ಬೆಂಗಳೂರು : ಕೆಲ ದಿನಗಳಿಂದ ಬಿಸಿಲಿನ ಬೇಗೆಗೆ ಬಸವಳಿದಿದ್ದ ನಗರದ ಜನರಿಗೆ ಇಂದು ಸಂಜೆ ವರುಣ ತಂಪೆರೆದಿದ್ದಾನೆ. ಬೇಸಿಗೆಯ ಬಿಸಿಲಿನ ಶಾಖಕ್ಕೆ ಕಂಗಾಲಾಗಿದ್ದ ಸಿಲಿಕಾನ್ ಸಿಟಿಯ ಜನರಿಗೆ ಮಳೆರಾಯ ಶಾಕ್ ನೀಡಿದ್ದಾನೆ.

ನಗರದ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ , ಶಾಂತಿನಗರ, ರಿಚ್ಮಂಡ್ ಸರ್ಕಲ್ ಹಾಗೂ ಕೋರಮಂಗಲ, ಶಿವಾನಂದ ಸರ್ಕಲ್, ಗಾಂಧಿನಗರ ಸೇರಿದಂತೆ ನಗರದ ಹಲವಡೆ ಭಾರಿ ಮಳೆ ಸುರಿಯುತ್ತಿದೆ. ಗಾಳಿಯ ರಭಸಕ್ಕೆ ಮರಗಳ ರೆಂಬೆ ಕೊಂಬೆಗಳು ನೆಲಕ್ಕೆ ಉದುರುತ್ತಿವೆ. ಏಕಾಏಕಿಯಾಗಿ ಸುರಿದ ಮಳೆಗೆ ನಗರದ ಜನಜೀವನ ಅಸ್ತವ್ಯಸ್ತವಾಗಿದೆ. ವಾಹನಗಳು ನೀರಿನಲ್ಲಿ ಮುಳುಗಿವೆ, ಬೈಕ್ ಸವಾರರು ಪರದಾಡುವಂತಾಗಿದೆ.
ವಿಧಾನಸೌಧಕ್ಕೂ ಎಂಟ್ರಿ ಕೊಟ್ಟ ಮಳೆ ನೀರು..
ಮಂಗಳವಾರವಷ್ಟೇ ಬಾಣಸವಾಡಿ, ಕಲ್ಯಾಣನಗರ, ನಾಗವಾರ ಸುತ್ತಮುತ್ತ ತುಂತುರು ಮಳೆಯಾಗಿತ್ತು. ಹಲವೆಡೆ ಮೋಡ ಕವಿದ ವಾತಾವರಣವಿತ್ತು. ಆದರೆ, ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆಗೆ ವರುಣ ಕೃಪೆ ತೋರಿದ್ದಾನೆ. ಇನ್ನೂ ಪ್ರಮುಖವಾಗಿ ಇಂದು ಸುರಿದ ಮಳೆಯಿಂದ ನಾನಾ ರೀತಿಯ ಅವಾಂತರಗಳು ನಡೆದಿವೆ. ಗಾಳಿಗೆ ಅಲ್ಲಲ್ಲಿ ಮರಗಳು ರಸ್ತೆಯ ಮೇಲೆ ಉರುಳಿ ಬಿದ್ದಿವೆ. ರಸ್ತೆಗಳಲ್ಲಿ ನೀರು ತುಂಬಿಕೊಂಡಿವೆ. ಅಚ್ಚರಿಯೆಂದರೆ ವಿಧಾನಸೌಧದ ಕಾರಿಡಾರ್‌ಗಳಲ್ಲೂ ನೀರು ತುಂಬಿಕೊಂಡಿದೆ. ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಕೊಠಡಿ ಸೇರಿದಂತೆ ಪ್ರಮುಖ ಕೋಣೆಗಳಿಗೆ ಮಳೆ ನೀರು ನುಗ್ಗಿದ್ದು, ಅಲ್ಲಿರುವ ಕಾಗದ ಪತ್ರಗಳ ಗತಿಯೇನು ಎಂಬ ಪ್ರಶ್ನೆ ಮೂಡುತ್ತಿದೆ.
ಇದನ್ನೂ ಓದಿ : ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?
ಅಲ್ಲದೆ ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಸಿತ್ತು. ಏಪ್ರಿಲ್.30ರವರೆಗೆ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆ ನೀಡಿತ್ತು. ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಸಂಜೆ ವೇಳೆ ಕೆಲ ಪ್ರದೇಶಗಳಲ್ಲಿ ಗುಡುಗು, ಮಿಂಚು ಹಾಗೂ 40-50 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಳನಾಡು ಜಿಲ್ಲೆಗಳಲ್ಲಿ ಕೆಲವೆಡೆ ಆಲಿಕಲ್ಲು ಮಳೆಯಾಗುವ ಸಂಭವವಿದ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿತ್ತು.





