2024 ರ ವಕ್ಫ್ ಮಸೂದೆ ಅಪೇಕ್ಷಿತ ಬದಲಾವಣೆಗಳು
ಮಸೂದೆಯಲ್ಲಿರುವ ಸಕಾರಾತ್ಮಕ ಅಂಶಗಳನ್ನು ಜಿಪಿಸಿ ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ
ಫೈಜನ್ ಮುಸ್ತಫಾ
(ಮೂಲ : Building on favorable change in the 2024 waqf Bill-Faizan Mustafa ದ ಹಿಂದೂ 23 ಆಗಸ್ಟ್ 2024)
ಕನ್ನಡಕ್ಕೆ : ನಾ ದಿವಾಕರ
ವಕ್ಫ್ ಮಸೂದೆ 2024 ಅಥವಾ ವಕ್ಫ್ (ತಿದ್ದುಪಡಿ) ಮಸೂದೆಯನ್ನು , ನರೇಂದ್ರ ಮೋದಿ ಸರ್ಕಾರದ ಮಿತ್ರಪಕ್ಷಗಳು ಈ ಮಸೂದೆಯನ್ನು ತಕ್ಷಣವೇ ಅಂಗೀಕರಿಸಲು ಉತ್ಸುಕವಾಗಿಲ್ಲದ ಕಾರಣ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ವಹಿಸಲಾಗಿದೆ.. ವಿರೋಧ ಪಕ್ಷಗಳೂ ಸಹ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.
ಬಳಕೆದಾರರು ವಕ್ಫ್ ಆಸ್ತಿಯನ್ನು ಬಳಸುವುದನ್ನು ರದ್ದುಪಡಿಸುವುದರಿಂದ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಹೆಚ್ಚುವರಿ ಅಧಿಕಾರಗಳನ್ನು ನೀಡುವುದರಿಂದ ವಕ್ಫ್ ಆಸ್ತಿಗಳಿಗೆ ರಕ್ಷಣೆ ಕಡಿಮೆಯಾಗುತ್ತದೆ ಎಂಬ ವಿರೋಧ ಪಕ್ಷಗಳ ಆತಂಕಗಳು ನೈಜವಾಗಿಯೇ ಕಾಣುತ್ತವೆ. ವಕ್ಫ್ ಆಸ್ತಿಗಳ ಅಕ್ರಮ ಅತಿಕ್ರಮಣದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಮಸೂದೆಯಲ್ಲಿ ಯಾವುದೇ ರೀತಿಯ ನಿಯಮಗಳು ಇಲ್ಲದಿದ್ದರೂ ವಕ್ಫ್ಗಳ ಡಿಜಿಟಲೀಕರಣ ಮತ್ತು ವಕ್ಫ್ ಮಂಡಳಿಗಳಲ್ಲಿ ಮಹಿಳೆಯರು ಮತ್ತು ಮುಸ್ಲಿಮೇತರರನ್ನು ಸೇರಿಸುವಂತಹ ಕೆಲವು ಸಕಾರಾತ್ಮಕ ಲಕ್ಷಣಗಳು ಕಂಡುಬರುತ್ತವೆ. ಹಾಗೆಯೇ ವಿವಾದಾತ್ಮಕ ಕುಟುಂಬ ವಕ್ಫ್ ಕುರಿತಂತೆ ಪ್ರಸ್ತಾವಿತ ಸುಧಾರಣೆಗಳನ್ನು ಸ್ವಾಗತಿಸಬೇಕಿದೆ . ಕುಟುಂಬ ವಕ್ಫ್ನ ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ವಿಶಿಷ್ಟ ರೀತಿಯ ವಕ್ಫ್‌ಗೆ ವಸಾಹತುಶಾಹಿ ನ್ಯಾಯವ್ಯವಸ್ಥೆಯು ಹೇಗೆ ಪ್ರತಿಕ್ರಿಯಿಸಿದೆ ಎಂಬುದನ್ನೂ, ಮುಸ್ಲಿಂ ಜಗತ್ತಿನಲ್ಲಿ ಆಗಿರುವ ಬದಲಾವಣೆಗಳನ್ನೂ ಅರ್ಥಮಾಡಿಕೊಳ್ಳಬೇಕಿದೆ.
ಕುಟುಂಬ ವಕ್ಫ್‌ನ ತಾರ್ಕಿಕತೆ
ಪವಿತ್ರ ಕುರಾನ್, ವಕ್ಫ್ ಎಂಬ ಪದವನ್ನು ನಿರ್ದಿಷ್ಟವಾಗಿ ಬಳಸದಿದ್ದರೂ, ಅದರಲ್ಲಿ ದಾನ ಮಾಡಲು ಜನರನ್ನು ಪ್ರೋತ್ಸಾಹಿಸುವ ಸುಮಾರು 20 ಶ್ಲೋಕಗಳಿವೆ. ವಕ್ಫ್ ನಿಯಮಗಳು ದಾನ ಮಾಡುವುದಕ್ಕೆ ಇಸ್ಲಾಂನ ಅನನ್ಯ ಕೊಡುಗೆಯಾಗಿದ್ದು ಬಡವರು ಮತ್ತು ದೀನದಲಿತರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಒಂದು ಆಸ್ತಿಯು ವಕ್ಫ್ ಆದ ನಂತರ, ಅದರ ಮೂಲ ಸಂಚಯವನ್ನು (Corpus) ಪರಭಾರೆ ಮಾಡಲು, ಉಡುಗೊರೆಯಾಗಿ ನೀಡಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಆದರೆ ಅದರ ಫಲಾನುಭವದ (Usufruct) ಹಕ್ಕನ್ನು ಮಾತ್ರ ಬಳಸಬಹುದು. ಇಸ್ಲಾಂನಲ್ಲಿ ವಿವಿಧ ರೂಪದ ದಾನಗಳಿವೆ , ಅವುಗಳಲ್ಲಿ ಸದಾಖಾ (ಸ್ವಯಂಪ್ರೇರಿತವಾಗಿ ನಗದು ನೀಡುವುದು). ಝಕಾತ್ (ಕಡ್ಡಾಯ 2.5%) ಮತ್ತು ವಕ್ಫ್ (ಸ್ಥಿರ ಆಸ್ತಿಗಳಿಗೆ ಸೀಮಿತವಾಗದಿದ್ದರೂ ಸ್ವಯಂಪ್ರೇರಿತ ಮತ್ತು ಸಾಮಾನ್ಯ ದಾನ ) ಮುಖ್ಯವಾದವು. ವಕ್ಫ್‌ಗಳಲ್ಲಿ ಮೂರು ವಿಧಗಳನ್ನು ಗುರುತಿಸಬಹುದು. ವಕ್ಫ್ ಖಾರಿ (ಸಾರ್ವಜನಿಕ ವಕ್ಫ್) ಎಂಬುದು ಸಂಪೂರ್ಣವಾಗಿ ಮಾನವ ಕಲ್ಯಾಣಕ್ಕೆ ಸಮರ್ಪಿತವಾಗಿರುತ್ತದೆ. ಎರಡನೆಯದು ವಕ್ಫ್ ಅಲ್-ಅಹ್ಲಿ ಅಥವಾ ವಕ್ಫ್ ಅಲ್-ಔಲಾದ್ (ಕುಟುಂಬ ವಕ್ಫ್) ತನ್ನ ಕುಟುಂಬದ ಅನುಕೂಲಕ್ಕಾಗಿ ವಿನಿಯೋಗಿಸಲ್ಪಡುವುದು. ಮೂರನೆಯದು ಅಲ್-ವಕ್ಫ್ ಅಲ್-ಮುಷ್ತಾರಕ್ (ಸಾರ್ವಜನಿಕ ಮತ್ತು ಕುಟುಂಬ ವಕ್ಫ್) ಕುಟುಂಬ ಮತ್ತು ವಿಶಾಲ ಸಮಾಜದ ಸಂಯೋಜಿತ ಪ್ರಯೋಜನಕ್ಕಾಗಿ ಬಳಸುವುದು.
ಕುಟುಂಬ ವಕ್ಫ್ ಪರಿಕಲ್ಪನೆಯು ‘ದಾನವು ಮನೆಯೊಳಗಿನಿಂದಲೇ ಪ್ರಾರಂಭವಾಗುತ್ತದೆ’ ಎಂಬ ಇಂಗ್ಲಿಷ್ ನುಡಿಗಟ್ಟನ್ನು ಆಧರಿಸಿದೆ. ಆದರೆ ಕುಟುಂಬ ಸದಸ್ಯರಿಗೆ ದಾನದಲ್ಲಿ ಆದ್ಯತೆ ನೀಡಬೇಕಾಗಿರುವುದರಿಂದ ದೇವತಾಶಾಸ್ತ್ರದ ಅನುಮೋದನೆಯನ್ನು ಹೊಂದಿರುತ್ತದೆ. ಹೆತ್ತವರು ಮತ್ತು ಸಂಬಂಧಿಕರಿಗಾಗಿ ಹಣವನ್ನು ಖರ್ಚು ಮಾಡುವುದನ್ನು ಕುರಾನ್ ಸ್ಪಷ್ಟವಾಗಿ ಪ್ರೋತ್ಸಾಹಿಸುತ್ತದೆ (2:215). ಪ್ರವಾದಿಯವರು “ ನೀವು ಅಲ್ಲಾಹನ ಮಾರ್ಗದಲ್ಲಿ ಕಳೆಯುವ ದಿನಾರ್; ಒಬ್ಬ ಬಡವನಿಗಾಗಿ ನೀವು ಖರ್ಚು ಮಾಡುವ ದಿನಾರ್; ನಿಮ್ಮ ಕುಟುಂಬಕ್ಕಾಗಿ ನೀವು ಖರ್ಚು ಮಾಡುವ ದಿನಾರ್; ಪ್ರತಿಫಲದ ರೂಪದಲ್ಲಿ, ನೀವು ನಿಮ್ಮ ಕುಟುಂಬಕ್ಕಾಗಿ ಖರ್ಚು ಮಾಡಿದ ಮೊತ್ತವೇ ದೊಡ್ಡದು ” ಎಂದು ಹೇಳುತ್ತಾರೆ.
ಪ್ರವಾದಿಯವರ ಒಪ್ಪಿಗೆಯೊಂದಿಗೆ ಕುಟುಂಬ ವಕ್ಫ್ ಅನ್ನು ರಚಿಸಿದವರಲ್ಲಿ ಅಬು ತಲಾಹ್ ‘ಒಬಿದ್ ಅಲ್ಲಾಹ್ ಮೊದಲಿಗರು. “ನೀವು ಪ್ರೀತಿಸುವುದನ್ನು (ಮುಕ್ತವಾಗಿ) ನೀಡದ ಹೊರತು ನೀವು ಯಾವುದೇ ರೀತಿಯಲ್ಲಿ ಸದಾಚಾರನಿಷ್ಠತೆಯನ್ನು ಪಡೆಯುವುದಿಲ್ಲ” (3:92) ಎಂಬ ವಚನವನ್ನು ಆಲಿಸಿದ ನಂತರ ಪ್ರವಾದಿಯ ಸಮ್ಮತಿಯೊಂದಿಗೆ ಅವರು ತಮ್ಮ ʼಬಿರುಹಾʼ ತೋಟವನ್ನು ನೀಡಿದ್ದರು. ಪ್ರವಾದಿಯ ಪತ್ನಿಯರಾದ ಆಯಿಷಾ, ಹಫ್ಸಾ, ಉಮ್ ಸಲಾಮಾ, ಉಮ್ ಹಬೀಬಾ ತಮ್ಮ ಕುಟುಂಬ ಸದಸ್ಯರ ಅನುಕೂಲಕ್ಕಾಗಿ ವಕ್ಫ್ ರಚಿಸಿದರು ಮತ್ತು ಸಫಿಯಾ ಯಹೂದಿಯಾಗಿದ್ದ ತನ್ನ ಸಹೋದರನ ಅನುಕೂಲಕ್ಕಾಗಿ ಕುಟುಂಬ ವಕ್ಫ್ ಅನ್ನು ರಚಿಸಿದರು. ಹಾಗೆಯೇ ಆಸ್ತಿಗಳನ್ನು ಹೊಂದಿದ್ದ ಬಹುತೇಕ ಎಲ್ಲಾ ಸಹಚರರು ವಕ್ಫ್‌ಗಳನ್ನು ರಚಿಸಿದರು. ಮೊದಲ ಖಲೀಫಾ ಅಬೂಬಕರ್‌ನಂತಹ ಕೆಲವರು ತಮ್ಮ ಮನೆಯನ್ನು ತಮ್ಮ ಮಕ್ಕಳಿಗೆ ನೀಡಿದರು; ಎರಡನೆಯ ಖಲೀಫಾ ಒಮರ್ ಥಮ್ಫ್‌ನಲ್ಲಿನ ತನ್ನ ಭೂಮಿಯನ್ನು ಸ್ವಂತ ಮಕ್ಕಳಿಗೆ ದಾನ ಮಾಡಿದರು. ಸಅದ್ ಇಬ್ನ್ ಅಬು ವಖಾಸ್ ಕೂಡ ಈಜಿಪ್ಟ್ ಮತ್ತು ಮದೀನಾದಲ್ಲಿನ ತಮ್ಮ ಮನೆಗಳನ್ನು ಸಂಬಂಧಿಕರಿಗೆ ದಾನ ಮಾಡಿದರು.
ಆಸ್ತಿಯನ್ನು ಅದರಲ್ಲೂ ವಿಶೇಷವಾಗಿ ಕೃಷಿ ಆಸ್ತಿಯನ್ನು ವಿಘಟನೆಯಿಂದ ರಕ್ಷಿಸಲು ಧಾರ್ಮಿಕ ಕಾರಣಗಳ ಜೊತೆಗೆ ಕುಟುಂಬ ವಕ್ಫ್‌ಗಳನ್ನು ಬಳಸಲಾಗುತ್ತಿತ್ತು. ಇದರಿಂದ ಸ್ಥಿರ ಸ್ವತ್ತುಗಳ ಬೆಳವಣಿಗೆಗೆ ಕಾರಣವಾಗುವುದೇ ಅಲ್ಲದೆ ದುಷ್ಟ ಮಕ್ಕಳಿಂದ ಆಸ್ತಿಯನ್ನು ರಕ್ಷಿಸುತ್ತದೆ ಮತ್ತು ಅಂತಿಮವಾಗಿ ಸಾರ್ವಜನಿಕ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದು ಅಪೇಕ್ಷಿಸಲಾಗಿತ್ತು.
ಮುರಾತ್ ಸಿಜಾಕಾ, ಜೆಫ್ರಿ ಎ. ಶೋನ್ಲಮ್, ಗ್ರೆಗೊರಿ ಸಿ. ಕೊಜ್ಲೋವ್ಸ್‌ಕಿ, ಎಎಎ ಫಯೀ ಮತ್ತು ರೊನಾಲ್ಡ್ ಕೆ. ವಿಲ್ಸನ್ ಅವರಂತಹ ವಿದ್ವಾಂಸರು ಕುಟುಂಬ ವಕ್ಫ್‌ಗಳ ಬಗ್ಗೆ ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಮಹಿಳೆಯರ ಉತ್ತರಾಧಿಕಾರದ ಹಕ್ಕನ್ನು ನಿರಾಕರಿಸಲು ಮತ್ತು ಕುಟುಂಬವನ್ನು ವೈಭವೀಕರಿಸಲು ಕುಟುಂಬ ವಕ್ಫ್ ಅನ್ನು ಒಂದು ಸಂಸ್ಥೆಯಾಗಿ ಅಭಿವೃದ್ಧಿಪಡಿಸಲಾಗಿದೆ ಎಂಬುದು ಅವರ ವಾದವಾಗಿತ್ತು. ಈ ಪ್ರತಿಪಾದನೆಯಲ್ಲಿ ಸ್ವಲ್ಪ ಸತ್ಯವಿರಬಹುದು ಆದರೆ ಅನಾಥ ಮೊಮ್ಮಕ್ಕಳನ್ನು ಹೊರಗಿಡುವಂತಹ ಇಸ್ಲಾಮಿಕ್ ಆನುವಂಶಿಕ ಕಾನೂನಿನ ಇತರ ಸಮಸ್ಯೆಗಳನ್ನು ನಿವಾರಿಸಲು ವಕ್ಫ್ ಅನ್ನು ಚಾರಿತ್ರಿಕವಾಗಿ ಬಳಸಲಾಗಿದೆ ಎನ್ನುವುದನ್ನೂ ಗಮನಿಸಬೇಕಿದೆ. ಅನಾಥ ಮೊಮ್ಮಕ್ಕಳ ಪರವಾಗಿ ತನ್ನ ಆಸ್ತಿಯ ಮೂರನೇ ಒಂದು ಭಾಗವನ್ನು ವಕ್ಫ್ ಮಾಡಲು ಕುಟುಂಬ ವಕ್ಫ್ ಅಜ್ಜನಿಗೆ ಈ ಅವಕಾಶವನ್ನು ನೀಡಿತ್ತು. ಇದು ಸ್ಥಾಪಕ ಅಥವಾ ವಕೀಫ್‌ಗೆ ತನ್ನ ವಯಸ್ಸಾದ ಪೋಷಕರು ಮತ್ತು ಅಪ್ರಾಪ್ತ ಮತ್ತು ಅಂಗವಿಕಲ ಮಕ್ಕಳ ವಿಶೇಷ ಆರೈಕೆಯನ್ನು ಖಚಿತಪಡಿಸಲು ಸಹಾಯಕವಾಗಿತ್ತು. ಈ ಲೇಖಕನ ಕುಟುಂಬ ಸೇರಿದಂತೆ ಅನೇಕ ಸಂದರ್ಭಗಳಲ್ಲಿ, ಹೆಣ್ಣುಮಕ್ಕಳನ್ನು ಪ್ರಾಥಮಿಕ ಫಲಾನುಭವಿಗಳನ್ನಾಗಿ ಮಾಡಲಾಯಿತು. ಸಹಜವಾಗಿ, ಕೆಲವು ಸಂದರ್ಭಗಳಲ್ಲಿ, ಪುರುಷರನ್ನು ಫಲಾನುಭವಿಗಳನ್ನಾಗಿ ಮಾಡಲಾಯಿತು ಮತ್ತು ಹೆಣ್ಣುಮಕ್ಕಳು ವಾಸಿಸುವ ಮತ್ತು ಜೀವನಾಧಾರ ಭತ್ಯೆಯ ಹಕ್ಕನ್ನು ಹೊಂದಿದ್ದರು. ಅನೇಕ ಸಂದರ್ಭಗಳಲ್ಲಿ, ಮಹಿಳೆಯರನ್ನು ಹೊರಗಿಡಲಾಗಿದ್ದೂ ಸಹ ವಾಸ್ತವ.
ಜಾಗತಿಕ ಮಟ್ಟದಲ್ಲಿ ವಕ್ಫ್‌ಗಳು
ಆದರೆ ಸುನ್ನಿ ಪಂಥದ ಮಾಲಿಕಿ ಕಾನೂನಿನಡಿಯಲ್ಲಿ, ಅಂತಹ ದತ್ತಿಗಳು ಶೂನ್ಯ ಪ್ರಭಾವದ್ದು ಎಂದು ಪರಿಗಣಿಸಲ್ಪಟ್ಟು ಅನೂರ್ಜಿತವಾಗಿದ್ದವು. ಶಾಫಿ ಮತ್ತು ಮಾಲಿಕಿ ಶಾಲೆಗಳ ಅಡಿಯಲ್ಲಿ, ವಕ್ಫ್‌ನ ಸೃಷ್ಟಿಕರ್ತನು ತನಗೆ ಯಾವುದೇ ಪ್ರಯೋಜನವನ್ನು ಮುಂಚಿತವಾಗಿ ಖಾತರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಪ್ರತಿಫಲದ ಒಂದು ಭಾಗವನ್ನು ಸ್ವಂತಕ್ಕೆ ಕಾಯ್ದಿರಿಸುವ ನಿಬಂಧನೆಯಾಗಿ ಪರಿಗಣಿಸಿದ ಹನಫಿ ಮತ್ತು ಹನ್ಬಾಲಿ ಶಾಲೆಗಳು ಅವುಗಳನ್ನು ಮಾನ್ಯವೆಂದು ಪರಿಗಣಿಸಿದವು. ಇದು ವಕ್ಫ್‌ಗಳನ್ನು ರಚಿಸಲು ಜನರಿಗೆ ಪ್ರೋತ್ಸಾಹದಾಯಕವಾಗಬಹುದು.
ಅಬ್ದುಲ್ ಫತಾದಲ್ಲಿನ ಪ್ರಿವಿ ಕೌನ್ಸಿಲ್ (1894) ಕುಟುಂಬ ವಕ್ಫ್ ಅನ್ನು , ಸಾರ್ವಜನಿಕರಿಗೆ ಅದರಿಂದ ಉಪಯೋಗವಾಗುವ ಸಾಧ್ಯತೆಗಳು ಕಡಿಮೆ ಎಂಬ ಕಾರಣಕ್ಕಾಗಿ ಅಮಾನ್ಯಗೊಳಿಸಿತು, ಆದರೆ 1913 ರಲ್ಲಿ, ಬ್ರಿಟಿಷ್ ಸರ್ಕಾರವು ಈ ನಿರ್ಧಾರವನ್ನು ರದ್ದುಗೊಳಿಸಿತು. ಜೆ.ಎನ್. ಆಂಡರ್ಸನ್ ಮತ್ತು ಜೆ. ಹ್ಯಾಮಿಲ್ಟನ್ ಅವರಂತಹ ವಿದ್ವಾಂಸರು ಈ ತೀರ್ಪನ್ನು ಇಸ್ಲಾಮಿಕ್ ಕಾನೂನಿನ ಸಂಪೂರ್ಣ ತಪ್ಪಾದ ವ್ಯಾಖ್ಯಾನ ಎಂದು ಟೀಕಿಸಿದ್ದರು. ಮಾಲೀಕತ್ವದ ಮುಕ್ತ ವರ್ಗಾವಣೆಗೆ ಆದ್ಯತೆ ನೀಡಿದ ವಸಾಹತುಶಾಹಿಯ ಪ್ರಭಾವದಿಂದ, ಹಲವಾರು ಮುಸ್ಲಿಂ ದೇಶಗಳು ಕುಟುಂಬ ವಕ್ಫ್‌ಗಳನ್ನು ಸಹ ರದ್ದುಗೊಳಿಸಿದವು. ಈಜಿಪ್ಟ್, 1946 ರಲ್ಲಿ, ಮೊದಲು ಅದನ್ನು ಎರಡು ತಲೆಮಾರುಗಳಿಗೆ ಸೀಮಿತಗೊಳಿಸಿತು ಮತ್ತು ಅಂತಿಮವಾಗಿ 1951 ರಲ್ಲಿ ಅದನ್ನು ರದ್ದುಗೊಳಿಸಿತು. 1949ರಲ್ಲಿ ಸಿರಿಯಾ ಇದನ್ನು ರದ್ದುಗೊಳಿಸಿತು. ಕುವೈತ್ ಇದನ್ನು 1951 ರಲ್ಲಿ ಎರಡು ತಲೆಮಾರುಗಳಿಗೆ ಸೀಮಿತಗೊಳಿಸಿತು. ಇರಾಕ್ 1954 ರಲ್ಲಿ ಕುಟುಂಬ ವಕ್ಫ್ ಅನ್ನು ಮುಚ್ಚಲು ಅನುಮತಿ ನೀಡಿತು. ಟ್ಯುನೀಷಿಯಾ, ಲಿಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಮವಾಗಿ 1954, 1973 ಮತ್ತು 1980 ರಲ್ಲಿ ಕುಟುಂಬ ವಕ್ಫ್ ಅನ್ನು ರದ್ದುಗೊಳಿಸಿದವು. ಭಾರತ, ಬಾಂಗ್ಲಾದೇಶ, ಮಲೇಷ್ಯಾ, ಸಿಂಗಾಪುರ್ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ, ಕುಟುಂಬ ವಕ್ಫ್‌ಗಳಿಗೆ ಅನುಮತಿ ನೀಡಿದ್ದರೂ, ವಕ್ಫ್ ಆಸ್ತಿಗಳ ಸವಲತ್ತುಗಳನ್ನು ನೀಡಲಾಗಿಲ್ಲ.
ಹೀಗಾಗಿ, ಭಾರತದಲ್ಲಿ ಕುಟುಂಬ ವಕ್ಫ್‌ಗಳನ್ನು ದಾನಿಗಳೆಂದು ಪರಿಗಣಿಸದ ಕಾರಣ, ಅವುಗಳನ್ನು ವಕ್ಫ್ ಸಮೀಕ್ಷೆಗಳಲ್ಲಿ ಸೇರಿಸಲಾಗಿಲ್ಲ. ಕುಟುಂಬ ವಕ್ಫ್‌ಗಳ ಪರಿಣಾಮಕಾರಿ ಶಾಸನಬದ್ಧ ಮೇಲ್ವಿಚಾರಣೆ ಇಲ್ಲ. ಚಾರಿಟಬಲ್ ಟ್ರಸ್ಟ್‌ಗಳ ಹಾಗೆ, ಕುಟುಂಬ ವಕ್ಫ್‌ಗಳು ಬಂಡವಾಳ ಲಾಭ ತೆರಿಗೆ (Capital Gains Tax) , ಸ್ಟ್ಯಾಂಪ್ ಡ್ಯೂಟಿ ಮತ್ತು ಆನುವಂಶಿಕ ತೆರಿಗೆಯಿಂದ ವಿನಾಯಿತಿ ಅಥವಾ ತೆರಿಗೆ ವಿನಾಯಿತಿಗಳಿಗೆ ಅರ್ಹವಾಗಿರುವುದಿಲ್ಲ. ಆದಾಯ ತೆರಿಗೆ ಕಾಯ್ದೆ, 1961 ಧಾರ್ಮಿಕ ಮತ್ತು ದತ್ತಿ ವಕ್ಫ್‌ಗಳಿಗೆ ವಿನಾಯಿತಿ ನೀಡಿದ್ದರೂ, ಸೆಕ್ಷನ್ 13 ರ ಅಡಿಯಲ್ಲಿ, ಆದಾಯವನ್ನು ಕುಟುಂಬ ಮತ್ತು ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಬಳಸಬೇಕಾದ ಸಂದರ್ಭಗಳಲ್ಲಿಯೂ ಕುಟುಂಬ ವಕ್ಫ್ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹಾಗಾಗಿಯೇ ಆಸ್ತಿಯನ್ನು ವರ್ಗಾಯಿಸುವುದು ವಕ್ಫ್ ನ್ಯಾಯಶಾಸ್ತ್ರಕ್ಕೆ ಹೊರತಾಗಿದ್ದರೂ, ಆಸ್ತಿಯನ್ನು ಒಬ್ಬ ಫಲಾನುಭವಿಯಿಂದ ಇನ್ನೊಬ್ಬರಿಗೆ ವರ್ಗಾಯಿಸುವಾಗ ಎಸ್ಟೇಟ್ ಸುಂಕ ಅನ್ವಯಿಸುತ್ತದೆ. ಅನೇಕ ಕೃಷಿ ಕುಟುಂಬ ವಕ್ಫ್‌ಗಳನ್ನು ಭೂ ಸುಧಾರಣಾ ಕಾನೂನುಗಳ ಅಡಿಯಲ್ಲಿ ನಾಮಮಾತ್ರದ ಪಾವತಿ ಮಾಡುವ ಮೂಲಕ ಸರ್ಕಾರವು ಸ್ವಾಧೀನಪಡಿಸಿಕೊಂಡಿತು. ವಕ್ಫ್ ಕಾಯ್ದೆ 1995 ರ ಸೆಕ್ಷನ್ 2 (1) (ಆರ್) ಕುಟುಂಬ ವಕ್ಫ್‌ಗಳನ್ನು ವಕ್ಫ್ ವ್ಯಾಖ್ಯಾನದೊಳಗೆ ಸೇರಿಸುತ್ತದೆ. ಉತ್ತರಾಧಿಕಾರದ ಸೀಮಾರೇಖೆಯು ವಿಫಲವಾದಾಗ, ಅಂತಹ ವಕ್ಫ್‌ನ ಆದಾಯವನ್ನು ಶಿಕ್ಷಣ, ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಖರ್ಚು ಮಾಡಬೇಕು ಎಂದು ಅದು ನಿರ್ದೇಶಿಸುತ್ತದೆ.
ಹೊಸ ನಿಯಮಗಳ ಪರಿಣಾಮ
2024 ರ ಮಸೂದೆಯಲ್ಲಿ ಹೊಸದಾಗಿ ಪ್ರಸ್ತಾಪಿಸಲಾದ ಸೆಕ್ಷನ್ 3 ಎ (2) ಸುಧಾರಣೆಯನ್ನು ಸೂಚಿಸುತ್ತದೆ. ಇದರನ್ವಯ ಕುಟುಂಬ ವಕ್ಫ್ ಮಹಿಳಾ ವಾರಸುದಾರರು ಸೇರಿದಂತೆ ವಾರಸುದಾರರ ಆನುವಂಶಿಕ ಹಕ್ಕುಗಳನ್ನು ನಿರಾಕರಿಸಲು ಕಾರಣವಾಗುವುದಿಲ್ಲ. ಸ್ವಾಗತಾರ್ಹವಾದ ಈ ಸುಧಾರಣೆಯ ಪರಿಣಾಮವೆಂದರೆ ಒಬ್ಬ ಮುಸ್ಲಿಮ್ ಈಗ ತನ್ನ ಎಲ್ಲಾ ವಾರಸುದಾರರನ್ನು ಹೊರಗಿಟ್ಟರೆ ತನ್ನ ಆಸ್ತಿಯ ಮೂರನೇ ಒಂದು ಭಾಗಕ್ಕೆ ಸಂಬಂಧಿಸಿದಂತೆ ಮಾತ್ರ ಕುಟುಂಬ ವಕ್ಫ್ ರಚಿಸಬಹುದು. ಹಾಗೆಯೇ ಅಂಥವವರು ಇನ್ನು ಮುಂದೆ ಮಹಿಳಾ ವಾರಸುದಾರರನ್ನು ಸಂಪೂರ್ಣವಾಗಿ ಹೊರಗಿಡಲು ಸಾಧ್ಯವಾಗುವುದಿಲ್ಲ. ಆದರೆ ಈ ನಿಬಂಧನೆಯ ಸಮಸ್ಯೆಯೆಂದರೆ, ಇಂತಹ ವ್ಯಕ್ತಿಗಳು ಮಹಿಳಾ ವಾರಸುದಾರರಿಗೆ ಸಾಂಕೇತಿಕವಾಗಿ ಪ್ರತಿಫಲವನ್ನು ನೀಡಿದ್ದ ಪಕ್ಷದಲ್ಲಿ, ಅಂದರೆ ಮುಸ್ಲಿಂ ಉತ್ತರಾಧಿಕಾರದ ಕಾನೂನಿನ ಅಡಿಯಲ್ಲಿ ಅವರು ಅರ್ಹರಿಗಿಂತ ಕಡಿಮೆ ಪ್ರಮಾಣದಲ್ಲಿ ನೀಡಿದ್ದರೆ , ಅಂತಹ ಕುಟುಂಬ ವಕ್ಫ್ ಮಾನ್ಯವಾಗಿರುತ್ತದೆ.
ಇಲ್ಲಿ ಉದ್ಭವಿಸುವ ಮತ್ತೊಂದು ಸಮಸ್ಯೆ ಎಂದರೆ, ಮುಸ್ಲಿಮೇತರರ ಒಡಂಬಡಿಕೆಯ ಅಧಿಕಾರಗಳ (Testamantary Power) ಮೇಲೆ ನಾವು ಇದೇ ರೀತಿಯ ನಿರ್ಬಂಧಗಳನ್ನು ಹೇರಬಹುದೇ ? ಉದಾಹರಣೆಗೆ, ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ರ ಅಡಿಯಲ್ಲಿ, ಮಹಿಳಾ ಉತ್ತರಾಧಿಕಾರಿಗಳು ಸೇರಿದಂತೆ ಇತರ ವಾರಸುದಾರರನ್ನು ಹೊರತುಪಡಿಸಿ ಓರ್ವ ಹಿಂದೂ ತನ್ನ ಸಂಪೂರ್ಣ ಆಸ್ತಿಯನ್ನು ಮಗನಿಗೆ ನೀಡಬಹುದು. 1956 ರ ಕಾಯ್ದೆಯಡಿ ಹಿಂದೂ ಮಹಿಳೆಯರ ಆಸ್ತಿಗಳ ಮಾಲೀಕತ್ವವು ಅವರ ಕಾನೂನುಬದ್ಧ ಅರ್ಹತೆಗೆ ತಕ್ಕಂತೆ ಇರುವುದಿಲ್ಲ. ಜೆಪಿಸಿ ಈ ನಿಬಂಧನೆಯನ್ನು ಸುಧಾರಿಸಬೇಕಿದೆ ಮತ್ತು ಏಕರೂಪತೆಯನ್ನು ತರಲು ಪ್ರಯತ್ನಿಸಬೇಕಿದೆ. ಇದರಿಂದ ಏಕರೂಪ ನಾಗರಿಕ ಸಂಹಿತೆ ಅಥವಾ ಜಾತ್ಯತೀತ ನಾಗರಿಕ ಸಂಹಿತೆ ಜಾರಿಗೆ ಬಂದಾಗಲೆಲ್ಲಾ ಅದನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ.
——