ಸಿಎಂ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರ ಮೇಲಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕರ್ನಾಟಕ ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ನಿಂದ ಅರ್ಜಿ ಸಲ್ಲಿಸಲಾಗಿದ್ದು, ಕಲ್ಕತ್ತಾ ಮೂಲದ ನಕಲಿ ಕಂಪನಿಯು ಸಿಎಂ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಡಿ ಖಾತೆಗೆ RTGS ಮುಖಾಂತರ ಹಣವನ್ನು ವರ್ಗಾವಣೆ ಮಾಡಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರು ಎಫ್ಐಆರ್ ದಾಖಲಿಸಿಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸುವಂತೆ ಮನವಿಯಲ್ಲಿ ಕೋರಿದೆ.
ಮುಖ್ಯಮಂತ್ರಿಯ ಆಪ್ತ ಸಂಬಂಧಿಗಳು ಆರೋಪಿಗಳಾಗಿರುವುದರಿಂದ ತನಿಖೆಯ ಮೇಲೆ ಸರ್ಕಾರದ ಪ್ರಭಾವ ಇರುತ್ತದೆ ಎಂದು ಆರೋಪಿಸಿರುವ ಜನಾಧಿಕಾರ ಸಂಘರ್ಷ ಪರಿಷತ್, ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಭ್ರಷ್ಟಾಚಾರ ನಿಗ್ರಹ ದಳವು ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸುತ್ತಿಲ್ಲ, ಹಾಗಾಗಿ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.