ಬೆಂಗಳೂರು, ಏ. 29: ನಗರದಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. “ಏಳು ಮಂದಿ ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಸಂಗತಿ. ಇಂತಹ ಘಟನೆಗಳು ನಡೆಯಬಾರದಿತ್ತು,” ಎಂದು ಅವರು ಹೇಳಿದರು.
ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೃತರಲ್ಲಿ ನಾಲ್ವರು ಬೀದಿ ವ್ಯಾಪಾರಿಗಳು, ಇಬ್ಬರು ಕೇರಳ ಮೂಲದವರು ಹಾಗೂ ಒಂದು ಮಗು ಸೇರಿದೆ ಎಂದು ತಿಳಿಸಿದರು. ಇನ್ನೊಬ್ಬರ ಗುರುತು ಪತ್ತೆಯಾಗಬೇಕಿದೆ ಎಂದು ಹೇಳಿದರು.

ಈ ದುರಂತದ ವೇಳೆ ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ಗುಂಪು ಮಳೆಯಿಂದ ತಪ್ಪಿಸಿಕೊಳ್ಳಲು ಗೋಡೆ ಸಮೀಪ ನಿಂತಿದ್ದಾಗ ಸುಮಾರು 8 ಅಡಿ ಎತ್ತರದ ಗೋಡೆ ಕುಸಿದಿದೆ. ಗಾಯಗೊಂಡ ಮೂವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಭಾರೀ ಮಳೆಯಿಂದ ಅನೇಕ ಕಡೆ ಮರಗಳು ಮತ್ತು ಕೊಂಬೆಗಳು ಬಿದ್ದು ಅಪಾಯ ಉಂಟಾಗಿದೆ. “ದುರ್ಬಲ ಮರಗಳ ಕೊಂಬೆಗಳನ್ನು ತಕ್ಷಣ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ,” ಎಂದು ಡಿಕೆಶಿ ಹೇಳಿದರು. ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಮರ ಬಿದ್ದಿರುವ ಮಾಹಿತಿ ದೊರೆತಿದ್ದು, ಅಪಾಯಕಾರಿಯಾದ ಮರಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ಇಂತಹ ದುರ್ಘಟನೆಗಳೇ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ ಎಂದು ಅವರು ಒತ್ತಿಹೇಳಿದರು.
ಬಿಜೆಪಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ವಿರೋಧ ಪಕ್ಷದವರು ಟೀಕೆ ಮಾಡುವುದು ಸಹಜ. ಆದರೆ ಈ ಸಂದರ್ಭದಲ್ಲಿ ಆರೋಪ ಮಾಡುವುದಕ್ಕಿಂತ ಪರಿಹಾರ ಕಂಡುಹಿಡಿಯುವುದು ಮುಖ್ಯ,” ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಹಳೆಯ ಕಟ್ಟಡಗಳ ನಿರ್ವಹಣೆಯಲ್ಲಿ ಉಂಟಾದ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳನ್ನು ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.





