರೂ ಅವರಿಗೆ ದಿಲ್ಲಿ ಹೈಕಮಾಂಡ್ ಮತ್ತು ಲೋಕಲ್ ಕಮಾಂಡುಗಳು ಎಷ್ಟರ ಮಟ್ಟಿಗೆ ಸಹಾಯಕವಾಗಿದ್ದಾರೆ ಎಂಬ ಪ್ರಶ್ನೆಯಿದೆ.‌

ಇನ್ನು ಪ್ರಶಾಂತ್ ಕಿಶೋರ್ ಎಂಬ ಈ ಮಾಂತ್ರಿಕ ಬಹಳ ಸರಳ ಮಾತಿನ ಮಹಾನ್ ತಂತ್ರಗಾರನಾದರೂ ಅಷ್ಟೇ ಹ್ಯುಮಿಲಿಟಿ ಇರುವ ಮನುಷ್ಯ ಎಂಬುದು ಆತನ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ತಾನು ಸ್ವತಃ ರಾಜಕಾರಣಿಯಾಗ ಬಯಸಿ ಜೆಡಿಯು ಸೇರಿ ಇತ್ತೀಚೆಗೆ ಉಚ್ಛಾಟನೆಯಾಗಿರುವ ಈತ ನಾನು ಒಬ್ಬ ರಾಜಕಾರಣಿಯಾಗಿ ವಿಫಲ ವ್ಯಕ್ತಿ (failed person) ಎನ್ನುತ್ತಾರೆ. ಬಹುಶಃ ನಾನು ಪ್ರತಿಯೊಂದನ್ನೂ ಆರಂಭದಿಂದ ಕಲಿಯಬೇಕೇನೋ ಅಥವಾ ಅದು ನನಗೆ ಆಗಿಬರುವುದಿಲ್ಲವೇನೋ ಅನ್ನುವಲ್ಲಿ ಆತನ ವಿನಮ್ರತೆಯಿದೆ.

ರಾಜಕೀಯ-ಚುನಾವಣಾ ತಂತ್ರಗಾರಿಕೆಯಲ್ಲಿ 2012 ರಲ್ಲಿ ಗುಜರಾತ್ ಚುನಾವಣೆಯಲ್ಲಿ ಮತ್ತು 2014 ರ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಸಾಥ್ ನೀಡಿದ್ದ ಪ್ರಶಾಂತ್ ಕಿಶೋರ್ ಈಗ ಪಶ್ಚಾತ್ತಾಪ ಪಡುತ್ತಿರುವಂತೆ ಕಾಣುತ್ತದೆ. ತದನಂತರದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಆಂಧ್ರದಲ್ಲಿ ಜಗನ್ಮೋಹನ್ ರೆಡ್ಡಿ ಹೀಗೆ ಹಲವರ ಗೆಲುವಿನಲ್ಲಿ ಈ ಮಹಾನ್ ಚತುರನ ನೈಪುಣ್ಯತೆಗಳ ಪಾತ್ರವಿದೆ.

ದೇಶದ ಹಿತದೃಷ್ಟಿಯಿಂದ ಬಹಳ ಪ್ರಮುಖ ಪಾತ್ರ ವಹಿಸಲಿರುವ 2023 ರ ಚುನಾವಣೆಗೆ ಮೊದಲೇ ಹೀಗೆ “ಕೈ ತೊಳೆದುಕೊಳ್ಳುವುದು” ಬಹಳ ಜನರಿಗೆ ನಿರಾಸೆ ತರಿಸಬಹುದು. ಆದರೆ “ನಾನು ನನ್ನ ಹೆಂಡತಿ ಮಕ್ಕಳನ್ನು ಸರಿಯಾಗಿ ನೋಡಿ ಮಾತಾಡದೇ ಹಲವಾರು ತಿಂಗಳುಗಳೇ” ಆದವು ಎನ್ನುವಾಗ ಅವನ ತುಮುಲ ತುಡಿತಗಳನ್ನು ಇನ್ನೇನಿರಬಹುದೋ ಎನಿಸುತ್ತದೆ.

ಎನಿವೇ

ಹ್ಯಾವ್ ಎ ಗುಡ್ ಟೈಮ್ ಅಹೆಡ್ ಪ್ರಶಾಂತ್ ಕಿಶೋರ್ ಜಿ

Related posts

Latest posts

ಇಸ್ರೇಲ್‌ vs ಫೆಲಸ್ತೀನ್: ಯಥಾಸ್ಥಿತಿ ಕಾಪಾಡುವಂತೆ ಭಾರತ ಆಗ್ರಹ

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ಕುರಿತಂತೆ ಭಾರತ ತನ್ನ ಹೇಳಿಕೆಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ದಾಖಲಿಸಿದೆ. ಎರಡೂ ದೇಶಗಳು ಯತಾಸ್ಥಿತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿರುವ ಭಾರತ, ಪರಸ್ಪರ ರಾಕೆಟ್‌ ದಾಳಿಯನ್ನು ಖಂಡಿಸಿದೆ. ಇಸ್ರೇಲ್‌ ಮತ್ತು ಫೆಲಸ್ತೀನ್‌...

ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ...

ಬ್ಲಾಕ್ ಫಂಗಸ್: ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ, ಉಚಿತ ಚಿಕಿತ್ಸೆ ಕೊಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಂದಾಗಿ ಸಾವು...